ಗುರುವಾರ , ಮೇ 19, 2022
23 °C

ಕ್ರಿಯಾಶೀಲರಾದರೆ ಅಭಿವೃದ್ಧಿ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಕೇವಲ ಅಧಿಕಾರಿಗಳನ್ನು ನಂಬಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಬದಲು ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳ ಸಮಗ್ರ ಮಾಹಿತಿ ಪಡೆದು ಅನುಷ್ಠಾನಗೊಳಿಸಲು ಹೆಚ್ಚು ಕ್ರಿಯಾಶೀಲರಾದರೆ ಮಾತ್ರ ಗ್ರಾಮಗಳನ್ನು ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಜನಪ್ರತಿನಿಧಿಗಳಿಗೆ ಸಮಯಪ್ರಜ್ಞೆ, ಸಾರ್ವಜನಿಕರ ಹಿತಾಸಕ್ತಿ ಹಾಗೂ ಅಭಿವೃದ್ಧಿಪರ ಚಿಂತನೆ ಇದ್ದಾಗ ಮಾತ್ರ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೂತನ ಸದಸ್ಯರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದರು.ಕಳೆದೆರಡು ವರ್ಷಗಳ ಹಿಂದಿನ ರಸ್ತೆಗಳಿಗೂ ಈಗಿನ ರಸ್ತೆಗಳಿಗೂ ಭಾರಿ ವ್ಯತ್ಯಾಸವಿದೆ ಎಂದ ಅವರು, ಸದರಿ ರಸ್ತೆ ಅಭಿವೃದ್ಧಿಗೆ ಮಾಡಿದ ಖರ್ಚಿನ ಬಗ್ಗೆ ಮಾಹಿತಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ತಿಳಿಸಿದರು.ಆಯಾ ವರ್ಷದ ಆರಂಭದಲ್ಲಿ ಇಲಾಖೆಗೆ ಲಭ್ಯವಿರುವ ಯೋಜನೆ, ಅನುದಾನ ಹಾಗೂ ಇತರೆ ಮಾಹಿತಿ ಜೊತೆಗೆ ಆಯ್ಕೆಗೊಂಡ ಫಲಾನುಭವಿಗಳ ವಿವರವನ್ನು ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಆಚಾರ್ ಸೂಚನೆ ನೀಡಿದರು.ತಾಲ್ಲೂಕಿನಲ್ಲಿ ವಸತಿ ನಿಲಯಗಳ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಅಧಿಕಾರಿಗಳೇ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಕುಕನೂರು ಬಾಲಕರ ವಸತಿ ನಿಲಯದಲ್ಲಿ ಬೆಳಿಗ್ಗೆ ಅಡುಗೆ ತಯಾರಿಸಿ ಹೊರಹೋಗುವ ಅಡುಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೊಳೆಗೌಡ ಸಂಬಂಧಪಟ್ಟವರಿಗೆ ತಿಳಿಸಿದರು.ಅಧಿಕಾರಿಗಳು ಅಮಾನತಿಗೆ ಕಾರಣವಾಗಿದ್ದ ಎಸ್‌ಎಸ್‌ಎ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಇಓ ಒಟ್ಟು 24ರಲ್ಲಿ ಒಂದು ಮಾತ್ರ ಉಳಿದಿದೆ. ಅದು ಕೂಡಾ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಬಿಸಿಯೂಟ ಅಥವಾ ಇನ್ನಿತರ ಕೆಲಸದಲ್ಲಿ ನಿರ್ಲಕ್ಷ್ಯ ಹಾಗೂ ದುರುಪಯೋಗದ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಖೊಟ್ಟಿ ದಾಖಲೆ ಸೃಷ್ಟಿಸಿ ಬಿಲ್ ಎತ್ತದೇ ಪ್ರಾಮಾಣಿಕವಾಗಿ ಕೆಲಸಮಾಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸಲಹೆ ನೀಡಿದ ಹಾಲಪ್ಪ ಆಚಾರ್, ಜಲಾನಯನ ಇಲಾಖೆಯಲ್ಲಿ ಮತ್ತು ಉದ್ಯೋಗ ಖಾತರಿ ಯೋಜನೆಯಲ್ಲಿನ ಕಾಮಗಾರಿಗಳು ಒಂದೇ ರೀತಿಯಲ್ಲಿದ್ದು ಅಕ್ರಮಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದರು.ಇದ್ದೂ ಇಲ್ಲದಂತಿರುವ ನಿರ್ಮಿತಿ ಕೇಂದ್ರವು ವಹಿಸಿರುವ ಯಾವೊಂದು ಕೆಲಸವನ್ನೂ ಪರಿಪೂರ್ಣವಾಗಿ ಮಾಡಿಲ್ಲ. ಬಾಕಿ ಉಳಿದ ಕೆಲಸವನ್ನು ಪೂರ್ಣಮಾಡಿ ಜಾಗ ಖಾಲಿ ಮಾಡುವಂತೆ ಅವರು ಹೇಳಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಜವಳಿ,  ಇಒ ವೈ.ಎಲ್. ಹಂಪಣ್ಣ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.