ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ನಂದಿ ಬೆಟ್ಟದಲ್ಲಿ ದಿನೇ ದಿನೇ ಕೋತಿಗಳ ಸಂಖ್ಯೆ ವೃದ್ಧಿಸುತ್ತಿದ್ದು, ವಾನರ ಸೇನೆಯ ಕಾಟದಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿ ರಮ್ಯತೆಯ ಸೊಬಗು ಸವಿಯುವ ಖುಷಿ ಕಳೆದುಕೊಳ್ಳುತ್ತಿದ್ದಾರೆ.

ಬೆಟ್ಟದ ಎಲ್ಲೆಡೆ ಬೀಡು ಬಿಟ್ಟಿರುವ ಕೋತಿಗಳು ಆಹಾರ ಆಸೆಗಾಗಿ ಯಾತ್ರಿಕರಿಗೆ ಬೆನ್ನು ಹತ್ತಿ ತೊಂದರೆ ಕೊಡುತ್ತಿದ್ದು, ಪ್ರವಾಸಿಗರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಬಂದಿದೆ. ಮಕ್ಕಳು, ಮಹಿಳೆಯರು ಹಾಗೂ ಯುವತಿಯರು ಕಪಿಚೇಷ್ಟೆಯ ಭಯದಲ್ಲೇ ನಡೆದಾಡುವ ದೃಶ್ಯಗಳು ಸದ್ಯ ಬೆಟ್ಟದಲ್ಲಿ ಸಾಮಾನ್ಯವಾಗಿವೆ.

ಈ ಪ್ರಳಯಾಂತಕ ಕೋತಿಗಳು ಆಹಾರಕ್ಕಾಗಿ ಮನುಷ್ಯರ ಮೇಲೆ ಎರಗುವುದು ಮಾತ್ರವಲ್ಲದೇ ಪ್ರವಾಸಿಗರ ವಾಹನಗಳ ಮೇಲೇರಿ ಕಿತಾಪತಿ ಕೆಲಸ ಮಾಡಿ ಸಹ ಮಾಡುತ್ತಿವೆ. ಕಾರುಗಳ ಕನ್ನಡಿ, ವೈಪರ್, ಆಂಟೇನಾ ಕಂಬ ಮುರಿದು ಹಾಕುವ ಜತೆಗೆ ಉಗುರಿನಿಂದ ಪರಚುವುದು ಮಾಡುತ್ತವೆ. ಹೀಗಾಗಿ ಪ್ರವಾಸಿಗರು ಕುಟುಂಬ ಸದಸ್ಯರ ಕಾಳಜಿಯೊಂದಿಗೆ ತಮ್ಮ ವಾಹನವನ್ನು ವಾನರ ಸೇನೆಯಿಂದ ರಕ್ಷಿಸಿಕೊಂಡು ಹಿಂತಿರುಗಬೇಕಾದ ಸನ್ನಿವೇಶ ಉಂಟಾಗಿದೆ.

ಬೆಟ್ಟದಲ್ಲಿರುವ ಯೋಗ ನಂದೀಶ್ವರ ದೇವಸ್ಥಾನದಲ್ಲಿ ಜನರು ಪೂಜೆ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತ ಕೋತಿಗಳು ಕೈಯಲ್ಲಿದ್ದ ಪ್ರಸಾದವನ್ನು ಕಿತ್ತುಕೊಂಡು ಓಡುತ್ತವೆ. ಬೆಟ್ಟ ತಿರುಗಿ ಸುಸ್ತಾದವರು ಒಂದೆಡೆ ಕುಳಿತು ವಿಶ್ರಾಂತಿ ಪಡೆಯುವ ವೇಳೆ ತಿನ್ನಲು ಏನೇ ಹೊರಗೆ ತೆಗೆದರೂ ಅದು ಕಪಿ ಪಾಲಾಗುವುದು ಗ್ಯಾರಂಟಿ. ಇಲ್ಲದಿದ್ದರೆ ಒಬ್ಬರು ಬಡಿಗೆ ಹಿಡಿದು ಕೋತಿಯನ್ನು ಪದೇ ಪದೇ ಓಡಿಸುವ ಕೆಲಸ ಮಾಡಬೇಕು. ಕಪಿ ಸಂಕುಲದ ದಾಳಿಯಿಂದಾಗಿ ಬೆಟ್ಟಕ್ಕೆ ಬರುವ ಪ್ರವಾಸಿಗರು ನೆಮ್ಮದಿಯಿಂದ ಉಪಾಹಾರ, ಊಟ ಮಾಡದ ಸ್ಥಿತಿ ನಿರ್ಮಾಣವಾಗಿದೆ.

ಆಹಾರದ ಆಸೆಗಾಗಿ ಕೋತಿಗಳು ಹೆಣ್ಣು ಮಕ್ಕಳ ಬಗಲ ಚೀಲಗಳನ್ನು ಕಸಿದುಕೊಂಡು ಹೋಗಿ ತಡಕಾಡುವ ಕೆಲಸ ಸಹ ಮಾಡಿದ ಅನೇಕ ಉದಾಹರಣೆಗಳು ಇಲ್ಲಿವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಕೋತಿಗಳು ಕೈಯಲ್ಲಿದ್ದ ತಿನಿಸು ಕೊಡದವರ ಮೇಲೆರಗಿ ದಾಳಿ ಸಹ ಮಾಡುತ್ತವೆ ಎನ್ನುತ್ತಾರೆ.

ಬೆಟ್ಟದಲ್ಲಿ ವಾನರ ಸೇನೆಯ ಸಂಖ್ಯೆ ವೃದ್ಧಿಯಾಗುತ್ತಿದ್ದಂತೆ ಇಲ್ಲಿ ಆಹಾರ, ಪಾನೀಯಗಳ ಜತೆಗೆ ವ್ಯಾಪಾರಿಗಳು ಕೋತಿ ಓಡಿಸಲು ಬೇಕಾದ ಕ್ಯಾಟರ್ ಬಿಲ್ ಸಹ ಮಾರಾಟ ಮಾಡಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಇಲ್ಲಿ ಕ್ಯಾಟರ್ ಬಿಲ್ ಜತೆಗೆ ಕಲ್ಲುಗಳ ಪ್ಯಾಕೇಟ್ ಸಹ ಕೊಳ್ಳುವ ಸ್ಥಿತಿ ಬರುತ್ತದೆ ಎಂದು ಪ್ರವಾಸಿಗರೊಬ್ಬರು ಅಳಲು ತೋಡಿಕೊಂಡರು.

ಬೆಟ್ಟದಲ್ಲಿ ಕ್ಯಾಟರ್ ಬಿಲ್ ಮಾರಾಟ ಮಾಡುವ ಮಾರುತಿ ಅವರನ್ನು ಮಾತಿಗೆಳೆದರೆ, ‘ಇತ್ತೀಚಿನ ದಿನಗಳಲ್ಲಿ ಕೋತಿ ಕಾಟ ಹೆಚ್ಚಾಗುತ್ತಿದೆ. ಹೀಗಾಗಿ ಪ್ರವಾಸಿಗರು ಅವುಗಳನ್ನು ಓಡಿಸಲು ಕ್ಯಾಟರ್ ಬಿಲ್ ಮೊರೆ ಹೋಗುತ್ತಿದ್ದಾರೆ. ನಿತ್ಯ ನನ್ನ ಬಳಿ ಮೂರ್ನಾಲ್ಕು ಬಿಲ್ಗಳು ಮಾರಾಟವಾಗುತ್ತವೆ. ₹ 40ಗೆ ಒಂದು ಬಿಲ್ ಮಾರುತ್ತೇನೆ’ ಎಂದು ಹೇಳಿದರು.

ಶುಕ್ರವಾರ ಕಾರಿನಲ್ಲಿ ಬೆಟ್ಟಕ್ಕೆ ಬಂದಿದ್ದ ಆಂಧ್ರಪ್ರದೇಶದ ಕರಿಂನಗರದ ಮೊಹಮ್ಮದ್ ರಫೀಕ್ ಅವರ ಕುಟುಂಬ ಕಾರಿನಲ್ಲಿ ಊಟ ಮಾಡಲು ಹರಸಾಹಸ ಪಡಬೇಕಾಯಿತು.ಒಬ್ಬ ವ್ಯಕ್ತಿ ದೊಡ್ಡ ದೊಣ್ಣೆ ಹಿಡಿದು ನಿಂತರೂ ಸುತ್ತುವರಿದು ಬಂದು ಮುತ್ತಿಗೆ ಹಾಕಲು ಹವಣಿಸುತ್ತಿದ್ದ ಕೋತಿಗಳನ್ನು ಹಿಮ್ಮೆಟ್ಟಿಸಲು ಆಗಲಿಲ್ಲ. ಕೊನೆಗೆ ಆ ಕುಟುಂಬ ಕಪಿಗಳ ಕಾಟ ತಡೆಯಲಾರದೆ ಪ್ಯಾಕೆಟ್ ನೀರು ಕುಡಿದು ಊಟದ ಶಾಸ್ತ್ರ ಮುಗಿಸಿ ಪ್ರವಾಸ ಮುಂದುವರಿಸಿದರು.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಎಂಜನಿಯರ್ ಆಗಿರುವ ವಿಶಾಲ್ ತಮ್ಮ ಕೆಲ ಗೆಳೆಯರೊಂದಿಗೆ ಬೆಟ್ಟಕ್ಕೆ ಬಂದಿದ್ದರು. ಕೋತಿಗಳ ಉಪಟಳದ ಬಗ್ಗೆ ಕೇಳುತ್ತಲೇ ಅವರು, ‘ಕೆಲ ವರ್ಷಗಳ ಹಿಂದೆ ಬೆಟ್ಟಕ್ಕೆ ನಮ್ಮೊಂದಿಗೆ ಕೆಲ ಮಹಿಳಾ ಸಹದ್ಯೋಗಿಗಳು ಬಂದಿದ್ದರು. ಆ ವೇಳೆ ಒಬ್ಬ ಯುವತಿ ವ್ಯಾನಿಟಿ ಬ್ಯಾಗ್ನಿಂದ ಚಿಪ್ಸ್ ತೆಗೆದು ತಿನ್ನಲು ಆಗ ಕೋತಿಯೊಂದು ಬೆನ್ನು ಹತ್ತಿತು. ಇದರಿಂದ ಆಕೆ ಚಿಪ್ಸ್ ಪಾಕೇಟ್ ಪುನಃ ಬ್ಯಾಗಿನಲ್ಲಿಟ್ಟುಕೊಂಡಳು. ಕೊನೆಗೊಮ್ಮೆ ಆ ಕೋತಿ ಆಕೆಯ ಬ್ಯಾಗ್ನ್ನೇ ಎಗರಿಸಿಕೊಂಡು ಓಡಿ ಹೋಯಿತು’ ಎಂದರು.

‘ಆ ಬ್ಯಾಗ್ನಲ್ಲಿ ಮೊಬೈಲ್, ಪರ್ಸ್, ಹಣ, ಕೆಲ ದಾಖಲೆ ಪತ್ರಗಳು ಇದ್ದವು. ಆಕೆಗೆ ಜೀವವೇ ಬಾಯಿಗೆ ಬಂದಂತಾಗಿತ್ತು. ಅಳಲು ಆರಂಭಿಸಿದಳು. ನಮ್ಮಲ್ಲಿಯೆ ಕೆಲವರು ಕೋತಿಯನ್ನು ಬೆನ್ನಟ್ಟಿ ಹೋದೆವು. ಉಪಾಯ ಮಾಡಿ ಹಣ್ಣು ಎಸೆದು ಬ್ಯಾಗ್ ಪಡೆದುಕೊಂಡು ಬರುವಷ್ಟರಲ್ಲಿ ಸಾಕುಸಾಕಾಗಿತ್ತು. ಈ ಬೆಟ್ಟಕ್ಕೆ ಬಂದಾಗಲೆಲ್ಲ ಆ ಘಟನೆ ಕಣ್ಮುಂದೆ ಬರುತ್ತದೆ’ ಎಂದು ಹಳೆಯ ನೆನಪು ಮೆಲುಕು ಹಾಕಿದರು.

ಮನಸ್ಸಿನ ನೆಮ್ಮದಿಗಾಗಿ ಬರುವ ಪ್ರವಾಸಿಗರಿಗೆ ಕೋತಿಗಳ ಹಾವಳಿ ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಹೀಗಾಗಿ ಸಂಬಂಧಪಟ್ಟವರು ಕೋತಿಗಳ ಸ್ಥಳಾಂತರಿಸುವ, ಇಲ್ಲವೆ ಅವುಗಳ ಸಂಖ್ಯೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಬಹುತೇಕ ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಸಹಾಯಕತೆ ವ್ಯಕ್ತಪಡಿಸುವ ಅಧಿಕಾರಿಗಳು: ‘ಬೆಟ್ಟದಲ್ಲಿ ಎರಡು ಸಾವಿರಕ್ಕೂ ಅಧಿಕ ಕೋತಿಗಳಿವೆ. ಅವುಗಳಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಕಾಟ ತಪ್ಪಿಸುವ ಉದ್ದೇಶದಿಂದ ಏನಾದರೂ ಕ್ರಮ ಕೈಗೊಂಡರೆ ಪ್ರಾಣಿದಯಾ ಸಂಘದವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಾಗಿ ನಾವು ಅಸಹಾಯಕರಾಗಿದ್ದೇವೆ. ಗಂಡು ಕೋತಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವುದು ಸದ್ಯ ಉಳಿದಿರುವ ಆಯ್ಕೆ. ಅದು ಸಹ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು’ ಎಂದು ತೋಟಗಾರಿಕೆ ಇಲಾಖೆಯ ನಂದಿ ಬೆಟ್ಟ ವ್ಯಾಪ್ತಿಯ ವಿಶೇಷ ಅಧಿಕಾರಿ ಎನ್.ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.