ಶುಕ್ರವಾರ, ಫೆಬ್ರವರಿ 26, 2021
19 °C

ಕ್ಯಾನ್ಸರ್ ಮೆಟ್ಟಿ ನಿಂತವರ ಮಂದಹಾಸ

ಸುಧೀಂದ್ರ Updated:

ಅಕ್ಷರ ಗಾತ್ರ : | |

ಕ್ಯಾನ್ಸರ್ ಮೆಟ್ಟಿ ನಿಂತವರ ಮಂದಹಾಸ

ಅಲ್ಲಿದ್ದವರ ಮೊಗದಲ್ಲಿ ಏನೋ ಗೆದ್ದ ಆತ್ಮವಿಶ್ವಾಸ. ಅವರ ಸಂಬಂಧಿಕರಿಗೆ `ಇವರಿಗೇ ಹೀಗಾಗಬೇಕಿತ್ತೇ~ ಎಂಬ ದುಃಖದ ನಡುವೆಯೂ `ಆದರೂ ಅದನ್ನು ಜಯಿಸಿದರಲ್ಲಾ~ ಎಂಬ ಸಂತೋಷ. ಕ್ಯಾನ್ಸರ್ ಎದುರಿಸಿ ಬದುಕು ಕಟ್ಟಿಕೊಂಡವರಿವರು.ಹೌದು ಕ್ಯಾನ್ಸರ್ ಎಂಬ ಪದವೇ ಎಂಥವರಲ್ಲೂ ಭಯ ಹುಟ್ಟಿಸುತ್ತದೆ. ಕ್ಯಾನ್ಸರನ್ನು ದೇಹದಿಂದ ಓಡಿಸುವುದು ಮಾತ್ರವಲ್ಲದೆ ಆ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸಿಗೆ ಆಗುವ ಘಾಸಿಯನ್ನು ಮೊದಲು ಗುಣ ಮಾಡಬೇಕು. ಆತ್ಮಸ್ಥೈರ್ಯ ತುಂಬಿದರೆ ಸಾವನ್ನೂ ಎದುರಿಸುವುದು ಕಷ್ಟವಲ್ಲ ಎಂಬುದು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮಂತ್ರ.ಇದೇ ಕಾರಣಕ್ಕಾಗಿ  ಕ್ಯಾನ್ಸರ್ ಮಾರಿಯನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ನೂರಕ್ಕೂ ಹೆಚ್ಚು `ಧೀರ~ರನ್ನು ಅದು ಆಹ್ವಾನಿಸಿತ್ತು `ವಿಶ್ವ ಕ್ಯಾನ್ಸರ್‌ನಿಂದ ಬದುಕುಳಿದವರ~ ದಿನದ ಅಂಗವಾಗಿ ಆಹ್ವಾನಿಸಿತ್ತು.`ಭರವಸೆ ಹಾಗೂ ಜೀವನ~ ಎಂಬ ಸಂದೇಶ ಹೊತ್ತ ಬಲೂನ್ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕ ಡಾ.ಸುನಿಲ್ ರಾವ್ ಉದ್ಘಾಟಿಸಿದರು.ಬಂದವರೆಲ್ಲ ತಮಗೆ ಕ್ಯಾನ್ಸರ್ ಇದೆ ಎಂದು ತಿಳಿದಾಗ ಆದ ಆಘಾತ, ಮಾನಸಿಕ ಯಾತನೆ ಹಾಗೂ ಅದರಿಂದ ಹೊರ ಬಂದ ನಂತರದ ಸದ್ಯದ ಭರವಸೆಯ ಬದುಕಿನ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. ತಮ್ಮ ಅನುಭವ ಮತ್ತೊಬ್ಬರ ಮನೋಸ್ಥೈರ್ಯಕ್ಕೆ ಕಾರಣವಾಗಲಿ ಎಂಬುದು ಅವರೆಲ್ಲರ ಆಶಯವಾಗಿತ್ತು.ಕ್ಯಾನ್ಸರ್ ಪೀಡಿತರು ಅನುಭವಿಸಿದ ಯಾತನೆ ಹಾಗೂ ಎದುರಾದ ಸವಾಲುಗಳು ಅಷ್ಟಿಷ್ಟಲ್ಲ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ವೈದ್ಯರ ಹುಡುಕಾಟ, ಹೊಸ ಚಿಕಿತ್ಸೆಯತ್ತ ಆತಂಕದ ಕಣ್ಣು, ಜೀವನದ ಹಾಗೂ ಕುಟುಂಬದ ರಕ್ಷಣೆ, ಆರ್ಥಿಕ ಸಂಕಷ್ಟ, ವೃತ್ತಿ ಜೀವನಕ್ಕೆ ಧಕ್ಕೆ ಹಾಗೂ ಮಾನಸಿಕ ಯಾತನೆ ಕುರಿತು ತಮ್ಮ ಅನುಭವಗಳು ವಿವರಿಸಿದರು.`ಲೇಖಿ ಎಂಬ ಒಂಬತ್ತು ವರ್ಷದ ಬಾಲಕಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. ಆದರೆ ಈಗ ಆಕೆ ಕಾಯಿಲೆ ಮೆಟ್ಟಿ ನಿಂತಿದ್ದಾಳೆ. ಕಳೆದ ಆರೇಳು ತಿಂಗಳಲ್ಲಿ ಆಕೆಗೆ ಕೆಲವು ಬಾರಿ ಅಸಾಧ್ಯ ನೋವುಳ್ಳ ಕಿಮೋಥೆರಪಿ ನೀಡಲಾಗಿತ್ತು. ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ್ದಾಳೆ. ಈಗ ಆಕೆ ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗುತ್ತಾಳೆ.

 

ಜತೆಗೆ ತನ್ನ ಸಹಪಾಠಿಗಳೊಂದಿಗೆ ಆಟೋಟದಲ್ಲಿ ಭಾಗಿಯಾಗುತ್ತಾಳೆ. ಇಂಥ ಮೂವತ್ತು ಲಕ್ಷ ಕ್ಯಾನ್ಸರ್ ಪೀಡಿತರು ಇಂದು ಭಾರತದಲ್ಲಿದ್ದಾರೆ. ಅವರೆಲ್ಲರಲ್ಲೂ ಆತ್ಮಸ್ಥೈರ್ಯ ತುಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು~ ಎನ್ನುತ್ತಾ ಕ್ಯಾನ್ಸರ್ ಗುಣವಾಗದ ಕಾಯಿಲೆ ಅಲ್ಲ ಎಂಬುದನ್ನು ಆಸ್ಪತ್ರೆಯ ವೈದ್ಯರು ಮನದಟ್ಟು ಮಾಡುವ ಪ್ರಯತ್ನ ಮಾಡಿದರು.ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತರ ಅನುಭವಗಳನ್ನು ಪುಟ್ಟ ಪುಟ್ಟ ಕಥೆಗಳನ್ನಾಗಿ ಮಾಡಿದ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಈ ಪುಸ್ತಕವನ್ನು ಭಾರತೀಯ ಕ್ಯಾನ್ಸರ್ ಸಂಸ್ಥೆಯ ಕಾರ್ಯದರ್ಶಿ ಜ್ಯೋತ್ಸ್ನಾ ಗೋವಿಲ್ ಸಂಪಾದಿಸಿದ್ದಾರೆ.ಅತಿಥಿಗಳಲ್ಲಿ ಕೆಲವರು ಕೆಲ ಹಾಡುಗಳನ್ನು ಹಾಡಿ ಕ್ಯಾನ್ಸರ್ ಪೀಡಿತರ ಹಾಗೂ ಅವರ ಕುಟುಂಬದವರ ಮನಸ್ಸನ್ನು ಹಗುರಗೊಳಿಸುವ ಪ್ರಯತ್ನ ಮಾಡುವ ಮೂಲಕ ಹೊಸ ಭರವಸೆಯತ್ತ ನಡೆಯಲು ಪ್ರೇರೇಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.