ಭಾನುವಾರ, ಏಪ್ರಿಲ್ 11, 2021
26 °C

ಕೋಲಾರಕ್ಕೆ ಕಾವೇರಿ: ರೂ.ನೂರು ಕೋಟಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಗೆ ಕಾವೇರಿ ನೀರು ಪೂರೈಸಲಾಗುವುದು ಎಂದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ತಾವು ನೀಡಿದ್ದ ಭರವಸೆ ಈಡೇರಿಸುವ ದಿನಗಳು ಹತ್ತಿರದಲ್ಲಿವೆ. ಅಂಥ ಪ್ರಯತ್ನ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ತಿಳಿಸಿದರು.ಹೂಡಿ ಸಮೀಪದಲ್ಲಿ ಕಾವೇರಿ ನೀರು ಸಂಗ್ರಹಗೊಳ್ಳುತ್ತಿದ್ದು, ಅಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ನಗರದ ಅಮ್ಮೇರಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೂರೈಸುವ 100 ಕೋಟಿ ವೆಚ್ಚದ ಯೋಜನೆ ಸಿದ್ಧವಾಗುತ್ತಿದೆ ಎಂದರು.

ಜಿಲ್ಲೆಗೆ ನೀರು ಪೂರೈಸುವ ನಿಟ್ಟಿನಲ್ಲಿ 63 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು, ಅನುಷ್ಠಾನಗೊಂಡರೆ ನೀರಿನ ಸಮಸ್ಯೆ ಬಹುತೇಕ ತೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಗರದ ಎಂಬಿ.ರಸ್ತೆ ವಿಸ್ತರಣೆ ಕಾಮಗಾರಿ ಒಂದೆರಡು ತಿಂಗಳಲ್ಲಿ ಕೊನೆಗೊಳ್ಳಲಿದೆ. ಡೂಂಲೈಟ್ ವೃತ್ತದಿಂದ ಕ್ಲಾಕ್‌ಟವರ್ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದ್ದು ಶೀಘ್ರ ಪೂರ್ಣಗೊಳ್ಳಲಿದೆ ಎಂದರು.ಮೊಸರಲ್ಲಿ ಕಲ್ಲು: ನಗರಕ್ಕೆ ನೀರು ಪೂರೈಸುವ ಸಲುವಾಗಿ 1 ಸಾವಿರ ಲೀಕೇಜ್ ಸರಿಪಡಿಸಲಾಗಿದೆ. ಅಂಥ ಕಾಮಗಾರಿಗಳಿಗೆ ಟೆಂಡರ್ ಕರೆದರೆ ಪ್ರಕ್ರಿಯೆ ವಿಳಂಬವಾಗುತ್ತದೆ. ಜನರಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಟೆಂಡರ್ ಪ್ರಕ್ರಿಯೆಯನ್ನು ನಿಧಾನಕ್ಕೆ ನಡೆಸಲು ನಿರ್ಧರಿಸಿ, ಸ್ವಂತ ಹಣ ವಿನಿಯೋಗಿಸುತ್ತಿರುವೆ. ನಂತರದ ದಿನಗಳಲ್ಲಿ ಸರ್ಕಾರದಿಂದ ಆ ಹಣ ಪಡೆಯುವೆ ಎಂದರು.ನೀರು ಪೂರೈಸುವ ವಿಚಾರದಲ್ಲಿ ಬಳಸುತ್ತಿರುವ ಸ್ವಂತ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಹಕ್ಕು ವಿರೋಧಿಗಳಿಗೆ ಇಲ್ಲ. ಅವರೆಲ್ಲ ಅಧಿಕಾರದಲ್ಲಿದ್ದಾಗ ಸುಳ್ಳು ಬಿಲ್‌ಗಳನ್ನು ಸೃಷ್ಟಿಸಿ ಹಣ ದೋಚಿದವರು. ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಅವರು ನಿಲ್ಲಿಸಬೇಕು ಎಂದು ನುಡಿದರು.ಎರಡು ದಿನಕ್ಕೊಮ್ಮೆ ನೀರು ನಗರದ ಎಲ್ಲ ಜನರಿಗೂ ದೊರಕುವಂಥ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಅದೇ ರೀತಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.ಪಾಪದ ಪರಿಣಾಮ: ನಗರದಲ್ಲಿ ಬಹಳಷ್ಟು ಕಾಂಕ್ರಿಟ್ ರಸ್ತೆಗಳು ಕಳಪೆಯಾಗಿರುವುದು ತಮ್ಮ ಪಾಪದ ಪರಿಣಾಮ. ನಗರಸಭೆ ಸದಸ್ಯರೇ ಗುತ್ತಿಗೆದಾರರಾಗಿ ಕಾಮಗಾರಿ ನಡೆಸಿದ್ದರ ಪರಿಣಾಮ. ಅವರ ವಿರುದ್ಧ ತನಿಖೆ, ಕ್ರಮ ಎಂದು ಮುಂದುವರಿಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಅವರು ನಿರಾಶೆ ವ್ಯಕ್ತಪಡಿಸಿದರು.ದೇವಿಕಾ ಗೈರು: ಕ್ರಮಕ್ಕೆ ಸೂಚನೆ

ಕೋಲಾರ: ಸ್ವಾತಂತ್ರ್ಯ ದಿನಾಚರಣೆಗೆ ಗೈರುಹಾಜರಾದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕಿ ಎಂ.ಎಲ್.ದೇವಿಕಾ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ  ಆರ್.ವರ್ತೂರು ಪ್ರಕಾಶ್ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರಿಗೆ ಸೂಚಿಸಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಳಿಕ ಅಲ್ಲಿನ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಲುವಾಗಿ ಸಚಿವರು, ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ಅವರಿಂದ ಮಾಹಿತಿ ಕೋರುವ ಸಂದರ್ಭದಲ್ಲಿ, ಅಧೀಕ್ಷಕಿ ದೇವಿಕಾ ಕಾರ್ಯಕ್ರಮಕ್ಕೆ ಬಾರದಿರುವುದು ಬೆಳಕಿಗೆ ಬಂತು.ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರಲೇಬೇಕು ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೂ ಅವರು ಬಂದಿಲ್ಲ ಎಂದು ರುದ್ರಪ್ಪ ಸ್ಪಷ್ಟಪಡಿಸಿದರು.ಅವರ ಮಾತಿನಿಂದ ಅಸಮಾಧಾನಗೊಂಡ ಸಚಿವರು, ಕೂಡಲೇ ದೇವಿಕಾ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡಿ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಎಂದರು. ವರದಿಯನ್ನು ಸರ್ಕಾರಕ್ಕೆ ಕಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.