ಗುರುವಾರ , ಮೇ 6, 2021
27 °C

ಖೇಣಿ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹೋಗಿದ್ದ ಸಂದರ್ಭದಲ್ಲಿ `ನೈಸ್' ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಭಾನುವಾರ ಪತ್ರಿಕೋದ್ಯಮಿ ಸೇರಿದಂತೆ ಇಬ್ಬರನ್ನು ಬಂಧಿಸಿ ಬಿಡುಗಡೆಗೊಳಿಸಿದರು.`ಪ್ರಕರಣದ ಆರೋಪಿಗಳಾದ ಪತ್ರಿಕೋದ್ಯಮಿ ಟಿ.ವೆಂಕಟೇಶ್ ಮತ್ತು ಸುಂಕದಕಟ್ಟೆಯ ಅರುಣ್‌ಗೌಡ ಎಂಬುವರು ನಗರದ ಮೂರನೇ ಎಸಿಎಂಎಂ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಮಧ್ಯಾಹ್ನ ಕೆಂಗೇರಿ ಠಾಣೆಗೆ ಹಾಜರಾದರು. ನಂತರ ಅವರನ್ನು ಬಂಧಿಸಿ ಸಂಜೆ ಬಿಡುಗಡೆಗೊಳಿಸಲಾಯಿತು' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಜ.13ರಂದು ನಿಧನರಾದ ನಂತರ ಅವರ ಪಾರ್ಥಿವ ಶರೀರವನ್ನು ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಆ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಹೋಗಿದ್ದ ಖೇಣಿ ಅವರ ಮೇಲೆ ವೆಂಕಟೇಶ್ ಮತ್ತು ಅರುಣ್‌ಗೌಡ ಸೇರಿದಂತೆ ಹಲವರು ಹಲ್ಲೆ ನಡೆಸಿದ್ದರು. ಆ ಘಟನೆಯ ದೃಶ್ಯಾವಳಿಯನ್ನು ಸುದ್ದಿವಾಹಿನಿಗಳ ಸಿಬ್ಬಂದಿ ಚಿತ್ರೀಕರಿಸಿಕೊಂಡು ಪ್ರಸಾರ ಮಾಡಿದ್ದರು. ಆ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.ಘಟನೆ ಸಂಬಂಧ ಕೊಲೆ ಯತ್ನ, ಹಲ್ಲೆ, ಅಪರಾಧ ಸಂಚು ಹಾಗೂ ಕಾನೂನು ಬಾಹಿರವಾಗಿ ಗುಂಪುಗೂಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.