ಗುರುವಾರ , ಫೆಬ್ರವರಿ 25, 2021
23 °C
ಯುವ ಶೂಟರ್‌ಗಳ ಏಳಿಗೆಗೆ ಶ್ರಮಿಸುತ್ತೇನೆ: ಬಿಂದ್ರಾ

ಖುಷಿಯಿಂದಲೇ ವಿದಾಯ ಹೇಳುತ್ತಿದ್ದೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖುಷಿಯಿಂದಲೇ ವಿದಾಯ ಹೇಳುತ್ತಿದ್ದೇನೆ

ರಿಯೊ ಡಿ ಜನೈರೊ (ಪಿಟಿಐ):  ‘ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆನ್ನುವ ಆಸೆಯಿಂದ ಇಲ್ಲಿಗೆ ಬಂದಿದ್ದೆ. ಆದರೆ ನನ್ನ ಆಸೆ ಈಡೇರಲಿಲ್ಲ.   ಇಷ್ಟಕ್ಕೆ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುವುದಿಲ್ಲ. ಪದಕದ ಸನಿಹ ಬಂದ ಖುಷಿಯಿದೆ. ಸಂತೋಷದಿಂದಲೇ ಕ್ರೀಡಾ ಬದುಕಿನ ವಿದಾಯ ಹೇಳುತ್ತಿದ್ದೇನೆ...’ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಐದು ಬಾರಿ ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಶೂಟರ್ ಅಭಿನವ್‌ ಬಿಂದ್ರ ಆವರ ವಿದಾಯದ ಮಾತುಗಳಿವು.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅವರು ಇಲ್ಲಿ 10 ಮೀಟರ್‌ ಏರ್‌ ರೈಫಲ್‌ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲಿಯೇ ಕಂಚು ಜಯಿಸುವ ಅವಕಾಶ ಕಳೆದುಕೊಂಡಿದ್ದರು. ಶೂಟ್‌ ಆಫ್‌ನಲ್ಲಿ ನಿರಾಸೆ ಕಂಡು ತಮ್ಮ ಕ್ರೀಡಾ ಬದುಕಿನ ಕೊನೆಯ ಶೂಟಿಂಗ್ ಪಂದ್ಯವನ್ನು ಮುಗಿಸಿದರು. ಈ ಬಳಿಕ ಅವರು ಸುದ್ದಿಸಂಸ್ಥೆ ಜತೆ ಮಾತನಾಡಿದರು.‘ಒಲಿಂಪಿಕ್ಸ್‌ನ ಮಹತ್ವದ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯವನ್ನೇ ತೋರಿಸಿದ್ದೇನೆ.  ಒಲಿಂಪಿಕ್ಸ್‌ಗೂ ಮೊದಲೇ ನನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದೆ. ಈಗ ಅದನ್ನು ಹಿಂದಕ್ಕೆ ಪಡೆಯುವುದಿಲ್ಲ.  ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಈಗಾಗಲೇ ನನ್ನ ಫೌಂಡೇಷನ್‌ನಲ್ಲಿಯೇ 30 ಶೂಟರ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಅವರನ್ನು ಉತ್ತಮ ಶೂಟರ್‌ಗಳನ್ನಾಗಿ ರೂಪಿಸುತ್ತೇನೆ. ಅಗತ್ಯವಿದ್ದಾಗಲೆಲ್ಲಾ ಸಲಹೆ ನೀಡುತ್ತೇನೆ’ ಎಂದು ಬಿಂದ್ರಾ ಅವರು ಹೇಳುತ್ತಿದ್ದಾಗ ಗದ್ಗದಿತರಾಗಿದ್ದರು.ಶೂಟಿಂಗ್‌ನಿಂದ ದೂರವಾಗುತ್ತಿದ್ದೇನೆ. ನನ್ನ ಬದುಕಿನ ಬಗ್ಗೆ ಬೇರೆಯವರಿಗೂ ತಿಳಿಸಿಕೊಡಲು ಪ್ರಯತ್ನಿಸುತ್ತೇನೆ. ನನ್ನೆಲ್ಲಾ ಸಾಧನೆಯಲ್ಲಿ ಕೋಚ್‌ ಮತ್ತು ಸಿಬ್ಬಂದಿಯ ಪರಿಶ್ರಮವೂ ಇದೆ’ ಎಂದೂ ಅವರು ನುಡಿದರು.ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪ್ರದರ್ಶನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಬಿಂದ್ರಾ  ತಂದೆ ಎ.ಎಸ್‌. ಬಿಂದ್ರಾ ಅವರು ಹಿಂದೊಮ್ಮೆ ನೀಡಿದ್ದ ಸಂದರ್ಶನದಲ್ಲಿ  ‘ನಮಗಿರುವ 13 ಎಕರೆಯ ವಿಶಾಲವಾದ ಜಾಗದಲ್ಲಿ ಹವಾನಿಯಂತ್ರಿತ  ಶೂಟಿಂಗ್ ರೇಂಜ್‌ ನಿರ್ಮಿಸುತ್ತೇವೆ’ ಎಂದು ಹೇಳಿದ್ದರು.ಇದನ್ನು ಬಿಂದ್ರಾ ಅವರಿಗೆ ನೆನಪಿಸಿದಾಗ ‘ಮುಂದಿನ ದಿನಗಳಲ್ಲಿ ಶೂಟಿಂಗ್ ರೇಂಜ್‌ನಲ್ಲಿ ತರಕಾರಿ ಬೆಳಯುತ್ತೇನೆ’ ಎಂದು ನಕ್ಕರು.

15ನೇ ವರ್ಷದಲ್ಲಿಯೇ ಪದಕ: ಪಂಜಾಬ್‌ ಮೂಲದ ಬಿಂದ್ರಾ ಅವರು 15 ವರ್ಷದವರಾಗಿದ್ದಾಗ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಕಂಚು ಜಯಿಸಿದ್ದರು. 1998ರ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಕಿರಿಯ ಶೂಟರ್ ಎನ್ನುವ ಹೆಗ್ಗಳಿಕೆಯನ್ನೂ ಬಿಂದ್ರಾ ಹೊಂದಿದ್ದರು.2006ರಲ್ಲಿ ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಬಿಂದ್ರಾ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಒಟ್ಟು ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿದ್ದರು.  2010ರ ಗುವಾಂಗ್ ಜೌ ಮತ್ತು ಇಂಚೆನ್ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು.ಚಿನ್ನ ಗೆದ್ದರಷ್ಟೇ ಸಾಧನೆಯೇ: ರನ್‌ಮಿಯರ್‌ ಪ್ರಶ್ನೆ

ರಿಯೊ ಡಿ ಜನೈರೊ (ಪಿಟಿಐ):  ‘ಭಾರತದ ಯಾವುದೇ ಕ್ರೀಡಾಪಟು ಒಲಿಂಪಿಕ್ಸ್‌ಗೆ ಹೋದರೂ ಚಿನ್ನ ಗೆಲ್ಲಲೇಬೇಕೆಂದು  ಕ್ರೀಡಾ ಅಭಿಮಾನಿಗಳು ಅತಿಯಾದ ಒತ್ತಡ ಹೇರುತ್ತಾರೆ. ಉತ್ತಮ ಸಾಮರ್ಥ್ಯ ನೀಡಿದರೂ ಅದು ಲೆಕ್ಕಕಿಲ್ಲವೇ. ಪ್ರತಿ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆಲ್ಲಬೇಕೆಂದು ಕ್ರೀಡಾಪಟುಗಳ ಮೇಲೆ ಒತ್ತಡ ಹೇರುವುದು ಸರಿಯೇ...’

ಅಭಿನವ್ ಬಿಂದ್ರಾ ಅವರ ತಾಂತ್ರಿಕ ತರಬೇತುದಾರ ಹೆಂಜ್‌  ರನ್‌ಮಿಯರ್‌ ಅವರು ಭಾರತದ ಕ್ರೀಡಾಪ್ರೇಮಿಗಳ ಮುಂದೆ ಇಟ್ಟಿರುವ ಪ್ರಶ್ನೆಗಳಿವು.

‘10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಬಿಂದ್ರಾ ಅವರು ನಾಲ್ಕನೇ ಸ್ಥಾನ ಪಡೆದ ಬಳಿಕ ಜನರ ಪ್ರತಿಕ್ರಿಯೆಯನ್ನು ನೋಡಿದರೆ ಒಂದು ಅಂಶವಂತೂ ಸ್ಪಷ್ಟವಾಯಿತು. ಮಾಧ್ಯಮಗಳು ಕ್ರೀಡಾಪಟುಗಳ ಮೇಲೆ ಸಾಕಷ್ಟು ಒತ್ತಡ ಹೇರುತ್ತವೆ. ಭಾರತದ ಕ್ರೀಡಾಭಿಮಾನಿಗಳು ಚಿನ್ನ ಬೇಕು ಎಂದಷ್ಟೇ ಹೇಳುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.‘ಭಾರತದ  ಕ್ರೀಡಾಪಟುಗಳನ್ನು ಕಠಿಣ ತರಬೇತಿಗಾಗಿ ಯುರೋಪ್‌ಗೆ ಕಳುಹಿಸುವುದಿಲ್ಲ. ಆದರೂ ಚಿನ್ನ ಬೇಕೆಂದು ಬಯಸುತ್ತಾರೆ. ಈ ರೀತಿ  ಭಾರತದಲ್ಲಷ್ಟೇ ಆಗಲು ಸಾಧ್ಯ. ಒಬ್ಬ ಕ್ರೀಡಾಪಟು ಯಾವ ರೀತಿ ಪ್ರದರ್ಶನ ನೀಡುತ್ತಾನೆ ಎನ್ನುವುದೂ ಮುಖ್ಯ. ಆತನ ಸಾಧನೆಯನ್ನು ಪದಕದ ಮೂಲಕ ಅಳೆಯುವುದು ಸರಿಯಲ್ಲ’ ಎಂದೂ ಅವರು ಹೇಳಿದ್ದಾರೆ.‘ಒಬ್ಬ ಕ್ರೀಡಾಪಟುವಿನ ಪ್ರದರ್ಶನ ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಪ್ರತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಹೋಗುತ್ತದೆ. ಆದ್ದರಿಂದ ನಾವೂ ಕೆಲ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ ಆವರಿಗೆ ಅದೃಷ್ಟ ಚೆನ್ನಾಗಿತ್ತು. ರಿಯೊದಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದರೂ  ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿಯೇ ಕಳೆದುಕೊಂಡರು’ ಎಂದೂ  ರನ್‌ಮಿಯರ್‌ ತಿಳಿಸಿದರು.‘ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ   ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆದರೆ ಅದೃಷ್ಟ ಇರಲಿಲ್ಲವಾದ್ದರಿಂದ ಅಲ್ಲಿ  ಏಳನೇ ಸ್ಟಾನಕ್ಕೆ ತೃಪ್ತಿಪಟ್ಟಿದ್ದರು. ಕಠಿಣ ಪರಿಶ್ರಮ ಪಡುವ ಬಿಂದ್ರಾ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 29ನೇ ಸ್ಥಾನದಲ್ಲಿದ್ದಾರೆ. ರಿಯೊದಲ್ಲಿ ಚಿನ್ನ ಗೆದ್ದ ಇಟಲಿಯ ನಿಕೊಲೊ ಕಾಂಪ್ರಿಯಾನಿ 28ನೇ ಸ್ಥಾನ ಹೊಂದಿದ್ದರು. ಕ್ರೀಡಾಪಟುವಿನ ಬದುಕಿನಲ್ಲಿ ಈ ರೀತಿಯ ಏರು ಪೇರು  ಸಹಜ. ಬಿಂದ್ರಾ ಇಲ್ಲಿ ತೋರಿದ ಸಾಮರ್ಥ್ಯ ತೃಪ್ತಿ ನೀಡಿದೆ’ ಎಂದೂ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.ಪತ್ರಕರ್ತನಾಗಿ ಬರುವೆ..

ಮುಂದಿನ ದಿನಗಳಲ್ಲಿ ನನ್ನ ಶೂಟಿಂಗ್ ರೇಂಜ್‌ನಲ್ಲಿ ತರಕಾರಿ ಬೆಳೆಯುತ್ತೇನೆ. ಇಲ್ಲವಾದರೆ ನೀವು (ಮಾಧ್ಯಮದವರು) ಕೆಲಸ ಕೊಟ್ಟರೆ 2020ರ ಟೋಕಿಯೊ ಒಲಿಂಪಿಕ್ಸ್‌ ವೇಳೆಗೆ ವರದಿಗಾರನಾಗಿ ಬಂದು ಕೆಲಸ ಮಾಡುತ್ತೇನೆ.

 –ಅಭಿನವ್ ಬಿಂದ್ರಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.