ಶನಿವಾರ, ಮೇ 28, 2022
30 °C

ಕೋಲಾರ ಚಿನ್ನದ ಗಣಿ ಪುನಶ್ಚೇತನಕ್ಕೆ ಕೋರ್ಟ್ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದಶಕದ ಹಿಂದೆ ಮುಚ್ಚಿರುವ `ಕೋಲಾರ ಚಿನ್ನದ ಗಣಿ' (ಕೆಜಿಎಫ್) ಪುನಶ್ಚೇತನಗೊಳಿಸಲು ಜಾಗತಿಕ ಟೆಂಡರ್ ಕರೆಯಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮೋದನೆ ನೀಡಿತು.ಕೋಲಾರ ಚಿನ್ನದ ಗಣಿ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಕರೆಯುವ ಬದಲಾಗಿ ಕೇಂದ್ರ ಸರ್ಕಾರವೇ ಜವಾಬ್ದಾರಿ ಹೊರಬೇಕೆಂದು ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ 2010ರಲ್ಲಿ ನೀಡಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ನ್ಯಾ.ವಿಕ್ರಮಜಿತ್ ಸೇನ್ ಮತ್ತು ನ್ಯಾ.ಎಂ.ವೈ.ಇಕ್ಬಾಲ್ ಅವರನ್ನೊಳಗೊಂಡ ತ್ರಿಸದಸ್ಯ ಸುಪ್ರೀಂಕೋರ್ಟ್ ಪೀಠ ಅನೂರ್ಜಿತಗೊಳಿಸಿತು.ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ, ಚಿನ್ನದ ಗಣಿ ಕಾರ್ಮಿಕರು ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿತು. ಕೇಂದ್ರ ಸಂಪುಟ 2006ರಲ್ಲಿ ಕೈಗೊಂಡಿರುವ ತೀರ್ಮಾನದಂತೆ ಚಿನ್ನದ ಗಣಿ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಕೋರ್ಟ್ ಸೂಚಿಸಿತು. ಸರ್ಕಾರ `ಬಿಜಿಎಂಎಲ್'ಗೆ 12,095 ಎಕರೆ ಗುತ್ತಿಗೆ ನೀಡಿದೆ. ಇದರಲ್ಲಿ 1109 ಎಕರೆಯನ್ನು `ಭಾರತ್ ಅರ್ಥ್ ಮೂವರ್ಸ್‌ ಲಿ'.ಗೆ ಮರುಗುತ್ತಿಗೆ ಕೊಟ್ಟಿದ್ದು, ಇದು 2014ರ ಏಪ್ರಿಲ್‌ಗೆ ಅಂತ್ಯವಾಗಲಿದೆ.ಕೋಲಾರ ಚಿನ್ನದ ಗಣಿ ಪುನಶ್ಚೇತನಕ್ಕೆ `ಸುಪ್ರೀಂ' ಸಮ್ಮತಿ

`ಚಿನ್ನದ ಗಣಿ ಪುನಶ್ಚೇತನದ ಹೊಣೆಗಾರಿಕೆಯನ್ನು ಜಾಗತಿಕ ಟೆಂಡರ್ ಕರೆದು ಹೊರಗಿನವರಿಗೆ ಕೊಡಬಾರದು. ಗಣಿ ಕಾರ್ಮಿಕರ ಸಹಕಾರ ಸಂಘಕ್ಕೂ ವಹಿಸಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿತ್ತು.ಹನ್ನೆರಡು ವರ್ಷಗಳ ಹಿಂದೆ ಆಗಿನ ಎನ್‌ಡಿಎ ಸರ್ಕಾರ ಕೋಲಾರ ಚಿನ್ನದ ಗಣಿ ಮುಚ್ಚಲು ಆದೇಶಿಸಿತ್ತು. ಗಣಿ ಕಾರ್ಮಿಕರು, ಅಧಿಕಾರಿಗಳು ಮತ್ತಿತರರು ಈ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು. 2009ರಲ್ಲಿ ಹೈಕೋರ್ಟ್‌ನ ಏಕ ನ್ಯಾಯಮೂರ್ತಿ ಪೀಠವು, `ಗಣಿ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಕರೆಯಬೇಕು. ಚಿನ್ನದ ಗಣಿಗಾರಿಕೆಯಲ್ಲಿ ನಿರತರಾಗಿರುವ ಕಂಪೆನಿಗಳನ್ನು ಮಾತ್ರ ಪರಿಗಣಿಸಬೇಕು' ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ಏಕ ನ್ಯಾಯಮೂರ್ತಿ ಪೀಠದ ಆದೇಶದ ವಿರುದ್ಧ `ಬಿಜಿಎಂಎಲ್' ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಚಿನ್ನದ ಗಣಿ ಪುನಶ್ಚೇತನದಲ್ಲಿ ಪಾಲ್ಗೊಳ್ಳಲು ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಂಪೆನಿಗಳಿಗೆ ಮಾತ್ರವಲ್ಲದೆ, ಎಲ್ಲ ಕಂಪೆನಿಗಳಿಗೂ ಅವಕಾಶವಿರಬೇಕು ಎನ್ನುವುದು `ಬಿಜಿಎಂಎಲ್' ಪ್ರತಿಪಾದನೆ ಆಗಿತ್ತು. ಅನಂತರ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು `ಸುಪ್ರೀಂ'ನಲ್ಲಿ ಪ್ರಶ್ನಿಸಲಾಗಿತ್ತು.ಆರು ತಿಂಗಳಲ್ಲಿ ಆರಂಭ: ಕೋಲಾರ ಗಣಿ ಪುನಶ್ಚೇತನ ಟೆಂಡರ್ ಪ್ರಕ್ರಿಯೆ ಐದು ತಿಂಗಳಲ್ಲಿ ಅಂತಿಮಗೊಳ್ಳಲಿದ್ದು, 6 ತಿಂಗಳಲ್ಲಿ ಗಣಿಗಾರಿಕೆ ಪುನರಾರಂಭ ಆಗಲಿದೆ. ಇದರಿಂದಾಗಿ 3,500 ಕಾರ್ಮಿಕರಿಗೆ ಪ್ರತ್ಯಕ್ಷ ಮತ್ತು 5 ಸಾವಿರ ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ. ಗಣಿ ಪುನರಾರಂಭದಿಂದಾಗಿ ಜಿಲ್ಲೆ ಆರ್ಥಿಕ ಚಟುವಟಿಕೆ ಗರಿಗೆದರಲಿದೆ ಎಂದು ನಿರೀಕ್ಷಿಸಲಾಗಿದೆ. ಗಣಿ ಪುನಶ್ಚೇತನಗೊಳಿಸುವ ಸರ್ಕಾರದ ತೀರ್ಮಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ಅವರಿಗೆ ಗಣಿ ನೌಕರರು ಹಾಗೂ ಅಧಿಕಾರಿಗಳ ಸಂಯುಕ್ತ ಒಕ್ಕೂಟದ ಅಧ್ಯಕ್ಷ ಕೆ.ಎಂ.ದಿವಾಕರನ್ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.