ಕ್ರಿಕೆಟ್ ಶಕ್ತಿ ಇಮ್ಮಡಿಗೊಳಿಸಿದ ತೆಂಡೂಲ್ಕರ್

ಮೈಸೂರು: ‘ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಬಹುದು ಎಂದು ತೋರಿಸಿಕೊಟ್ಟ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್. ಎರಡೂವರೆ ದಶಕಗಳ ಹಿಂದೆ ಅಸಾಧ್ಯವೆಂದೇ ಎನಿಸುತ್ತಿದ್ದ ಹಲವು ದಾಖಲೆಗಳನ್ನು ಸಾಧಿಸಿ, ಕ್ರಿಕೆಟ್‌ನ ಶಕ್ತಿಯನ್ನು ಇಮ್ಮಡಿಗೊಳಿಸಿದ ಶ್ರೇಯ ಅವರದ್ದು’–
1992ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಬಿರುಗಾಳಿ ವೇಗದ ಬೌಲರ್‌ಗಳನ್ನು ಪುಡಿಗಟ್ಟಿ ಶತಕ (ಅಜೇಯ 148) ಗಳಿಸಿದ್ದ ಸಚಿನ್ ಆಟವನ್ನು ಇನ್ನೊಂದು ಬದಿಯಲ್ಲಿ ನಿಂತು ಕಣ್ತುಂಬಿಕೊಂಡಿದ್ದ ಆಲ್‌ರೌಂಡರ್ ಸುಬ್ರತೋ ಬ್ಯಾನರ್ಜಿಯವರ ನೆನಪಿನಂಗಳದಿಂದ ಹೊರಹೊಮ್ಮಿದ ಮಾತುಗಳಿವು.
ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಗುರುವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿರುವ ಜಾರ್ಖಂಡ್ ತಂಡದ ತರಬೇತುದಾರರಾಗಿ ಸುಬ್ರತೋ ಬಂದಿದ್ದಾರೆ. ಕಳೆದ ವರ್ಷ ವಿದರ್ಭ ತಂಡಕ್ಕೆ ಕೋಚ್ ಆಗಿ ಮೈಸೂರಿಗೆ ಬಂದಿದ್ದ ಅವರು, ಇದೇ ಪ್ರಥಮ ಬಾರಿಗೆ ಎಲೈಟ್ ಗುಂಪಿಗೆ ಬಡ್ತಿ ಪಡೆದಿರುವ ಜಾರ್ಖಂಡ್ ತಂಡಕ್ಕೆ ತರಬೇತುದಾರರಾಗಿದ್ದಾರೆ. ಮೂಲತಃ ವಿಭಜನಾಪೂರ್ವ ಬಿಹಾರ ರಾಜ್ಯದ ಸುಬ್ರತೋ, ಸಿಡ್ನಿಯಲ್ಲಿ ತಾವಾಡಿದ್ದ ಏಕೈಕ ಟೆಸ್ಟ್‌ನಲ್ಲಿ ಮೂರು ವಿಕೆಟ್ ಕೂಡ ಪಡೆದಿದ್ದರು. ಅವರು ಆರು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಮಂಗಳವಾರ ಸಂಜೆ ತಂಡಕ್ಕೆ ತಾಲೀಮು ನೀಡಿದ ನಂತರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಹಾಗೂ ಸಚಿನ್ ಗೆಳೆತನದ ಸಿಹಿ ನೆನಪುಗಳನ್ನು ಹಂಚಿಕೊಂಡರು.
‘ಗ್ವಾಲಿಯರ್‌ನಲ್ಲಿ ವಿಶ್ವದಾಖಲೆಯ ದ್ವಿಶತಕ ಬಾರಿಸಿದ ಸಚಿನ್ ನಂತರ ಭಾರತದ ಇಬ್ಬರು ಬ್ಯಾಟ್ಸ್‌ಮನ್‌ಗಳು ಅವರಿಗಿಂತ ಹೆಚ್ಚು ರನ್ ಗಳಿಸಿ ದಾಖಲೆ ಮಾಡಿದ್ದಾರೆ. ಆದರೆ ಏಕದಿನ ಪಂದ್ಯದಲ್ಲಿ ಇಂತಹದೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದೇ ಸಚಿನ್. ನಿಗದಿತ ಓವರುಗಳ ಪಂದ್ಯದಲ್ಲಿ ಯಾವ ರೀತಿ ಆಡಬೇಕು, ಟೆಸ್ಟ್‌ನಲ್ಲಿ ಯಾವ ಹೇಗೆ ಆಡಬೇಕು ಎಂಬುದನ್ನು 24 ವರ್ಷಗಳವರೆಗೆ ತೋರಿಸಿಕೊಟ್ಟಿದ್ದಾರೆ. ಇವತ್ತು ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಚೇತೇಶ್ವರ್ ಪೂಜಾರ, ಶಿಖರ್ ಧವನ್ ಅವರಂತಹ ಒಳ್ಳೆಯ ಆಟಗಾರರು, ತಮ್ಮ ಬಾಲ್ಯದಲ್ಲಿ ಸಚಿನ್‌ರಿಂದ ಪ್ರೇರಿತರಾಗಿಯೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟವರು’ ಎಂದರು.
‘ನಾನು ಮೊದಲಿನಿಂದಲೂ ಸಚಿನ್ ಅಭಿಮಾ ನಿಯಾಗಿದ್ದೆ. ನಾನಾಡಿದ ಏಕೈಕ ಟೆಸ್ಟ್‌ನಲ್ಲಿ ಅವರ ಬ್ಯಾಟಿಂಗ್ ವೈಭವವನ್ನು ಮನತುಂಬಿಕೊಂಡೆ. ಆ ಏಕಾಗ್ರತೆ, ಚೆಂಡನ್ನು ಬೌಂಡರಿಗಟ್ಟುವ ಶೈಲಿ, ಬೌಲರ್ ಎಸೆತವನ್ನು ಯಾವ ರೀತಿ ಹೊಡೆ ಯಬೇಕು ಎಂದು ಕ್ಷಣಾರ್ಧದಲ್ಲಿ ನಿರ್ಧರಿಸುವ ರೀತಿ, ಟೈಮಿಂಗ್ ನೋಡಿ ಬೆರಗಾಗಿದ್ದೆ’ ಎಂದ ಸುಬ್ರತೋ ಅರೆಕ್ಷಣ ಮೌನವಾದರು.
ನಂತರ ಮತ್ತೆ ನೆನಪಿನಂಗಳಕ್ಕೆ ಜಾರಿದ ಅವರು, ‘24 ವರ್ಷಗಳವರೆಗೆ ಸತತವಾಗಿ ಒಂದೇ ರೀತಿಯ ಜನಪ್ರಿಯತೆ
ಉಳಿಸಿಕೊಂಡಿರುವುದೂ ಒಂದು ದಾಖಲೆಯೇ ಸರಿ. ಇದಕ್ಕೆ ಕಾರಣ ಅವರ ಛಲ ಮತ್ತು ಸರಳತೆ. ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ಸಚಿನ್ ವಿಶಿಷ್ಟ ವ್ಯಕ್ತಿ. ತನಗಿಂತಲೂ ಹಿರಿಯರಾದ ಕಪಿಲ್ ದೇವ್‌ರಿಂದ ಹಿಡಿದು ಇತ್ತೀಚಿನ ರವೀಂದ್ರ ಜಡೇಜಾ ಅವರಂತಹ ಕಿರಿಯರೊಂದಿಗೂ ಬೆರೆ ತದ್ದು ಅವರ ವಿಶೇಷತೆ. ತಮ್ಮ ಸಾಧನೆಯನ್ನು ಗೌರವಿಸುವಷ್ಟೇ, ತಮ್ಮ ಸಹ ಆಟಗಾರರು ಉತ್ತ ಮವಾಗಿ ಆಡಿದಾಗಲೂ ಮನಸಾರೆ ಅಭಿನಂದಿಸುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ’ ಎಂದರು.
ನಾಯಕ ಮಹೇಂದ್ರಸಿಂಗ್ ದೋನಿ ಕುರಿತು ಮಾತನಾಡಿದ ಸುಬ್ರತೋ, ‘ಇತ್ತೀಚೆಗೆ ರಾಂಚಿಯಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿ ರಣಜಿ ತಂಡದ ಆಟಗಾರರೊಂದಿಗೆ ಅಭ್ಯಾಸ ಮಾಡಿದ್ದರು. ಕಿರಿಯ ಆಟಗಾರರಿಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ನನಗೆ ಸಮಯ ಸಿಕ್ಕರೆ ಜಾರ್ಖಂಡ್ ತಂಡಕ್ಕೆ ರಣಜಿ ಪಂದ್ಯ ಆಡಲು ಸಿದ್ಧ ಎಂದಿದ್ದರು. ಆದರೆ ಕ್ರಿಕೆಟ್‌ನ ಮೂರು ಮಾದರಿಗಳ ತಂಡಗಳಿಗೆ ಅವರೇ ನಾಯಕ. ಸಮಯ ಸಿಗುವುದು ದುಸ್ತರ. ಆದರೆ ಇಷ್ಟೆಲ್ಲದರ ನಡುವೆಯೂ ಶಾಂತಚಿತ್ತದಿಂದ ವರ್ತಿಸುವ ಅವರ ಗುಣ ಅಪರೂಪದ್ದು’ ಎಂದು ಮಾತಿಗೆ ವಿರಾಮ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.