ಸೋಮವಾರ, ಆಗಸ್ಟ್ 10, 2020
24 °C

ಕೋಲಾರದಲ್ಲಿ ಮತ್ತೆ ಸುವರ್ಣಯುಗ?

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರದಲ್ಲಿ ಮತ್ತೆ ಸುವರ್ಣಯುಗ?

ಕೆಜಿಎಫ್‌ನಲ್ಲಿ ಚಿನ್ನದ ಗಣಿಯನ್ನು ಮತ್ತೆ ತೆರೆದರೆ ನಮ್ಮ ದೇಶದಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತದೆಯೇ'?-ಜಾಗತಿಕ ಟೆಂಡರ್ ಮೂಲಕ ಚಿನ್ನದ ಗಣಿಯನ್ನು ಮತ್ತೆ ತೆರೆಯುವ ಪ್ರಯತ್ನವನ್ನು ಶುರು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸೂಚನೆಯನ್ನು ಗಮನಿಸಿ ಕೋಲಾರದ ಗೃಹಿಣಿಯೊಬ್ಬರು ಆಸೆಯಿಂದ ಕೇಳಿದ ಪ್ರಶ್ನೆ ಇದು.ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ. 2,505 ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ 2,692. ಈ ಬೆಲೆಯಲ್ಲಿ ಎಷ್ಟು ಕಡಿಮೆಯಾಗಬಹುದು? ಎಂಬುದು ಆಕೆಯ ಪ್ರಶ್ನೆಯ ಮುಂದುವರಿದ ರೂಪ.ಆದರೆ ಸದ್ಯಕ್ಕೆ ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪಡೆದುಕೊಳ್ಳುವುದು ಅಸಾಧ್ಯ ಎಂಬುದು ವಾಸ್ತವ.ಚಿನ್ನವನ್ನು ಬಂಡವಾಳ ಹೂಡಿಕೆಯ ದೃಷ್ಟಿಯಿಂದ ನೋಡುವುದಕ್ಕಿಂತಲೂ ಆಭರಣ ರೂಪದಲ್ಲಿ ಧರಿಸುವ ಜೀವನಶೈಲಿಯುಳ್ಳ ಭಾರತದ ಒಂದು ಚಿನ್ನದ ಗಣಿ ಮತ್ತೆ ಬಾಗಿಲು ತೆರೆಯಲಿದೆ, ಗಣಿಗಾರಿಕೆ ಆರಂಭಿಸಲಿದೆ ಎಂಬ ಸಂಗತಿ ಹೆಚ್ಚು ನಿರೀಕ್ಷೆಯನ್ನು ಮೂಡಿಸುವುದು ಸಹಜವೇ ಆಗಿದೆ.ಚಿನ್ನವನ್ನು ಹೆಚ್ಚು ಪ್ರೀತಿಸುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿರುವ ಭಾರತದ ಮಹಿಳೆಯರು, ಚಿಕ್ಕ ಮೂಗಿನತ್ತಿನಂಥ ಚಿನ್ನ ಸಿಕ್ಕರೂ ಆಸೆಯಿಂದ ಧರಿಸುವವರು. ಚಿನ್ನವಿಲ್ಲದ ಬದುಕು ನಿಕೃಷ್ಟ ಎಂಬ ಭಾವನೆ ಸಾರ್ವತ್ರಿಕವಾಗಿರುವ ಇಂಥ ಕಾಲಘಟ್ಟದಲ್ಲಿ ಗರ್ಭದಲ್ಲಿ ಚಿನ್ನವಿದ್ದೂ ಮುಚ್ಚಿದ್ದ ಕರ್ನಾಟಕದ `ಕೋಲಾರ್ ಗೋಲ್ಡ್ ಫೀಲ್ಡ್'(ಕೆಜಿಎಫ್)ನ ಗಣಿಯನ್ನು ಮತ್ತೆ ಆರಂಭಿಸಲಾಗುತ್ತದೆ ಎಂಬ ಮಾತೇ ಸಾವಿರಾರು ಮಂದಿಯಲ್ಲಿ ರೋಮಾಂಚನ ಮೂಡಿಸಿದೆ.

ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಚಿನ್ನದ ಉತ್ಪಾದಿಸುವ ದೇಶಗಳ ಪೈಕಿ ಭಾರತ ಮುಂಚೂಣಿಗೆ ಬರುತ್ತದೆಯೇ ಎಂಬ ಪ್ರಶ್ನೆಯ ರೀತಿಯಲ್ಲೇ, ಕೆಜಿಎಫ್‌ನಲ್ಲಿ ಮತ್ತೆ ಚಿನ್ನ ಉತ್ಪಾದನೆಯ `ಸುವರ್ಣ ಯುಗ' ಶುರುವಾಗುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ.ಬಿತ್ತುವ ಮತ್ತು ಬಿತ್ತಿದಂತೆ ನಿರಂತರ ಬೆಳೆಯುವ ಕೃಷಿ ಚಟುವಟಿಕೆಗಿಂತಲೂ ಭಿನ್ನವಾದ, ಅಗೆದಷ್ಟೂ, ತೆಗೆದಷ್ಟೂ ಖಾಲಿಯಾಗುವ ಮೂಲ ಗುಣವುಳ್ಳ ಗಣಿ ಕಾರ್ಯಾಚರಣೆಯ ಪರಿಣಾಮವಾಗಿಯೇ, ಚಿನ್ನವನ್ನು ಗ್ರಾಂ ಲೆಕ್ಕದಲ್ಲೇ ತೂಗುವ ಅನಿರ್ವಾಯವೂ ನಿರ್ಮಾಣವಾಗಿದೆ.ವಸಾಹತುಶಾಹಿ ಆಗಮನದಿಂದ ಅಸ್ತಿತ್ವ ಪಡೆದು ಮೆರೆದು ಮುಚ್ಚಲ್ಪಟ್ಟ `ಕೆಜಿಎಫ್'ನ ಚಿನ್ನದ ಗಣಿಗಳನ್ನು ಜಾಗತಿಕ ಟೆಂಡರ್ ಮೂಲಕ ಮತ್ತೆ ತೆರೆದರೆ ಆಗುವ ಚಿನ್ನದ ಉದ್ಯಮದಲ್ಲಿ ಆಗುವ ಬದಲಾವಣೆಯನ್ನು ಸದ್ಯಕ್ಕೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಜ್ಞರ ಸ್ಪಷ್ಟ ಅಭಿಮತ.ಜಾಗತಿಕ ಮಟ್ಟದಲ್ಲಿ ಚಿನ್ನದ ಲೋಹದ ಉತ್ಪಾದನೆಗೆ ಹೋಲಿಸಿದರೆ `ಕೆಜಿಎಫ್'ನ ಚಿನ್ನದ ಗಣಿಯಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗಲಿರುವ ಲೋಹದ ಪ್ರಮಾಣ ಅತಿ ಕಡಿಮೆ. ಕನಿಷ್ಠ 10ರಿಂದ 20 ವರ್ಷ ಗಣಿ ಪುನಃಶ್ಚೇತನಕ್ಕಷ್ಟೇ ಒತ್ತು ನೀಡಿದ ಬಳಿಕ ಮತ್ತು ಟನ್ನುಗಟ್ಟಳೆ ಚಿನ್ನ ಉತ್ಪಾದಿಸುವ ಪರಂಪರೆ ಮತ್ತೆ ಸೃಷ್ಟಿಯಾದರೆ ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ `ಕೆಜಿಎಫ್' ಚಿನ್ನದಗಣಿಗಳು ಮತ್ತೆ ನಿರ್ಣಾಯಕ ಸ್ಥಾನವನ್ನು ಗಳಿಸಬಲ್ಲವು ಎಂಬುದು ಕೋಲಾರ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಮುರಳೀಧರ್ ಅವರ ನಿಲುವು.ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 110 ಕಿ.ಮೀ ದೂರದಲ್ಲಿರುವ ಬಿಜಿಎಂಲ್ ಗಣಿಗಳನ್ನು 12 ವರ್ಷದ ಹಿಂದೆ ಮುಚ್ಚಲಾಗಿತ್ತು. ಆಳದಲ್ಲಿ ಚಿನ್ನವಿದ್ದರೂ, ಚಿನ್ನದ ಮಾರುಕಟ್ಟೆ ಬೆಲೆಗೆ ಸರಿ ಹೊಂದದ ಅತಿಯಾದ ಉತ್ಪಾದನಾ ವೆಚ್ಚ ಮತ್ತು ಅದರಿಂದ ಆಗುತ್ತಿದ್ದ ನಷ್ಟದ ಹೆಸರಿನಲ್ಲಿ ಗಣಿಗಳನ್ನು ಮುಚ್ಚುವ ಕೇಂದ್ರದ ನಿಲುವಿಗೆ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಈಗ ಭರ್ತಿ ಹರ್ಷ ವ್ಯಕ್ತವಾಗಿದೆ.ಆ ದಿನಗಳು....

ಉತ್ಪಾದನೆಯಾಗುವ ಒಟ್ಟು ಚಿನ್ನದ ಬೆಲೆಯ ಶೇ 5ರಷ್ಟು ರಾಯಧನವನ್ನು ಮೈಸೂರು ಸರ್ಕಾರಕ್ಕೆ ಪಾವತಿಸುವ ಕರಾರಿನ ಮೇಲೆ 1880ರಲ್ಲಿ ಕೆಜಿಎಫ್‌ನಲ್ಲಿ ಇಂಗ್ಲೆಂಡಿನ ಜಾನ್ ಟೇಲರ್ ಅಂಡ್ ಸನ್ಸ್ ಕಂಪನಿ ಗಣಿಗಾರಿಕೆಯನ್ನು ಆರಂಭಿಸಿತ್ತು. ಅದು ಚಿನ್ನ ಉತ್ಪಾದನೆಯ ಉತ್ಕೃಷ್ಟ ಕಾಲ.

ಕ್ರಮೇಣ ನಷ್ಟದ ಬಾಬತ್ತು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ಗಣಿ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ.ಎಸ್.ಆರ್ ಚಾರಿ ನೇತೃತ್ವದ ಸಮಿತಿಗೆ 1985ರಲ್ಲಿ ಸಲ್ಲಿಸಿದ ವರದಿ ಪ್ರಕಾರ, ಆ ಹೊತ್ತಿಗೆ 50 ಲಕ್ಷ ಟನ್‌ನಷ್ಟು ಅದಿರನ್ನು ಹೊರಹಾಕಿ 17,500 ಕೋಟಿ ಮೌಲ್ಯದ 800 ಟನ್ ಚಿನ್ನವನ್ನು ಉತ್ಪಾದಿಸಲಾಗಿತ್ತು.  ಮೊದಲ ಎರಡು ದಶಕದಲ್ಲಿ ಒಂದು ಟನ್‌ಗೆ 40ರಿಂದ 50 ಗ್ರಾಂ ಚಿನ್ನ ಉತ್ಪಾದಿಸಿದ್ದ ಕೆಜಿಎಫ್ ಕೊನೆ ಹೊತ್ತಿಗೆ ಟನ್‌ಗೆ ಕೇವಲ 4ರಿಂದ 5ಗ್ರಾಂನಷ್ಟು ಉತ್ಪಾದನೆಗಿಳಿದಿತ್ತು.ಕಾರಣವೇನು?

ಕೆಜಿಎಫ್ ಚಿನ್ನದ ಗಣಿಗಳು ನಷ್ಟ ಹೊಂದಲು ಹಲವು ಕಾರಣಗಳನ್ನು ಗುರುತಿಸಲಾಗುತ್ತದೆ. ಅಗತ್ಯಕ್ಕೂ ಹೆಚ್ಚು ನೌಕರರ ನೇಮಕ, ಉತ್ಪಾದನೆಯಾಗುತ್ತಿದ್ದ ಚಿನ್ನದ ಸೋರಿಕೆಯೂ ಕೂಡ ನಷ್ಟದ ಪ್ರಮುಖ ಕಾರಣಗಳಲ್ಲೊಂದು.ಉತ್ಪಾದನಾ ವೆಚ್ಚವನ್ನು ತನ್ನ ತಲೆ ಮೇಲೆ ಹೇರಿಕೊಂಡಿದ್ದು ಮತ್ತು ಚಿನ್ನವನ್ನು ಮಾರಲು ಮಧ್ಯವರ್ತಿ ಸಂಸ್ಥೆಗಳನ್ನು ಆಧರಿಸಿದ್ದು- `ಬಿಜಿಎಂಎಲ್' ನಷ್ಟಹೊಂದಲು ಪ್ರಮುಖ ಕಾರಣಗಳಲ್ಲೊಂದು ಎಂದೇ ವಿಶ್ಲೇಷಿಸಲಾಗುತ್ತಿದೆ.ಚಿನ್ನವನ್ನು ಮಾರುವ ಮಧ್ಯವರ್ತಿಗಳಿಗೆ ಹೆಚ್ಚು ಕಮಿಷನ್ ತಲುಪುವ ಹೊತ್ತಿನಲ್ಲೇ, ಗಣಿಗಳು ಉತ್ಪಾದನಾ ವೆಚ್ಚದ ಭಾರದಿಂದ ನಲುಗುವುದು ವಿಪರ್ಯಾಸ.ಚಿನ್ನದ ಅದಿರುಗಳ ಸಮರ್ಪಕ ನಿರ್ವಹಣೆ, ಅದಿರಿನಿಂದ ತೆಗೆಯಲಾಗುವ ಚಿನ್ನದ ರಾಸಾಯನಿಕ ವಿಶ್ಲೇಷಣೆ, ಸಂಸ್ಕರಣೆಗೆ ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾಗದಿದ್ದದ್ದೂ ಕೂಡ ನಷ್ಟಕ್ಕೆ ಕಾರಣ.ಈಗ ಗಣಿ ಮತ್ತೆ ಆರಂಭವಾದರೂ, ಮೊದಲ ಘಟ್ಟದಲ್ಲಿ ಆಗಿರುವ ಹಲವು ಲೋಪದೋಷಗಳನ್ನು ತಿದ್ದಿಕೊಳ್ಳಬೇಕಾದ ಸವಾಲು ಕೂಡ ಎದುರಾಗಿದೆ.

ಉದ್ಯೋಗ ಯಾರಿಗೆ?

ಶುರುವಾದಾಗಿನಿಂದ ಬ್ರಿಟನ್, ಜರ್ಮನಿ, ಇಟಲಿ ದೇಶದವರಿಗಷ್ಟೇ ಅಲ್ಲದೆ, ಆಂಗ್ಲೊ ಇಂಡಿಯನ್ನರಿಗೆ ಉತ್ತಮ ಕೆಲಸ ಮತ್ತು ಪಕ್ಕದ ತಮಿಳುನಾಡಿನಿಂದ ಕರೆತರಲಾಗಿದ್ದ ಬಹುತೇಕ ಪರಿಶಿಷ್ಟ ಸಮುದಾಯದವರಿಗೆ ಕಾರ್ಮಿಕರ ಕೆಲಸ ಕೊಟ್ಟಿರುವ `ಕೆಜಿಎಫ್' ಚಿನ್ನದ ಗಣಿ ಮತ್ತೆ ಆರಂಭವಾದಾಗ ಯಾರಿಗೆ ಕೆಲಸ ಕೊಡುತ್ತದೆ? ಎಂಬ ಪ್ರಶ್ನೆಯೂ ಮೂಡಿದೆ.ಚಿನ್ನಗಣಿ ತಂತ್ರಜ್ಞಾನ ಕೌಶಲ್ಯವನ್ನು ಅರಿತವರಿಗೆ ಕೆಲಸ ಸುಲಭ. ಆದರೆ ಗಣಿ ಆರಂಭವಾಗುವ ಕನಸು ಹೊತ್ತು ಅನ್ಯ ಕೆಲಸಗಳನ್ನು ಮಾಡುತ್ತಿರುವ ಗಣಿಗಳ ಮಾಜಿ ಕಾರ್ಮಿಕರ ಕುಟುಂಬಗಳ ಸದಸ್ಯರ ಗತಿ ಏನು? ಎಂಬ ಪ್ರಶ್ನೆಯೂ ಇಲ್ಲಿದೆ. ಅವರಲ್ಲೆ `ಕೆಜಿಎಫ್'ನ ಹೊಸ ತಲೆಮಾರಿನ ಜನರೂ ಉದ್ಯೋಗಾವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.ದೇಶದಲ್ಲಿ ಚಿನ್ನದ ಉತ್ಪಾದನೆ

`ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ' ಸಂಸ್ಥೆ ಪ್ರಕಾರ 1905ರಲ್ಲಿ 19.5 ಟನ್ ಚಿನ್ನವನ್ನು ಉತ್ಪಾದಿಸುವ ಮೂಲಕ ಭಾರತ ವಿಶ್ವಮಟ್ಟದಲ್ಲಿ 6ನೇ ಸ್ಥಾನದಲ್ಲಿತ್ತು. 2007ರ ಹೊತ್ತಿಗೆ ಕೇವಲ 2.490 ಟನ್ ಮಾತ್ರ ಉತ್ಪಾದನೆಯಾಗುತ್ತಿತ್ತು. ಕೋಲಾರ ಚಿನ್ನದ ಗಣಿಗಳನ್ನು ಮುಚ್ಚುವ ಹೊತ್ತಿಗೆ 800 ಟನ್‌ಗಿಂತಲೂ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗಿತ್ತು.ಕರ್ನಾಟಕದಲ್ಲಿ ಈಗ ಹಟ್ಟಿ, ಯುಟಿಐ ಮತ್ತು ಹಿರಾಬುದ್ನಿ (ಎಚ್‌ಜಿಎಂಲ್) ಗಣಿಗಳಲ್ಲಿ ಮಾತ್ರ ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ರಾಜಾಸ್ತಾನದ ಕೇಟ್ರಿ, ಜಾರ್ಖಂಡ್‌ನ ಮೊಸಬನಿ, ಸಿಂಘಭುಮ್, ಕುಂಡ್ರೇಕೊಚದಲ್ಲಿ ಸಂಗ್ರಹವಾಗಿರುವ ಕಬ್ಬಿಣ, ತಾಮ್ರ, ಜಿಂಕ್ ಮೊದಲಾದ ಪ್ರಾಥಮಿಕ ಲೋಹಗಳಿಂದ ಚಿನ್ನದ ಉಪ ಉತ್ಪಾದನೆ ನಡೆಯುತ್ತಿದೆ.2006-07ರಲ್ಲಿ ದೇಶದಲ್ಲಿ 12.87 ಟನ್‌ನಷ್ಟು (ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಶೇ 0.5ರಷ್ಟು) ಚಿನ್ನವನ್ನು ಉತ್ಪಾದಿಸಲಾಗಿತ್ತು. ಅದರಲ್ಲಿ 2.36 ಟನ್ ಪ್ರಾಥಮಿಕ ಸಂಪನ್ಮೂಲಗಳಿಂದ, 127 ಕೆಜಿಯನ್ನು ಪ್ರಾಥಮಿಕ ಲೋಹಗಳ ಉಪ ಉಪ ಉತ್ಪಾದನೆಯಾಗಿ ಹಾಗೂ ಉಳಿದ 10.34 ಟನ್ ಅನ್ನು ಆಮದು ಮಾಡಿಕೊಂಡ ತಾಮ್ರಲೋಹದ ಸಂಸ್ಕರಣದಿಂದ ಪಡೆಯಲಾಗಿತ್ತು.ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಚಿನ್ನದ ಉತ್ಪಾದನೆಯಲ್ಲಿ `ಹಿಂದೆ', ಬಳಕೆಯಲ್ಲಿ ಮಾತ್ರ `ಮುಂದೆ' ಇದೆ. ವಿಶ್ವದಲ್ಲಿ ಚಿನ್ನ ಉತ್ಪಾದನೆಯಾಗುವ ಶೇ 30ರಷ್ಟು ಅಂದರೆ, 700ರಿಂದ 800 ಟನ್ ಚಿನ್ನವನ್ನು ಭಾರತದ ಜನ ವರ್ಷವೊಂದರಲ್ಲಿ ಕೊಳ್ಳುತ್ತಾರೆ. ಇಂಥ ಬೃಹತ್ ಬೇಡಿಕೆಗೆ ಸ್ಪಂದಿಸುವ ಸಲುವಾಗಿಯೇ ಭಾರತವು 2006-07ರಲ್ಲಿ ಸುಮಾರು 715 ಟನ್ ಬಂಗಾರವನ್ನು ಆಮದು ಮಾಡಿಕೊಂಡಿತ್ತು.2005ರಲ್ಲಿ ಜಾಗತಿಕವಾಗಿ 2,430 ಟನ್ ಚಿನ್ನವನ್ನು ಉತ್ಪಾದಿಸಲಾಗಿತ್ತು. ಇಡೀ ಜಗತ್ತಿನಲ್ಲಿ ದಕ್ಷಿಣ ಆಫ್ರಿಕಾ ಅತ್ಯಧಿಕ ಚಿನ್ನ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿತ್ತು. ಈಗ ಚೈನಾ ಈ ಸ್ಥಾನದಲ್ಲಿದೆ. ಉಳಿದಂತೆ ಆಸ್ಟ್ರೇಲಿಯಾ, ಅಮೇರಿಕಾ, ಪೆರು, ರಷ್ಯಾ, ಇಂಡೋನೇಷಿಯಾ ಮತ್ತು ಕೆನದಾ ದೇಶಗಳು ಚಿನ್ನವನ್ನು ಹೆಚ್ಚು ಉತ್ಪಾದಿಸುತ್ತಿವೆ.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.