ಭಾನುವಾರ, ಜನವರಿ 19, 2020
23 °C

ಕೋರ್ಟ್ ಆದೇಶದಂತೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣಿಗಾರಿಕೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಸರದ ಮೇಲಾಗಿರುವ ಹಾನಿಯನ್ನು ಸರಿಪಡಿಸಲು ಸುಪ್ರೀಂಕೋರ್ಟ್ ಸೂಚಿಸುವ ಎಲ್ಲ ಕ್ರಮಗಳನ್ನೂ ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿ ಕುರಿತು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿನ ಪ್ರಮುಖ ಅಂಶಗಳ ಬಗ್ಗೆ `ಪ್ರಜಾವಾಣಿ~ ಶನಿವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಲಾಖೆ, ಪರಿಸರದ ಮೇಲಿನ ಹಾನಿ ಸರಿಪಡಿಸುವ ವಿಷಯದಲ್ಲಿ ಕಟಿಬದ್ಧವಾಗಿರು ವುದಾಗಿ ಹೇಳಿದೆ.ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಪರಿಸರಕ್ಕೆ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು 2011ರ ಆಗಸ್ಟ್ 5ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರಂತೆ ಅಧ್ಯಯನ ನಡೆಸುವ ಕಾರ್ಯವನ್ನು ಐಸಿಎಫ್‌ಆರ್‌ಇಗೆ ವಹಿಸಲಾಗಿತ್ತು. ನಂತರದ ದಿನಗಳಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಬಗ್ಗೆಯೂ ಅಧ್ಯಯನಕ್ಕೆ ಆದೇಶಿಸಲಾಗಿತ್ತು. ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಆಗಿರುವ ಹಾನಿ ಕುರಿತ ಅಧ್ಯಯನ ವರದಿಯನ್ನು ಐಸಿಎಫ್‌ಆರ್‌ಇ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ ಎಂದು ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.ಪರಿಸರದ ಮೇಲಿನ ಹಾನಿ ಸರಿಪಡಿಸುವ ವಿಷಯದಲ್ಲಿ ಈವರೆಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಜನವರಿ 20ರಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಿದೆ. ನಂತರದ ದಿನಗಳಲ್ಲಿ ನ್ಯಾಯಾಲಯ ನೀಡುವ ಆದೇಶ ಮತ್ತು ನಿರ್ದೇಶನಗಳ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ಪ್ರತಿಕ್ರಿಯಿಸಿ (+)