ಬುಧವಾರ, ಆಗಸ್ಟ್ 12, 2020
27 °C
ನೂರು ಕಣ್ಣು ಸಾಲದು

ಕೌತುಕದ ವೇಷ ಮತ್ತು ರೋಷಾವೇಶ

-ನೇಸರ Updated:

ಅಕ್ಷರ ಗಾತ್ರ : | |

ಕೌತುಕದ ವೇಷ ಮತ್ತು ರೋಷಾವೇಶ

ಒಳ್ಳೆಯವರು ಹಾಗೂ ಕೆಟ್ಟವರ ನಡುವೆ ನಡೆಯುವ ಘರ್ಷಣೆಯನ್ನು ವಸ್ತುವನ್ನಾಗಿಟ್ಟುಕೊಂಡು ಅನೇಕ ಚಲನಚಿತ್ರಗಳು ಮೂಕಿಯುಗದಲ್ಲಿ ಆರಂಭಗೊಂಡು ಟಾಕಿ ಸಂದರ್ಭದಲ್ಲೂ ಬರತೊಡಗಿದವು. ಪುರಾಣದ ಕಥೆಗಳಲ್ಲೂ ಇಂತಹ ಘಟನೆಗಳು ಸಾಕಷ್ಟಿದ್ದವು. ಐತಿಹಾಸಿಕ, ಸಾಮಾಜಿಕ ಪರಿಸ್ಥಿತಿಯಲ್ಲೂ ಈ ಬಗೆಯ ವಿಷಯಗಳಿಗೇನೂ ಬರವಿರಲಿಲ್ಲ.`ಆ್ಯಕ್ಷನ್ ಥ್ರಿಲ್ಲರ್' ಎಂದೇ ಕರೆಸಿಕೊಳ್ಳುವ ಈ ನಮೂನೆಯ ಚಿತ್ರಗಳಲ್ಲಿ ಮಹಿಳೆಯರೇ ಪುರುಷರನ್ನು ಮೀರಿಸಿ ಮುನ್ನಡೆದಿದ್ದು ಪ್ರಾರಂಭದ ವರ್ಷಗಳ ವಿಶೇಷ. ವಾಡಿಯಾ ಮೂವಿಟೋನ್ ತಯಾರಿಸಿದ `ಹಂಟರ್‌ವಾಲಿ' (1935) ಇದಕ್ಕೊಂದು ನಿದರ್ಶನ. ನಾಯಕರನ್ನು ಮೀರಿಸುವಂತಹ ನಾಡಿಯಾ ಅಭಿನಯದ `ಹಂಟರ್‌ವಾಲಿ' ನೋಡುಗರಲ್ಲಿ ಕುತೂಹಲ ಮೂಡಿಸಿತು. ಯುವರಾಣಿಯಂತೆ ದೇಶ ಸುತ್ತುವ ಹಂಟರ್‌ವಾಲಿ ಸಿರಿವಂತರಿಂದ ದೋಚಿ ಬಡವರಿಗೆ ನೆರವು ನೀಡುವ ಧೈರ್ಯಶಾಲಿ ಹೆಣ್ಣು. ಗಂಡಸರೂ ನಾಚುವಂತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡ ನಾಡಿಯಾ ಅಂತಿಮವಾಗಿ ದುಷ್ಟರ ವಶದಲ್ಲಿದ್ದ ತನ್ನ ತಂದೆಯನ್ನು ಬಿಡಿಸಿಕೊಳ್ಳುತ್ತಾಳೆ. ಈ ಚಿತ್ರವನ್ನು ಪ್ರೇಕ್ಷಕರು ಸ್ವೀಕರಿಸಿದ್ದೇ ತಡ ಇದೇ ಮಾದರಿಯ ಹಲವಾರು ಚಿತ್ರಗಳು ತೆರೆಗೆ ಬಂದವು.ಆಗಿನ ಕಾಲದ ಇನ್ನೊಬ್ಬ ಸುಂದರ ನಟಿ ಸುಲೋಚನಾ, `ವೈಲ್ಡ್ ಕ್ಯಾಟ್ ಆಫ್ ಬಾಂಬೆ' ಚಿತ್ರದಲ್ಲಿ ಮಹಿಳಾ ರಾಬಿನ್‌ಹುಡ್ ಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ಸೆಳೆದರೂ `ನಾಡಿಯಾ' ಅಷ್ಟೊತ್ತಿಗಾಗಲೇ ಪಡೆದುಕೊಂಡಿದ್ದ `ಸ್ಟಂಟ್‌ರಾಣಿ' ಪದವಿಯನ್ನು ಕಿತ್ತುಕೊಳ್ಳಲಾಗಲಿಲ್ಲ. ವಾಡಿಯಾ ಮೂವಿಟೋನ್‌ನವರು `ನಾಡಿಯಾ' ಅವರೊಡನೆ ಅನೇಕ ಮೂಕಿ ಹಾಗೂ ಟಾಕಿ ತಯಾರಿಸಿದರೆ, ದೇವ್ ಸಹೋದರರು ಹಾಗೂ ಭಟ್ ಕಂಪನಿಗಳು ಸ್ಟಂಟ್ ಚಿತ್ರಗಳನ್ನು ಕಾರ್ಖಾನೆ ರೀತಿಯಲ್ಲಿ ನಿರ್ಮಿಸಿ ಯಶ ಕಂಡರು. ಜಂಗಲ್ ಕ್ವೀನ್, ಹಂಸಾ, ಲೂಥ್ರೂ ಲಾಲ್ಸ್, ಹುರ‌್ರಿಕೇನ್ ಮೊದಲಾದ ಸ್ಟಂಟ್ ಚಿತ್ರಗಳಿಂದ `ನಾಡಿಯಾ' ಮಿಂಚಿದಳು. ಧಾರ್ಮಿಕ ಮತ್ತು ಸಾಮಾಜಿಕ ಕಥಾ ಹಂದರಗಳಿಂದಲೇ ತುಂಬಿರುತ್ತಿದ್ದ ಚಿತ್ರಗಳಿಗಿಂತ ಭಿನ್ನವಾಗಿದ್ದ ಮಹಿಳಾ ಸಾಹಸಮಯ ಚಿತ್ರಗಳು ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸಿದವು.ಆ್ಯಕ್ಷನ್ ಚಿತ್ರಗಳು ಯಶಕಾಣುವುದನ್ನು ಕಂಡ ವಿ. ಶಾಂತರಾಂ ಅವರು ತಮ್ಮ `ಅಮರ ಜ್ಯೋತಿ' ಚಿತ್ರದಲ್ಲಿ ದುರ್ಗಾ ಕೋಟೆ ಅವರಿಂದ ಡಕಾಯಿತಳ ಪಾತ್ರ ಮೂಡಿಸಿದರು. ಕೆ. ತಾಲ್ಪಾಡಿ, ಬಾಬುರಾವ್ ಭಗವಾನ್ ಅಂತಹವರೂ ಸ್ಟಂಟ್ ಚಿತ್ರಗಳಲ್ಲಿ ಒಂದು ಕೈ ನೋಡಿದರಾದರೂ ಹೆಚ್ಚಿನ ಸದ್ದು ಮಾಡಲಿಲ್ಲ. ಷೇಕ್ ಮುಕ್ತಾರ್ ಅವರ ಅನೇಕ ಚಿತ್ರಗಳಲ್ಲಿ ಅಪ್ರತಿಮ ದೇಹದಾರ್ಢ್ಯದ ಜೈರಾಜ್, ರಾಜನ್ ಅವರ ಸ್ಟಂಟ್ ಚಿತ್ರಗಳು ಹಿಂದಿ ಚಿತ್ರರಂಗದ ಮೇಲೆ ಅಪ್ಪಳಿಸಿದವು. ಜಿಗಿಯುತ್ತ ಜಿಗಿಯುತ್ತ ಪ್ರಣಯ ರಾಜನ್ನೆನಿಸಿಕೊಂಡ ಶಮ್ಮಿ ಕಪೂರ್ ಕೂಡ 1954ರಲ್ಲಿ ಕತ್ತಿವರಸೆಗಳಿದ್ದ ಸ್ಟಂಟ್ ಸಿನಿಮಾ `ಗುಲ್ ಸಾನೋಬಾರ್'ನಲ್ಲಿ ಅಭಿನಯಿಸಿದರು.ದುಷ್ಟ ಶಿಕ್ಷಕ, ಶಿಷ್ಟ ರಕ್ಷಕದಂತಹ ಮಾದರಿಯ ಹಲವು ಚಿತ್ರಗಳು ಭಾರತೀಯ ಮೂಕಿ-ಟಾಕಿಗಳಲ್ಲಿ ಸಿದ್ಧವಾದರೂ ಆ್ಯಕ್ಷನ್ ಥ್ರಿಲ್ಲರ್‌ಗಳು ಪ್ರತೀಕಾರದ ಚಿತ್ರಗಳಾಗಿ ಮುಂದುವರೆದಿದ್ದು ವಿಪರ್ಯಾಸ. ಸಮಾಜದ ಅನ್ಯಾಯಗಳ ವಿರುದ್ಧ ಹೋರಾಡುವ ನಾಯಕ ಕೊನೆ ಕೊನೆಗೆ ತಾನೇ ನ್ಯಾಯ ನಿರ್ಧಾರಕನಾಗುವಂತಹ ಚಿತ್ರಗಳು ಹೆಚ್ಚಾದವು. ಭೂಗತಲೋಕದ ಚಟುವಟಿಕೆಗಳೂ ಇದರಲ್ಲಿ ಸೇರಿಕೊಂಡ ನಂತರವಂತೂ ಇಂತಹ ಚಿತ್ರಗಳು ಅರಾಜಕತೆಯ ಗೂಡಾದವು. ಪತ್ತೇದಾರಿ ಚಿತ್ರಗಳಿಗೆ ಸಿಕ್ಕಂತಹ ಮಾನ್ಯತೆ ಸ್ಟಂಟ್ ಚಿತ್ರಗಳಿಗೆ ದೊರೆಯದಿದ್ದಾಗ ಪ್ರತಿನಾಯಕನ ಪಾತ್ರಗಳ ಸೃಷ್ಟಿಯಾಯಿತು. ನಾಯಕನಿದ್ದರೂ ಪ್ರತಿನಾಯಕನಿಗೆ ಹೆಚ್ಚಿನ ಆದ್ಯತೆ ಇದ್ದ `ಕಿಸ್ಮತ್' 1943ರಲ್ಲಿ ಬಿಡುಗಡೆಯಾಯಿತು. ಜ್ಞಾನ್ ಮುಖರ್ಜಿ ನಿರ್ಮಿಸಿದ `ಕಿಸ್ಮತ್'ನಲ್ಲಿ ಅಶೋಕ್ ಕುಮಾರ್ ಧೈರ್ಯಶಾಲಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡರು. ಕಳ್ಳನೇ ಕಥಾನಾಯಕನಾದ `ಕಿಸ್ಮತ್' ಗಲ್ಲಾ ಪೆಟ್ಟಿಗೆಯಲ್ಲಿ ಯಶ ಕಂಡಿದ್ದೇ ತಡ ಇದೇ ಬಗೆಯ ಹಲವಾರು ಚಿತ್ರಗಳು ತೆರೆಗೆ ಬಂದವು. ಇಂತಹದ್ದೇ ಕಥಾ ಅಂಶಗಳನ್ನು ಹೊಂದಿದ್ದ ಎಸ್.ಎಸ್.ವಾಸನ್ ಅವರ `ಚಂದ್ರಲೇಖ' ಚಿತ್ರ 1940ರ ದಶಕದ ಮೈಲಿಗಲ್ಲಾಗಿ ಹೊರಹೊಮ್ಮಿತು.ಭೂಗತ ಪ್ರಪಂಚದ ಘಟನೆಗಳು ಭಾರತೀಯ ಭಾಷೆಗಳ ಅನೇಕ ಚಿತ್ರಗಳಿಗೆ ಕಥಾವಸ್ತುಗಳನ್ನು ಒದಗಿಸಿದವು. ನಂತರದ ವರ್ಷಗಳಲ್ಲಿ ಭೂಗತ ಜಗತ್ತಿನ ವಸ್ತು ವಿಶೇಷಗಳೇ `ಆ್ಯಕ್ಷನ್' ಚಿತ್ರಗಳಿಗೆ ತಳಪಾಯವಾದವು. ಇದಕ್ಕೆ `ಆವಾರ' ಚಿತ್ರವೇ ಹಾದಿಯಾಯಿತು. 1951ರಲ್ಲಿ ರಾಜ್‌ಕುಪೂರ್ ನಿರ್ಮಿಸಿದ `ಆವಾರ' ಚಿತ್ರದಲ್ಲಿ ನಾಯಕ ರಾಜು ಭೂಗತ ಗುಂಪಿನ ಹಿಡಿತಕ್ಕೆ ಸಿಕ್ಕಿಬೀಳುತ್ತಾನೆ. ಅಪರಾಧಿಗಳ ಗುಂಪಿನ ಮುಖಂಡ ಕೆ.ಎನ್. ಸಿಂಗ್ ರಾಜ್‌ಕಪೂರ್‌ರನ್ನು ಅಪರಾಧಿ ಚಟುವಟಿಕೆಗಳಿಗೆ ಬಳಸುತ್ತಾರೆ. ಕೊನೆಗೆ ಈ ಸಿನಿಮಾ `ಆವಾರ' ಕಥಾನಾಯಕ ವ್ಯಕ್ತಿತ್ವ ಪಡೆಯುವಂತೆ ಮಾಡುತ್ತದೆ. ಈ ಆ್ಯಕ್ಷನ್ ಚಿತ್ರದ ತಿರುಳು ಮುಂದೆ ಅನೇಕ ರೂಪದ ಚಿತ್ರಗಳು ಅರಳಲೂ ಹಾದಿ ಮಾಡಿಕೊಡುತ್ತದೆ.ಅದೇ ಸಮಯದಲ್ಲಿ ಹಾಲಿವುಡ್‌ನಲ್ಲಿ `ಗ್ಯಾಂಗ್‌ಸ್ಟರ್' ಖಳರ ಗುಂಪುಗಳ ಚಿತ್ರಗಳು ಹೊರಬಿದ್ದು ಪ್ರೇಕ್ಷಕರಿಗೆ ಹೊಸ ಅನುಭವ  ನೀಡತೊಡಗಿದ್ದವು. ಅಂತಹ ಚಿತ್ರಗಳ ಪ್ರತಿಧ್ವನಿ ಭಾರತೀಯ ಚಿತ್ರರಂಗದ ಮೇಲೆ ವಿಶೇಷವಾಗಿ ಹಿಂದಿ ಚಿತ್ರ ಜಗತ್ತಿನ ಮೇಲಾಯಿತು. ಪ್ರತಿಭಾನ್ವಿತ ಗುರುದತ್ `ಬಾಜಿ' ಚಿತ್ರದಲ್ಲಿ ಇಂತಹ ಪ್ರಯತ್ನವೊಂದನ್ನು ಮಾಡಿದರು. ನವಕೇತನ್ ಸಂಸ್ಥೆ ಮೂಲಕ ಜರುಗಿದ ಇಂತಹ ಪ್ರಯತ್ನದಲ್ಲಿ ಗುರುದತ್‌ಗೆ ನಾಯಕರಾಗಿ ಸಾತ್ ಕೊಟ್ಟವರು ದೇವಾನಂದ್.1951ರಲ್ಲಿ ತೆರೆ ಕಂಡ `ಬಾಜಿ'ಯಲ್ಲಿ ದೇವಾನಂದ್ ಮುಗ್ಧ ಪಾತ್ರದಲ್ಲಿ ಪಟ್ಟಣದ ಅಪರಾಧಿ ಗುಂಪೊಂದರ ನಡುವೆ ಸಿಲುಕಿ ಹಲವಾರು ಪಡಿಪಾಟಲುಗಳನ್ನು ಪಡುವ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಆವರೆಗೂ ಭಾರತೀಯ ಚಿತ್ರರಂಗದಲ್ಲಿ ನಾಯಕಿಯರಿಗಿದ್ದ ಪ್ರಾಧಾನ್ಯತೆ ಕಡಿಮೆಯಾಗುತ್ತಾ ಬಂದಿದ್ದು ಗಮನಿಸಬೇಕಾದ ಅಂಶವಾಗಿದೆ. ದೇವಾನಂದ್‌ರವರ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ನಾಯಕರ ವ್ಯಕ್ತಿತ್ವವನ್ನು ಕಟ್ಟಿಕೊಡುವುದು ಅಥವಾ ನಾಯಕನಿಗಾಗಿ ತ್ಯಾಗ ಮಾಡುವುದು ಸಾಮಾನ್ಯವಾಗಿ ಹೋಯಿತು. ರೊಮ್ಯೋಂಟಿಕ್ ವ್ಯಕ್ತಿತ್ವವನ್ನು ದೇವಾನಂದ್ ಮುಂದಿನ ಚಿತ್ರಗಳಲ್ಲಿ ಪಡೆಯುತ್ತಾ ಹೋದರು. ಅವರ ಚಿತ್ರಗಳಲ್ಲಿ ಹೆಚ್ಚಿನ ಹಿಂಸಾತ್ಮಕ ಸನ್ನಿವೇಶಗಳು ಇರುತ್ತಿರಲಿಲ್ಲ. ಇಂತಹ ಆ್ಯಕ್ಷನ್ ಚಿತ್ರಗಳು 70-80ನೇ ದಶಕದಲ್ಲಿ ಭಾರತೀಯ ಚಿತ್ರತೆರೆಯಲ್ಲಿ ಕಾಣಿಸಿಕೊಂಡವು. ಕೆಲವು ಚಿತ್ರಗಳು ಹಿಂಸೆಯನ್ನೇ ಹೆಚ್ಚಾಗಿ ಅವಲಂಬಿಸಿದವು. ಗುಂಪು ಅಥವಾ ವೈಯಕ್ತಿಕವಾಗಿ ಹಿಂಸೆ ನಡೆಯುವ ಸನ್ನಿವೇಶಗಳಿರುವ ಹಲವು ಚಿತ್ರಗಳು ಜನರ ಮುಂದೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದವು. ಅವುಗಳಲ್ಲಿ `ಜಾಲ್' (1952), `ಹಮ್‌ಸಫರ್' (1953), `ಸಿಐಡಿ' (1956) ಮುಖ್ಯವಾದವು.ರೋಮಾಂಚನ ಹುಟ್ಟಿಸುವ ಹಾಗೂ ಮೈ ಜುಮ್ ಎನಿಸುವ  ಕಥೆ ಹಾಗೂ ದಶ್ಯಗಳನ್ನು ಹೊತ್ತು ತರುತ್ತಿದ್ದ ಆ್ಯಕ್ಷನ್ ಥ್ರಿಲ್ಲರ್ ಚಿತ್ರಗಳು ಮುಂದಿನ ವರ್ಷಗಳಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ಎಲ್ಲಾ ಬಗೆಯ ನಾಯಕ ನಟ ನಟಿಯರನ್ನು ಒಳಗೊಂಡು ಪ್ರೇಕ್ಷಕರ ಮುಂದೆ ಅನಾವರಣಗೊಂಡವು. ರಾಜ್‌ಕಪೂರ್, ದಿಲೀಪ್ ಕುಮಾರ್, ದೇವಾನಂದ್ ಮೊದಲಾದವರೆಲ್ಲರೂ ಆ್ಯಕ್ಷನ್ ಚಿತ್ರಗಳ ಪ್ರಯೋಗಾಲಯದಲ್ಲಿ ಮಿಂದವರೇ. ರಾಜ್‌ಕಪೂರ್ ತನ್ನ `ಶ್ರೀ 420' ಚಿತ್ರದಲ್ಲಿ ಹೃದಯವಂತಿಕೆ ಇರುವ ಖಳರ ಗುಂಪಿನ ಮುಖಂಡನ ವ್ಯಕ್ತಿತ್ವವನ್ನು ಕಟ್ಟಿಕೊಂಡರು. ದಿಲೀಪ್ ಕುಮಾರ್ ಮಹಬೂಬ್ ತಯಾರಿಕೆಯ `ಆನ್' ಚಿತ್ರದಲ್ಲಿ ಬಡಿದಪ್ಪಳಿಸುವ ಪಾತ್ರದಲ್ಲಿ ಕಾಣಿಸಿಕೊಂಡರು. ಪರಿಸ್ಥಿತಿಯ ಒತ್ತಡಗಳಲ್ಲಿ ಖಳರ ಗುಂಪಿಗೆ ಸೇರಿಹೋಗಿ ನಂತರ ಅವರ ವಿರುದ್ಧ ಸಿಡಿದೇಳುವ ನಾಯಕನ ಪಾತ್ರಗಳು ಅನೇಕ ಚಿತ್ರಗಳಲ್ಲಿ ಬಂದು ಹೋದವು. ದೇವಾನಂದ್ ಇಂತಹ ಅನೇಕ ಚಿತ್ರಗಳ ನಾಯಕರಾಗಿ ಮಿಂಚಿದರು. ನವಕೇತನ್ ಚಿತ್ರ ತಯಾರಿಕಾ ಸಂಸ್ಥೆ ಆ್ಯಕ್ಷನ್ ಥ್ರಿಲ್ಲರ್‌ಗಳಿಗೆ ನೂತನ ಬಗೆಯ ಚಿತ್ರಗಳನ್ನು ಸಿದ್ಧಪಡಿಸಿತು. ಇದರಲ್ಲಿ ಆನಂದ್ ಸಹೋದರರಾದ ಚೇತನ್ ಆನಂದ್, ವಿಜಯ ಆನಂದ್ ಹಾಗೂ ದೇವಾನಂದ್ ಹೆಚ್ಚಿನ ಯಶಸ್ಸು ಪಡೆದರು.

ಋಣಾತ್ಮಕ ಪಾತ್ರಗಳ ಚಿತ್ರಗಳಲ್ಲಿ ಕೆ.ಎನ್.ಸಿಂಗ್, ಮದನ್ ಪುರಿ, ಪ್ರಾಣ್ ಮೊದಲಾದ ಖಳನಾಯಕರು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯರಾದರು.ಇವರ ಜೊತೆಗೆ ನಾಯಕರೂ ಸೇರಿಕೊಂಡರು. ಆ್ಯಕ್ಷನ್ ಥ್ರಿಲ್ಲರ್‌ಗಳಲ್ಲಿ ನಾಯಕರೂ ಹಾಗೂ ಖಳನಾಯಕರ ನಡುವೆ ಇದ್ದ ಗೆರೆಯೊಂದು ಕೆಲವು ಚಿತ್ರಗಳಲ್ಲಿ ಅಳಿಸಿಹೋಯಿತು. ಹಿಂಸೆಯ ಅಂಶಗಳೇ ಹೆಚ್ಚಾಗಿರುತ್ತಿದ್ದ ಆ್ಯಕ್ಷನ್ ಥ್ರಿಲ್ಲರ್ ಮಾದರಿಗಳಲ್ಲಿ ಪ್ರೇಮ, ನೃತ್ಯ ಅದ್ದೂರಿತನದ ಜೊತೆಗೆ ಅಂತಿಮವಾಗಿ ಹೊಡೆದಾಟದ ಚಿತ್ರಗಳೂ ಇದೇ ಸಂದರ್ಭದಲ್ಲಿ ನಿರ್ಮಾಣವಾದವು. ಇಂತಹ ಚಿತ್ರಗಳಲ್ಲಿ `ಹೌರಾ ಬ್ರಿಡ್ಜ್', `ಚೈನಾ ಟೌನ್', `12 ಓ ಕ್ಲಾಕ್', `ತುಮ್ ಸೆ ನಹೀ ದೇಖಾ', `ಡಿಟೆಕ್ಟಿವ್' ಮೊದಲಾದವುಗಳು ಮುಖ್ಯವಾದವು. ಸ್ಟಂಟ್ ಹಾಗೂ ಪೋಷಾಕು ಶೈಲಿಯ ಆ್ಯಕ್ಷನ್ ಥ್ರಿಲ್ಲರ್‌ಗಳ ಹಾದಿಯಲ್ಲಿ ನಡೆಯುತ್ತಿದ್ದ ಚಿತ್ರಗಳಲ್ಲಿ ಬಂಡೇಳುವ ನಾಯಕರನ್ನು ಚಿತ್ರೀಕರಿಸುವ ಪರಿಪಾಠವೂ ಆರಂಭಗೊಂಡಿತು. ಇಂತಹ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಅಂತಹವರು ಬಹುಬೇಗ ಪ್ರೇಕ್ಷಕರ ಗಮನ ಸೆಳೆದರು. ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಬಚ್ಚನ್ ಮುಂದೆ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ ತೆರೆಗಪ್ಪಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.