ಸೋಮವಾರ, ಮೇ 17, 2021
23 °C

ಕೋಳ ಹಾಕಿಸಿಕೊಂಡು ಬಂದ, ಪರೀಕ್ಷೆ ಬರೆದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು (ಮಂಗಳೂರು):  ನಕ್ಸಲರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂಬ ಆರೋಪದಡಿ ಬಂಧಿತನಾಗಿರುವ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕು ಕುತ್ಲೂರಿನ ವಿಠಲ ಮಲೆಕುಡಿಯನಿಗೆ ಆಂತರಿಕ ಪರೀಕ್ಷೆ ಬರೆಯಲು ನ್ಯಾಯಾಲಯ ಅವಕಾಶ ನೀಡಿದ್ದು, ಮಂಗಳವಾರ ನಗರ ಮೀಸಲು ಪಡೆ ಪೊಲೀಸರ ಭದ್ರತೆಯೊಂದಿಗೆ ಕೊಣಾಜೆಯ ಮಂಗಳೂರು ವಿ.ವಿ.ಗೆ ಬಂದು ಪರೀಕ್ಷೆ ಬರೆದಿದ್ದಾನೆ.ಮಂಗಳವಾರ ಬೆಳಿಗ್ಗೆ 9.15ರ ಸುಮಾರಿಗೆ ಪೊಲೀಸ್ ಬೆಂಗಾವಲಿನೊಂದಿಗೆ ಕೊಣಾಜೆಯ ಮಂಗಳೂರು ವಿ.ವಿ. ಕ್ಯಾಂಪಸ್‌ಗೆ ಬಂದ ವಿಠಲ ಮಲೆಕುಡಿಯನನ್ನು ಪೊಲೀಸರು ಪತ್ರಿಕೋ ದ್ಯಮ ವಿಭಾಗಕ್ಕೆ ಕರೆದುಕೊಂಡು ಹೋದರು. ಬಹಳ ದಿನಗಳ ನಂತರ ವಿಠಲನನ್ನು ಕಂಡ ಸಹಪಾಠಿಗಳು ಪ್ರೀತಿಯಿಂದಲೇ ಸ್ವಾಗತಿಸಿದರು. ಮಂಗಳವಾರ ನಿಗದಿಯಾಗಿದ್ದ `ಮೀಡಿಯ ಆಂಡ್ ಲಾ~ ಪರೀಕ್ಷೆಯ ಪೂರಕ ಮಾಹಿತಿಗಳನ್ನು ಹಾಗೂ ನೋಟ್ಸ್‌ಗಳನ್ನು ನೀಡಿ ಸಹಕರಿಸಿದರು. ಹಾಗೆಯೇ ವಿಠಲ ಕೂಡಾ ಪೊಲೀಸ್ ರಕ್ಷಣೆ ಹಾಗೂ ಎಡಗೈಯ್ಯಲ್ಲಿ ಕೋಳ  ಇದ್ದರೂ ಪರೀಕ್ಷೆಗೆ ತಯಾರಿ ನಡೆಸಿ ಆತ್ಮ ವಿಶ್ವಾಸದಿಂದಲೇ ಪರೀಕ್ಷೆ ಎದುರಿಸಿದ. ಪರೀಕ್ಷೆ ಬರೆದ ಸಂದರ್ಭದಲ್ಲಿ ಪೊಲೀಸರು ತರಗತಿ ಬಳಿ ಕಾವಲು ನಿಂತಿದ್ದರು.ವಿಶ್ವವಿದ್ಯಾಲಯಕ್ಕೆ ಆಂತರಿಕ ಪರೀಕ್ಷೆಯನ್ನು ಬರೆಯಲು ಬಂದ ವಿಠಲ ಮಲೆಕುಡಿಯನನ್ನು `ಪ್ರಜಾವಾಣಿ~  ಮಾತನಾಡಿಸಿದಾಗ ಮನದಾಳದ ನೋವುಗಳನ್ನು ಬಿಚ್ಚಿಟ್ಟ. `ಉತ್ತಮ ವಿದ್ಯಾಭ್ಯಾಸ ಹಾಗೂ ಉಜ್ವಲ ಭವಿಷ್ಯಕ್ಕೆ ಹಲವಾರು ಕನಸುಗಳನ್ನು ಕಂಡಿದ್ದೆ. ಅದಕ್ಕಾಗಿ ಚೆನ್ನಾಗಿ ಓದಿ ಈ ಹಂತಕ್ಕೆ ತಲುಪಿದ್ದೆ. ಆದರೆ ನಕ್ಸಲ್ ಸಂಪರ್ಕ ಆಪಾದನೆಯಡಿ ನನ್ನನ್ನು ಬಂಧಿಸಿದ್ದಾರೆ~ ಎಂದು ಅಳಲು ತೋಡಿಕೊಂಡ. `ಮನೆಗೆ ಪೊಲೀಸರು ದಾಳಿ ನಡೆಸಿದಾಗ ಮೂರು ಕಂಬಳಿ, ಪುಸ್ತಕಗಳು, ಊರಿನಲ್ಲಿ ನಡೆದ ಕಾರ್ಯಕ್ರಮಗಳ ಪೇಪರ್ ಕಟಿಂಗ್ಸ್, ಸಕ್ಕರೆ, ಚಾ ಪುಡಿ ಮುಂತಾದವು ಸಿಕ್ಕಿದ್ದವು. ಕೊಣಾಜೆಯ ಹಾಸ್ಟೆಲ್‌ನಲ್ಲಿರುವಾಗ ನನ್ನ ಓದಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಪೂರಕವಾದ ಮಾಹಿತಿಗಳ ಜೆರಾಕ್ಸ್ ಇಟ್ಟಿದ್ದೆ. ಆದರೆ ಪೊಲೀಸರು ಅಲ್ಲಿಗೂ ದಾಳಿ ಮಾಡಿ ನನಗೆ ಓದಲು ಬೇಕಾಗಿದ್ದ ಪುಸ್ತಕಗಳನ್ನು ಹಾಗೂ ಜೆರಾಕ್ಸ್‌ಗಳನ್ನು ಹಾಸ್ಟೆಲ್‌ನಲ್ಲಿನ ಕಪಾಟಿನಲ್ಲಿ ಇಟ್ಟು ಬೀಗ ಹಾಕಿದ್ದರು. ಬೀಗದ ಕೀ ಅವರಲಿಯೇ ಇತ್ತು. ಆದ್ದರಿಂದ ನನಗೆ ಪರೀಕ್ಷೆಗೆ ಅಭ್ಯಾಸ ಮಾಡಲು ಯಾವುದೇ ಪುಸ್ತಕಗಳು ಸಿಕ್ಕಿಲ್ಲ.ಆದರೂ ಪರೀಕ್ಷೆಯಲ್ಲಿ ಪಾಸಾಗುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಮುಂದೆ ಪತ್ರಕರ್ತನಾಗಬೇಕೆಂಬುದೇ ನನ್ನ ಬಯಕೆ. ಆಪಾದನೆಯಿಂದ ಹೊರಬರುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ~ ಎಂದು ಹೇಳಿದ. ತಂದೆಯನ್ನು ನೋಡಲು ಬಂದಾಗಲೇ ಬಂಧನ

ವಿಠಲ ನಕ್ಸಲೀಯರ ಜೊತೆ ನಂಟು ಇಟ್ಟುಕೊಂಡಿದ್ದ ಎಂಬ ಆರೋಪದ ಮೇರೆಗೆ ನಕ್ಸಲ್ ನಿಗ್ರಹ ಪಡೆಯವರು (ಎಎನ್‌ಎಫ್) ಆತನ ತಂದೆ ನಿಂಗಣ್ಣ ಮಲೆಕುಡಿಯ ಅವರಿಗೆ ಚಿತ್ರಹಿಂಸೆ ನೀಡಿದ್ದರು. ಇದರಿಂದ ಅವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ವಿಠಲನಿಗೆ ಲಭಿಸಿತ್ತು. ತಕ್ಷಣ ತಂದೆಯನ್ನು ನೋಡಲು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕಳೆದ ಮಾರ್ಚ್ 3ರಂದು ವಿಠಲ ಮಲೆಕುಡಿಯ ವಿಶ್ವವಿದ್ಯಾಲಯದಿಂದ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರಿಗೆ ಧಾವಿಸಿ ಬಂದಿದ್ದ. ಇದೇ ಸಂದರ್ಭದಲ್ಲಿ ಎಎನ್‌ಎಫ್‌ನವರು ಅವನನ್ನು ಬಂಧಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.