ಬುಧವಾರ, ಜೂನ್ 23, 2021
30 °C

ಕೋಮುಲ್‌ನಿಂದ ರೈತರಿಗೆ ಬಂಪರ್ ಬೋನಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಈ ಬಾರಿಯ ಯುಗಾದಿ ಹಬ್ಬ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತು ಸಂಘಗಳಿಗೆ ಸಂತಸ ತರಲಿದೆ. ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು ಬೆಲೆ ಏರಿಳಿತ ಯೋಜನೆಯಡಿ ಬೋನಸ್ ಪ್ರಕಟಿಸಿದೆ.ಹಾಲು ಉತ್ಪಾದಕರು ಮತ್ತು ಸಂಘಗಳಿಗೆ ಲಾಭಾಂಶದಲ್ಲಿ ಪಾಲು ನೀಡುವ ನಿರ್ಧಾರವನ್ನು ಒಕ್ಕೂಟ ಇತ್ತೀಚೆಗೆ ನಡೆಸಿದ ಆಯವ್ಯಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಜನವರಿ 1ರಿಂದ ಮಾರ್ಚ್ 16ರವರೆಗೆ ಒಟ್ಟು 75 ದಿನಗಳಲ್ಲಿ ಹಾಲು ಪೂರೈಸಿದ ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 30 ಪೈಸೆಯಂತೆ ಹಾಗೂ ಸಂಘಗಳಿಗೆ ಪ್ರತಿ ಲೀಟರಿಗೆ 10 ಪೈಸೆಯಂತೆ ಖರೀದಿ ದರವನ್ನು ಹೆಚ್ಚಿಸಿ ಬೋನಸ್ ರೂಪದಲ್ಲಿ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ತಿಳಿಸಿದರು.ಒಕ್ಕೂಟದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಒಟ್ಟಾರೆ ಬೋನಸ್ ರೂಪದಲ್ಲಿ ರೂ.2.1 ಕೋಟಿಯನ್ನು ಒಕ್ಕೂಟ ನೀಡಲಿದೆ. ಅದರಲ್ಲಿ ರೈತರಿಗೆ ರೂ.1.51 ಕೋಟಿ ಹಾಗೂ ಸಂಘಗಳಿಗೆ ರೂ.50.36 ಲಕ್ಷ ದೊರಕಲಿದೆ ಎಂದರು.ಒಕ್ಕೂಟ ಗಳಿಸುವ ಬಹುತೇಕ ಲಾಭಾಂಶವನ್ನು ವರ್ಷಾಂತ್ಯಕ್ಕೆ ವಿವಿಧ ರೂಪಗಳಲ್ಲಿ ಹಾಲು ಉತ್ಪಾದಕರಿಗೆ ಪಾವತಿಸುವ ಪದ್ಧತಿಯನ್ನು ಮುಂದುವರಿಸಲಾಗಿದೆ. ಅದರ ಪ್ರಯುಕ್ತ ಖರೀದಿ ದರವನ್ನು ಹೆಚ್ಚಿಸಿ ಯುಗಾದಿ ಕೊಡುಗೆ ನೀಡಲಾಗಿದೆ. ಪ್ರಸ್ತುತ ವರ್ಷ ಒಕ್ಕೂಟ ರೂ.3 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.ನೂತನ ಸಂಘ

2012-13ನೇ ಸಾಲಿಗೆ ಒಕ್ಕೂಟದ ವ್ಯಾಪ್ತಿಯಲ್ಲಿ 99 ಹೊಸ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು.ಆ ಪೈಕಿ ಶೇ 75ರಷ್ಟು ಮಹಿಳಾ ಸಹಕಾರ ಸಂಘಗಳು ಸ್ಥಾಪನೆಯಾಗಲಿವೆ. ಕೇಂದ್ರಸರ್ಕಾರದ ಅನುದಾನವೂ ಅದಕ್ಕೆ ದೊರೆಯಲಿದೆ ಎಂದರು.ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಒಕ್ಕೂಟದಲ್ಲಿ ಫಾರ್ಮರ್ಸ್ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಲಾಗಿದೆ. ಅದರ ಅಡಿಯಲ್ಲಿ, ಮರಣ ಹೊಂದಿದ ಒಕ್ಕೂಟದ ಸದಸ್ಯರ ಕುಟುಂಬಗಳ 793 ಸದಸ್ಯರಿಗೆ ರೂ 39.65 ಲಕ್ಷ ಪರಿಹಾರ ನೀಡಲಾಗಿದೆ. 2011-12ನೇ ಸಾಲಿನಲ್ಲಿ 96 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ 2.04 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದರು.ಬಿಎಂಸಿ

ಜಿಲ್ಲೆಯಲ್ಲಿ ಶುದ್ಧ ಹಾಲು ಉತ್ಪಾದನೆಗೆ ಒತ್ತು ನೀಡಲು 140 ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ) ಅಳವಡಿಸಲಾಗಿದೆ. 2012-13ನೇ ಸಾಲಿನಲ್ಲಿ 40 ಬಿಎಂಸಿಗಳನ್ನು ಅಳವಡಿಸಲಾಗುವುದು. ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ದಿನ 300ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಂಡಳಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರಕ್ಕೆ ರಾಜ್ಯಸರ್ಕಾರದ ಶಿಫಾರಸು ತಲುಪಿದೆ.54 ಕೋಟಿ ವೆಚ್ಚವಾಗಬಹುದಾದ ಘಟಕ ಸ್ಥಾಪನೆಗೆ ಅನುದಾನ ಒದಗಿಸುವ ಭರವಸೆಯನ್ನು ಸಚಿವ ಕೆ.ಎಚ್.ಮುನಿಯಪ್ಪ ನೀಡಿದ್ದಾರೆ ಎಂದು ತಿಳಿಸಿದರು.ಮೇವು ಅಭಿವೃದ್ಧಿಗೆ ಪೂರಕವಾಗಿ ಗೌರಿಬಿದನೂರಿನ ಶೀಥಲ ಕೇಂದ್ರದಲ್ಲಿ ರೂ 85 ಲಕ್ಷ ವೆಚ್ಚದಲ್ಲಿ ಫಾಡರ್ ಡೆನ್ಸಿಫಿಕೇಶನ್ ಘಟಕವನ್ನು ಸ್ಥಾಪಿಸುವ ಕೆಲಸ ಶುರುವಾಗಿದೆ. ಕೇಂದ್ರದಿಂದ ರೂ 42.5 ಲಕ್ಷ ಅನುದಾನ ದೊರೆತಿದೆ. ಒಕ್ಕೂಟವೂ ಅಷ್ಟೆ ಹಣವನ್ನು ಭರಿಸಲಿದೆ.ಮೇವಿನ ತ್ಯಾಜ್ಯವನ್ನು ಸುಡುವುದನ್ನು ತಪ್ಪಿಸುವುದು ಈ ಘಟಕ ಸ್ಥಾಪನೆಯ ಉದ್ದೇಶ. ಇಂಧನ ಸಂರಕ್ಷಣೆ ಸಲುವಾಗಿ ವೆಚ್ಚ ನಿಯಂತ್ರಣ ಮಾಡಲು ಕೋಲಾರ ಡೇರಿಯಲ್ಲಿ ಜೈವಿಕ ಇಂಧನ ಬಳಸುವ ಬಾಯ್ಲರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಮೆಗಾಡೇರಿ

ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಪೂರ್ಣ ಹಾಲಿನ ಸೂಕ್ತ ವಿಲೇವಾರಿಗಾಗಿ ಚಿಕ್ಕಬಳ್ಳಾಪುರ ಸಮೀಪ ಅತ್ಯಾಧುನಿಕ ತಂತ್ರಜ್ಞಾನದ ಮೆಗಾಡೇರಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಕ್ಕೆ ರೂ.70 ಕೋಟಿ ಬಂಡವಾಳ ಬೇಕು. ರಾಜ್ಯ ಸರ್ಕಾರ ಈಗಾಗಲೇ ರೂ.10 ಕೋಟಿ ನೀಡಿದೆ. ಕೇಂದ್ರದಿಂದ ರೂ.12 ಕೋಟಿ ನೆರವು ಪಡೆಯಲಾಗುವುದು ಎಂದರು.ನೇಮಕಾತಿ

ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಯಾವ ಅಭ್ಯರ್ಥಿಯೂ ಹಣ ಮತ್ತು ಪ್ರಭಾವ ಬಳಕೆಗೆ ಮುಂದಾಗಬಾರದು. ಕೆಲಸ ಕೊಡಿಸುವ ಆಮಿಷ ಒಡ್ಡುವ ಯಾರಿಗೂ ಹಣ ಕೊಡಬಾರದು. ಮುಕ್ತ ಮತ್ತು ನ್ಯಾಯ ಸಮ್ಮತ ನೇಮಕಾತಿಗೆ ಒಕ್ಕೂಟ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್ ಮತ್ತು ಆಡಳಿತ ಮಂಡಳಿ ಸದಸ್ಯ ಜಯಸಿಂಹ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

 

ಅಮೂಲ್‌ಗೆ ಕೋಮುಲ್ ಚೀಸ್

ಒಕ್ಕೂಟದ ಡೇರಿಯಲ್ಲಿ ಚೀಸ್ ಉತ್ಪಾದನೆಯೂ ಶುರುವಾಗಿದೆ. ಪ್ರತಿ ದಿನ 20 ಸಾವಿರ ಲೀಟರ್ ಹಾಲನ್ನು ಅದಕ್ಕೆ ಬಳಸಲಾಗುತ್ತಿದ್ದು, ಪ್ರತಿ ತಿಂಗಳು 45 ಟನ್ ಚೀಸ್ ಅನ್ನು ಗುಜರಾತ್‌ನ ಅಮೂಲ್ ಡೇರಿಗೆ ಪೂರೈಸಲಾಗುತ್ತಿದೆ. ಅಲ್ಲದೆ ನಂದಿನಿ ಬ್ರಾಂಡ್‌ನಲ್ಲಿ ಮಾರುಕಟ್ಟೆಗೂ ಬಿಡುಗಡೆ ಮಾಡಲಾಗಿದೆ ಎಂದು ಡಾ.ಎ.ವಿ.ಪ್ರಸನ್ನ ತಿಳಿಸಿದರು.ಮೂರು ಸ್ವಾದಗಳಲ್ಲಿ ಚೀಸ್ ದೊರಕುತ್ತಿದೆ. ಚೀಸ್ ಸ್ಲೈಸ್‌ಗಳನ್ನು ಬಿಡುಗಡೆ ಮಾಡಲಾಗುವುದು. ಟೆಟ್ರಾಪ್ಯಾಕ್‌ನಲ್ಲಿ ಇದುವರೆಗೂ 200 ಮಿಲೀ ಹಾಲು ದೊರಕುತ್ತಿತ್ತು. ಈಗ 100ಮಿಲೀ ಪ್ಯಾಕೆಟ್ ಅನ್ನೂ ಬಿಡುಗಡೆ ಮಾಡಲಾಗಿದೆ. ಟೆಟ್ರಾಪ್ಯಾಕ್ ಘಟಕದಲ್ಲಿ 500 ಮಿಲೀ ಫಿಲ್ಲಿಂಗ್ ಯಂತ್ರವನ್ನು ಅಳವಡಿಸಲಾಗುತ್ತಿದೆ. ಅಮೂಲ್ ಸಂಸ್ಥೆಯನ್ನು ಹೊರತುಪಡಿಸಿದರೆ ಇಂಥ ಯಂತ್ರವನ್ನು ಹೊಂದುವ ಎರಡನೇ ಸಂಸ್ಥೆಯಾಗಿ ಒಕ್ಕೂಟ ಗಮನ ಸೆಳೆಯಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.