ಮಂಗಳವಾರ, ಮೇ 24, 2022
24 °C

ಕ್ಷೌರ ಮಾಡಿಸಲು ಹೋದವನ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಕ್ಷೌರ ಮಾಡಿಸಲು ಕಟಿಂಗ್ ಸಲೂನ್‌ಗೆ ಹೋದ ದಲಿತ ವ್ಯಕ್ತಿಯೊಬ್ಬನ ಮೇಲೆ ರೇಜರ್‌ನಿಂದ ಹಲ್ಲೆ ಮಾಡಿದ ಪರಿಣಾಮ ಮೂಗು ಮತ್ತು ಹಣೆಗೆ ಪೆಟ್ಟಾಗಿರುವ ಅಮಾನವೀಯ ಘಟನೆ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.ಗ್ರಾಮದ ಚಿಕ್ಕಮಂಚಯ್ಯ ಎಂಬವರು ಈ ಸಂಬಂಧ ಕಿರುಗಾವಲು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಸಂಜೆ ಗ್ರಾಮದ ಶೃಂಗಾರ್ ಹೇರ್ ಡ್ರೆಸ್ಸರ್‌ಗೆ ಹೋಗಿ  ಕ್ಷೌರ ಮಾಡಲು ಕೇಳಿದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮಹದೇವ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.`ಅಂಗಡಿ ಮಾಲೀಕ ಮಹದೇವ ಗಿರಾಕಿ ಇದ್ದಾರೆ ಆಮೇಲೆ ಕ್ಷೌರ ಮಾಡುವುದಾಗಿ ಹೇಳಿ ಸತಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೆ ಕ್ಷೌರ ಮಾಡಲು ಕೇಳಿದಾಗ ಕ್ಷೌರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ರೊಚ್ಚಿಗೆದ್ದ ತಾವು ನಾನು ದುಡ್ಡು ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದೆ~ ಎಂದು ಹೇಳಿದ್ದಾರೆ.ಇದು ಮಾತಿಗೆ ಮಾತು ಬೆಳೆದು ಕೈಯಲ್ಲಿದ್ದ ರೇಜರ್‌ನಿಂದ ಹಲ್ಲೆ ನಡೆಸಿದರು. ಮೂಗಿಗೆ ಹಾಗೂ ಹಣೆಗೆ ಏಟು ಬಿದ್ದು ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ನಂತರ ಹೆಚ್ಚಿನಚಿಕಿತ್ಸೆಗಾಗಿ  ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆಈ ಸಂಬಂಧ ಚಿಕ್ಕಮಂಚಯ್ಯ ಅವರೇ ಅಂಗಡಿ ಮಾಲೀಕ ಮಹದೇವ ಹಾಗೂ ಅವರ ತಂದೆ ಮರಿ ಎಂಬುವರ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದು ಕಿರುಗಾವಲು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಡ್ಯ: ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಕ್ಷೌರ ಮಾಡಲು ನಿರಾಕರಿಸಿ, ಸಲೂನ್ ಮಾಲೀಕರು ಹಲ್ಲೆ ಮಾಡಿದ್ದಾರೆಎಂಬ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಬಿಎಸ್‌ಪಿ ಮತ್ತು ಎಸ್‌ಎಫ್‌ಐ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿವೆ.ಈ ಘಟನೆ ಅಮಾನವೀಯ. ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಎಸ್‌ಪಿ ಜಿಲ್ಲಾ ಸಂಯೋಜಕ ಎಂ. ಕೃಷ್ಣಮೂರ್ತಿ ಮಂಗಳವಾರ ಆಗ್ರಹಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲೆಯ ಕೆಲವೆಡೆ ಈಗಲೂ ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಕ್ಷೌರ ಮಾಡದ ಸ್ಥಿತಿ ಇದೆ. ಕ್ಷೌರ ಮಾಡಲು ನಿರಾಕರಿಸುವ ಅಂಗಡಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು. ಮಾಚಹಳ್ಳಿ ಮಹೇಶ್, ವೇಣುಗೋಪಾಲ್, ಸುಂದರ್‌ರಾಜ್ ಇದ್ದರು.ಎಸ್‌ಎಫ್‌ಐ ಪ್ರತಿಭಟನೆ 

 ಕ್ಷೌರ ಮಾಡಲು ನಿರಾಕರಿಸಿ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ಮಂಗಳವಾರ ಮಂಡ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿರು.ಇದೊಂದು ತಲೆತಗ್ಗಿಸುವ ಘಟನೆ.  ಹಲ್ಲೆಗೆ ಕಾರಣರಾದ  ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐನ ಜಿಲ್ಲಾಕಾರ್ಯದರ್ಶಿ ವಿನಯ್‌ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಸಹ ಕಾರ್ಯದರ್ಶಿ ನಾಗೇಶ್ ಮತ್ತು ಇತರರು ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದರು.ಭೇಟಿ, ಸಾಂತ್ವನ

 ಈ ನಡುವೆ, ಕಾಂಗ್ರೆಸ್ ಮುಖಂಡ ಯಮದೂರು ಸಿದ್ಧರಾಜು ಅವರು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಚಿಕ್ಕತಮ್ಮಯ್ಯ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ಘಟನೆಯ ವಿವರವನ್ನು ಪಡೆದ ಅವರು ಘಟನೆಯ ಬಗೆಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು  ಆಗ್ರಹಪಡಿಸಿದರು. ಈ ಸಂದರ್ಭದಲ್ಲಿ  ದೀಪಕ್, ಸುಂಡಹಳ್ಳಿ ನಾಗರಾಜು, ಆನಂದ್ ಅವರೂ ಹಾಜರಿದ್ದರು.ಶಾಸಕರ ಭೇಟಿ; ಪರಿಶೀಲನೆ

ಮಳವಳ್ಳಿ: ದಲಿತ ವ್ಯಕ್ತಿಯೊಬ್ಬರು ಕ್ಷೌರ ಮಾಡಿಸಲು ಹೋದಾಗ ಕ್ಷೌರ ಮಾಡದೆ ಹಲ್ಲೆ ಮಾಡಿ ಗಾಯಗೊಳಿಸಿದ್ದ ಹಿನ್ನಲೆಯಲ್ಲಿ ಮಂಗಳವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಮುಖಂಡರ ಜೊತೆ ಚರ್ಚಿಸಿದರು.ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಜೊತೆಗೆ ಚರ್ಚೆ ನಡೆಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಇದನ್ನು ರಾಜಕಾರಣಗೊಳಿಸುವುದು ಬೇಡ ಎಂದು ಶಾಸಕರು ಪ್ರತಿಕ್ರಿಯಿಸಿದರು.ಚಿಕ್ಕಮಂಚಯ್ಯ ಅವರಿಗೆ ಸರ್ಕಾರದಿಂದ ದೊರೆಯುವ ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿ, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರವಹಿಸುವಂತೆ ಮುಖಂಡರಿಗೆ ಮನವಿ ಮಾಡಿದರು.ಕಾನೂನು ರೀತಿ ಆರೋಪಿಗಳನ್ನು ಪೊಲೀಸರು ಬಂಧಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್, ದಸಂಸದ ಎಂ.ಬಿ.ಶ್ರೀನಿವಾಸ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.