ಗುರುವಾರ , ಫೆಬ್ರವರಿ 25, 2021
26 °C
ಬೆಳಗಾವಿ ಮಹಾನಗರ ಪಾಲಿಕೆ: ₹ 45 ಕೋಟಿ ವೆಚ್ಚದ ಯೋಜನೆ ಕಾರ್ಯಾನುಷ್ಠಾನ

ಕೊಳಚೆ ನಿವಾಸಿಗಳಿಗೆ ಮನೆ ನಿರ್ಮಾಣ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಕೊಳಚೆ ನಿವಾಸಿಗಳಿಗೆ ಮನೆ ನಿರ್ಮಾಣ

ಬೆಳಗಾವಿ: ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ನಗರದ ಏಳು ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡುವ ರಾಜೀವ್‌ ಆವಾಸ್‌ ಯೋಜನೆಯ ಅನುಷ್ಠಾನವು ಭರದಿಂದ ಸಾಗಿದೆ.ಇಲ್ಲಿನ ಶ್ರೀನಗರ ಜೋಪಡಿ, ಗ್ಯಾಂಗವಾಡಿ, ಕಣಬರ್ಗಿ, ರಾಮನಗರ ವಡ್ಡರವಾಡಿ, ವಂಟಮುರಿ, ಅನಗೋಳದ ಹರಿಜನ ಕೇರಿ ಹಾಗೂ ಭಜಂತ್ರಿ ಓಣಿ ಪ್ರದೇಶವನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.ಕೊಳಚೆ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ರಾಜೀವ್‌ ಆವಾಸ್‌ ಯೋಜನೆಯನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರವು ಶೇ 50ರಷ್ಟು, ರಾಜ್ಯ ಸರ್ಕಾರವು ಶೇ 40ರಷ್ಟು ಹಾಗೂ ಇನ್ನುಳಿದ ಹಣವನ್ನು ಫಲಾನುಭವಿಗಳು ಭರಿಸಬೇಕಾಗಿದೆ. ಯೋಜನೆಗೆ ಒಟ್ಟು ₹ 45 ಕೋಟಿ ಅನುದಾನ ಮಂಜೂರಾಗಿದೆ. ಅಂದಾಜು ₹ 4.5 ಲಕ್ಷದಲ್ಲಿ ಒಂದೊಂದು ಮನೆ ನಿರ್ಮಾಣಗೊಳ್ಳಲಿದೆ.ಶ್ರೀನಗರ ಜೋಪಡಿದಲ್ಲಿ 3+1 ಮಾದರಿಯ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿ ಭರದಿಂದ ನಡೆದಿದೆ. ಇನ್ನುಳಿದ ಕಡೆಗಳಲ್ಲೂ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಜನರ ನಿರೀಕ್ಷೆಯಂತೆ ಮನೆ ನಿರ್ಮಿಸಲಾಗುವುದು ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶಂಭುಲಿಂಗಪ್ಪ ಹೇಳಿದರು.ಇವೆಲ್ಲ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿವೆ. ಈಗ ಅಲ್ಲಿ ವಾಸಯೋಗ್ಯ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಮುಂದಿನ ವರ್ಷದ ಮಾರ್ಚ್‌ ಒಳಗೆ ಯೋಜನೆ ಪೂರ್ಣಗೊಳಿಸಬೇಕಾಗಿದೆ. ಅದಕ್ಕಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಕೊಳಚೆ ಪ್ರದೇಶಗಳಲ್ಲೂ ಒತ್ತುವರಿ: ಕೊಳಚೆ ಪ್ರದೇಶ ಸೇರಿದಂತೆ ಹಲವು ಕಡೆ ಒತ್ತುವರಿಯಾಗಿದೆ. ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಸುಮಾರು 80 ಕಡೆ ಒತ್ತುವರಿ ಪ್ರಕರಣಗಳು ಕಂಡುಬಂದಿವೆ. ಇವುಗಳಲ್ಲಿ 57 ಪ್ರಕರಣಗಳು ಕೊಳಚೆ ಪ್ರದೇಶಗಳಲ್ಲಿ ಒಳಪಡುತ್ತಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಪ್ರಭು ತಿಳಿಸಿದರು.ಇಬ್ಬರು ಕಾರ್ಯ ನಿರ್ವಾಹಕ ನೇತೃತ್ವದಲ್ಲಿ ಸರ್ವೇ ತಂಡಗಳನ್ನು ರಚಿಸಲಾಗಿದೆ. ಒತ್ತುವರಿಯಾಗಿರುವ ನಾಲಾಗಳ ಬಗ್ಗೆ ಸರ್ವೇ ನಡೆಸುತ್ತಿದ್ದಾರೆ. ಇವರ ಸಂಪೂರ್ಣ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಕೊಳಚೆ ನಿರ್ಮೂಲನಾ ಮಂಡಳಿ ಜೊತೆಗೂಡಿ ರಾಜೀವ್‌ ಆವಾಸ್‌ ಯೋಜನೆಯಡಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಮನೆ ಕಟ್ಟಿಕೊಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.