ಸೋಮವಾರ, ಮಾರ್ಚ್ 8, 2021
29 °C

ಕೋರ್ಟ್ ಭಣಭಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರ್ಟ್ ಭಣಭಣ

ಬೆಂಗಳೂರು:  ವಕೀಲರಿಗೆ ಸಂಬಂಧಿಸಿದ ಉದ್ದೇಶಿತ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ನೀಡಿದ್ದ ಕರೆ ಅನ್ವಯ ಬಹುತೇಕ ವಕೀಲರು ಬುಧವಾರ ಕೋರ್ಟ್ ಕಲಾಪದಿಂದ ಹೊರಕ್ಕುಳಿದರು. ಇದರಿಂದ ನಗರದ ಎಲ್ಲ ನ್ಯಾಯಾಲಯಗಳ ಆವರಣ ಭಣಗುಟ್ಟುತ್ತಿತ್ತು. ರಜಾಕಾಲದ ಕಳೆ ನ್ಯಾಯಾಲಯಗಳಲ್ಲಿ ಎದ್ದು ಕಾಣುತ್ತಿತ್ತು.ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಕಲಾಪ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಲೋಕಾಯುಕ್ತ ವಿಶೇಷ ಕೋರ್ಟ್ ಕಾರ್ಯ ನಿರ್ವಹಿಸಿತು. ಹೈಕೋರ್ಟ್‌ನಲ್ಲಿ ಎಲ್ಲ ನ್ಯಾಯಮೂರ್ತಿಗಳು ಕಲಾಪ ನಡೆಸಿದರು. ಕೆಲವೇ ಕೆಲವು ವಕೀಲರು ಕಲಾಪಕ್ಕೆ ಹಾಜರು ಆಗಿದ್ದರು. ಬಹುತೇಕ ಪ್ರಕರಣಗಳಲ್ಲಿ ವಕೀಲರು ಗೈರುಹಾಜರಾದ ಕಾರಣ ನ್ಯಾಯಮೂರ್ತಿಗಳು ವಿಚಾರಣೆ  ಮುಂದೂಡುವುದು ಅನಿವಾರ್ಯವಾಯಿತು.ಕಕ್ಷಿದಾರರಿಗೆ ವಕೀಲರು ಮೊದಲೇ ವಿಷಯ ತಿಳಿಸಿದ ಕಾರಣ, ಅವರು ಹಾಜರು ಇರಲಿಲ್ಲ.

`ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ~ ಹಾಗೂ `ರಾಷ್ಟ್ರೀಯ ಕಾನೂನು ಕಾಲೇಜುಗಳ ಮಸೂದೆ~ ತಿದ್ದುಪಡಿ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ಈ ಮುಷ್ಕರಕ್ಕೆ ಕರೆ ನೀಡಿದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿಯೂ ಮುಷ್ಕರ ನಡೆಸಲಾಯಿತು. ಇದು ಗುರುವಾರವೂ ಮುಂದುವರಿಯಲಿದೆ.ಆಯಾ ರಾಜ್ಯಗಳಲ್ಲಿನ ಎಲ್ಲ ಕಾನೂನು ಕಾಲೇಜುಗಳಿಗೆ ಮಾನ್ಯತೆ ನೀಡುವುದು, ಅವುಗಳ ಪಠ್ಯಕ್ರಮ ನಿಗದಿಪಡಿಸುವುದು ಇತ್ಯಾದಿ ಅಧಿಕಾರ ರಾಜ್ಯ ವಕೀಲರ ಪರಿಷತ್ತಿನ ವ್ಯಾಪ್ತಿಗೆ ಒಳಪಟ್ಟಿದೆ. `ರಾಷ್ಟ್ರೀಯ ಕಾನೂನು ಕಾಲೇಜುಗಳ ಮಸೂದೆ~ ಜಾರಿಯಾದರೆ ಈ ಅಧಿಕಾರ ಸರ್ಕಾರದ ಪಾಲಾಗುತ್ತದೆ ಎನ್ನುವುದು ಪರಿಷತ್ ಹೇಳಿಕೆ.ವಿದೇಶಿ ವಕೀಲರು ಭಾರತಕ್ಕೆ ಬಂದು ವಕೀಲಿ ವೃತ್ತಿ ನಡೆಸಲು ಅಥವಾ ಇಲ್ಲಿಯ ವಕೀಲರು ವಿದೇಶದಲ್ಲಿ ವೃತ್ತಿ ನಡೆಸಲು ಕೆಲವೊಂದು ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಇದರ ಜೊತೆಗೆ ಕೆಲವು ಷರತ್ತುಗಳು ಕೂಡ ಅನ್ವಯ ಆಗುತ್ತವೆ. ಆದರೆ, `ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ~ ಜಾರಿಗೊಂಡರೆ, ಯಾವುದೇ ಪರೀಕ್ಷೆ ಇಲ್ಲದೇ, ವಿದೇಶಿ ವಕೀಲರು ಭಾರತಕ್ಕೆ ಬಂದು ವಕೀಲಿ ವೃತ್ತಿ ನಡೆಸುತ್ತಾರೆ.

 

ಇಲ್ಲಿಯ ವಕೀಲರು ಮಾತ್ರ ವಿದೇಶದಲ್ಲಿನ ಷರತ್ತುಗಳಿಗೆ ಒಳಪಟ್ಟು ಅಲ್ಲಿ ವೃತ್ತಿ ನಡೆಸಬೇಕಾಗುತ್ತದೆ. ಆದುದರಿಂದ ಈ ಮಸೂದೆಗಳಿಗೆ ವಕೀಲರಿಂದ ವಿರೋಧ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.