ಗುರುವಾರ , ಏಪ್ರಿಲ್ 2, 2020
19 °C
ಅವರವರ ಭಾವಕ್ಕೆ ತಕ್ಕಂತೆ ಆಚರಿಸಲಾಗುತ್ತಿರುವ ಮಹಿಳಾ ದಿನದ ಮೂಲ ಉದ್ದೇಶದ ಸ್ಮರಣೆ

ಕ್ಲಾರಾ ಜೆಟ್‌ಕಿನ್‌ ಮತ್ತು ಮಹಿಳಾ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಲಾರಾ ಜೆಟ್‌ಕಿನ್‌ ಮತ್ತು ಮಹಿಳಾ ದಿನ

ಮಹಿಳಾ ದಿನಾಚರಣೆ ಬಂದೇ ಬಿಟ್ಟಿತು. ಅಂಗಡಿ ಮುಂಗಟ್ಟುಗಳಿಂದ ಹಿಡಿದು ಪತ್ರಿಕೆ, ಟಿ.ವಿ., ರೇಡಿಯೊ, ಕಚೇರಿ-ಕಾರ್ಖಾನೆಗಳು, ಎಲ್ಲೆಲ್ಲೂ  ಸಡಗರ.ಇದರ ಮಧ್ಯದಲ್ಲೇ ಮಹಿಳಾ ಚಳವಳಿಗಾರರಿಗೂ ತಮ್ಮ ಹಕ್ಕೊತ್ತಾಯಗಳ ಅಭಿವ್ಯಕ್ತಿಯ ಕಾರ್ಯಕ್ರಮಗಳಿಗೊಂದಿಷ್ಟು ‘ತಾವು’. ಈ ಸಂಭ್ರಮ, ಸಡಗರ ಒಮ್ಮೆ ಹಬ್ಬವನ್ನು ನೆನಪಿಸಿದರೆ, ಮತ್ತೊಮ್ಮೆ ವ್ಯಾಲೆಂಟೈನ್ ದಿನದಂತೆ ಪಾರ್ಟಿ, ಮೋಜಿನ ಸಂದರ್ಭಕ್ಕೂ ಎಡೆ ಮಾಡಿಕೊಟ್ಟಿದೆ.ಪುರುಷ ಬಂಧುಗಳಿಗೆ, ಸ್ನೇಹಿತರಿಗೆ ತಮ್ಮ ನಡುವಿನ ಹೆಂಗಳೆಯರಿಗೆ ಪ್ರೀತಿ, ವಿಶ್ವಾಸವನ್ನು ತೋರ್ಪಡಿಸಲು  ಇದೊಂದು ಅವಕಾಶ. ‘ಹೆಣ್ಣೇ ಎಂದರೆ ಇಷ್ಟೇ ಸಾಕೆ?’ಎನ್ನುವ ಮಹಿಳಾವಾದಿಗಳು ಹೆಣ್ಣಿನ ಸಾಮರ್ಥ್ಯದ ಅನಂತ ಮುಖವನ್ನು ಬಿಚ್ಚಿಡಲು ಈ ದಿನವನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ.ಮಹಿಳಾ ದಿನಾಚರಣೆಯೋ, ಮಹಿಳಾ ಸಂಭ್ರಮಾಚರಣೆಯೋ-ಒಟ್ಟಿನಲ್ಲಿ  ಅಂತರರಾಷ್ಟ್ರೀಯ ಮಹಿಳಾ ದಿನ ಬಂದಾಗೊಮ್ಮೆ ನೆನಪಾಗುವ ಕ್ಲಾರಾ ಜೆಟ್‌ಕಿನ್‌ಳನ್ನು  ನೆನೆಸಿಕೊಂಡಾಗ ನಾನು ಜರ್ಮನಿಗೆ ಹೋದದ್ದು ನೆನಪಾಗುತ್ತದೆ.ಎರಡು ವರ್ಷಗಳ ಹಿಂದೆ ಜರ್ಮನಿಗೆ ಹೋಗಿದ್ದಾಗ ಮಹಿಳಾ ದಿನಕ್ಕೆ  ಕಾರಣಳಾದ ಕ್ಲಾರಾಳ ನೆನಪನ್ನು ತರುವ ಅವಳು ವಾಸಿಸಿದ್ದ ಮನೆಯನ್ನು ನೋಡುವ ಉತ್ಸುಕತೆಯಿಂದ ಅಲೆದಾಡಿದೆ. ಬದಲಾದ ಇಂದಿನ ಜರ್ಮನಿಯ ರಾಜಕೀಯ ಪರಿಸರದಲ್ಲಿ ಅವಳನ್ನು ನೆನಪಿಸಿಕೊಳ್ಳುವವರೂ ಕಡಿಮೆ. ಆದ್ದರಿಂದ ಅವಳಿಗೆ ಸಂಬಂಧಪಟ್ಟ ಮಾಹಿತಿ ನನಗೆ ಸಿಗುವುದು ದುಸ್ತರವೇ ಆಯಿತು.ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹುಡುಕಾಟ ನಡೆಸಿದಾಗ ಬರ್ಲಿನ್‌ನ ಉತ್ತರ ಗಡಿಗೆ 3 ಕಿಲೋ ಮೀಟರ್ ದೂರದಲ್ಲಿರುವ ಬ್ರಾಡೆನ್‌ಬರ್ಗ್‌ನಲ್ಲಿನ ಬಿರ್ಕೆನ್‌ವೆರ್ಡರ್‌ನಲ್ಲಿ ಕ್ಲಾರಾ ಜೆಟ್‌ಕಿನ್‌ಳ ಮ್ಯೂಸಿಯಂನ್ನು ಕಡೆಗೂ ಪತ್ತೆ ಹಚ್ಚಿ ಸಂಭ್ರಮಿಸಿದೆ. ಈಗ ಮುಖ್ಯವಾಗಿ ಗ್ರಂಥ ಭಂಡಾರವಾಗಿಯಷ್ಟೇ ಕಾರ್ಯ ನಿರ್ವಹಿಸುತ್ತಿರುವ ಈ ಮನೆಯಲ್ಲಿ ಕ್ಲಾರಾ 1929ರಿಂದ 1932ರವರೆಗೆ  ವಾಸವಾಗಿದ್ದಳು. ಕ್ಲಾರಾಳನ್ನು ಹುಡುಕಿಕೊಂಡು ಇಲ್ಲಿ ಬರುವವರು ಕಡಿಮೆಯೇ.ಅದರಲ್ಲೂ ಭಾರತದಿಂದ ಹೋದ ನಮ್ಮನ್ನು ನೋಡಿ ಅಲ್ಲಿನ ಮುಖ್ಯಸ್ಥೆ ಬಹಳ ಆಶ್ಚರ್ಯಪಟ್ಟಳು. ಪ್ರತಿ ಸೋಮವಾರ ಅಲ್ಲಿ ಕೆಲವು ಮಹಿಳೆಯರು ಸಭೆ ಸೇರುವುದು ವಾಡಿಕೆ. ನಾವು ಹೋಗಿದ್ದ ಸೋಮವಾರವೂ ಅಲ್ಲಿ ಸಭೆ ಮಾಡಲೆಂದು ಮಹಿಳೆಯರು ಆಗಮಿಸಿದರು. ಅವರ ಸಭೆಯ ವೈಖರಿ ನಮ್ಮ ಲೇಡೀಸ್ ಕ್ಲಬ್‌ನ ಚಟುವಟಿಕೆಯಂತಿತ್ತು.ಅವರೂ ಮ್ಯೂಸಿಯಂ ನೋಡಲೆಂದೇ ಭಾರತದಿಂದ ಹೋದ ನಮ್ಮನ್ನು ನೋಡಿ ಆಶ್ಚರ್ಯಪಟ್ಟರು!

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತೆ ಆರಂಭವಾದ ಮಹಿಳಾ ದಿನಾಚರಣೆ ಇಂದು ಸಂಭ್ರಮಾಚರಣೆಯಾಗಿರುವ ಬದಲಾವಣೆಯನ್ನು ನೆನೆಸಿಕೊಳ್ಳಲು ಜರ್ಮನಿಯ ಕ್ಲಾರಾಳ ಇಂದಿನ ಮನೆ ಒಂದು ನೆಪವಾದರೂ ಅವರವರ ಭಾವಕ್ಕೆ ತಕ್ಕಂತೆ ಆಚರಿಸಲ್ಪಡುತ್ತಿರುವ ಮಹಿಳಾ ದಿನದ ಮೂಲ ಉದ್ದೇಶವನ್ನು ಇಲ್ಲಿ ಸ್ಮರಿಸಬೇಕೆನ್ನಿಸುತ್ತಿದೆ.ಅಂತರರಾಷ್ಟ್ರೀಯ ಮಹಿಳಾ ದಿನವು ಹುಟ್ಟಿದ ಸಂದರ್ಭವು ಪ್ರಕ್ಷುಬ್ಧವಾಗಿತ್ತು. 1910ಕ್ಕೆ ಮುಂಚೆ ಇಪ್ಪತ್ತನೇ ಶತಮಾನದ ಆರಂಭದಿಂದಲೇ ಕೈಗಾರಿಕೋದ್ಯಮವು ಅಭಿವೃದ್ಧಿ ಹೊಂದುತ್ತಿದ್ದ ದೇಶಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ಕೆಲಸಗಳು ಲಿಂಗಸಂಬಂಧಿಯಾಗಿದ್ದವು. ಹತ್ತಿಗಿರಣಿ, ಗೃಹಕೃತ್ಯದ ಸೇವೆಗಳು  ಮುಂತಾದೆಡೆಗಳಲ್ಲಿ ದುಡಿಮೆಯ ಸ್ಥಿತಿ ಶೋಚನೀಯವಾಗಿತ್ತು.ಹೆಂಗಸರಿಗೆ ದೊರಕುತ್ತಿದ್ದ ಕೂಲಿಯಂತೂ ತುಂಬಾ ಕಡಿಮೆ. ಆಗ ಮಹಿಳೆಯರು ರಾಜಕೀಯವಾಗಿ ಸಂಘಟಿತರಾಗತೊಡಗಿದರು. ಬ್ರಿಟನ್, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಸ್ವಲ್ಪಮಟ್ಟಿಗೆ ಸಮಾಜದ ಎಲ್ಲ ಸ್ತರದ ಮಹಿಳೆಯರು ಮತದಾನದ ಹಕ್ಕಿಗಾಗಿ ಹೋರಾಡತೊಡಗಿದ್ದರು.1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.

1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದಾಗ ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು.ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನದಲ್ಲಿ ಚರಿತ್ರಾರ್ಹ ಸಭೆಯೊಂದು ನಡೆಯಿತು. ಅಲ್ಲಿನ ಕಾರ್ಮಿಕರ ಅಸೆಂಬ್ಲಿ ಹಾಲ್‌ನಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದಂತೆ ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ನೆರೆದಿದ್ದರು.ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ನಿರ್ಣಯ ಮಂಡಿಸಿ ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳ ಸಮ್ಮತಿಯನ್ನು ಸರ್ವಾನುಮತದಿಂದ ಪಡೆದುಕೊಂಡಳು.ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ  ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಮಹಿಳಾ ದಿನ ಆರಂಭದಲ್ಲಿ ದುಡಿಯುವ ಮಹಿಳೆಯರ ದಿನವಾಗಿ ಆರಂಭವಾದರೂ ಅದು ತನ್ನ ಅರ್ಥ ಮತ್ತು ಕಾರ್ಯವ್ಯಾಪ್ತಿಯಲ್ಲಿ ಎಲ್ಲ ಮಹಿಳೆಯರ ದಿನವಾಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ, ಮಹಿಳೆ ಮತ್ತು ದುಡಿಮೆ ಎಂಬುದು ಎರಡೂ ಒಟ್ಟಾಗಿಯೇ ಸಾಗುವ ಪದಗಳು.ಮನೆಯ ಒಳಗೆ ದುಡಿಯಲಿ, ಇಲ್ಲವೆ ಹೊರಗೆ ದುಡಿಯಲಿ ಎಲ್ಲ ಮಹಿಳೆಯರೂ ದುಡಿಯುವ ಮಹಿಳೆಯರೇ. ಮನೆಯೊಳಗೆ ದುಡಿಯುವ ಮಹಿಳೆಯರ ದುಡಿಮೆಗೆ ಉತ್ಪನ್ನದ ಮೌಲ್ಯವಿಲ್ಲದಿರುವುದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ. ಹೀಗಾಗಿ ಮಹಿಳೆಯರನ್ನು ಮತ್ತು ಅವರ ಎಲ್ಲ ರೀತಿಯ ದುಡಿಮೆಯನ್ನು ಗುರುತಿಸುವ, ಆ ಮೂಲಕ ಅವರ ಅಸ್ಮಿತೆಗೆ ಬೆಲೆಕಟ್ಟುವ ದಿನವಾಗಿಯೂ ಮಹಿಳಾ ದಿನದ ಮಹತ್ವ ಹೊಂದಿದೆ.ಭಾರತದಲ್ಲಿ ಮಹಿಳಾ ದಿನದ ಆಚರಣೆ ವ್ಯಾಪಕವಾಗಿ ಆರಂಭವಾದುದರ ದಾಖಲೆಯನ್ನು ನಿಶ್ಚಿತವಾಗಿ ಗುರುತಿಸುವುದು ಸ್ವಲ್ಪ ಕಷ್ಟವಾದರೂ 1960ರಲ್ಲಿ ವಿಮೆನ್ಸ್ ಇಂಟರ್ ನ್ಯಾಷನಲ್ ಡೆಮಾಕ್ರಟಿಕ್ ಫೆಡರೇಷನ್ ಅಂತರರಾಷ್ಟ್ರೀಯ ಮಹಿಳಾ ದಿನದ ಸುವರ್ಣ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದಾಗ ಭಾರತದಲ್ಲೂ ಹಲವಾರು ರಾಜ್ಯಗಳಲ್ಲಿ ಈ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿಶ್ವಸಂಸ್ಥೆಯು ನೀಡಿದ ಕರೆಯ ಮೇರೆಗೆ 1975ನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಆಚರಿಸುವಲ್ಲಿ ಭಾರತವೂ ಹಿಂದೆ ಬೀಳಲಿಲ್ಲ. ಈ ಮಹಿಳಾ ವರ್ಷ ದಶಕವಾಗಿ ವಿಸ್ತಾರಗೊಂಡಾಗ ಮಹಿಳಾಪರ ವಿಷಯಗಳಿಗೆ, ಸಮಸ್ಯೆಗಳಿಗೆ ಸಾರ್ವಜನಿಕರ ಮನಸ್ಸಿನ ಮೇಲೆ ಹೆಚ್ಚು ಒತ್ತು ಬಿತ್ತು. ಈ ದಶಕದಲ್ಲಿ ನಡೆದ ಬಿರುಸಿನ ಮಹಿಳಾ ಚಟುವಟಿಕೆಗಳು ಮಹಿಳಾ ದಿನಾಚರಣೆಯನ್ನು, ಅದರ ಪ್ರಾಮುಖ್ಯತೆಯನ್ನು ವಿಶೇಷವಾಗಿ ಬಿಂಬಿಸಿದವು.

ಅತ್ಯಾಚಾರ ಮತ್ತು ವರದಕ್ಷಿಣೆ ವಿರೋಧಿ ಚಟುವಟಿಕೆಗಳು ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ತಮ್ಮ ಚಳವಳಿಯ ವಿಸ್ತರಣೆಯಾಗಿ ಮಾಡಿಕೊಂಡವು. ಮಹಿಳೆಯರಿಗೆ ಅಗತ್ಯವಾದ ಕಾನೂನಿನಲ್ಲಿ ಸುಧಾರಣೆ ಮತ್ತು ಪ್ರಗತಿಪರ ಕಾನೂನುಗಳಿಗಾಗಿ ಬೇಡಿಕೆ ಮಹಿಳಾದಿನದ ಬೇಡಿಕೆಗಳಾದವು. ಈ ಮಹಿಳಾ ಸಂಘಟನೆಗಳ ಕಾರ್ಯವೈಖರಿ ರಾಜಕೀಯ ಪಕ್ಷಗಳ ಮೇಲೂ ಪ್ರಭಾವ ಬೀರಿತು ಹಾಗೂ ಸರ್ಕಾರವು ಇದನ್ನು ಗಂಭೀರವಾಗಿ ಸ್ವೀಕರಿಸಿತು. ಕಳೆದ ಕೆಲವು ವರ್ಷಗಳಿಂದೀಚೆಗೆ ಮಹಿಳಾ ದಿನಾಚರಣೆ ಸರ್ಕಾರಿ ಕಾರ್ಯಕ್ರಮಗಳ ಒಂದಂಗವಾಗಿದೆ.ವಿಶ್ವ ಮಹಿಳಾ ದಿನಾಚರಣೆಯ ಪರಿಕಲ್ಪನೆಯನ್ನು ರೂಪಿಸಿ, ಅದರ ಅನುಷ್ಠಾನಕ್ಕಾಗಿ ಒತ್ತಾಯಿಸಿ, ಮಹಿಳಾ ದಿನಾಚರಣೆಯ ಹುಟ್ಟಿಗೆ ಕಾರಣಳಾದ ಕ್ಲಾರಾ ನೂರೈದು ವರ್ಷಗಳ ಹಿಂದೆ ಸಾರ್ವತ್ರಿಕ ಮಹಿಳಾದಿನದ ಹಕ್ಕಿನ ಹೋರಾಟಕ್ಕೆ ಈ ದಿನಾಚರಣೆಯನ್ನು ಬಳಸಿಕೊಂಡಳು. ಅದಲ್ಲದೆ ಮಹಿಳಾ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ರಾಜಕೀಯ ಅಜೆಂಡಾ ಮಾಡುವಲ್ಲಿ ಈ ದಿನಾಚರಣೆ ನಾಂದಿ ಹಾಡಿತು.ಭಾರತದಲ್ಲೂ ಆರಂಭದ ದಿನಗಳ ಮಹಿಳಾ ದಿನಾಚರಣೆ ಇಂತಹುದೇ ಗಂಭೀರ ಆಶಯವನ್ನುತನ್ನೊಳಗೆ ಇಟ್ಟುಕೊಂಡಿದ್ದರೂ, ಕಳೆದ ಕೆಲವು ವರ್ಷಗಳಿಂದೀಚೆಗೆ ಜಾಗತೀಕರಣದ ಅಬ್ಬರದ ಬಿರುಗಾಳಿಯಲ್ಲಿ ಅದರ ಮೂಲ ಆಶಯಕ್ಕೆ ಧಕ್ಕೆ ತರುವಂತಹ, ಇಲ್ಲವೆ ಮರೆತೇ ಹೋಗುವಂತಹ ಸಂದರ್ಭಗಳು ಸೃಷ್ಟಿಯಾಗುತ್ತಿವೆ.ರಾಜ್ಯೋತ್ಸವದಂತೆ ಇಡೀ ಮಾರ್ಚ್ ತಿಂಗಳು ನಡೆಯುವ ಈ ಕಾರ್ಯಕ್ರಮ ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲಂಟೈನ್ ಡೇಗಳಂತೆ  ಪಾರ್ಟಿ, ಮೋಜಿನ ಅಬ್ಬರದಲ್ಲಿ ಮುಳುಗಿದೆ. ಮಾರುಕಟ್ಟೆ ಜಗತ್ತಿನಲ್ಲಿ ಮಹಿಳಾ ದಿನ ಪಡೆದುಕೊಂಡ ಬಣ್ಣದ ಸ್ವರೂಪ ಈ ದಿನವನ್ನು ಸಂಭ್ರಮಾಚರಣೆಯನ್ನಾಗಿಸಿದೆ. ಸಮೂಹ ಮಾಧ್ಯಮಗಳು ಮಹಿಳಾಪರ ಕಾಳಜಿಯ ಮಹಾಪೂರವನ್ನೇ ಹರಿಸಿ ಯಾತಕ್ಕಾಗಿ ಈ ಮಹಿಳಾದಿನ? ಎಂದು ನಮಗೆ ಗಲಿಬಿಲಿಗೊಳಿಸುವುದರಲ್ಲಿ ಆಶ್ಚರ್ಯವಿಲ್ಲ. ಪತ್ರಿಕೆಗಳು, ಟಿ.ವಿ.ಚಾನೆಲ್‌ಗಳು ಸ್ತ್ರೀ ಪ್ರಧಾನವಾದ ಚಿತ್ರಗಳನ್ನು ಪ್ರದರ್ಶಿಸಿದರೂ, ಅವುಗಳ ಸಂದೇಶ ಪ್ರಶ್ನಾರ್ಹವಾದದ್ದು.ಕಣ್ಣೀರುಗರೆಯುವ ಕಥಾ ನಾಯಕಿಯರ ಹಾಗೂ ಹೆಣ್ಣಿನ ಬಗ್ಗೆ ರೂಢಿಗತ ಸಾಂಪ್ರದಾಯಿಕ ನಿಲುವನ್ನು ಪ್ರಕಟಿಸುವ ತಾಳಿ ಭಾಗ್ಯ, ಅರಿಶಿನ ಕುಂಕುಮದ ಪ್ರಾಶಸ್ತ್ಯ ಸಾರುವ ಹಳಸಲು ಚಿತ್ರಗಳು, ಇಲ್ಲವೆ ಹೊಸ ರುಚಿ, ಶೃಂಗಾರಕ್ಕೆ ನಂಬಿಕೆಯನ್ನು ಸ್ಥಿರಗೊಳಿಸುವಂತಹವು.ಭಾರತದಲ್ಲಿ ಇಂದು ಜಾಗತೀಕರಣ ಮತ್ತು ಮಾರುಕಟ್ಟೆ ಸಂಸ್ಕೃತಿ ನಮ್ಮ ಮಹಿಳಾ ಚಳವಳಿಯ ಸ್ವರೂಪವನ್ನೇ ಬದಲಾಯಿಸಿದೆ. ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳು ಮಹಿಳಾ ಸಬಲೀಕರಣವನ್ನು ತನ್ನ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತಾ ಚಳವಳಿಗಾರರನ್ನು ತಮ್ಮ ಕಾರ್ಯಕ್ರಮದ ಪ್ರಚಾರಕರನ್ನಾಗಿಸುತ್ತಿವೆ. ಇದರಿಂದಾಗಿ ಮಹಿಳೆಯರು ತಮ್ಮ ಹಕ್ಕುಗಳ ಸಮರ್ಥಕರು ಮತ್ತು ಕಾರ್ಯಕ್ರಮದ ಯೋಜಕರು ಆಗುವುದಕ್ಕಿಂತ ಫಲಾನುಭವಿಗಳ ಪಾತ್ರದಲ್ಲಿಯೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಸಂಸ್ಕೃತಿಗೆ ಮಹಿಳೆ ಸರಕಾಗುತ್ತಿದ್ದಾಳೆ. ರಾಜಕಾರಣಿಗಳಿಗೆ ವೋಟಿನ ಬ್ಯಾಂಕಾಗಿ, ಅಧಿಕಾರಸ್ಥರಿಗೆ ಸಬಲೀಕರಣಕ್ಕೊಳಪಡಿಸಬೇಕಾದ ಸಾಮಗ್ರಿಯಾಗುತ್ತಿದ್ದಾಳೆ. ಈ ಸಂದರ್ಭದ ಮಹಿಳಾ ದಿನಾಚರಣೆಯು ಗಂಭೀರ ಸವಾಲುಗಳನ್ನೆದುರಿಸಬೇಕಾಗಿದೆ.

ನಿರ್ಭಯಾ ಪ್ರಕರಣದ ನಂತರ ಮಹಿಳಾ ಸಂಘಟನೆಗಳು ಹೆಚ್ಚು ಸಂಘಟಿತರಾಗಿ ಮಹಿಳಾ ದಿನಾಚರಣೆಯನ್ನು ವ್ಯಾಪಕವಾಗಿ ನಡೆಸುವ ಮೂಲಕ ಅದಕ್ಕೊಂದು ಗಾಂಭೀರ್ಯದ ರೂಪಕೊಡಲು ಶ್ರಮಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ನಡುವೆಯೂ ಹೆಣ್ಣು ಸಶಕ್ತಳಾಗಿ ಎದ್ದು ನಿಲ್ಲುತ್ತಿದ್ದಾಳೆ. ತನ್ನ ಅಸ್ಮಿತೆಗಾಗಿ ಹುಡುಕಾಟ ನಡೆಸಿದ್ದಾಳೆ. ಆದ್ದರಿಂದ ಮಹಿಳಾ ದಿನಾಚರಣೆಯೋ, ಸಂಭ್ರಮಾಚರಣೆಯೋ ಏನೇ ಆಗಲಿ ಅದು ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದರೆ ಸಾಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)