ಕ್ಲಬ್ಗಳ ಒಳನೋಟ

ಬೆಂಗಳೂರಿನಲ್ಲಿ ಬ್ರಿಟಿಷರು ಬಿಟ್ಟುಹೋದ ಅನೇಕ ಬಳುವಳಿಗಳಲ್ಲಿ ನಗರದ ಕ್ಲಬ್ಗಳು ಮುಖ್ಯವಾದವು. 19ನೇ ಶತಮಾನದ ಹೊತ್ತಿಗೆ ಇಂದಿನ ಮಾದರಿಯ ಕ್ಲಬ್ಗಳ ಸಂಸ್ಕೃತಿ ಆರಂಭಗೊಂಡಿತು. ಸಮಾನ ಆಸಕ್ತಿಗಳನ್ನಿಟ್ಟುಕೊಂಡು ಒಂದು ನಿರ್ದಿಷ್ಟ ತಾಣದಲ್ಲಿ ಒಗ್ಗೂಡಿ, ಬಿಡುವಿನ ವೇಳೆಯನ್ನು ಕಳೆಯುವ ತಾಣವಾಗಿ ಕ್ಲಬ್ಗಳು ರೂಪುಗೊಂಡವು. ಮನೋಲ್ಲಾಸ, ವಿನೋದ, ಕ್ರೀಡೆ, ಹರಟೆ, ವಿಶ್ರಾಂತಿ, ಭೋಜನಕೂಟ ಸೇರಿದಂತೆ ಅನೇಕ ಚಟುವಟಿಕೆಗಳು ಈ ಕ್ಲಬ್ಗಳಲ್ಲಿ ಸಾಗುತ್ತಿದ್ದವು. ವಿವಿಧ ವೃತ್ತಿ, ಆಸಕ್ತಿ, ಕ್ರೀಡೆಗಳ ಆಧಾರದ ಮೇಲೆ ಈ ಕ್ಲಬ್ಗಳು ಹುಟ್ಟಿಕೊಂಡವು.
ಈ ಕ್ಲಬ್ ಸಂಸ್ಕೃತಿ ಮೊದಲು ಹೆಜ್ಜೆ ಇಟ್ಟಿದ್ದು ಕೋಲ್ಕತ್ತದಲ್ಲಿ. ನಂತರ 1868ರಲ್ಲಿ ಬೆಂಗಳೂರಿನಲ್ಲಿ ‘ಬೆಂಗಳೂರು ಕ್ಲಬ್’ ಸ್ಥಾಪನೆ ಆಯಿತು. ಅದಾದ ನಂತರ ಬೌರಿಂಗ್, ಜಿಮ್ಖಾನಾ, ಆಂಗ್ಲೋ ಸರ್ವಿಸ್ ಕ್ಲಬ್ಗಳು ಸಾಲು ಸಾಲಾಗಿ ಸ್ಥಾಪನೆಯಾದವು. ಆದರೆ ಈ ಕ್ಲಬ್ಗಳು ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗಾಗಿಯೇ ಇದ್ದವು. ಭಾರತೀಯರಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ಹೀಗಾಗಿ ಬಸವನಗುಡಿ, ಮಲ್ಲೇಶ್ವರದಲ್ಲಿ ಸಹಕಾರಿ ತತ್ವದಡಿ ಸೆಂಚುರಿ ಕ್ಲಬ್ಗಳು ಸ್ಥಾಪನೆಯಾದವು.
1895ರ ಮೇ 1ರಂದು ‘ಟೆಲಿಗ್ರಾಫ್ ರಿಕ್ರಿಯೇಷನ್ ಕ್ಲಬ್’ ಆರಂಭಗೊಂಡಿತು. ವಾಚನಾಲಯ, ಟೆನಿಸ್ ಕೋರ್ಟ್, ಇಸ್ಪೀಟ್ ಟೇಬಲ್, ಕಾಫಿಶಾಪ್ ಹೊಂದಿರುವ ಸುಸಜ್ಜಿತ ಕ್ಲಬ್ ಅದಾಗಿತ್ತು. ಇದೇ ಅವಧಿಯಲ್ಲಿ ಕೆ.ಎಸ್. ಕೃಷ್ಣಯ್ಯರ್ ಅವರು ‘ಬೆಂಗಳೂರು ಸ್ಟಡಿ ಕ್ಲಬ್’ ಆರಂಭಿಸಿದರು. ಉಪನ್ಯಾಸ, ಚರ್ಚೆ, ಅಧ್ಯಯನ ಸೇರಿದಂತೆ ಅನೇಕ ಬೌದ್ಧಿಕ ಚಟುವಟಿಕೆಗಳ ತಾಣವಾಗಿತ್ತು ಆ ಕ್ಲಬ್.
ಬೆಂಗಳೂರು ಕ್ಲಬ್: ‘ಬೆಂಗಳೂರು ಯುನೈಟೆಡ್ ಸರ್ವಿಸ್ ಕ್ಲಬ್’ ಎನ್ನುವ ಹೆಸರಿನಲ್ಲಿ ಆರಂಭವಾದ ಬೆಂಗಳೂರು ಕ್ಲಬ್, ರಾಷ್ಟ್ರದ 2ನೇ ಅತ್ಯಂತ ಹಳೆಯ ಇಂಗ್ಲಿಷ್ ಕಂಟ್ರಿಕ್ಲಬ್ ಸಂಪ್ರದಾಯದ ಕ್ಲಬ್ ಎನ್ನುವ ಹೆಗ್ಗಳಿಕೆಯನ್ನೂ ಹೊಂದಿದೆ. ಇದರಲ್ಲಿ ವೇಷ–ಭೂಷಣಗಳ ಬಗ್ಗೆ ಕಟ್ಟುನಿಟ್ಟಿನ ನಿಯಮಗಳಿದ್ದವು. ಈ ಕಾರಣಕ್ಕಾಗಿಯೇ ಅಲ್ಲಿ ಅನೇಕ ವರ್ಷಗಳ ಕಾಲ ಭಾರತೀಯರಿಗೆ ಪ್ರವೇಶವೇ ಇರಲಿಲ್ಲ. ಆದರೆ ಈ ಕ್ಲಬ್ ಪ್ರವೇಶಿಸಿದ ಮೊದಲ ಭಾರತೀಯ ಎಂದರೆ ಮೈಸೂರು ಮಹಾರಾಜರು. ಅದರಲ್ಲಿ ಮಹಿಳೆಯರಿಗೆಂದೇ ‘ಡೋವ್ಕಾಟ್’ ಎನ್ನುವ ಪ್ರತ್ಯೇಕ ವ್ಯವಸ್ಥೆಯಿತ್ತು. ಆಗಿನ ಪ್ರವೇಶ ದರ ₹100. ವಾರ್ಷಿಕ, ತಾತ್ಕಾಲಿಕ ಮತ್ತು ಆಜೀವ ಸದಸ್ಯತ್ವಗಳಿದ್ದವು. 1946ರ ನಂತರ ಈ ಕ್ಲಬ್ ಸಾರ್ವಜನಿಕರಿಗೆ ಮುಕ್ತವಾಯಿತು. ಇಂದಿಗೆ ಇದು ಆಧುನಿಕ ಸುಸಜ್ಜಿತ ಕ್ಲಬ್ ಆಗಿದೆ. ಇಂದಿನ ಸದಸ್ಯತ್ವ ಶುಲ್ಕ ₹ 30 ಸಾವಿರ.
ಬೌರಿಂಗ್ ಇನ್ಸ್ಟಿಟ್ಯೂಟ್: 20ನೇ ಶತಮಾನದ ಆರಂಭದ ವೇಳೆಗೆ ರಾಷ್ಟ್ರದ ಅತ್ಯುತ್ತಮ ಕ್ಲಬ್ ಎಂದು ಖ್ಯಾತವಾಗಿದ್ದು ಬೌರಿಂಗ್ ಇನ್ಸ್ಟಿಟ್ಯೂಟ್. ಸಾಂಸ್ಕೃತಿಕ ಉದ್ದೇಶಗಳನ್ನಿಟ್ಟುಕೊಂಡು ಸ್ಥಾಪನೆಯಾಗಿದ್ದ ಈ ಕ್ಲಬ್, ಯುದ್ಧ ಸಮಯದಲ್ಲಿ ಆಂಗ್ಲ ಸೈನಿಕರಿಗೆ ಸೇವೆ ಸಲ್ಲಿಸುವ ‘ಆಂಗ್ಲೊ ಇಂಡಿಯನ್ ಕ್ಲಬ್’ ಆಗಿ ರೂಪ ಪಡೆಯಿತು.
ಸ್ವಾತಂತ್ರ್ಯಪೂರ್ವ ಕ್ಲಬ್ಗಳು
ಸ್ವಾತಂತ್ರ್ಯಪೂರ್ವ ಕಾಲದ ಕ್ಲಬ್ಗಳಲ್ಲಿ ಮೊದಲು ನೆನಪಿಗೆ ಬರುವುದು ಬೆಂಗಳೂರು ಜಿಮ್ಖಾನಾ ಕ್ಲಬ್, ಬೆಂಗಳೂರು ಲೇಡೀಸ್ ಅಸೋಸಿಯೇಷನ್, ಲಾ ಅಸೋಸಿಯೇಷನ್, ಟ್ರೇಡರ್ಸ್ ಅಸೋಸಿಯೇಷನ್, ಯುನೈಟೆಡ್ ಸರ್ವಿಸ್ ಲೈಬ್ರರಿ, ಕ್ರಿಶ್ಚಿಯನ್ ಇನ್ಸ್ಟಿಟ್ಯೂಟ್, ಹಿಮಾಲಯ ಕ್ಲಬ್ ಇವೆಲ್ಲವೂ ಒಂದೊಂದಾಗಿ ಸೇರಿಕೊಂಡವು.
ಭಾರತೀಯ ಕ್ಲಬ್ಗಳು
ಮೊದಲಿನ ಅನೇಕ ಕ್ಲಬ್ಗಳು ಭಾರತೀಯ ರೀತಿ ನೀತಿ, ಉಡುಗೆ–ತೊಡುಗೆಗಳಿಂದ ಬಹಳ ಭಿನ್ನವಾದ ಸಂಸ್ಕೃತಿಯನ್ನು ಹೊಂದಿದ್ದವು. ಹೀಗಾಗಿ ಭಾರತೀಯ ವಾತಾವರಣವಿರುವ ಕ್ಲಬ್ಗಳ ಸ್ಥಾಪನೆಗೆ ಅನೇಕ ಪ್ರಯತ್ನಗಳು ನಡೆದವು. 1905ರಲ್ಲಿ ಒಂದು ತಗಡಿನ ಶೆಡ್ನಲ್ಲಿ ‘ಸೆಕ್ರೆಟೇರಿಯೇಟ್ ಕ್ಲಬ್’ ಆರಂಭವಾಯಿತು. ಇಲ್ಲಿ ಮದ್ಯ, ಪಾಶ್ಚಾತ್ಯ ಮಾದರಿಯ ನೃತ್ಯ, ಅವರ ಆಹಾರ ಪದ್ಧತಿ ಯಾವುದಕ್ಕೂ ಅವಕಾಶವಿರಲಿಲ್ಲ. ಸಂಪೂರ್ಣ ಭಾರತೀಯ ವಾತಾವರಣವಿತ್ತು. ನಂತರ ಇದೇ ರೀತಿಯ ಭಾರತೀಯ ವಾತಾವರಣವಿರುವ ಸಾಲು ಸಾಲು ಕ್ಲಬ್ಗಳು ಬೆಳೆದವು.
1906ರಲ್ಲಿ ಬಸವನಗುಡಿ ಕ್ಲಬ್, 1916ರಲ್ಲಿ ‘ಸೆಂಚುರಿ ಕ್ಲಬ್’, 1929ರಲ್ಲಿ ಮಲ್ಲೇಶ್ವರ ಕ್ಲಬ್ಗಳು ಆರಂಭವಾದವು. ಇಂದು ವಿಜಯನಗರ, ಇಂದಿರಾನಗರ, ಕೋರಮಂಗಲ, ಜಯನಗರ ಹೀಗೆ ಹಲವು ಬಡಾವಣೆಗಳಲ್ಲಿ ಕ್ಲಬ್ಗಳು ಇವೆ. ಕೆಲವು ಕಡೆ ಆಯಾ ಬಡಾವಣೆಗಳ ನಿವಾಸಿಗಳಿಗೆ ಮಾತ್ರ ಸದಸ್ಯರಾಗುವ ಅವಕಾಶವಿದೆ. ಕೆಲವು ಕ್ಲಬ್ಗಳು ಸಾಹಿತ್ಯಿಕ–ಸಾಂಸ್ಕೃತಿಕ ಉದ್ದೇಶ ಹೊಂದಿದ್ದರೆ, ಇನ್ನು ಕೆಲವು ಕ್ರೀಡಾ ಕ್ಲಬ್ಗಳೂ ಇವೆ. ಮೋಜಿನ ಕೂಟಗಳೂ ಸಾಕಷ್ಟು ಸಂಖ್ಯೆಯಲ್ಲಿ ಬೆಳೆದಿವೆ. ಆದಾಗ್ಯೂ ಕೆಲ ಪ್ರತಿಷ್ಠಿತ ಕ್ಲಬ್ಗಳಲ್ಲಿ ಸದಸ್ಯತ್ವ ಹೊಂದುವುದು ಈಗಲೂ ಕಷ್ಟ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.