ಶುಕ್ರವಾರ, ಜೂನ್ 18, 2021
24 °C

ಗಂಗಜ್ಜಿ ನೆನಪಿಗೆ ಚಿತ್ತಾಕರ್ಷಕ ಚಿತ್ರಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಸಿಲ ಕಿರಣಗಳು ಬಿದ್ದು ಹೊಳೆಯುತ್ತಿರುವ ಗಂಗಜ್ಜಿಯ ಚಿತ್ರಪಟ, ಅಲ್ಲೊಂದು ಮೂಲೆಯಲ್ಲಿ ಕಂಪೌಂಡಿನ ಮೇಲೆ ತೂಗು ಹಾಕಿದ ಫ್ರೇಮಿನೊಳಗೆ ನಗುತ್ತಿರುವ ಗುಳಿ ಬಿದ್ದ ಕೆನ್ನೆಗಳ ಮುದ್ದು ಹುಡುಗಿ, ಬೆಣ್ಣೆ ಕದಿಯುತ್ತಿರುವ ಬಾಲಕೃಷ್ಣ... ಹೀಗೆ ಚಿತ್ರಸಂತೆಯಲ್ಲಿ ಕಂಡ ಮುಖಗಳು ಹತ್ತು ಹಲವು.ನಗರದ ಸವಾಯಿ ಗಂಧರ್ವ ಸಭಾಂಗಣದ ಮುಂಭಾಗದ ರಸ್ತೆ ಭಾನುವಾರ ಅಕ್ಷರಶಃ ಸಂತೆಯಾಗಿತ್ತು. ರಸ್ತೆಬದಿಯಲ್ಲಿ ತೆರೆದ ಮಳಿಗೆಗಳಲ್ಲಿ ಚಿತ್ರಪಟಗಳು ಒಂದಕ್ಕೊಂದು ಚೆಂದ ಎಂಬಂತೆ ತೂಗುತ್ತಿದ್ದವು. ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗಂಗೂಬಾಯಿ ಹಾನಗಲ್ ಮ್ಯೂಜಿಕ್ ಫೌಂಡೇಶನ್, ಹುಬ್ಬಳ್ಳಿ ಆರ್ಟ್ ಸರ್ಕಲ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿತ್ರಸಂತೆಯು ಆಸಕ್ತರನ್ನು ತನ್ನತ್ತ ಸೆಳೆಯಿತು.ಎಂಟನೇ ತರಗತಿಯ ವಿದ್ಯಾರ್ಥಿನಿಯಿಂದ ಹಿಡಿದು ವೃತ್ತಿಪರ ಕಲಾವಿದರವರೆಗೆ ಎಲ್ಲ ವಯಸ್ಸಿನ ಕಲಾವಿದರ, ಎಲ್ಲ ಬಗೆಯ ಪ್ರಕಾರಗಳ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡವು. ತಂಜಾವೂರು ಮೊದಲಾದ ಸಾಂಪ್ರದಾಯಿಕ ಶೈಲಿಗಳ ಚಿತ್ರಪಟಗಳೂ ಗಮನ ಸೆಳೆದವು.ಕುರಿ ಕಾಯುತ್ತಿರುವ ಕುರುಬ, ವೀರಭದ್ರನ ಕುಣಿತ, ಸಾಂಪ್ರದಾಯಿಕ ಉಡುಗೆ ತೊಟ್ಟ ಲಂಬಾಣಿ ಮಹಿಳೆಯರು, ಬಸವನನ್ನು ಹಿಡಿದು ಸಾಗುತ್ತಿರುವ ಹೆಣ್ಣುಮಗಳು... ಹೀಗೆ ಕಲಾವಿದ ಕೆ.ವಿ. ಶಂಕರ್ ಅವರು ಬಿಡಿಸಿದ ವ್ಯಕ್ತಿಚಿತ್ರಗಳು ಆಕರ್ಷಕವಾಗಿದ್ದವು. ಹತ್ತಾರು ಕಲಾವಿದರು ಬಿಡಿಸಿಟ್ಟ ಇಂತಹದ್ದೇ ಇನ್ನಷ್ಟು ವ್ಯಕ್ತಿಚಿತ್ರಗಳು ಪ್ರದರ್ಶನಗೊಂಡವು.ಇನ್ನಷ್ಟು ವಿಷಯಯಾಧಾರಿತ, ನೈಜತೆಗೆ ಒತ್ತುಕೊಟ್ಟಂತಹ ಚಿತ್ರಗಳೂ ಸಾಕಷ್ಟು ಸಂಖ್ಯೆಯಲ್ಲಿ ಪ್ರದರ್ಶನಗೊಂಡವು. ಗಂಗೂಬಾಯಿಯವರ ಮರಿಮೊಮ್ಮಗಳಾದ ಸುಹಾಸಿನಿ ಹಾನಗಲ್ ಸಹ ತಮ್ಮ ಅಜ್ಜಿಯ ನೆನಪಿನ ಚಿತ್ರಸಂತೆಯಲ್ಲಿ ಕಲಾಕೃತಿಗಳೊಟ್ಟಿಗೆ ಪಾಲ್ಗೊಂಡಿದ್ದರು.ವಿಜ್ಞಾನ ವಿಷಯದಲ್ಲಿ ಮೊದಲ ಪಿಯು ಅಭ್ಯಸಿಸುತ್ತಿರುವ ಸುಹಾಸಿನಿ ಬಿಡಿಸಿದ ಸೂರ್ಯಾಸ್ತ ಮೊದಲಾದ  ವರ್ಣಮಯ ಚಿತ್ರಗಳೂ, ಕಪ್ಪು-ಬಿಳುಪಿನ ಚಿತ್ತಾರಗಳೂ ಗಮನ ಸೆಳೆದವು. ಈ ಸಂತೆಯಲ್ಲಿ ಕೇವಲ ಚಿತ್ರಗಳಷ್ಟೇ ಅಲ್ಲ, ಇನ್ನಿತರ ಮಾದರಿಯ ಕಲಾಕೃತಿಗಳೂ, ಕರಕುಶಲ ವಸ್ತುಗಳನ್ನೂ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.`ಬೆಂಗಳೂರು ಬಿಟ್ಟರೆ ಹುಬ್ಬಳ್ಳಿಯಲ್ಲಿ ಕಲಾವಿದರಿಗೆ ಹಾಗೂ ಕಲಾಕೃತಿಗಳಿಗೆ ಬೆಲೆ ಇದೆ. ಉತ್ತರ ಕರ್ನಾಟಕದಲ್ಲಿ ಈ ರೀತಿಯ ಚಿತ್ರಸಂತೆಗಳನ್ನು ಏರ್ಪಡಿಸುವುದರಿಂದ ಇಲ್ಲಿನ ಕಲಾವಿದರು ಹಾಗೂ ಕಲಾಸಕ್ತರ ನಡುವೆ ಸಂಪರ್ಕ ಬೆಳೆಯಲು ಅನುಕೂಲವಾಗುತ್ತದೆ. ಈ ಸಂತೆಗೆ ಇನ್ನಷ್ಟು ಪ್ರಚಾರ ನೀಡಿ, ಒಂದಿಷ್ಟು ಸೌಲಭ್ಯ ಕಲ್ಪಿಸಿದ್ದರೆ ಸಂತೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು~ ಎಂದು ಬೆಂಗಳೂರಿನಿಂದ ಬಂದ ಕಲಾವಿದೆ ಚೇತನಾ ಸತೀಶ್ ಅಭಿಪ್ರಾಯಪಟ್ಟರು.ಮಿಶ್ರ ಪ್ರತಿಕ್ರಿಯೆ:ಚಿತ್ರಸಂತೆಗೆ ಅವಳಿನಗರದ ಚಿತ್ರಾಸಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಸ್ತೆ ಬದಿಯಲ್ಲೇ ಸಂತೆ ನಡೆದಿದ್ದರೂ ನೋಡುಗರ ಕೊರತೆ ಕಾಡಿತು. ಮಧ್ಯಾಹ್ನ 12ರ ನಂತರ ಹೆಚ್ಚು ಮಂದಿ ಇತ್ತ ಹೆಜ್ಜೆ ಇಟ್ಟರು. ಬಿಸಿಲಿನಲ್ಲಿ ನಿಂತು ಚಿತ್ರ ವೀಕ್ಷಿಸಿದರು. ಸಂಜೆ ಕ್ರಮೇಣ ಜನರ ಸಂಖ್ಯೆಯೂ ಹೆಚ್ಚಿತು.ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ವ್ಯವಸ್ಥೆಯೂ ಇತ್ತು. ಹುಬ್ಬಳ್ಳಿ-ಧಾರವಾಡದ ಕಲಾವಿದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳೊಟ್ಟಿಗೆ ಈ ಸಂತೆಯಲ್ಲಿ ಪಾಲ್ಗೊಂಡರು.ಉದ್ಘಾಟನೆ: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ಶಾಖೆಯ ಎಜಿಎಂ ಐ.ಎಂ. ರಮೇಶ ಅವರು ಚಿತ್ರಸಂತೆಗೆ ಚಾಲನೆ ನೀಡಿದರು. ಛಾಯಾಗ್ರಾಹಕ ಶಶಿ ಸಾಲಿ, ಡಾ. ಶಂಕರ ಕುಂದಗೋಳ, ಬಾಬುರಾವ್ ಹಾನಗಲ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.ಕಾರ್ಯಕ್ರಮದ ಅಂಗವಾಗಿ ಹಳೆಯ ಅಂಚೆಚೀಟಿ, ನೋಟು ಹಾಗೂ ನಾಣ್ಯಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.