ಶನಿವಾರ, ಮೇ 21, 2022
28 °C

ಕ್ಷೇತ್ರದಲ್ಲಿ ತುಘಲಕ್ ದರ್ಬಾರ್: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಅವರ ಇಚ್ಛಾಶಕ್ತಿಯ ಕೊರತೆಯಿಂದ ತಾಲ್ಲೂಕಿನ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡು, ತುಘಲಕ್ ದರ್ಬಾರ್ ಆರಂಭಿಸಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ. ರವೀಂದ್ರ ಆರೋಪಿಸಿದರು.ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಟ್ಟಣದ ಮತದಾರ ಸಂಪೂರ್ಣ ಜನಾದೇಶ ನೀಡಿದ್ದರು. ಅಧಿಕಾರ ದುರ್ಬಳಕೆ ಪ್ರಯೋಗಿಸಿಕೊಂಡು  ಸಚಿವ ರೆಡ್ಡಿ ಐವರು ಸದಸ್ಯರ ಸದಸ್ಯತ್ವವನ್ನು ರದ್ದಾಗುವಂತೆ ನೋಡಿಕೊಳ್ಳುವ ಮೂಲಕ ಪುರಸಭೆಯ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.ತಾ.ಪಂ.ನಲ್ಲಿಯೂ 16 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ತೀರ್ಪು ನೀಡಿದ್ದಾರೆ. ಸಚಿವ ರೆಡ್ಡಿ ನೇತೃತ್ವದಲ್ಲಿ ಕೇವಲ 7ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಆದರೂ, ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ 7ಸ್ಥಾನಗಳ ಹೊಂದಿರುವ ಬಿಜೆಪಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಅನುಕೂಲವಾಗುವಂತೆ, ಮೀಸಲಾತಿ ಹೊರಬೀಳುವಂತೆ ನೋಡಿಕೊಂಡಿರುವುದು ಕುತಂತ್ರ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಕಿಡಿಕಾರಿದರು.ಪಟ್ಟಣದ ಎರಡು ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಅಕ್ಕಪಕ್ಕದ ಮನೆಗಳನ್ನು ತೆರವುಗೊಳಿಸಿ ಒಂದೂವರೆ ವರ್ಷ ಗತಿಸಿದರೂ, ಇನ್ನೂ ಅಭಿವೃದ್ಧಿ ಕೈಗೊಳ್ಳುವಲ್ಲಿ ಸಚಿವರು ವಿಫಲವಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರಿಗೆ ಹಾಗೂ ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡುವವರೆಗೆ ಜನಸಾಮಾನ್ಯರ ಅಂತರಾಳ ಹೇಗೆ ಅರ್ಥವಾಗಬೇಕು ಎಂದು ಕುಟುಕಿದರು.ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಕೆ. ಹಾಲೇಶ್, ಕೆಪಿಸಿಸಿ ಸದಸ್ಯ ಸಿ. ಚಂದ್ರಶೇಖರ್‌ಭಟ್, ಎಪಿಎಂಸಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಮುಖಂಡರಾದ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಎಂ.ವಿ. ಅಂಜಿನಪ್ಪ, ಕೋಡಿಹಳ್ಳಿ ಭೀಮಪ್ಪ,ಎಸ್.ಆರ್. ತಿಮ್ಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.