ಸೋಮವಾರ, ಜುಲೈ 26, 2021
23 °C
ದಕ್ಷಿಣ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ–ಸರ್ವಾಧ್ಯಕ್ಷರ ಕಳಕಳಿ

ಕೋಮು ಸೌಹಾರ್ದ: ಬದುಕಿ ತೋರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಸ್ವತೀ ಸದನ ಸಭಾ ಮಂಟಪ, ಗೋಪಾಲಕೃಷ್ಣ ವೇದಿಕೆ, ಕಟೀಲು: ಬಹು ಜಾತೀಯ, ಬಹು ಮತೀಯ, ಬಹು ಪಂಥೀಯ ಜನರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ ಮೌಢ್ಯ. ಕೋಮು ಘರ್ಷಣೆಯ ಪ್ರಚೋದಕರು, ಕೋಮು ಸೌಹಾರ್ದ ಪ್ರತಿಪಾದಕರು ಬೋಧಿಸಿದ್ದು ಸಾಕು, ಬದುಕಿ ತೋರಿಸುವ ಪ್ರಯತ್ನ ಮಾಡಲಿ ಎಂದು 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್‌.ಸುಕುಮಾರ ಗೌಡ ಹೇಳಿದರು.ಇಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಸಮ್ಮೇಳನದ ಉದ್ಘಾ­ಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೋಮು, ಮತೀಯ ಸೌಹಾರ್ದ ಮೂಡಬೇಕಿರುವುದು ಶಿಕ್ಷಣದಿಂದ, ಸಶಕ್ತ ಪಠ್ಯದಿಂದ ಎಂದರು.‘ಆಂಗ್ಲ ಮಾಧ್ಯಮದ ಅತಿಯಾದ ಮೋಹ ಬೇಡ. ಅಲ್ಲಿ ಕಲಿಸುವ ಗುರುಗಳ ಆಂಗ್ಲ ಭಾಷಾ ಪರಿಜ್ಞಾನ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪರಸ್ಪರ ಭಾಷಾ ಸಂವಹನದಿಂದ ಮೊದಲ್ಗೊಂ­ಡು ‘ಭಾಷಾವರಣ’ದಲ್ಲಿ ಕಲಿತರೆ ಮಾತ್ರ ಪ್ರಯೋಜನ. ಶಾಲೆಯಲ್ಲಿ ಪ್ರಥಮ ಭಾಷೆ ಕನ್ನಡವಾಗಿದ್ದು, ಅದರಲ್ಲಿ ಸಾಮರ್ಥ್ಯ ಬಲಗೊಂಡಷ್ಟೂ ದ್ವಿತೀಯ ಭಾಷೆ ಇಂಗ್ಲಿಷ್‌ ಕಲಿಕೆ ಸುಲಭವಾಗುತ್ತದೆ. ಏಕೆಂದರೆ ದ್ವಿತೀಯ ಭಾಷೆ ಪ್ರಥಮ ಭಾಷೆಯಲ್ಲಿ ಬೆಳೆದ ಬುದ್ಧಿ ಭಾಷಾ ಸಾಮರ್ಥ್ಯವನ್ನು ಅವಲಂಬಿಸಿದೆ’ ಎಂದು ಅವರು ಪ್ರತಿಪಾದಿಸಿದರು.ಭಾಷಣದಲ್ಲಿ ಸಾಹಿತ್ಯದ ಬದಲಿಗೆ ತಮ್ಮ ನೆಚ್ಚಿನ ಶಿಕ್ಷಣ, ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ನೀಡಿದ ಸುಕುಮಾರ ಗೌಡರು, ಪೈಪೋಟಿಯಲ್ಲಿ ಅಕಾಡೆಮಿ­ಗಳನ್ನು ಸ್ಥಾಪಿಸುವುದು, ಅವುಗಳಿಂದ ಪುಸ್ತಕ ಬಿಡುಗಡೆ ಮಾಡಿಸುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಗೌಡ, ಹವ್ಯಕ, ಕೋಟ, ಮರಾಠಿ, ಇಂಗ್ಲಿಷ್‌ ಭಾಷೆಗಳ­ನ್ನೊಳಗೊಂಡ ಸರ್ವಸಮಾನ ನಿಘಂಟು ರಚನೆ ತುರ್ತಾಗಿ ಆಗಬೇಕು ಎಂದರು.ಸೌಹಾರ್ದದ ಕೊರತೆ

ಸಮ್ಮೇಳನ ಉದ್ಘಾಟಿಸಿದ ಕೇಂದ್ರದ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ದೇಶದಲ್ಲಿ ಇಂದು ಸೌಹಾ­ರ್ದದ ಕೊರತೆ ಅತಿಯಾಗಿ ಕಾಣಿಸುತ್ತಿದೆ. ಭಾಷಾ ಸೌಹಾರ್ದತೆ ಸಾಧಿಸುವುದು ಸಹ ಅಷ್ಟೇ ಮುಖ್ಯ. ನಾವೇ ಭಾಷೆಯ ವಾರೀಸುದಾರರು ಎಂದು ಹೇಳುವವ­ರನ್ನು ಸ್ವಲ್ಪ ದೂರದಲ್ಲಿ ಇಡಲೇಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗರೆಲ್ಲರೂ ಭಾಷೆಯ ವಾರಿಸುದಾರರು ಎಂದರು.ವಿಧಾನ ಪರಿಷತ್ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ಆಡಳಿತ ಭಾಷೆಯಾಗಿ ಕನ್ನಡ ಇಂದು ಪ್ರವರ್ಧಮಾನಕ್ಕೆ ಬಂದಿದೆ. ಆದರೆ ಸಾಹಿತ್ಯ ಕೃಷಿಯನ್ನು ಇನ್ನಷ್ಟು ಗಟ್ಟಿ­ಗೊಳಿಸುವ, ಜನರನ್ನು ಚಿಂತನೆಗೆ ಹಚ್ಚುವ ಸಾಹಿತ್ಯ ರಚನೆ ದೊಡ್ಡ ಪ್ರಮಾಣ­ದಲ್ಲಿ ಆಗಬೇಕಿದೆ ಎಂದರು. ಸಿನಿಮಾ ಸಾಹಿತ್ಯ ಸುಧಾರಣೆಗೊಳ್ಳಲೇ­ಬೇಕು ಎಂದರು.ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟ­ಪೂರ್ವ ಸಮ್ಮೇಳನ ಅಧ್ಯಕ್ಷ ಪ್ರೊ.ಕೆ.ಪಿ.ರಾವ್‌, ಸಚಿವ ಅಭಯಚಂದ್ರ ಜೈನ್‌, ವಾಸುದೇವ ಆಸ್ರಣ್ಣ, ಲಕ್ಷ್ಮೀ­ನಾರಾಯಣ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಹಿರಿಯ ಕಲಾವಿದ ಕದ್ರಿ ಗೋಪಾಲನಾಥ್‌, ಧರ್ಮಗುರು ಫಾ.ಫ್ರಾನ್ಸಿಸ್‌ ಗೋಮ್ಸ್‌, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇತರರು ಇದ್ದರು. ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು. ಭುವನಾಭಿರಾಮ ಉಡುಪ ವಂದಿಸಿದರು. ಹಲವು ಪುಸ್ತಕಗಳ ಬಿಡುಗಡೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.