ಬುಧವಾರ, ಜನವರಿ 29, 2020
24 °C
ಇವೆಲ್ಲಾ ಇನ್ನು ಬರೀ ನೆನಪು...–– ‘ಗ್ರಾಮೀಣ ಪ್ರದೇಶದಲ್ಲಿನ ಆಟಗಾರರ ಬೆಳವಣಿಗೆಗೆ ಒತ್ತು ನೀಡಿದ್ದರು’

ಕ್ರಿಕೆಟ್‌ ಮೇಲೆ ಒಡೆಯರ್‌ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಡೆಯರ್‌ ಅವರಿಗೆ ಕ್ರಿಕೆಟ್‌ ಮೇಲೆ ಅಪಾರ ಪ್ರೀತಿ ಇತ್ತು. ಅವರೊಬ್ಬ ಉತ್ತಮ ಆಟಗಾರ ಹಾಗೂ ಆಡಳಿತದಾರ ಕೂಡ. 38 ವರ್ಷಗಳ ಹಿಂದೆ ನಾನು ಮೈಸೂರು ವಿವಿ ಪರ ಕ್ರಿಕೆಟ್‌ ಆಡುತ್ತಿದ್ದಾಗ ಅವರು ತಂಡದ ಮ್ಯಾನೇಜರ್‌ ಆಗಿದ್ದರು. ನಾವೆಲ್ಲಾ ರೈಲಿನಲ್ಲಿ ಅವರೊಂದಿಗೆ ಮದ್ರಾಸ್‌ಗೆ ತೆರಳಿ ಕ್ರಿಕೆಟ್‌ ಆಡಿದ್ದೆವು. ತಂಡದ ಎಲ್ಲಾ ಆಟಗಾರರೊಂದಿಗೆ ಆತ್ಮೀಯವಾಗಿ ಬೆರೆತಿದ್ದರು. ಮಹಾರಾಜ ವಂಶಸ್ಥ ಈ ರೀತಿ  ಇದ್ದರಲ್ಲ ಎಂದು ನಮಗೆಲ್ಲಾ ಅಚ್ಚರಿಯಾಗಿತ್ತು. ಕೊನೆಯವರೆಗೆ ಅವರು ಹಾಗೇ ಬದುಕಿದರು’–ಶ್ರೀಕಂಠದತ್ತ ನರಸಿಂಹ ಒಡೆಯರ್‌ ಅವರು ಮೈಸೂರು ವಿವಿ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿದ್ದ ಸಂದರ್ಭದಲ್ಲಿ ಉಪನಾಯಕರಾಗಿದ್ದ ಶಿವಮೊಗ್ಗದ ಕಟ್ಟೆ ಶ್ರೀನಾಥ್‌ ‘ಪ್ರಜಾವಾಣಿ’ಯೊಂದಿಗೆ ಹಳೆಯ ನೆನಪು ಹಂಚಿ ಕೊಂಡಿದ್ದಾರೆ.‘1973ರಲ್ಲಿ ಅನಿಸುತ್ತೆ. ಆಗ ಅವರು ವಿವಿ ತಂಡದ ಆಯ್ಕೆ ಟ್ರಯಲ್ಸ್‌ಗೆ ಬಂದಿದ್ದರು. ಮಹಾರಾಜರ ಪುತ್ರ ಎಂದು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಆಟ ನೋಡಿ ಆಯ್ಕೆ ಮಾಡಿ ಎಂದು ಒಡೆಯರ್‌ ಪಟ್ಟು ಹಿಡಿದಿದ್ದರು. ಆಗ ನಾನು ಕೂಡ ಆಯ್ಕೆ ಟ್ರಯಲ್ಸ್‌ ನಲ್ಲಿ ಪಾಲ್ಗೊಂಡಿದ್ದೆ. ಬಳಿಕ ಅವರು ತಂಡದ ನಾಯಕರಾಗಿ ನೇಮಕವಾ ದರು’ ಎಂದೂ ಶ್ರೀನಾಥ್‌ ಆ ನೆನಪುಗಳನ್ನು ಮೆಲುಕು ಹಾಕಿದರು.ಒಡೆಯರ್‌ ಕ್ರಿಕೆಟ್‌ ಆಡಳಿತದಲ್ಲೂ ಅಪಾರ ಆಸಕ್ತಿ ಹೊಂದಿದ್ದರು. ಅವರು 2007ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಅನಿಲ್‌ ಕುಂಬ್ಳೆ ಎದುರು ಸೋಲು ಕಂಡಿದ್ದರು.ಡಿಸೆಂಬರ್‌ ಒಂದರಂದು  ನಡೆದ ಕೆಎಸ್‌ಸಿಎ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಒಡೆಯರ್‌ 510 ಮತಗಳಿಂದ ಕುಂಬ್ಳೆ ಬೆಂಬಲಿತ ಅಭ್ಯರ್ಥಿ ಪಿ.ಸದಾನಂದ ಮಯ್ಯ ಅವರನ್ನು ಸೋಲಿಸಿದ್ದರು. ಡಿ.4ರಂದು ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ‘ಗ್ರಾಮೀಣ ಪ್ರದೇಶದಲ್ಲಿನ ಆಟ ಗಾರರ ಬೆಳವಣಿಗೆಗೆ ಒಡೆಯರ್‌ ಆಸಕ್ತಿ ಹೊಂದಿದ್ದರು. ಅದಕ್ಕಾಗಿ ಕೆಪಿಎಲ್‌ ಟೂರ್ನಿ ಆಯೋಜಿಸಿದ್ದರು. ಈ ಬಾರಿ ಗೆದ್ದಾಗಲೂ ಈ ಟೂರ್ನಿಗೆ ಒತ್ತು  ನೀಡಿ ದ್ದರು. ಹಿಂದೆ ಅಧ್ಯಕ್ಷರಾಗಿದ್ದಾಗ ಲೀಗ್‌ ಕ್ರಿಕೆಟ್‌ ಟೂರ್ನಿ ವೇಳೆ ಕ್ಲಬ್‌ಗಳಿಗೆ ನೀಡುತ್ತಿದ್ದ ಮಧ್ಯಾಹ್ನ ಊಟದ ಭತ್ಯೆ ಯನ್ನು ರೂ 500ರಿಂದ 1200ಗೆ ಹೆಚ್ಚಿಸಿ ದ್ದರು. ಈ ಬಾರಿಯೂ ಅವರು ಹಲವು ಯೋಜನೆಗಳನ್ನು ಜಾರಿಗೆ ತರುವ ಉತ್ಸಾಹ ಹೊಂದಿದ್ದರು’ ಎಂದು ಜುಪಿಟರ್ಸ್‌ ಕ್ರಿಕೆಟರ್ಸ್‌ನ ಗಿರೀಶ್‌ ಹೇಳುತ್ತಾರೆ.ಚುನಾವಣೆಗೆ ಎರಡು ದಿನಗಳ ಹಿಂದೆಯಷ್ಟೇ ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ಕ್ರಿಕೆಟ್‌ ಸಂಸ್ಥೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದರು. ಮಾಧ್ಯಮಗಳಿಗೆ ನೀಡಿದ ಕೊನೆಯ ಸಂದರ್ಶನವದು.  

ಸಂತಾಪ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ, ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ಒಡೆಯರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.‘ಒಡೆಯರ್‌ ಒಳ್ಳೆಯ ವ್ಯಕ್ತಿ. ಅವರ ಅಕಾಲಿಕ ನಿಧನದಿಂದ ನನಗೆ ಆಘಾತ ವಾಗಿದೆ. ಅವರೊಂದಿಗೆ ನಾನು ಮಾತನಾಡಿದ್ದು ಕಡಿಮೆ. ಭಾರತ ಕ್ರಿಕೆಟ್‌ ತಂಡದ ನಾಯಕನಾಗಿ ನೇಮಕವಾ ದಾಗ ಒಡೆಯರ್‌ ಅವರು ನನ್ನನ್ನು ಅಭಿನಂದಿಸಿದ್ದರು’ ಎಂದು ಕುಂಬ್ಳೆ  ನುಡಿದಿದ್ದಾರೆ.ಕೆಎಸ್‌ಸಿಎ ಮುಂದಿನ ಅಧ್ಯಕ್ಷ ಯಾರು?

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ  ನಿಧನದ ಬಳಿಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಡಳಿತ  ಮಂಡಳಿಯಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಚಿತ್ತ ನೆಟ್ಟಿದೆ. ಒಡೆಯರ್‌ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕೇವಲ ಆರು ದಿನಗಳಷ್ಟೇ ಆಗಿತ್ತು.

ಕೆಎಸ್‌ಸಿಎ ‘ಬೈಲಾ’ದ 18ನೇ ಕಲಂ  ಪ್ರಕಾರ ಆಡಳಿತ ಮಂಡಳಿಯಲ್ಲಿರುವ ಆಜೀವ ಸದಸ್ಯರು ಅಧ್ಯಕ್ಷರಾಗಿ ಬಡ್ತಿಗೇರಲು ಅವಕಾಶ ಹೊಂದಿದ್ದಾರೆ. ಮಂಡಳಿಯಲ್ಲಿ ಈಗ 23 (ಒಡೆಯರ್‌ ನಿಧನದ ಬಳಿಕ) ಸದಸ್ಯರಿದ್ದಾರೆ. ಅದಕ್ಕಾಗಿ ಆಡಳಿತ ಮಂಡಳಿಯ ಸಭೆ ಕರೆಯಬೇಕು. ಅದರಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ಇದು ಒಂದು ವರ್ಷದ ಅವಧಿಗೆ ಮಾತ್ರವಾಗಿರುತ್ತದೆ. ನಂತರ ವಾರ್ಷಿಕ ಮಹಾಸಭೆಯಲ್ಲಿ ಅನುಮೋದನೆ ಪಡೆಯಬೇಕು. ಸಂಸ್ಥೆಯಲ್ಲಿ ಮೂವರು ಉಪಾಧ್ಯಕ್ಷರಿದ್ದಾರೆ (ಸಂಜಯ್‌ ಎಂ.ದೇಸಾಯಿ, ಪಿ.ಆರ್‌.ಅಶೋಕಾನಂದ ಹಾಗೂ ಆರ್‌.ಸುಧಾಕರ್‌ ರಾವ್‌). ಇವರಲ್ಲಿ ಹಿರಿಯರೊಬ್ಬರನ್ನು ಆ ಸ್ಥಾನಕ್ಕೆ ನೇಮಿಸುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)