ಸೋಮವಾರ, ಮಾರ್ಚ್ 8, 2021
29 °C

ಕ್ರಿಕೆಟ್‌ ಬ್ಯಾಟ್‌ನಲ್ಲಿ ಬದುಕು ಕಂಡವರು!

ಕೆ.ಎಸ್‌.ಸುನಿಲ್‌/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಬ್ಯಾಟ್‌ನಲ್ಲಿ ಬದುಕು ಕಂಡವರು!

ಗದಗ: ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ... ಹೌದು. ಊರು, ಭಾಷೆ ಯಾವುದಾದ­ರೇನು. ಬದುಕಿನ ಬಂಡಿ ನಡೆಸಲು ಕಸುಬು ಗೊತ್ತಿರಬೇಕು ಅಷ್ಟೇ.ನೂರಾರು ಮೈಲಿ ದೂರದಿಂದ ಗದಗಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಸುರೇಶ ಖಾಕ್ರಿ ಕುಟುಂಬ ಕ್ರಿಕೆಟ್‌ ಬ್ಯಾಟ್‌ಗಳನ್ನು ತಯಾರಿಸುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದೆ.ಗದಗ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬದಿ ಖಾಕ್ರಿ ಕುಟುಂಬ ಸಣ್ಣ ಗುಡಿಸಲು ಹಾಕಿಕೊಂಡಿದೆ. ಖಾಕ್ರಿ ಪತ್ನಿ, ಮಕ್ಕಳಲ್ಲದೇ ಸಹೋದರ ಮತ್ತು ಆತನ ಪತ್ನಿ ಸಹ ವಿವಿಧ ನಮೂನೆಗಳ ಬ್ಯಾಟ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಮರದ ತುಂಡನ್ನು ತಿದ್ದಿ ಅದಕ್ಕೆ ಹೊಸ ರೂಪ ನೀಡುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಬ್ಯಾಟ್‌ಗಳಿಗೆ ಸ್ಟಿಕರ್‌ ಅಂಟಿಸುವ ಮೂಲಕ ಪುರುಷರ ಕೆಲಸಕ್ಕೆ ಮಹಿಳೆಯರು ಸಾಥ್‌ ನೀಡುತ್ತಿದ್ದಾರೆ.ಬದುಕುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈ ಕುಟುಂಬದ ಸದಸ್ಯರು ಸುಮಾರು ನಲ್ವತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಹೂವಿನ ಹಡಗಲಿಯಿಂದ ಬ್ಯಾಟ್ ತಯಾರಿಸಲು ಬೇಕಾದ ಶಿವನ್ ಎಂಬ ಕಟ್ಟಿಗೆ ತರಿಸುತ್ತಾರೆ. ಇದರಿಂದ ವಿವಿಧ ಮಾದರಿಯ ಕ್ರಿಕೆಟ್ ಬ್ಯಾಟ್‌ಗಳು, ಸ್ಟಂಪ್‌ಗಳು ಹಾಗೂ ಕ್ರೀಡಾ ಸಾಮಾಗ್ರಿ ತಯಾರಿಸಲಾಗುತ್ತಿದೆ. ಇವುಗಳ ಮಾರಾಟದಿಂದ ಬಂದ ಹಣದಲ್ಲಿ ಜೀವನ  ಸಾಗಿಸುತ್ತಿದ್ದಾರೆ.ನಗರಕ್ಕೆ ಬಂದು ಮೂರು ತಿಂಗಳಾಗಿವೆ. ಬೆಲೆ ಏರಿಕೆ ದಿನಗಳಲ್ಲೂ ಯುವಕರು ಮತ್ತು ಮಕ್ಕಳು ಆಕರ್ಷಿಸುವ ಹಾಗೆ ವಿವಿಧ ಮಾದರಿ ಹಾಗೂ ಗಾತ್ರದ  ಬ್ಯಾಟ್‌ಗಳನ್ನು ತಯಾರು ಮಾಡುತ್ತಾರೆ. ಮಕ್ಕಳು ಆಟವಾಡುವ ಸಣ್ಣ ಗಾತ್ರದ ಬ್ಯಾಟ್‌ ` 100 ರಿಂದ ಆರಂಭಗೊಂಡು ` 280 ಬೆಲೆಯ  ಬ್ಯಾಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರದ ಬ್ಯಾಟ್‌ಗಳಿಗೆ ಒಂದು ದರ ಮತ್ತು ಬಣ್ಣದ ಸ್ಟಿಕರ್‌ ಅಂಟಿಸಿರುವ ಬ್ಯಾಟ್‌ಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ.‘ವಾರದಲ್ಲಿ ರಜೆ ದಿನ ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ವ್ಯಾಪಾರ ಅಷ್ಟಕಷ್ಟೇ. ಜಿಲ್ಲೆಯ ಸುತ್ತಮುತ್ತ ನಡೆಯುವ ಜಾತ್ರೆ ಮತ್ತು ಉತ್ಸವಗಳಲ್ಲಿ ವ್ಯಾಪಾರ ಮಾಡುತ್ತೇವೆ.  ಕಳೆದ ವರ್ಷಕ್ಕೆ ಹೋಲಿಸಿದರೆ  ಈ ವರ್ಷ ವ್ಯಾಪಾರ ತುಂಬಾ ಕಡಿಮೆ. ಮಕ್ಕಳ ಪರೀಕ್ಷೆ ಮುಗಿದು ರಜೆ ಬಂದಾಗ ಬ್ಯಾಟ್‌ಗಳನ್ನು ಕೊಂಡು ಹೋಗುತ್ತಾರೆ. ಭಾನುವಾರ ಮಾತ್ರ ಹತ್ತರಿಂದ ಹದಿನೈದು ಬ್ಯಾಟ್‌ ವ್ಯಾಪಾರವಾಗುತ್ತದೆ’  ಎನ್ನುತ್ತಾರೆ ಬ್ಯಾಟ್‌ ತಯಾರಿಸುವ ಸುರೇಶ ಖಾಕ್ರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.