ಗುರುವಾರ , ಮೇ 13, 2021
17 °C

ಕ್ರಮ ಬೇಡ: ಸರ್ಕಾರಕ್ಕೆ ಸೂಚಿಸಲು ಹಫೀಜ್ ಸಯೀದ್ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಸರ್ಕಾರ ತನ್ನ ವಿರುದ್ಧ ಕ್ರಮಕ್ಕೆ ಮುಂದಾಗದಂತೆ  ನಿರ್ದೇಶನ ನೀಡಬೇಕು ಮತ್ತು ಜೀವ ಬೆದರಿಕೆ ಇರುವ ಕಾರಣ ತನಗೆ ಭದ್ರತೆ ಒದಗಿಸುವಂತೆಯೂ ಸೂಚಿಸಬೇಕು ಎಂದು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸ್ಥಾಪಕ ಹಫೀಜ್ ಸಯೀದ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾನೆ.ಅಮೆರಿಕದ ಒತ್ತಡಕ್ಕೆ ಒಳಗಾಗಿ ಪಾಕ್ ಸರ್ಕಾರ ತನ್ನ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂದು ಆತಂಕಗೊಂಡಿರುವ ಸಯೀದ್, ತನ್ನ ಬಾವ ಹಫೀಜ್ ಅಬ್ದುರ್ ರೆಹಮಾನ್ ಮಕ್ಕಿ ಜೊತೆಗೆ ಈ ಅರ್ಜಿ ಸಲ್ಲಿಸಿದ್ದಾನೆ.ಈ ಅರ್ಜಿ ವಿಚಾರಣೆ ಕೈಗೊಂಡಿರುವ ಮುಖ್ಯ ನ್ಯಾಯಮೂರ್ತಿ ಅಜ್ಮತ್ ಸಯೀದ್ ಶೇಖ್ ಈ ಸಂಬಂಧ ಪಾಕ್ ಸರ್ಕಾರ, ಆಂತರಿಕ ಭದ್ರತಾ ಸಚಿವಾಲಯ ಹಾಗೂ ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆಗೆ ಬುಧವಾರ ನೋಟಿಸ್ ಜಾರಿ ಮಾಡಿ ಏಪ್ರಿಲ್ 25ರೊಳಗೆ ಪ್ರತಿಕ್ರಿಯೆ ದಾಖಲಿಸಲು ಸೂಚಿಸಿದ್ದಾರೆ.ಸಂವಿಧಾನದ 4 ಮತ್ತು 9ನೇ ಪರಿಚ್ಛೇದದ ಅನ್ವಯ ತಾವು ಯಾವುದೇ ಬಂಧನಕ್ಕೆ ಒಳಪಡದ ಮುಕ್ತ ನಾಗರಿಕರಾಗಿರುವ ಕಾರಣ ಕೇಂದ್ರ ಇಲ್ಲವೇ ಪ್ರಾಂತ್ಯ ಸರ್ಕಾರಗಳು ತಮ್ಮ ವಿರುದ್ಧ  ಕ್ರಮ ಕೈಗೊಳ್ಳದಂತೆ ನಿರ್ದೇಶಿಸಬೇಕು ಹಾಗೂ ತಮಗೆ ಜೀವ ಬೆದರಿಕೆ ಇರುವುದರಿಂದ ಭದ್ರತೆ ಒದಗಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಯೀದ್ ಮತ್ತು ಮಕ್ಕಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.ತಮ್ಮ ಬಗ್ಗೆ ಸುಳಿವು ಮತ್ತು ಪುರಾವೆ ನೀಡುವವರಿಗೆ ಅಮೆರಿಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಇದನ್ನು ಹಿಂಪಡೆಯುವಂತೆ ಪಾಕ್ ಸರ್ಕಾರ ಅಮೆರಿಕವನ್ನು ಒತ್ತಾಯಿಸಲು ನಿರ್ದೇಶನ ನೀಡಬೇಕು ಎಂದೂ ಅವರು ವಿನಂತಿಸಿದ್ದಾರೆ.ಸರ್ಕಾರ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಮುನ್ನ  ಸಾಕ್ಷ್ಯಾಧಾರ  ನೀಡುವಂತೆ ಅಮೆರಿಕವನ್ನು ಒತ್ತಾಯಿಸಬೇಕು. ಯಾರನ್ನೇ ಆಗಲಿ ಆಧಾರವಲ್ಲದೆ ಬಂಧಿಸಿದರೆ ಅದು ಕಾನೂನು ಉಲ್ಲಂಘನೆ ಎಂದು ಸಯೀದ್ ಪರ ವಕೀಲ ಎ.ಕೆ. ಡೋಗರ್ ತಿಳಿಸಿದ್ದಾರೆ.ಹಫೀಜ್ ಸಯೀದ್ ಬಗ್ಗೆ ಸುಳಿವು ಹಾಗೂ ಆತನ ದುಷ್ಕೃತ್ಯಗಳ ಕುರಿತು ಪುರಾವೆ ನೀಡಿದವರೆಗೆ ಒಂದು ಕೋಟಿ ಡಾಲರ್ ಮತ್ತು ಹಫೀಜ್ ಅಬ್ದುರ್ ರೆಹಮಾನ್ ಮಕ್ಕಿ ಬಗ್ಗೆ ವಿವರ ನೀಡಿದವರಿಗೆ 20 ಲಕ್ಷ ಡಾಲರ್ ಇನಾಮು ನೀಡುವುದಾಗಿ ಅಮೆರಿಕ ಘೋಷಿಸಿದೆ. ಇದರಿಂದ ಕುಪಿತನಾದ ಸಯೀದ್, `ಅಮೆರಿಕದ ಯಾವುದೇ ನ್ಯಾಯಾಲಯವನ್ನು ಎದುರಿಸಲು ಸಿದ್ಧ~ ಎಂದು ವಿಶ್ವದ ಬಲಾಢ್ಯ ರಾಷ್ಟ್ರಕ್ಕೆ ಸೆಡ್ಡು ಹೊಡೆಯುವ ಹೇಳಿಕೆ ನೀಡಿದ್ದಾನೆ.ಸಯೀದ್ ಪರ ಇರುವ 40ಕ್ಕೂ ಹೆಚ್ಚು ಉಗ್ರರ ಸಂಘಟನೆಗಳು ಅಮೆರಿಕ ವಿರುದ್ಧ ಇತ್ತೀಚೆಗೆ ಪ್ರತಿಭಟನೆಯನ್ನೂ ನಡೆಸಿದ್ದವು. ಸಯೀದ್ ಮತ್ತು ಮಕ್ಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದ್ದರೆ ನಿಖರ ಸಾಕ್ಷ್ಯಾಧಾರ ಅಗತ್ಯ. ಅಮೆರಿಕ ಅದನ್ನು ಒದಗಿಸಬೇಕು ಎಂದು ಪಾಕ್ ಸರ್ಕಾರ ಕೋರಿದೆ.ಮುಂಬೈ ಮೇಲೆ ನಡೆದ ದಾಳಿಗೆ ಸಯೀದ್ ಮತ್ತು ಆತನ ಸಹಚರರು ಕಾರಣ ಎಂದು ಪದೇ ಪದೇ ಹೇಳುತ್ತಿರುವ ಭಾರತ, ಈ ಬಗ್ಗೆ ಅನೇಕ ಸಾಕ್ಷ್ಯ ಮತ್ತು ಕಾಗದ ಪತ್ರಗಳನ್ನು ಪಾಕ್ ಸರ್ಕಾರಕ್ಕೆ ನೀಡಿದೆ. ಆದರೆ, ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ಇಷ್ಟು ಪುರಾವೆ ಸಾಲದು ಎಂದು ಪಾಕ್ ಹೇಳುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.