ಶನಿವಾರ, ಜೂನ್ 12, 2021
28 °C

ಗಂಜಾಂ ಆಭರಣ ವೈಭವ

ರಮೇಶ ಕೆ. Updated:

ಅಕ್ಷರ ಗಾತ್ರ : | |

ಅದು ನಾಲ್ಕನೇ ಮಹಡಿ. ಅದೇ ಕೊನೆಯ ಅಂತಸ್ತು. ಸಿಮೆಂಟ್ ಛಾವಣಿ ನೆಲವೇ ಹೌದೆಂದು ಭಾಸವಾಗುವಂತೆ ಹುಲ್ಲು ಹಾಸು. ಸಂಜೆ ಕಳೆದು ರಾತ್ರಿಯಾಗುವ ಹೊತ್ತು.



ಕಟ್ಟಡಕ್ಕಿಂತಲೂ ಎತ್ತರಕ್ಕೆ ಬೆಳೆದ, ಪಕ್ಕದಲ್ಲೇ ಇದ್ದ ಮರದ ಗಾಳಿ ಮೈಗೆ ತಂಪಾದ ತಂಗಾಳಿ ಸೂಸುತ್ತಿತ್ತು. ಬಿಡುವಿಲ್ಲದ ಕೆಲಸದ ಮಧ್ಯೆಯೂ ಆಹ್ವಾನಿತರ ದಂಡು. ಉಸ್ತಾದ್ ಫಯಾಜ್ ಖಾನ್ ಗಜಲ್‌ಗೆ ತಲೆದೂಗುತ್ತಿದ್ದ ಸಂಗೀತಾಸಕ್ತರು.



ಇನ್‌ಫೆಂಟ್ರಿ ರಸ್ತೆಯಲ್ಲಿರುವ ಗಂಜಾಂ ಆಭರಣ ಮಳಿಗೆ `ದಿ ಗ್ಲೋರಿ ಆಫ್ ಜೆಮ್‌ಸ್ಟೋನ್ಸ್~ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶನ ಮೇಳ ಇಂಥ ಒಂದು ಸುಂದರ ಲೋಕವನ್ನೇ ಸೃಷ್ಟಿ ಮಾಡಿತ್ತು.



ಗುರುವಾರ ಮತ್ತು ಶುಕ್ರವಾರ ನಡೆದ ಪ್ರದರ್ಶನದಲ್ಲಿ ಬ್ರೆಜಿಲ್‌ನ ನೀಲಿ ಹವಳದಿಂದ ಮಾಡಿದ ನೆಕ್‌ಲೇಸ್, ತಾಂಜಾನಿಯದ ಅಪರೂಪದ ಹವಳದ ಸರ, ಬರ್ಮಾ ರೂಬಿಯಿಂದ ಮಾಡಿದ ಡಿಸೈನರ್ ಒಡವೆಗಳು ಹೆಂಗಳೆಯರ ಗಮನ ಸೆಳೆದವು.



ಇಷ್ಟೇ ಅಲ್ಲದೆ ಶ್ರೀಲಂಕಾ, ರಷ್ಯಾ, ಆಫ್ಘಾನಿಸ್ತಾನದಲ್ಲಿ ಸಿಗುವ ಸಿಲಿಕೇಟ್ ಖನಿಜ (topaz) ದಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ನೆಕ್‌ಲೇಸ್‌ಗಳು ಮಹಿಳೆಯರ ಕಣ್ಣು ಕುಕ್ಕುತ್ತಿದ್ದವು.



ಪಚ್ಚೆ ಮೊದಲಾದವುಗಳನ್ನು ಒಳಗೊಂಡ ಬೆರಿಲ್ ಮತ್ತು ಕಡಲು ನೀಲಿ ಬಣ್ಣದ ವಜ್ರ, ಫ್ಯಾನ್ಸಿ ಬಣ್ಣದ ವಜ್ರದ ಸರಗಳು ಹಾಗೂ ಪ್ರಾಚೀನ ಗ್ರೀಕ್, ರೋಮನ್ನರು ಬಳಸುತ್ತಿದ್ದ ಹವಳದ ಮಾದರಿಯ ಒಡವೆಗಳು ಇಲ್ಲಿ ಕಣ್ಮನ ಸೆಳೆದವು.



ಸಂಗ್ರಹ ಯೋಗ್ಯವಾದ ಜರ್ಮನಿಯ ಜೆಮ್‌ಸ್ಟೋನ್, ಬಂಗಾರದ ಸೂಕ್ಷ್ಮ ಕುಸುರಿ ಕೆಲಸದ ನವಿಲು, ಪಾರಿವಾಳ ಹಾಗೂ ಗಿಳಿಯ ಆಕೃತಿಗಳು ಪ್ರದರ್ಶನದ ಕೇಂದ್ರಬಿಂದುವಾಗಿದ್ದವು.



ನೆಕ್‌ಲೇಸ್‌ಗಳ ಜತೆಗೆ ಜುಮುಕಿ, ಆಕರ್ಷಕ ಓಲೆಗಳೂ ಗಮನ ಸೆಳೆದವು. ರಾತ್ರಿ ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಲು ಆಯೋಜಿಸಿದ್ದ ಉಸ್ತಾದ್ ಫಯಾಜ್ ಖಾನ್ ಅವರ ಗಜಲ್ ಸಂಜೆಗೆ ವರುಣನ ಆಗಮನದಿಂದ ಅಡ್ಡಿಯಾಯಿತು.



ಖಾನ್ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಗಜಲ್ ಆರಂಭವಾಯಿತು. ಅವರ ಸುಮಧುರ ಕಂಠದಿಂದ ಒಂದು ಗಜಲ್ ಹೊರಹೊಮ್ಮಿತು ಅಷ್ಟೇ. ಅಷ್ಟರಲ್ಲಿ ವರ್ಷದ ಮೊದಲ ಮಳೆ ಹನಿಯಾಡತೊಡಗಿತು.

 

ಯಾವುದೇ ಮೇಲ್ಛಾವಣಿ ಇಲ್ಲದ, ವೇದಿಕೆ ಮೇಲೆ ಕುಳಿತಿದ್ದ ಗಾಯಕನ ಹಾರ್ಮೋನಿಯಂ, ತಬಲಾ ಮೇಲೆ ಮುತ್ತಿನ ಹನಿಯಂತೆ ಮಳೆಯ ಹನಿ ಬಿಳತೊಡಗಿದಾಗ ಅನಿರೀಕ್ಷಿತವಾಗಿ ಕಾರ್ಯಕ್ರಮ ನಿಲ್ಲಿಸಬೇಕಾಯಿತು.



ಆ ಒಂದೇ ಘಜಲ್‌ಗೂ ವಿಜಯ್ ಕುಮಾರ್ (ಸಿತಾರ್), ನಿಸಾರ್ ಅಹಮ್ಮದ್ (ತಬಲಾ), ರಂಜನ್ ಕುಮಾರ್  ವಯೊಲಿನ್ ಸಮರ್ಥ ಸಾಥ್ ನೀಡಿದರು.

 -

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.