ಸೋಮವಾರ, ಮೇ 23, 2022
30 °C

ಕೊನೆಗೂ ಉಳಿದ ಪ್ರಾಣಿಗಳ ಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಭಕ್ತರ ತೀವ್ರ ವಿರೋಧದ ನಡುವೆಯೂ ತಾಲ್ಲೂಕಿನ ಜಲಧಿಗೆರೆ ಗ್ರಾಮದ ಚಿಕ್ಕಮ್ಮ, ದೊಡ್ಡಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗಟ್ಟುವಲ್ಲಿ ವಿಶ್ವಪ್ರಾಣಿ ಕಲ್ಯಾಣ ಮಂಡಲಿ ಅಧ್ಯಕ್ಷ ದಯಾನಂದಸ್ವಾಮಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಶಸ್ವಿಯಾಯಿತು. ಚಿಕ್ಕಮ್ಮ, ದೊಡ್ಡಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ಕೊಡುವ ಸಂಪ್ರದಾಯ ಬೆಳೆದು ಬಂದಿದ್ದು, ಇದನ್ನು ತಡೆಯುವಂತೆ ದಯಾನಂದಸ್ವಾಮಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಎಎಸ್‌ಪಿ ಡಾ.ಬೋರಲಿಂಗಯ್ಯ, ಸಿಪಿಐ ಬಿ.ಕೆ.ಶೇಖರ್ ಹಾಗೂ ಸಿಬ್ಬಂದಿ ಪ್ರಾಣಿಬಲಿ ತಡೆಗೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ಆದರೂ, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಪ್ರಾಣಿಬಲಿ ಕೊಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾಗ ಏಕಾಂಗಿಯಾಗಿ ತೆರಳಿದ ದಯಾನಂದಸ್ವಾಮಿ, ದೇವಾಲಯಗಳು ಪವಿತ್ರಸ್ಥಳಗಳಾಗಿವೆ. ಪ್ರಾಣಿವಧೆಯ ಆಲಯಗಳಾಗುವುದು ಬೇಡ. ಈ ಬಗ್ಗೆ ಹೈಕೋರ್ಟ್ ಆದೇಶವಿದೆ ಎಂದು ಮನವೊಲಿಸಿ ಪ್ರಾಣಿಬಲಿ ಕೊಡದಂತೆ ತಡೆದರು.ಇದರಿಂದ ಆಕ್ರೋಶಗೊಂಡ ಭಕ್ತರ ಗುಂಪು ಸ್ವಾಮೀಜಿ ಅವರೊಂದಿಗೆ  ವಾಗ್ವಾದಕ್ಕಿಳಿದು, ರಾಜ್ಯದ ಇತರೆ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರುವ ಪ್ರಾಣಿಬಲಿಗಳ ಬಗ್ಗೆ ಚಕಾರ ಎತ್ತದೆ ಜಲಧಿಗೆರೆಯಲ್ಲಿ ಮಾತ್ರವೆ ನಿಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸಿರುವುದರ ಹಿಂದಿನ ಉದ್ದೇಶವೇನೆಂದು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಕೈ ಮೀರಿ ಹೋಗದಂತೆ ಪೊಲೀಸರು ತಡೆದು ಕೊನೆಗೂ ಭಕ್ತರ ಮನವೊಲಿಸಿ ಪ್ರಾಣಿ ಬಲಿ ನಡೆಯದಂತೆ ತಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.