ಶನಿವಾರ, ಮೇ 28, 2022
25 °C

ಕ್ರಿಕೆಟ್: ಗೆಲುವಿಗೆ 510 ರನ್ ಗುರಿ; ಸೋಲಿನ ಸುಳಿಯಲ್ಲಿ ಪಾಕಿಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಗೆಲುವಿಗೆ 510 ರನ್ ಗುರಿ; ಸೋಲಿನ ಸುಳಿಯಲ್ಲಿ ಪಾಕಿಸ್ತಾನ

ಗಾಲ್, ಶ್ರೀಲಂಕಾ (ಎಎಫ್‌ಪಿ): ಶ್ರೀಲಂಕಾ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಪರದಾಟ ನಡೆಸಿದ ಪಾಕಿಸ್ತಾನ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನತ್ತ ಮುಖ ಮಾಡಿದೆ.ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 510 ರನ್‌ಗಳ ಕಠಿಣ ಗುರಿ ಪಡೆದಿರುವ ಪಾಕ್ ಮೂರನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 36 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.ಇದೀಗ ಪಾಕ್ ತಂಡದ ಗೆಲುವಿಗೆ ಇನ್ನುಳಿದ ಏಳು ವಿಕೆಟ್‌ಗಳಿಂದ 474 ರನ್‌ಗಳ ಅಗತ್ಯವಿದೆ. ಎರಡು ದಿನಗಳ ಆಟ ಬಾಕಿಯುಳಿದಿದ್ದು, ಲಂಕಾ ಭಾರಿ ಅಂತರದ ಗೆಲುವು ಪಡೆಯುವ ಸಾಧ್ಯತೆಯೇ ಅಧಿಕ. ಮೊದಲ ಇನಿಂಗ್ಸ್‌ನಂತೆ ಎರಡನೇ ಇನಿಂಗ್ಸ್‌ನಲ್ಲೂ ಪಾಕ್ ಆರಂಭಿಕ ಆಘಾತ ಅನುಭವಿಸಿತು.ನುವಾನ್ ಕುಲಶೇಖರ (13ಕ್ಕೆ 2) ಎದುರಾಳಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗಟ್ಟಿದರೆ, ಅಜರ್ ಅಲಿ ವಿಕೆಟ್‌ನ್ನು ರಂಗನಾ ಹೆರಾತ್ ಪಡೆದರು. ಯೂನಿಸ್ ಖಾನ್ (0) ಮತ್ತು ಸಯೀದ್ ಅಜ್ಮಲ್ (11) ಕ್ರೀಸ್‌ನಲ್ಲಿದ್ದರು.ಇದಕ್ಕೂ ಮುನ್ನ 5 ವಿಕೆಟ್‌ಗೆ 48 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಪಾಕ್ ಮೊದಲ ಇನಿಂಗ್ಸ್‌ನಲ್ಲಿ 100 ರನ್‌ಗಳಿಗೆ ಆಲೌಟಾಯಿತು. ಸೂರಜ್ ರಂದೀವ್ (13ಕ್ಕೆ 4) ಮತ್ತು ರಂಗನಾ ಹೆರಾತ್ (30ಕ್ಕೆ 3) ಪಾಕ್ ಇನಿಂಗ್ಸ್‌ಗೆ ಬೇಗನೇ ತೆರೆ ಎಳಿದರು. 372 ರನ್‌ಗಳ ಭಾರಿ ಮುನ್ನಡೆ ಪಡೆದರೂ ಲಂಕಾ ಎದುರಾಳಿಗಳ ಮೇಲೆ `ಫಾಲೋ ಆನ್~ ಹೇರಲಿಲ್ಲ.ತನ್ನ ಎರಡನೇ ಇನಿಂಗ್ಸ್ ಆರಂಭಿಸಿತಲ್ಲದೆ, 41 ಓವರ್‌ಗಳಲ್ಲಿ 5 ವಿಕೆಟ್‌ಗೆ 137 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮಾತ್ರವಲ್ಲ ಪಾಕ್ ಗೆಲುವಿಗೆ ಐನೂರಕ್ಕೂ ಅಧಿಕ ಮೊತ್ತದ ಗುರಿ ನೀಡಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ತಿಲಕರತ್ನೆ ದಿಲ್ಶಾನ್ 56 ರನ್ ಕಲೆಹಾಕಿದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 153.2 ಓವರ್‌ಗಳಲ್ಲಿ 472 ಮತ್ತು ಎರಡನೇ ಇನಿಂಗ್ಸ್ 41 ಓವರ್‌ಗಳಲ್ಲಿ 5 ವಿಕೆಟ್‌ಗೆ 137 ಡಿಕ್ಲೇರ್ಡ್ (ತರಂಗ ಪರಣವಿತನ 25, ತಿಲಕರತ್ನೆ ದಿಲ್ಶಾನ್ 56, ಮಾಹೇಲ ಜಯವರ್ಧನೆ 14, ಜುನೈದ್ ಖಾನ್ 44ಕ್ಕೆ 3, ಸಯೀದ್ ಅಜ್ಮಲ್ 47ಕ್ಕೆ 2).ಪಾಕಿಸ್ತಾನ: ಮೊದಲ ಇನಿಂಗ್ಸ್ 54.3 ಓವರ್‌ಗಳಲ್ಲಿ 100 (ಯೂನಿಸ್ ಖಾನ್ 29, ಮೊಹಮ್ಮದ್ ಅಯೂಬ್ 25, ಅದ್ನಾನ್ ಅಕ್ಮಲ್ 9, ಸೂರಜ್ ರಂದೀವ್ 13ಕ್ಕೆ 4, ರಂಗನಾ ಹೆರಾತ್ 30ಕ್ಕೆ 3, ನುವಾನ್ ಕುಲಶೇಖರ 27ಕ್ಕೆ 2) ಮತ್ತು ಎರಡನೇ ಇನಿಂಗ್ಸ್ 15 ಓವರ್‌ಗಳಲ್ಲಿ 3 ವಿಕೆಟ್‌ಗೆ 36 (ತೌಫೀಕ್ ಉಮರ್ 10, ಯೂನಿಸ್ ಖಾನ್ ಬ್ಯಾಟಿಂಗ್ 0, ಸಯೀದ್ ಅಜ್ಮಲ್ ಬ್ಯಾಟಿಂಗ್ 11, ನುವಾನ್ ಕುಲಶೇಖರ 13ಕ್ಕೆ 2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.