ಸೋಮವಾರ, ಮೇ 17, 2021
23 °C

ಗಟ್ಟಿ ಪ್ರಯತ್ನ (ಚಿತ್ರ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ)

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಗಟ್ಟಿ ಪ್ರಯತ್ನ (ಚಿತ್ರ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ)

`ಮಗನ ಶವ ಭೂಮಿಗಿಂತ ಭಾರವಂತೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ಸೇವೆ ಮಾಡ ಬೇಕಾದ ನಾನು ಈಗ ನಿಮ್ಮಿಂದಲೇ ಸೇವೆ ಮಾಡಿಸಿಕೊಳ್ಳುವ ಸ್ಥಿತಿಗೆ ಬಂದಿದ್ದೇನೆ...~ ಮಗ ಬರೆದ ಉಯಿಲು ಈ ಸಾಲುಗಳನ್ನು ಓದುವಾಗ ಆ ತಾಯಿ ಬಿಕ್ಕಿಬಿಕ್ಕಿ ಅಳುತ್ತಿದ್ದರೆ ತಂದೆ ಒತ್ತಿಕೊಂಡು ಬಂದ ದುಃಖವನ್ನು ತಡೆಯಲು ಪ್ರಯತ್ನಿಸುತ್ತಿರುತ್ತಾರೆ. ಈ ದೃಶ್ಯ ನೋಡುಗರ ಮನಸ್ಸನ್ನೂ ಕಲಕುತ್ತದೆ.ಈ ವಾರ ತೆರೆಕಂಡ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~ ಚಿತ್ರ ದುಡಿಮೆಗಾಗಿ ಅಮೆರಿಕದಲ್ಲಿ ವಾಸವಿರುವ ಭಾರತೀಯರ ಸ್ಥಿತಿಗತಿ ಕುರಿತು ಹೇಳಿದ್ದರೂ ಅದಕ್ಕಿಂತಲೂ ಮಿಗಿಲಾಗಿ ಮನೆಗೆ ಆಧಾರವಾದ  ಮಗನ ಅಗಲಿಕೆಯ ಭಾರ ತಾಳಲಾರದ ತಂದೆ-ತಾಯಿ, ಆರಂಭದಲ್ಲೇ ಗಂಡನನ್ನು ಕಳೆದುಕೊಂಡು ಅಸಹಾಯಕ ಸ್ಥಿತಿ ಯಲ್ಲಿರುವ ಮಡದಿ ಹಾಗೂ ವೃತ್ತಿ ಜೀವನಕ್ಕೆ ಬುನಾದಿ ಹಾಕಿಕೊಟ್ಟ ಸ್ನೇಹಿತ ನನ್ನು ಕಳೆದುಕೊಂಡವನ ದುಃಖವನ್ನು ನಿರ್ದೇಶಕ ಗೋಪಿ ಪೀಣ್ಯ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.ನೈಜ ಘಟನೆ ಆಧರಿಸಿದ ಚಿತ್ರ ಇದಾದ್ದರಿಂದ ಹೊಸತನವಿದೆ. ಮಂಡ್ಯದ ಹಳ್ಳಿಯೊಂದರಿಂದ ಕೆಲಸ ಅರಸಿ ಅಮೆರಿಕಕ್ಕೆ ಹೋಗುವ ಯುವಕನಿಗೆ ಎದುರಾಗುವ ಸವಾಲುಗಳು ಕಚಗುಳಿ ಇಡುವ ಹಾಸ್ಯ ಸನ್ನಿವೇಶಗಳಾಗಿಯೂ ಕಾಣುತ್ತವೆ. ಒಂಬತ್ತು ತಿಂಗಳ ನಂತರ ಕೆಲಸ ಪಡೆದ ಯುವಕನ ಮುಗ್ಧತೆ, ತುಸುವೇ ಎಡವಟ್ಟಾ ದರೂ ಅಮೆರಿಕದಲ್ಲಿ ಅನುಭವಿಸಬೇಕಾದ ತೊಂದರೆಗಳು, ಕೆಲಸ ಕಳೆದುಕೊಂಡರೆ ಅವರನ್ನು ನಡೆಸಿಕೊಳ್ಳುವ ಅಲ್ಲಿನ ವ್ಯವಸ್ಥೆ ಎಲ್ಲವನ್ನೂ ಚಿತ್ರ ತೆರೆದಿಡುತ್ತದೆ.ಚಿತ್ರದ ಮೊದಲರ್ಧದಲ್ಲಿ ಅಮೆರಿಕದ ಜೀವನ ಹಾಗೂ ಪ್ರವಾಸಗಳ ನೆಪದಲ್ಲಿ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗಿದೆ. ದ್ವಿತೀಯಾರ್ಧದಲ್ಲಿ ಚಿತ್ರದ ವೇಗ ಹೆಚ್ಚುತ್ತದೆ. ಒಂದೊಂದು ದೃಶ್ಯಗಳಲ್ಲೇ ತಿಂಗಳು, ವರ್ಷಗಳು ಕಳೆಯುತ್ತವೆ!ಚಿತ್ರದಲ್ಲಿ ಇಬ್ಬರು ನಾಯಕರು ಹಾಗೂ ನಾಯಕಿಯರು. ಮೊದಲರ್ಧದಲ್ಲಿ ಮಂಡ್ಯ ಶೈಲಿಯಲ್ಲಿ ಮಾತನಾಡತ್ತ ಕಚಗುಳಿ ಇಡುವ ಬಾಬು (ಸೌರವ್ ಬಾಬು) ಅವರಿಗೆ ಪ್ರಾಧಾನ್ಯ ಸಿಕ್ಕರೆ, ದ್ವಿತೀಯಾರ್ಧದಲ್ಲಿ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುವ ಸುದರ್ಶನ್ (ಶ್ರೀರಾಜ್) ದುರಂತ ನಾಯಕನಾಗಿ ಗಮನಸೆಳೆಯುತ್ತಾರೆ. ಸುದರ್ಶನ್ ಪತ್ನಿಯಾಗಿ ನಟಿಸಿರುವ ಯಜ್ಞಾಶೆಟ್ಟಿ ಪಾತ್ರದೊಳಗೆ ಸೇರಿ ಹೋಗಿದ್ದಾರೆ. ತಂದೆ ಪಾತ್ರದ ದತ್ತಣ್ಣ ನಟನೆ ಮೈನಡುಗಿಸುತ್ತದೆ. ತಾಯಿಯಾಗಿ ನಟಿಸಿರುವ ಪದ್ಮಾ ಕುಮಟಾ ಅವರದು ಅನುಭವಕ್ಕೆ ತಕ್ಕ ಅಭಿನಯ.ಗೆಳೆಯನ ಅನುಭವವನ್ನು ಸೌರವ್ ಬಾಬು, ನಿರ್ದೇಶಕ ಗೋಪಿ ಪೀಣ್ಯ ಅವರೊಂದಿಗೆ ಸೇರಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. `ಅಮೆರಿಕಾ ಅಮೆರಿಕಾ~ ಹಾಗೂ `ಆಫ್‌ಶೋರ್~ ಎಂಬ ಇಂಗ್ಲಿಷ್ ಚಿತ್ರಕ್ಕೆ ಸಹಾಯಕ ನಿರ್ದೇಶಕ ರಾಗಿದ್ದ ಗೋಪಿ ಅವರಿಗಿದು ಚೊಚ್ಚಲ ನಿರ್ದೇಶನ ಚಿತ್ರ. ಚಿತ್ರದ ತಂತ್ರಜ್ಞಾನ ಶ್ರೀಮಂತವಾಗಿದೆ. ಗುರುಕಿರಣ್ ಸಂಗೀತ ದಲ್ಲಿ ಹಾಡುಗಳು ಕೇಳುವಂತಿವೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣದಲ್ಲಿ ಹೊಸತನವಿದೆ.`ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ~ ಎನ್ನುವ ಗಾದೆ ಮಾತಿನಂತೆ ದುಡಿಯುವ ಕನಸು ಕಟ್ಟಿಕೊಂಡು ದೂರದ ಅಮೆರಿಕಾಕ್ಕೆ ಹೋದವರ ಜೀವನ ಸುಂದರವಾಗಿರುತ್ತದೆ ಎಂದುಕೊಂಡವರಿಗೆ ಚಿತ್ರ ಅಮೆರಿಕದ ವಾಸ್ತವ ದರ್ಶನ ಮಾಡಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.