ಸೋಮವಾರ, ಮಾರ್ಚ್ 8, 2021
31 °C

ಕ್ಷಮಿಸಿ, ಈಗ ಆಗಲ್ಲ!

ಸತ್ಯೇಶ್ ಎನ್. ಬೆಳ್ಳೂರ್ (ಬೋರ್ಡ್ ರೂಮಿನ ಸುತ್ತ ಮುತ್ತ) Updated:

ಅಕ್ಷರ ಗಾತ್ರ : | |

ಕ್ಷಮಿಸಿ, ಈಗ ಆಗಲ್ಲ!

ಬೇಡವಿದು ಎಂದೆನಲು ಅಂಜಿಕೆಯು ನಿನಗೇಕೆ?/

ಮಾಡಲಾರೆನು ಎನಲು ಸಂಕೋಚವೇಕೆ? //

ಬಾಡಿಸದೆ ಮನಸನ್ನು ಸಹಚರರ ಆಣತಿಗೆ /

ಆಡು ಮಾಡುವುದನ್ನೆ -- ನವ್ಯಜಿವಿ //

ಭಾನುವಾರ ಬೆಳಿಗ್ಗೆ ಮಗನೊಡನೆ ಇಂದು ಕ್ರಿಕೆಟ್ ಆಡುವುದಾಗಿ ಹಿಂದಿನ ದಿನವೇ ಇತ್ಯರ್ಥ ಮಾಡಿದ್ದೀರಿ. ಕಾಫೀ ಹೀರುತ್ತ ಕುಳಿತಿದ್ದಾಗ ಚರದೂರವಾಣಿ ಜೀವಂತವಾಗುತ್ತದೆ. ಮೈಸೂರಿನಿಂದ ನಿಮ್ಮ ಕಾಲೇಜ್ ಗೆಳೆಯ ಯಾವುದೋ ಮದುವೆಗೆ ಬಂದಿದ್ದಾನೆ.ಅವನೊಡನೆ ನಿಮ್ಮ ಇನ್ನಿತರ ಸ್ನೇಹಿತರೂ ಬಂದಿದ್ದಾರೆ. ನಿಮ್ಮನ್ನು ಬೆಳಿಗ್ಗೆ ಮದುವೆ ಮನೆಗೇ ಬರುವಂತೆ ಆಹ್ವಾನಿಸಿದ್ದಾನೆ. ಅವನಿಗೇನು ಹೇಳುವುದು. ಒಪ್ಪಿಬಿಟ್ಟರೆ ಮಗನಿಗೆ ಬೇಸರವಾದೀತು. ಒಪ್ಪದಿದ್ದರೆ ಅವನು ತಪ್ಪು ತಿಳಿದಾನು. ಒಲ್ಲದ ಮನಸ್ಸಿನಿಂದಲೇ ಒಂದು ನಿರ್ಧಾರಕ್ಕೆ ಬರುತ್ತೀರಿ. `ಆಯಿತು ಸಿಗುತ್ತೇನೆ~ ಎಂದು ಗೆಳೆಯನಿಗೆ ಹೇಳುವಾಗ ಮುಂದೆ ಕುಳಿತ ಮಗನನ್ನು ದಿಟ್ಟಿಸಲು ಅದೇನೋ ಹಿಂಜರಿಕೆ.ಮಗನ ಜೊತೆ ಆ ದಿನ ಕ್ರಿಕೆಟ್ ಆಡಲೆಂದು ನೀವೂ ಬಹಳ ಕಾತರದಲ್ಲಿದ್ದೀರಿ. ಅದು ನಿಮಗೆ ಅತ್ಯಂತ ಖುಷಿ ಕೊಡುವ ಚಟುವಟಿಕೆಯೂ ಹೌದು. ಕಚೇರಿಯಲ್ಲಿ ಕುಳಿತಿದ್ದೀರಿ. ನಿಮ್ಮ ಬಾಸ್ ಕೇಳಿರುವ ವರದಿಯ ತಯಾರಿಯಲ್ಲಿದ್ದೀರಿ. ಇನ್ನೇನು ಮುಗಿದೇ ಹೋಯಿತು ಎನ್ನುವ ಹಂತದಲ್ಲಿದ್ದೀರಿ.ಆಗಲೇ ಅಲ್ಲಿಗೆ ನವಿರಾಗಿ ಬಂದು ನಿಂತಿದ್ದಾಳೆ ನಿಮ್ಮ ಆಪ್ತ ಸಹೋದ್ಯೋಗಿ. ಅವಳಿಗೆ ಅರ್ಥವಾಗದ ಕೆಲಸದ ಒಂದು ಸಮಸ್ಯೆಗೆ ನಿಮ್ಮ ಪರಿಹಾರವನ್ನು ಯಾಚಿಸಿದ್ದಾಳೆ. ಇನ್ನರ್ಧ ಗಂಟೆಯಲ್ಲಿ ರಿಪೋರ್ಟ್ ಮುಗಿಸಿ ತದನಂತರ ಅವಳಿಗೆ ಸಹಾಯ ಮಾಡುವ ಮನಸ್ಸು ನಿಮ್ಮದು. ಆದರೂ ಮುಂದೆ ನಿಂತ ಅವಳಿಗೆ ಬೇಸರಿಸಬಾರದೆಂಬ ಒಳಮನದ ತುಡಿತವೂ ಸಾಕಷ್ಟಿದೆ.ಒಲ್ಲದ ಮನಸ್ಸಿನಿಂದಲೇ ಒಂದು ನಿರ್ಧಾರಕ್ಕೆ ಬರುತ್ತೀರಿ. `ಆಯಿತು ನಡೆ~ ಎನ್ನುತ್ತ ಅವಳೊಡನೆ ಅವಳ ಜಾಗಕ್ಕೆ ಬಂದು ಅವಳ ಸಮಸ್ಯೆಯನ್ನು ಪರಿಹರಿಸುವಲ್ಲಿ ನಿರತರಾಗಿದ್ದೀರಿ. ನಿಮ್ಮನ್ನು ಹುಡುಕಿಕೊಂಡು ನಿಮ್ಮ ಬಾಸ್ ಈಗ ಅಲ್ಲಿಗೇ ಬಂದಿದ್ದಾರೆ. ಅವರ ಅಸಮಾಧಾನದ ಕಣ್ಣುಗಳು ತಾವು ಕೇಳಿದ್ದ ರಿಪೋರ್ಟ್ ಎಲ್ಲಿ ಎನ್ನುತ್ತ ನಿಮ್ಮನ್ನು ತೀವ್ರವಾಗಿ ಪ್ರಶ್ನಿಸಿವೆ. ನೀವೀಗ ವಿನಾಕಾರಣ ನಿರುತ್ತರರಾಗಿದ್ದೀರಿ.ಮೇಲಿನ ಎರಡೂ ಘಟನೆಗಳನ್ನು ಈಗ ಪರಾಮರ್ಶಿಸೋಣ. ಗೆಳೆಯನ ಕರೆ ಬಂದಾಗ ನೀವಾಗಲೇ ಮಗನೊಡನೆ ಕ್ರಿಕೆಟ್ ಆಡಲು ನಡೆಸಿರುವ ಸಿದ್ಧತೆಗಳನ್ನು ವಿವರಿಸಬಹುದಿತ್ತು.ಇಬ್ಬರಿಗೂ ಆಗುವುದಾದರೆ ದಿನದ ಮತ್ತೊಂದು ಸಮಯದಲ್ಲಿ ಭೇಟಿಯಾಗುವಂತೆ ಯೋಚಿಸಬಹುದಿತ್ತು. ಮಗನೊಡನೆ ಕ್ರಿಕೆಟ್ ಆಡುವುದು ನಿಮಗೆ ಅತ್ಯಂತ ಸಂತೋಷದ ವಿಷಯವಾದರೂ ನೀವದನ್ನು ಕೈಬಿಟ್ಟು ಗೆಳೆಯನಿಗೆ ಅಸ್ತು ಎಂದುಬಿಟ್ಟಿರಿ. ಯಾವುದೋ ಒತ್ತಡಕ್ಕೆ ಮಣಿದು ಬಿಟ್ಟಿರಿ.ಸಹೋದ್ಯೋಗಿ ಬಂದಾಗಲೂ ಅಷ್ಟೆ. ನಿಮ್ಮ ರಿಪೋರ್ಟ್ ಮುಗಿಸಿ ಅದನ್ನು ಬಾಸ್‌ಗೆ ಒಪ್ಪಿಸಿ ನಂತರ ಅವಳ ಸಹಾಯಕ್ಕೆ ತೆರಳಿದ್ದರೆ, ವಿಷಯ ಬೇರೆಯೇ ಇರುತ್ತಿತ್ತು. ಇದು ತಿಳಿದಿದ್ದರೂ ನೀವು ಯಾವುದೋ ಒತ್ತಡಕ್ಕೆ ಮಣಿದು ನಿಮ್ಮ ಕೆಲಸವನ್ನಲ್ಲೇ ನಿಲ್ಲಿಸಿ ಆಕೆಯ ಸಹಾಯಕ್ಕೆ ಧಾವಿಸಿಬಿಟ್ಟಿರಿ.ನೀವಾಗಿಯೇ ಕಷ್ಟಕ್ಕೆ ಸಿಕ್ಕಿಹಾಕಿಕೊಂಡು ಬಿಟ್ಟಿರಿ. ವಿಶೇಷ ಅಂದರೆ, ನಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರೆ ಆಕೆಯೂ ಅದನ್ನು ಅರ್ಥೈಸಿಕೊಳ್ಳುತ್ತಿದ್ದಳೋ ಏನೋ. ನೀವದಕ್ಕೆ ಅವಕಾಶವೇ ಕೊಡಲಿಲ್ಲ.ಈ ಎರಡೂ ಸನ್ನಿವೇಶಗಳಲ್ಲಿ ನಿಮ್ಮನ್ನು ತೊಂದರೆಗೀಡು ಮಾಡಿದ ವಿಷಯ ಒಂದೇ ಆಗಿದೆ. ಆ ಕ್ಷಣಕ್ಕೆ ನಿಮಗಿಷ್ಟವಿಲ್ಲದ ಕೆಲಸವೊಂದಕ್ಕೆ ನಿಮ್ಮನ್ನು ದೂಡಿದ ಒತ್ತಡ ಯಾವುದು ಎಂಬ ಪ್ರಶ್ನೆಗೆ ಉತ್ತರ ಬಹಳ ಕಷ್ಟ. `ಕ್ಷಮಿಸಿ, ಈಗ ಆಗಲ್ಲ~ ಎಂದು ಹೇಳುವುದಕ್ಕೆ ಆಗಲಾರದ ನಿಮ್ಮ ಪರಿಸ್ಥಿತಿಯೇ ಅದು. ನಿಮ್ಮ ನ್ಯೂನತೆ ಎಂದರೂ ತಪ್ಪಾಗಲಾರದು.ನಮ್ಮೆಲ್ಲರ ಜೀವನದಲ್ಲಿ ಈ ಪರಿಯ ಘಟನೆಗಳು ಅನೇಕ ಜರುಗಿರುತ್ತವೆ. ಗೆಳೆಯರ ಒಡನಾಟದಲ್ಲಿ, ಪ್ರಿಯತಮೆಯ ಸಂಗದಲ್ಲಿ, ಬಂಧು ಬಾಂಧವರ ಸಾಮಿಪ್ಯದಲ್ಲಿ, ಕಚೇರಿಯ ಕೋಣೆಗಳಲ್ಲಿ, ಪರಿಚಯವೇ ಇಲ್ಲದವರ ಸಂಪರ್ಕದಲ್ಲಿ - ಹೀಗೆ ಅನೇಕ ಕಡೆಗಳಲ್ಲಿ ನಮಗೆ `ಕ್ಷಮಿಸಿ, ಈಗ ಆಗಲ್ಲ~ ಎಂದು ಹೇಳುವುದಕ್ಕಾಗದೇ ತೊಂದರೆಗೆ ಸಿಕ್ಕಿಕೊಂಡ ಸನ್ನಿವೇಶಗಳು ಸಂಭವಿಸಿರುತ್ತವೆ.ಅವುಗಳನ್ನೊಮ್ಮೆ ನೆನಪಿಗೆ ತಂದುಕೊಳ್ಳಿ. ಆ ಪರಿಸ್ಥಿತಿಯಲ್ಲಿ ನೀವು ತಳೆದ ನಿರ್ಧಾರ ವಿಮರ್ಶಿಸಿ. ಆ ನಿರ್ಧಾರದಿಂದ ನೀವು ಅನುಭವಿಸಿದ ಯಾತನೆಯ ಪ್ರಮಾಣವನ್ನೊಮ್ಮೆ ಮತ್ತೆ ಕಲ್ಪಿಸಿಕೊಳ್ಳಿ. `ಕ್ಷಮಿಸಿ, ಈಗ ಆಗಲ್ಲ~ ಎಂಬ ಸರಳ ಮಾತಿನ ಹಿಂದೆ ಅಡಗಿರುವ ಆ ಪ್ರಚಂಡವಾದ ಶಕ್ತಿಯ ಅರಿವು ನಿಮ್ಮಲ್ಲಿ ಮೂಡುವುದರಲ್ಲಿ ಸಂಶಯವೇ ಇಲ್ಲ.`ಆಗಲ್ಲ ಎಂದು ತಿಳಿದಿದೆ. ಆದರೆ ಅದನ್ನು ಹೇಳಲಾಗುತ್ತಿಲ್ಲ~ ಎನ್ನುವುದೇ ನಮ್ಮೆಲ್ಲರ ಫಜೀತಿ. ಇದಕ್ಕೆ ಅನೇಕ ಕಾರಣಗಳುಂಟು. ಮತ್ತೊಬ್ಬರಿಗೆ ನೋವುಂಟಾಗಬಾರದೆಂಬ ನಿಮ್ಮ ನಿಜವಾದ ಕಾಳಜಿ ಅದಾಗಿದ್ದರೆ ಖಂಡಿತವಾಗಿಯೂ `ಆಗಲ್ಲ~ ಎನ್ನಬೇಡಿ. ಬದಲಾಗಿ `ಕ್ಷಮಿಸಿ, ಈಗ ಆಗಲ್ಲ~ ಎಂದಷ್ಟೇ ಹೇಳಿ, ಆದಷ್ಟು ಬೇಗ ಅವರ ಸಹಾಯಕ್ಕೆ ಧಾವಿಸುವುದೇ ಸೂಕ್ತ.ಇನ್ನೂ ಕೆಲವರಿರುತ್ತಾರೆ. ಅವರಿಗೆ ತಮ್ಮೆಲ್ಲ ಕೆಲಸಗಳನ್ನು ಮತ್ತೊಬ್ಬರಿಂದ ಮಾಡಿಸಿಕೊಂಡೇ ರೂಢಿ. ಅಂತಹವರಿಗೆ `ಕ್ಷಮಿಸಿ, ಈಗ ಆಗಲ್ಲ~ ಎನ್ನುವ ಬದಲಿಗೆ `ಖಂಡಿತ ಆಗಲ್ಲ~ ಎಂದೇ ಹೇಳುವುದು ಶಾಂತಿದಾಯಕವಾದೀತು!`ಆಗುತ್ತದೆ~ ಅಥವಾ `ಆಗುವುದಿಲ್ಲ~ ಎಂಬ ಎರಡು ಲೋಕರೂಢಿಯ ಮಾತುಗಳ ಹಿಂದೆ `ಸಮಯ~ ಹಾಗೂ `ಸನ್ನಿವೇಶ~ ಎಂಬ ಎರಡು ಅಗೋಚರವಾದ ಸತ್ಯಗಳುಂಟು ಎಂಬುದು ನಮ್ಮ ಮನವರಿಕೆಗೆ ಬಂದರೆ ಒಳಿತು. ಈ ಎರಡು ಸೂಕ್ಷ್ಮವಾದ ಹಾಗೂ ತಪ್ಪಿಸಿ ಕೊಳ್ಳಲಾಗದ ಅನಿವಾರ್ಯತೆಗಳ ಹಿನ್ನೆಲೆಯಲ್ಲೇ ನೀವು ನಿರ್ಧಾರ ಕೈಗೊಂಡು `ಆಗುತ್ತದೆ~ ಅಥವಾ `ಆಗುವುದಿಲ್ಲ~ ಅಥವಾ `ಆಗುವುದೇ ಇಲ್ಲ~ ಎಂಬುವುದನ್ನು ಮಾತಾಗಿಸಿದರೆ, ಪ್ರಾಯಶಃ ನೀವೆಂದೂ ತಪ್ಪು ಮಾಡಲಾರಿರಿ.ನಮ್ಮ ನಿತ್ಯಜೀವನದಲ್ಲಿ `ಆಗಲ್ಲ~ ಎನ್ನುವುದಕ್ಕೆ ಅನೇಕ ತೊಡಕುಗಳುಂಟು. ಸಮಯದ ಅಭಾವ ಎಂದೂ ಏಕಮುಖವಾಗಿದ್ದರೂ ಇಲ್ಲಿ ಸನ್ನಿವೇಶಗಳ ಪ್ರಖರತೆಯಲ್ಲಿ ವಿವಿಧತೆ ಉಂಟು. ಅದಕ್ಕೆ ಸಂಬಂಧದ ಬೆಸುಗೆಯೂ ಏರ್ಪಟ್ಟು `ಕ್ಷಮಿಸಿ. ಈಗ ಆಗಲ್ಲ~ ಎನ್ನುವುದು ಅಷ್ಟೊಂದು ಸುಲಭದ ಮಾತಾಗುವುದಿಲ್ಲ. ಇಂತಹ ವೇಳೆಗಳಲ್ಲಿ ಮುಂದಿರುವ ಎಲ್ಲ ಕೆಲಸಗಳಿಗೆ ಮಹತ್ತರ ಲೇಬಲ್ ಹಚ್ಚಿ ಅದರ ಅನುಸಾರವೇ ನಿರ್ಧರಿಸಿ ಮಾತನಾಡುವುದು ಒಂದು ಮಟ್ಟದಲ್ಲಿ ಸರಿಯಾದೀತು.ಆದರೆ, ಬೋರ್ಡ್‌ರೂಮಿನ ಸುತ್ತಮುತ್ತ ನಮಗೆ ಈ ತೊಂದರೆ ಇಲ್ಲ. ಅಲ್ಲಿ `ಸನ್ನಿವೇಶ~ ಹಾಗೂ `ಸಂಬಂಧ~ ಎಂಬ ಭೂತಗಳು ಕಾಡುವುದಿಲ್ಲ. ಅಲ್ಲಿರುವುದು `ಸಮಯ~ ಎಂಬ ಒಂದೇ ಒಂದು ಚಂಚಲತೆ.ಅದನ್ನು ಅನುಸರಿಸಿಯೇ ಸನ್ನಿವೇಶಗಳ ನಿರ್ಮಾಣ ಹಾಗೂ ಸಂಬಂಧಗಳ ಸಂಕೋಲೆ. ಈ ಸ್ಥರದಲ್ಲಿ `ಕ್ಷಮಿಸಿ. ಈಗ ಆಗಲ್ಲ~ ಎನ್ನುವುದು ಸುಲಭ. ಆದರೂ ಅದನ್ನು ಹೇಳದೆಯೇ ಇಲ್ಲಿಯೂ ಬವಣೆ ಪಡುವವರನ್ನು ನಾವು ನೋಡುತ್ತಲೇ ಇರುತ್ತೇವೆ ಕೂಡ.ಬಾಸ್ ಕೊಡುವ ಕಠಿಣವಾದ ಕೆಲಸಗಳಿಗೆ `ಕ್ಷಮಿಸಿ. ಈಗ ಆಗಲ್ಲ~ ಎನ್ನುವುದು ಕಠಿಣವೂ - ಸೂಕ್ತವೂ ಅಲ್ಲ. ನಾನಿದನ್ನು ಒಪ್ಪುತ್ತೇನೆ. ಆದರೆ, ಸಹೋದ್ಯೋಗಿಗಳು ನಮ್ಮಿಂದ ಬಯಸುವ, ನಮಗೆ ಸಮ್ಮತವಲ್ಲದ ಕೆಲಸ ಕಾರ್ಯಗಳಿಗೆ ಹಾಗೂ ನಮ್ಮ ದೃಷ್ಟಿಯಲ್ಲಿ ಪ್ರಾಮುಖ್ಯವಲ್ಲದ ಚಟುವಟಿಕೆಗಳಿಗೆ `ಕ್ಷಮಿಸಿ ಈಗ ಆಗಲ್ಲ~ ಎನ್ನುವುದು ಕಠಿಣವಾಗಿಬಿಟ್ಟರೆ, ಬದುಕು ಅಲ್ಲಸಲ್ಲದ ಒತ್ತಡಗಳಲ್ಲಿ ಸಿಲುಕಿಕೊಳ್ಳುವುದು ಖಂಡಿತ. ಕಚೇರಿಯ ಕೆಲಸಗಳನ್ನು ಮನೆಗೆ ಹೊತ್ತು ತರುವ ಪರಿಪಾಠ ಇಲ್ಲಿಂದಲೇ ಶುರು ಎಂಬುದು ತಟ್ಟನೆ ಗೋಚರಿಸದ ಒಳಸತ್ಯ.ಹಾಗಾದರೆ, `ಕ್ಷಮಿಸಿ. ಈಗ ಆಗಲ್ಲ~ ಎನ್ನುವುದಕ್ಕೆ ನಮಗೆ ಬೇಕಾದ ಅಸ್ತ್ರ ಯಾವುದು. ಅದು ನಮ್ಮದೇ ಆದ ಶಿಸ್ತು. ನಮ್ಮಲ್ಲೇ ನಮಗಿರುವ ಅದಮ್ಯ ವಿಶ್ವಾಸ. ಇವೆರಡೂ ನಮ್ಮಲ್ಲಿ ಮನೆ ಮಾಡಿಲ್ಲದಿದ್ದಾಗ, ಅದರ ಜಾಗದಲ್ಲಿ ಬೆಳೆದು ನಿಂತಿರುವ ನಮ್ಮ ಅಹಂಕಾರ, ಆಗಲ್ಲ ಎನ್ನುವ ನಮ್ಮ ನಿಲುವನ್ನು ಕಠೋರವಾಗಿ ಹೇಳಿಸುತ್ತದೆ. ಸ್ನೇಹವನ್ನು ಕಳೆದುಕೊಳ್ಳುವಂತೆ ನುಡಿಸುತ್ತದೆ.ಆದರೆ, `ಶಿಸ್ತು~ ಹಾಗೂ `ವಿಶ್ವಾಸ~ ನಮ್ಮಲ್ಲಿದ್ದಾಗ `ಕ್ಷಮಿಸಿ. ಈಗ ಆಗಲ್ಲ~ ಎನ್ನುವುದನ್ನು ಅತ್ಯಂತ ಪ್ರಾಸಬದ್ಧವಾಗಿ, ಅಂದರೆ, ಪ್ರಾಮಾಣಿಕವಾಗಿ ಹಾಗೂ ಅತ್ಯಂತ ಸರಳವಾಗಿ ತಿಳಿಸುತ್ತೇವೆ. ನಮ್ಮ ಪರಿಸ್ಥಿತಿಯನ್ನು ಇನ್ನೊಬ್ಬರು ಅರ್ಥೈಸಿಕೊಳ್ಳುವ ಹಾಗೆ ವಿವರಿಸುತ್ತೇವೆ.ನಮ್ಮ ಮಾತಿನ ಹಿಂದೆ ಅಡಗಿರುವ ಸಮಯಪ್ರಜ್ಞೆಯ ನಿಜ ಅರಿವು ಮೂಡಿಸುತ್ತೇವೆ. ಆಗ ಯಾರಿಗೂ ನೋವಾಗದ ಹಾಗೆ ಗಾಡಿ ಮುಂದೆ ಚಲಿಸುತ್ತದೆ. ಪ್ರಯಾಸವಿಲ್ಲದ ಪ್ರವಾಸದ ಪಯಣ ನಮ್ಮದಾಗುತ್ತದೆ!`ಕ್ಷಮಿಸಿ, ಈಗ ಆಗಲ್ಲ~ ಎಂಬುದು ಅತಿ ಸುಲಭದ ಮಾತು. ಆಡುವುದಕ್ಕೆ ಅಷ್ಟೇ ಕಠಿಣ. ಇದನ್ನು ನಿಮ್ಮದಾಗಿಸಿಕೊಂಡಾಗ, ಮಗನೊಡನೆ ಕ್ರಿಕೆಟ್ ಆಡುವಾಗ ಸ್ನೇಹಿತರನ್ನು ದೂರವಿಟ್ಟೆ ಎಂಬ ಪಾಪಪ್ರಜ್ಞೆ ನಿಮ್ಮನ್ನು ಕಾಡುವುದಿಲ್ಲ. ಬಾಸ್‌ನನ್ನು ಸಂತುಷ್ಟಿಗೊಳಿಸಿ ಗೆಳತಿಗೂ ಸಹಾಯವೆಸಗಿ ಮೂವರೂ ಈಗ ಕಾಫಿಡೇನಲ್ಲಿ ಕುಳಿತು ನಗುತ್ತ ಟೇಬಲ್ ಮೇಲೆ ಬರಲಿರುವ ನೊರೆಯುಕ್ತ ಕಾಫಿಯನ್ನೇ ಎದುರು ನೋಡುತ್ತಿದ್ದೀರಿ! ಒಮ್ಮೆ ಪ್ರಯತ್ನಿಸಿ.      

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.