ಶನಿವಾರ, ಫೆಬ್ರವರಿ 27, 2021
28 °C

ಕ್ರಿಕೆಟ್: ಭಾರತಕ್ಕೆ ಮತ್ತೊಂದು ಜಯದ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಭಾರತಕ್ಕೆ ಮತ್ತೊಂದು ಜಯದ ವಿಶ್ವಾಸ

ಹಂಬಂಟೋಟಾ (ಪಿಟಿಐ): ಉತ್ತಮ ಆರಂಭ ಪಡೆದಿರುವ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಗೆಲುವಿನ ವಿಶ್ವಾಸ. ಇದಕ್ಕಾಗಿ ವೇದಿಕೆಯೂ ಸಿದ್ದವಾಗಿದೆ. ಇಲ್ಲಿನ ಮಹಿಂದಾ ರಾಜಪಕ್ಸಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ `ಮಹಿ~ ಪಡೆ ಆತಿಥೇಯ ಶ್ರೀಲಂಕಾ ಸೆಣಸಲಿದೆ.ಯುವ ಆಟಗಾರ ವಿರಾಟ್ ಕೊಹ್ಲಿ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಅಬ್ಬರದ ಎದುರು ಲಂಕಾ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದರೆ, ಉತ್ತಮ ಮೊತ್ತ ಕಲೆ ಹಾಕಬಹುದು ಎನ್ನುವುದು ಉಭಯ ನಾಯಕರಿಗೆ ಗೊತ್ತಿರುವ ವಿಷಯ. ಆದ್ದರಿಂದ `ಟಾಸ್~ ಪ್ರಮುಖ ಪಾತ್ರ ವಹಿಸುತ್ತದೆ.ಹಿಂದಿನ ಪಂದ್ಯದಲ್ಲಿ ಲಂಕಾ ಬೌಲರ್‌ಗಳನ್ನು ದಂಡಿಸಿದ ಕೊಹ್ಲಿ ಮೇಲೆ ಎಲ್ಲರ ಭರವಸೆ ಇದೆ. ಏಕೆಂದರೆ, ಹಿಂದಿನ ಐದು ಏಕದಿನ ಪಂದ್ಯಗಳಲ್ಲಿ ಈ ಬಲಗೈ  ಬ್ಯಾಟ್ಸ್‌ಮನ್ ನಾಲ್ಕು ಶತಕ ಗಳಿಸಿದ್ದಾರೆ. ಇದು ಕೊಹ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.ಎಡಗೈ ವೇಗಿ ಜಹೀರ್ ಖಾನ್, ಉಮೇಶ್ ಯಾದವ್, ಆಫ್ ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ ವಿಭಾಗದ ಸವಾಲನ್ನು ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಸವಾಲಿನ ಮೊತ್ತ ಗಳಿಸಿದ್ದರೂ, ಭಾರತಕ್ಕೆ ಸೋಲಿನ ಅಪಾಯ ಕಾದಿತ್ತು. ಇದಕ್ಕೆ ಕುಮಾರ ಸಂಗಕ್ಕಾರ (133) ಅವರ ಶತಕ ಕಾರಣವಾಗಿತ್ತು. ಸಂಗಕ್ಕಾರ ವಿಕೆಟ್ ಪಡೆದ ಉಮೇಶ್ ಭಾರತದ ಸಂಕಷ್ಟವನ್ನು ದೂರ ಮಾಡಿದ್ದರು.ವಿಶ್ವಾಸ ನೀಡಿದ ಆಟ: `ಭುಜದ ನೋವಿನಿಂದ ಚೇತರಿಸಿಕೊಂಡು ಶ್ರೀಲಂಕಾ ಎದುರಿನ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿದೆ. ಇದು ವಿಶ್ವಾಸವನ್ನು ಹೆಚ್ಚಿಸಿದೆ~ ಎಂದು ಸೆಹ್ವಾಗ್ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದರು. `ಶತಕ ಹಾಗೂ ಅರ್ಧಶತಕಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಉತ್ತಮ ಆರಂಭ ನೀಡಿದ್ದು ಖುಷಿ ನೀಡಿದೆ ಎಂದ ಅವರು, ಕೊಹ್ಲಿ ಪ್ರತಿಭಾನ್ವಿತ ಆಟಗಾರ. ಅವರಿಗೆ ಉತ್ತಮ ಭವಿಷ್ಯವಿದೆ~ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಮೊದಲ ಪಂದ್ಯದಲ್ಲಿ ಸೆಹ್ವಾಗ್ ಕೇವಲ ನಾಲ್ಕು ರನ್‌ಗಳಿಂದ ಶತಕ ವಂಚಿತರಾಗಿದ್ದರು.ಗಾಯದ ಸಮಸ್ಯೆ: ಆತಿಥೇಯ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಬಲಗೈ ವೇಗಿ ನುವಾನ್ ಕುಲಶೇಖರ ಗಾಯಗೊಂಡಿರುವ ಕಾರಣ ಅವರು ಈ ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ. ಈ ಆಟಗಾರನ ಬದಲು ನುವಾನ್ ಪ್ರದೀಪ್ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯವನ್ನಾಡುವಾಗ ಕುಲಶೇಖರ ಗಾಯಗೊಂಡಿದ್ದರು. ಆದ್ದರಿಂದ ಅವರಿಗೆ ಐದು ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಪ್ರದೀಪ್ ಶ್ರೀಲಂಕಾ `ಎ~ ತಂಡದಲ್ಲಿದ್ದರು.ತಂಡಗಳು

ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ),  ವಿರಾಟ್ ಕೊಹ್ಲಿ (ಉಪ ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರೋಹಿತ್ ಶರ್ಮ, ಸುರೇಶ್ ರೈನಾ, ಇರ್ಫಾನ್ ಪಠಾಣ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಉಮೇಶ್ ಯಾದವ್, ಪ್ರಗ್ಯಾನ್ ಓಜಾ, ಅಜಿಂಕ್ಯ ರಹಾನೆ, ಮನೋಜ್ ತಿವಾರಿ, ರಾಹುಲ್ ಶರ್ಮ ಮತ್ತು ಅಶೋಕ್ ದಿಂಡಾ.ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜಲೊ ಮ್ಯಾಥ್ಯೂಸ್ (ಉಪ ನಾಯಕ), ತಿಲಕರತ್ನೆ ದಿಲ್ಯಾನ್, ಕುಮಾರ ಸಂಗಕ್ಕಾರ, ಉಪುಲ್ ತರಂಗ, ದಿನೇಶ್ ಚಂಡಿಮಾಲ್ (ವಿಕೆಟ್ ಕೀಪರ್), ತಿಸ್ಸಾರ ಪರೆರಾ, ಲಾಹಿರು ತಿರುಮಾನೆ, ಲಸಿತ್ ಮಾಲಿಂಗ, ಚಾಮರ ಕಪುಗೆಡೆರಾ, ರಂಗನಾ ಹೆರಾತ್, ಸಚಿತ್ರಾ ಸೇನಾನಾಯಕೆ, ನುವಾನ್ ಪ್ರದೀಪ್, ಜೀವನ್ ಮೆಂಡಿಸ್ ಮತ್ತು ಐಸುರು ಉದಾನ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.