ಶುಕ್ರವಾರ, ಜೂನ್ 18, 2021
20 °C

ಕ್ಯಾಂಪಸ್‌ ಆಯ್ಕೆಗೆ ಐಐಎಸ್‌ಸಿ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿದ್ಯಾರ್ಥಿಗಳ ಉದ್ಯೋಗ ಮಾರ್ಗದರ್ಶಿ ಘಟಕದ (ಪ್ಲೇಸ್‌ಮೆಂಟ್‌ ಸೆಲ್‌) ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಂಸ್ಥೆಯ ಆಡಳಿತ ನಿರ್ಧರಿಸಿದೆ.



ಐಐಎಂ ಮತ್ತು ಐಐಟಿ ಉದ್ಯೋಗ ಮಾರ್ಗದರ್ಶಿ ಘಟಕಗಳ ಮಾದರಿ­ಯಲ್ಲೇ ಐಐಎಸ್‌ಸಿ ಘಟಕವೂ ಕೆಲಸ ಮಾಡಬೇಕು ಎನ್ನುವುದು ಈ ಬದಲಾ­ವಣೆ ಹಿಂದಿನ ಮುಖ್ಯ ಉದ್ದೇಶ­ವಾಗಿದೆ. ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿ ಎಂ. ಮಥಿರಾಜನ್‌ ಅವರನ್ನು ಘಟಕದ ಮುಖ್ಯ­ಸ್ಥರನ್ನಾಗಿ ನೇಮಿಸಲಾಗಿದೆ.



ಐಐಎಸ್‌ಸಿಯಿಂದ ಪದವಿ ಕೋರ್ಸ್‌­ಗಳನ್ನು ಆರಂಭಿಸಲಾಗಿದ್ದು 2015ರಲ್ಲಿ ಮೊದಲ ತಂಡ ಹೊರಬರಲಿದೆ. ಆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿ­ಸುವ ನಿಟ್ಟಿನಲ್ಲಿ ಮಥಿರಾಜನ್‌ ಈಗಾ­ಗಲೇ ಎರಡು ಕಂಪೆನಿಗಳ ಜತೆ ಚರ್ಚೆ ನಡೆಸಿದ್ದಾರೆ. ಇದುವರೆಗೆ ಸಂಸ್ಥೆಯಿಂದ ಇಂತಹ ಪ್ರಯತ್ನಗಳು ಒಮ್ಮೆಯೂ ಆಗಿರಲಿಲ್ಲ. ಆಸಕ್ತಿವಹಿಸಿ ಬಂದ ಕಂಪೆನಿಗಳ ನೇಮಕಾತಿ ವಿಭಾಗದ ಮುಖ್ಯಸ್ಥರೇ ವಿದ್ಯಾರ್ಥಿಗಳ ಜತೆ ವ್ಯವಹರಿಸುತ್ತಿದ್ದರು.



‘ಈ ವರ್ಷ ಎಲ್ಲ ಕಂಪೆನಿಗಳಿಗೆ ಮುಂಚಿ­ತ­ವಾಗಿಯೇ ಆಹ್ವಾನವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಇದ­ರಿಂದ ನೇಮಕಾತಿ ಪ್ರಕ್ರಿಯೆಯನ್ನು ಬಲುಬೇಗ ಮುಗಿಸಲು ಸಾಧ್ಯವಾಗ­ಲಿದೆ. ಸಾಮಾನ್ಯವಾಗಿ ಜುಲೈನಲ್ಲಿ ಕಂಪೆ­ನಿ­ಗಳಿಗೆ ಇ–ಮೇಲ್‌ ಕಳಿಸುತ್ತಿದ್ದೆವು. ಇದರಿಂದ ಅವಕಾಶಗಳು ತಪ್ಪಿದ್ದೂ ಉಂಟು. ಈ ಸಲ ಹಾಗಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿಗಳ ಸಮನ್ವಯಾಧಿ­ಕಾರಿ ವಿವೇಕ್‌ ವರ್ಮಾ ಹೇಳುತ್ತಾರೆ.



‘ಕಳೆದ ವರ್ಷ ಡಚ್‌ ಬ್ಯಾಂಕ್‌, ಸ್ಟ್ಯಾನ್ಲೆ ಮಾರ್ಗನ್‌ ಸೇರಿದಂತೆ ಹಲವು ಕಂಪೆನಿಗಳು ಕ್ಯಾಂಪಸ್‌ ಆಯ್ಕೆಗೆ ಆಸಕ್ತಿ ತೋರಿದ್ದವು. ಆದರೆ, ಜೂನ್‌ನಲ್ಲಿ ಈ ಕಂಪೆನಿಗಳೆಲ್ಲ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಭಾಗವಹಿಸಲು ಆಗಿ­ರಲಿಲ್ಲ’ ಎಂದು ಅವರು ವಿವರಿಸುತ್ತಾರೆ.



‘ಈ ವರ್ಷ ಐಐಟಿಗಳಿಗಿಂತ ಮುಂಚಿತ­ವಾಗಿ ಕ್ಯಾಂಪಸ್‌ ಆಯ್ಕೆ ಪ್ರಕ್ರಿಯೆ ಆರಂಭ ಮಾಡುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಕ್ಕಂ­ತಾಗುತ್ತದೆ. ಆದ್ದರಿಂದಲೇ ಈ ಬದ­ಲಾ­ವಣೆ ತಂದಿದ್ದೇವೆ’ ಎಂದು ಹೇಳುತ್ತಾರೆ.



ಐಐಎಸ್‌ಸಿ ಉದ್ಯೋಗ ಮಾರ್ಗದರ್ಶಿ ಕೇಂದ್ರದ ವೆಬ್‌ಸೈಟ್‌ ಸಹ ಬದಲಾಗಲಿದೆ. ಸಂಸ್ಥೆಯ ಎಲ್ಲ 46 ವಿಭಾಗಗಳ ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲಿದ್ದು, ತಮ್ಮ ವೈಯಕ್ತಿಕ ವಿವರವನ್ನೂ ಅದರಲ್ಲಿ ನಮೂದಿಸಲಿ­ದ್ದಾರೆ. ಕ್ಯಾಂಪಸ್‌ ಆಯ್ಕೆಯಲ್ಲಿ ಪಾಲ್ಗೊಳ್ಳುವ ಕಂಪೆನಿಗಳಿಗೆ ಮಾತ್ರ ಆ ವಿವರ ನೋಡಲು ಅವಕಾಶ ಒದಗಿಸಲಾಗುತ್ತದೆ.



‘ನಮ್ಮ ಕಾರ್ಯ ಚಟುವಟಿಕೆಗಳು ವಿಸ್ತರಣೆಗೊಳ್ಳುತ್ತಿವೆ. ಪದವಿ ಕೋರ್ಸ್‌ಗಳನ್ನು ಹೊಸದಾಗಿ ಪರಿಚ­ಯಿ­ಸಿ­ದ್ದೇವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅವರ ಗಾತ್ರಕ್ಕೆ ಅನುಗುಣವಾಗಿ ಉದ್ಯೋಗ ಮಾರ್ಗದರ್ಶಿ ಘಟಕಕ್ಕೆ ಹೊಸ ರೂಪ ನೀಡುವುದು ಅನಿ­ವಾ­ರ್ಯವಾಗಿದೆ’ ಎನ್ನುವುದು ಐಐಎಸ್‌ಸಿ ನಿರ್ದೇಶಕ ಪ್ರೊ. ಪಿ.ಬಲರಾಮ್‌ ಅವರ ಅಭಿಪ್ರಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.