ಸೋಮವಾರ, ಮೇ 23, 2022
27 °C

ಕೌಟುಂಬಿಕ ಕಲಹ; ಇಬ್ಬರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ಸಿಟಿ ಮತ್ತು ಕಾಡುಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲೆಕ್ಟ್ರಾನಿಕ್‌ಸಿಟಿಯ ಚಾಮುಂಡೇಶ್ವರಿ ಲೇಔಟ್‌ನಲ್ಲಿ ನಡೆದಿದೆ.

ಟೆಂಪೊ ಚಾಲಕ ಕೃಷ್ಣ ಎಂಬುವರ ಪತ್ನಿ ಆದಿಲಕ್ಷ್ಮಿ (25) ಆತ್ಮಹತ್ಯೆ ಮಾಡಿಕೊಂಡವರು. ಮಗುವಿಗೆ ಊಟ ಮಾಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿತ್ತು. ಇದರಿಂದ ಮನನೊಂದ ಅವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಕುಟುಂಬ ಸದಸ್ಯರು ಅವರನ್ನು ಕೂಡಲೇ ಹಗ್ಗದ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ದೂರು ದಾಖಲಾಗಿದೆ,ಮತ್ತೊಂದು ಪ್ರಕರಣ: ಕಾಡುಗೊಂಡನಹಳ್ಳಿ ಸಮೀಪದ ಗೋವಿಂದಪುರ ನಿವಾಸಿ ಅಫ್ಜಲ್ ಬೇಗ್ (33) ಎಂಬುವರು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೇಂಟರ್ ಆಗಿದ್ದ ಅವರು ರಫಿಯಾ ಬಾನು ಎಂಬುವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಸಂಜೆಯೂ ಅವರ ನಡುವೆ ಜಗಳವಾಗಿತ್ತು. ಇದರಿಂದ ಬೇಸರಗೊಂಡ ಬೇಗ್ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪತಿ ಕಿರುಕುಳ ತಾಳಲಾರದೆ ಪತ್ನಿ ಆಹ್ಮಹತ್ಯೆ

ಬೆಂಗಳೂರು: ಪತಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಗರ್ಭಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಶವಂತಪುರದ ಮತ್ತೀಕೆರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.ಮತ್ತೀಕೆರೆ ನಾಲ್ಕನೇ ಅಡ್ಡರಸ್ತೆ ನಿವಾಸಿ ಉಮಾಶಂಕರ್ ಎಂಬುವರ ಪತ್ನಿ ಶ್ವೇತಾ (25) ಆತ್ಮಹತ್ಯೆ ಮಾಡಿಕೊಂಡವರು. ಐದು ತಿಂಗಳ ಹಿಂದೆಯಷ್ಟೇ ಅವರ ವಿವಾಹವಾಗಿತ್ತು. ಉಮಾಶಂಕರ್ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.ಶ್ವೇತಾ ಅವರು ಮಲಗುವ ಕೋಣೆಗೆ ತೆರಳಿ ಬಾಗಿಲನ್ನು ಬಂದ್ ಮಾಡಿಕೊಂಡು ನೇಣು ಹಾಕಿಕೊಂಡಿದ್ದರು. ಕುಟುಂಬ ಸದಸ್ಯರು ಬಾಗಿಲು ತಟ್ಟಿದಾಗ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ. ಅನಂತರ ಅವರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಅಳಿಯ ಕಿರುಕುಳ ನೀಡುತ್ತಿದ್ದರಿಂದ ಮಗಳು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಶ್ವೇತಾ ಅವರ ತಂದೆ ತಿಪ್ಪೇಶಪ್ಪ ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಉಮಾಶಂಕರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಪತಿಯ ಕೆಲ ವರ್ತನೆಯಿಂದ ಶ್ವೇತಾ ಬೇಸರಗೊಂಡಿದ್ದಳು. ಪಬ್‌ಗೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡುವಂತೆ ಉಮಾಶಂಕರ್ ಬಲವಂತ ಮಾಡುತ್ತಿದ್ದ ವಿಷಯವನ್ನು ಆಕೆ ಹಲವು ಬಾರಿ ಹೇಳಿಕೊಂಡಿದ್ದಳು. ಪ್ರತಿ ದಿನ ಕುಡಿದು ಜಗಳವಾಡುವ ಆತನ ಜತೆ ಬಾಳುವುದು ಕಷ್ಟ ಎಂದು ಅಳಲು ತೋಡಿಕೊಂಡಿದ್ದಳು’ ಎಂದು ಶ್ವೇತಾ ಅವರ ಸಂಬಂಧಿ ನಾಗರಾಜ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.