ಸೋಮವಾರ, ಮೇ 17, 2021
30 °C

ಕ್ರಿಕೆಟ್ ಬೆಟ್ಟಿಂಗ್: ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀನಗರ ಸಮೀಪದ ಕಾಳಿದಾಸ ಲೇಔಟ್‌ನ ಬಸವರಾಜು (46) ಎಂಬುವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಆರೋಪಿಯು ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಮನೆಯಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸಲಾಯಿತು. ಆರೋಪಿಯಿಂದ ಒಂದು ಲಕ್ಷ ನಗದು, ಟಿ.ವಿ ಹಾಗೂ 3ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣದ ಇತರೆ ಆರೋಪಿಗಳಾದ ಬಚ್ಚನ್ ಮತ್ತು ಅಜಿತ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಂಧಿತನ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಆತ್ಮಹತ್ಯೆ: ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಎಲ್ ವಿಮಾನ ನಿಲ್ದಾಣ ಸಮೀಪದ ವಿಜ್ಞಾನನಗರದಲ್ಲಿ ನಡೆದಿದೆ.ಎಚ್‌ಎಎಲ್‌ನಲ್ಲಿ ಗುತ್ತಿಗೆ ನೌಕರರಾಗಿದ್ದ ಹರಿಕೃಷ್ಣ (27) ಆತ್ಮಹತ್ಯೆ ಮಾಡಿಕೊಂಡವರು. ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು ಪತ್ನಿಯ ಜತೆ ಹೆಣ್ಣೂರು ಬಂಡೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಿಜ್ಞಾನನಗರ ಮೂರನೇ ಅಡ್ಡರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅವರು ಅಲ್ಲಿಯೇ ಭಾನುವಾರ (ಏ.22) ರಾತ್ರಿ ನೇಣು ಹಾಕಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಂಧನ: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಕಾಟ್ರೇಡ್ಜ್ ಮತ್ತು ಟೋನರ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು 28 ಸಾವಿರ ನಗದು ಸೇರಿದಂತೆ ಸುಮಾರು 20 ಲಕ್ಷ ರೂಪಾಯಿ ಮೌಲ್ಯ ದ ವಸ್ತು ವಶಪಡಿಸಿಕೊಂಡಿದ್ದಾರೆ.ಉತ್ತರಪ್ರದೇಶ ಮೂಲದ ಮೋಹನ್ (21) ಮತ್ತು ಅಶೋಕನಗರದ ಪವನ್‌ಕುಮಾರ್ (29) ಬಂಧಿತರು. ಆರೋಪಿಗಳು ಅಶೋಕನಗರದಲ್ಲಿ `ನ್ಯೂಟೆಕ್ ಕಂಪ್ಯೂಟರ್ ಸ್ಟೇಷನರಿ~ ಹೆಸರಿನ ಅಂಗಡಿ ಇಟ್ಟುಕೊಂಡು ನಕಲಿ ಕಾಟ್ರೇಡ್ಜ್ ಹಾಗೂ ಟೋನರ್‌ಗಳನ್ನು ಮಾರುತ್ತಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಹಣ, 300 ನಕಲಿ ಕಾಟ್ರೇಡ್ಜ್, 250 ಟೋನರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಪ್ರಕರಣದಲ್ಲಿ ಇತರೆ ಆರೋಪಿಗಳಾದ ಪಟೇಲ್ ಜಯಸುಖ್ ಮತ್ತು ನವೀನ್ ಪರಾರಿಯಾಗಿದ್ದಾರೆ. ಬಂಧಿತರ ವಿರುದ್ಧ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದರೋಡೆ: ನಗರದ ಜೆ.ಸಿ.ರಸ್ತೆ ಬಳಿ ದುಷ್ಕರ್ಮಿಗಳು ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಹಲ್ಲೆ ನಡೆಸಿ ಒಂದು ಸಾವಿರ ನಗದು ಮತ್ತು ಮೊಬೈಲ್ ಫೋನ್ ದರೋಡೆ ಮಾಡಿರುವ ಘಟನೆ ನಡೆದಿದೆ.ಶಿವಾಜಿನಗರ ನಿವಾಸಿಗಳಾದ ಅಜಿತ್‌ಕುಮಾರ್ ಮತ್ತು ಅವರ ಸ್ನೇಹಿತ ಸಂತೋಷ್ ದರೋಡೆಗೆ ಒಳಗಾದವರು. ಬಿಹಾರ ಮೂಲದ ಅವರು ಜಯನಗರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದರು. ರಾತ್ರಿ ಕೆಲಸ ಮುಗಿದ ಬಳಿಕ ಅಂಗಡಿಯಿಂದ ಮನೆಗೆ ಹೊರಟ ಅವರಿಗೆ ಬಿಎಂಟಿಸಿ ಬಸ್ ಸಿಗಲಿಲ್ಲ. ಅವರು ಜೆ.ಸಿ.ರಸ್ತೆಗೆ ನಡೆದು ಬಂದು ಬಸ್‌ಗೆ ಕಾಯುತ್ತಾ ನಿಂತಿದ್ದರು.

 

ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.