ಗಂಡಾಳು ಹೆಣ್ಣು ದನಿ
`ಸಂಗೀತ ದೈವಿಕವಾದದ್ದು. ಅದರಲ್ಲಿ ಮೇಲು ಕೀಳು, ಜಾತಿ ಮತದ ಹಂಗಿಲ್ಲ. ಹಾಡು ಹಾಡುತ್ತಾ ಕುಳಿತರೆ ನನಗೆ ಇಹದ ಪರಿವೇ ಇರುವುದಿಲ್ಲ. ಮನದ ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ...~ ಹೀಗೆ ಮಾತನಾಡುತ್ತಾ ಹೋದರು ಅನಿಲ್ ಕುಮಾರ್.
ವಾದ್ಯಗೋಷ್ಠಿ, ಚಿತ್ರರಂಗದಲ್ಲಿ ಅನಿಲ್ ಪರಿಚಿತರಾಗಿರುವುದು ಬಾಬಿ ಎಂಬ ಹೆಸರಿನಿಂದ.
ಅನಿಲ್ ಹಾಡಿನ ವಿಶೇಷ ಅವರ ಹೆಣ್ಣು ಧ್ವನಿ. ಹೆಣ್ಣಿನ ದನಿಯನ್ನೇ ಹೋಲುವಂತೆ ಹಾಡುವ ಇವರ ಸ್ವರ ಮಾಧುರ್ಯದಲ್ಲಿ ಮಾದಕತೆಯ ಲೇಪವಿದೆ. ಎಲ್.ಆರ್ ಈಶ್ವರಿ ಹಾಡಿರುವ `ಜೋಕೆ ನಾನು ಬಳ್ಳಿಯ ಮಿಂಚು~, ಮಂಜುಳಾ ಗುರುರಾಜ್ ಅವರ ದನಿಯಲ್ಲಿ `ಒಳಗೆ ಸೇರಿದರೆ ಗುಂಡು~ ಹಾಡು ಹೇಳಿದರೆ ಕೇಳುಗರ ಎದೆಯಲ್ಲಿ ಮಿಂಚಿನ ಸಂಚಾರ ಮೂಡುವುದರಲ್ಲಿ ಎರಡು ಮಾತಿಲ್ಲ.
ಅವರು ತಮ್ಮಲ್ಲಿ ಹಾಡುವ ಹಂಬಲ ಬೆಳೆಯುತ್ತಾ ಬಂದ ಬಗೆಯನ್ನು ಹೇಳಿಕೊಳ್ಳುವುದು ಹೀಗೆ...
ಪ್ರತಿಯೊಬ್ಬರಿಗೂ ಅವರದೇ ವಿಶೇಷ ಪ್ರತಿಭೆ ಇರುತ್ತದೆ. ಏನಾದರೂ ಹೊಸತೊಂದನ್ನು ಮಾಡಬೇಕು ಎಂಬ ತುಡಿತ ನನ್ನಲ್ಲಿತ್ತು. ಇದೇ ತುಡಿತ ಸಂಗೀತಕ್ಕೆ ಸ್ಫೂರ್ತಿಯಾಯಿತು. ಆದರೆ ನಾನು ಗಂಡಸಿನ ಸ್ವರದಲ್ಲಿ ಹಾಡುತ್ತಿರಲಿಲ್ಲ. ನನಗೆ ದೇವರು ಕೊಟ್ಟ ವರ ಎಂದರೆ ಹೆಣ್ಣಿನ ಸ್ವರ. ಆದ್ದರಿಂದ ಇದರಲ್ಲೇ ಮುಂಬರಬೇಕು ಎಂಬ ಉದ್ದೇಶದಿಂದ ಮಲ್ಲೇಶ್ವರದ ಸುಬ್ಬುಗಂಗಾ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಅಭ್ಯಾಸ ಮುಗಿಸಿದೆ. ಆಗ ನನ್ನ ಕಂಠಕ್ಕೊಂದು ಮಾಧುರ್ಯ ಸಿಕ್ಕಿತು.
ಸಣ್ಣ ವಯಸ್ಸಿನಲ್ಲಿಯೇ ಸಂಗೀತ ನನ್ನ ಜೀವವಾಗಿತ್ತು. ಮೊದಮೊದಲು ನಾನು ಹಾಡುವಾಗ ಯಾರಾದರೂ ನಗುತ್ತಾರೋ ಎಂಬ ಕೀಳರಿಮೆ ಕಾಡುತ್ತಿತ್ತು. ತುಂಬಾ ಸಲ ಖಿನ್ನನಾಗಿದ್ದೂ ಇದೆ. ಆದರೆ ಛಲವೊಂದು ಇಲ್ಲದಿದ್ದರೆ ನಾನು ಇಲ್ಲಿಯತನಕ ಬರಲು ಆಗುತ್ತಿರಲಿಲ್ಲ. ಇಂದು ಯಾವುದೇ ಸಂಗೀತ ಕಾರ್ಯಕ್ರಮಕ್ಕೆ ಹೋದರೂ ಜನ ನನ್ನನ್ನು ಬಾಬಿ ಬಂದ ಎಂದು ಗುರುತಿಸುತ್ತಾರೆ. ನನ್ನ ಹಾಡು ಕೇಳುವುದಕ್ಕೆ ಕಾತರರಾಗುತ್ತಾರೆ.
ನಾನು ಅನುಕರಣೆ ಮಾಡುತ್ತಿಲ್ಲ. ನನ್ನದೇ ಆಗಿರುವ ಒಂದು ವಿಶೇಷತೆ ಇಟ್ಟುಕೊಂಡಿದ್ದೇನೆ. ಬಾಬಿ ಮಾಧುರಿ ಮೆಲೋಡಿ ಎಂಬ ವಾದ್ಯಗೋಷ್ಠಿಯನ್ನು ನಾಲ್ಕು ವರ್ಷದಿಂದ ನಡೆಸುತ್ತಿದ್ದೇನೆ. ಚಿಕ್ಕ ಮಕ್ಕಳಿಗೂ ಸಂಗೀತ ಕಲಿಸಿಕೊಡುತ್ತಿದ್ದೇನೆ. ನಾನು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಧಾರೆ ಎರೆದರೆ ಮಾತ್ರ ನಿಜವಾದ ಗುರು ಎಂದು ಕರೆಸಿಕೊಳ್ಳಲು ಸಾಧ್ಯ.
`ಸಂಜು ಮತ್ತು ಗೀತಾ ಸೇರಬೇಕು~ ಎಂಬ ಹಾಡಿನ ಸಾಲು ಹಾಡಿದಾಗ ಜನ ನನ್ನನ್ನು ಜೂನಿಯರ್ ಶ್ರೇಯಾ ಘೋಷಾಲ್ ಎಂದು ಕರೆದಿದ್ದರು.
ರಾಜನ್-ನಾಗೇಂದ್ರ ಅವರ ಎದುರಿನಲ್ಲಿ `ನಿನ್ನ ರೂಪು ಎದೆಯ ಕಲಕಿ~ ಹಾಡು ಹಾಡಿದ ಅನುಭವ ನನ್ನ ಜೀವನದಲ್ಲಿ ಮರೆಯಲಾಗದ ಖುಷಿ ನೀಡಿದೆ. ಈವರೆಗೆ ಎರಡು ಸಾವಿರ ವಾದ್ಯಗೋಷ್ಠಿ ನೀಡಿದ್ದೇನೆ.
ನಿಸ್ಸಂಕೋಚವಾಗಿ ಹೆಣ್ಣುದನಿಯಲ್ಲಿ ಹಾಡುತ್ತಾ ಹೋಗುವ ಅನಿಲ್ಕುಮಾರ್ ಅವರಲ್ಲಿ ಹಲವು ಕನಸುಗಳಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.