ಶುಕ್ರವಾರ, ಏಪ್ರಿಲ್ 16, 2021
28 °C

ಗಣಪತಿ ಬಪ್ಪಾ ಮೋರಯಾ...

ರಮೇಶ ಕೆ. Updated:

ಅಕ್ಷರ ಗಾತ್ರ : | |

ಗಣೇಶನ ಹಬ್ಬಕ್ಕೆ ಇನ್ನೂ ಎರಡು ತಿಂಗಳಿದೆ. ಆದರೆ, ಇಲ್ಲಿ ಗಣೇಶ ಮೂರ್ತಿಗಳು ಅದಾಗಲೇ ರೂಪುತಳೆಯತೊಡಗಿವೆ. ಮಣ್ಣಿನಿಂದ ದೈವದ ರೂಪ ನೀಡಲು ನಗರಕ್ಕೆ ಬಂದಿಳಿದಿರುವ ಕೋಲ್ಕತ್ತದ `ಪಾಲ್~ ಕಲಾವಿದರದ್ದು ಒಂದು ಕತೆ. ಆರ್.ವಿ.ರಸ್ತೆಯಲ್ಲಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿರುವವರಿಗೆ ಆರ್ಡರ್‌ಗಳನ್ನು ಹೆಚ್ಚಿಸಿಕೊಳ್ಳುವ ಬಯಕೆ. ಮಹಾರಾಷ್ಟ್ರ, ತಮಿಳುನಾಡುಗಳಿಂದಲೂ ಕಲಾವಿದರು ಇಲ್ಲಿಗೆ ಬಂದಿದ್ದಾರೆ. ಕಲಾವಿದರು ರಾಜ್ಯದೆಲ್ಲೆ ದಾಟಿ ದೇವರ ನೆನಪಿಸುವ ಸಮಯವಿದು. ದೊಡ್ಡ ಕೆರೆಯಿಂದೆದ್ದು ಅದಾಗಲೇ ಗಣೇಶ ಬರತೊಡಗಿದ್ದಾನೆ.

     

                                              ----

ಕಲಾವಿದನೊಬ್ಬ ಭತ್ತದ ಹುಲ್ಲನ್ನು ನೆಲದ ಮೇಲೆ ಹಾಕಿ ಅದಕ್ಕೊಂದಿಷ್ಟು ಹಸಿ ಎರೆಮಣ್ಣು ಸೇರಿಸಿ ನಯವಾಗಿ ಉಜ್ಜುತ್ತಿದ್ದ. ಮತ್ತೊಬ್ಬ ಸೊಂಡಿಲಿನ ಆಸುಪಾಸಿನಲ್ಲಿ ಬೆರಳಾಡಿಸುತ್ತಾ ಗಜಮುಖನ ಆಕೃತಿಯನ್ನು ಒಂದು ಹೆಜ್ಜೆ ಹಿಂದೆ ಹೋಗಿ ನೋಡಿ ಮತ್ತೊಂದಿಷ್ಟು ಮಣ್ಣನ್ನು ತೆಗೆದುಕೊಂಡು ಮುಂದೆ ಬಂದು ತಗ್ಗುಬಿದ್ದಿದ್ದ ಕೆನ್ನೆಯ ಭಾಗಕ್ಕೆ ಮೆತ್ತತೊಡಗಿದ.

ಇವರು ಕೋಲ್ಕತ್ತಾದಿಂದ ಬಂದ ಕಲಾವಿದರು.ಸೆಪ್ಟೆಂಬರ್‌ನಲ್ಲಿ ಬರುವ ಗಣೇಶ ಚತುರ್ಥಿಗಾಗಿ ಗಣಪನ ವಿಗ್ರಹಗಳನ್ನು ಮಾಡಲು ದೂರದ ಪಶ್ಚಿಮ ಬಂಗಾಳದಿಂದ ಬಂದವರು. ಸೂರ್ಯೋದಯವಾಗುತ್ತಿದ್ದಂತೆ ಮಣ್ಣಿನೊಂದಿಗೆ ಇವರ ಕೆಲಸ ಆರಂಭಗೊಳ್ಳುತ್ತದೆ. ಮೂರ್ತಿ ಮಾಡಲು ಬೇಕಾದ ರೀತಿಯಲ್ಲಿ ಎರೆಮಣ್ಣನ್ನು ಹದವಾಗಿ ತುಳಿದು ಒಂದೆಡೆ ಇಟ್ಟುಕೊಳ್ಳುತ್ತಾರೆ.ಒಬ್ಬ ಭತ್ತದ ಹುಲ್ಲಿನಿಂದ ಕಿವಿ, ಕಿರೀಟ, ಕೈ ಕಾಲುಗಳನ್ನು ಮಾಡುತ್ತಿದ್ದರೆ, ಮತ್ತೊಬ್ಬ ಸೊಂಡಿಲಿನ ಆಕಾರ ಸರಿಪಡಿಸುತ್ತಿರುತ್ತಾನೆ. ಬೆಂಗಳೂರಿನಲ್ಲೇ ಮಣ್ಣು, ಭತ್ತದ ಹುಲ್ಲು ಹಾಗೂ ಬಿದಿರನ್ನು ಖರೀದಿಸಿ ಸುಂದರ ಗಣೇಶ ಮೂರ್ತಿಗಳನ್ನು ಮಾಡುವ ಇವರು ರಾತ್ರಿ 12ರವರೆಗೂ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ.ಮೊದಲು ಬಿದಿರಿನಿಂದ ಟೇಬಲ್ ರೀತಿ ಮಾಡಿಕೊಳ್ಳುತ್ತಾರೆ. ನಂತರ ಭತ್ತದ ಹ್ಲ್ಲುಲಿನಿಂದ ಕಾಲು, ಹೊಟ್ಟೆ, ಮುಖ ಹಾಗೂ ಕೈಗಳ ಬಿಡಿ ಭಾಗಗಳನ್ನು ಬಿದಿರಿನ ಟೇಬಲ್ ಮೇಲೆ ಕೂರಿಸಿ ಏಕದಂತನ ಆಕಾರಕ್ಕೆ ತರುತ್ತಾರೆ. ಹಸಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಯಂತ್ರದಿಂದ ಬಿಸಿ ಮಾಡುತ್ತಾರೆ. ಕೆಲವು ವೇಳೆ ನೆರಳಿನಲ್ಲಿ ಒಣಗಿಸುತ್ತಾರೆ.ಒಣಗಿದ ವಿಗ್ರಹಗಳಿಗೆ ಒಂದೇ ಬಾರಿ ಬಣ್ಣ ಹಚ್ಚುತ್ತಾರೆ. ಜಲಮಾಲಿನ್ಯವಾಗದಂತೆ ಜಲವರ್ಣ ಲೇಪಿಸುತ್ತಾರೆ. ಮೂರ್ತಿ ತಯಾರಾಗುವ ಬಗೆಯ ಕುರಿತು ವಿವರಣೆ ನೀಡುವಾಗಲೂ ಅಸೀಂ ಪಾಲ್ ಕಾರ್ಯನಿರತರಾಗಿಯೇ ಇದ್ದರು. ದುರ್ಗೆ, ನಟರಾಜ, ಆಂಜನೇಯ, ಸರಸ್ವತಿ ಆಕಾರಗಳ ಜೊತೆಗೆ ನವಿಲು, ಸಿಂಹ, ನಾಗರಹಾವು, ಇಲಿ ಮೇಲೆ ಕುಳಿತ ನಾನಾ ಭಂಗಿಗಳಲ್ಲಿ ಪಾರ್ವತಿ ಪುತ್ರನನ್ನು ಸೃಷ್ಟಿಸುತ್ತಾರೆ.

 

ಪಶ್ಚಿಮ ಬಂಗಾಳದಲ್ಲಿ ಈ ರೀತಿಯ ಮಣ್ಣಿನ ಮೂರ್ತಿಗಳನ್ನು ಮಾಡುವ ಸಮುದಾಯಕ್ಕೆ `ಪಾಲ್~ ಎಂದು ಕರೆಯುತ್ತಾರೆ. ಅಸೀಂ ಪಾಲ್, ಆಕಾಶ್ ಪಾಲ್, ಅರವಿಂದ್ ಪಾಲ್, ಸುಜಯ್ ಪಾಲ್, ಬಾಪ್ಪಿ ಪಾಲ್, ವಿಶ್ವನಾಥ್ ಪಾಲ್, ಬಿಕಾಶ್ ಪಾಲ್, ಸುಜಿತ್ ಪಾಲ್, ಬಾಬು ಪಾಲ್, ಸತ್ಯಜಿತ್ ಪಾಲ್ ಕೋಲ್ಕತ್ತಾದಿಂದ ಬಂದಿರುವ ಕಲಾವಿದರು. ನಾಲ್ಕೈದು ತಿಂಗಳು ನಗರದಲ್ಲೇ ಬಿಡಾರ ಹೂಡುವ ಇವರು ಕಳೆದ ವರ್ಷ 250 ಗಣೇಶನ ವಿಗ್ರಹಗಳನ್ನು ಮಾಡಿದ್ದರು. ಈ ಬಾರಿ 350 ವಿಗ್ರಹಗಳನ್ನು ಮಾಡುವ ಗುರಿ ಹೊಂದಿದ್ದಾರೆ. ಕಳೆದ ಬಾರಿ ಹತ್ತು ವಿಗ್ರಹಗಳಷ್ಟೇ ಉಳಿದದ್ದು. ಹಾಗಾಗಿ ಯಾವುದೇ ನಷ್ಟ ಆಗಲಿಲ್ಲ. ಒಂದು ಗಣೇಶನ ವಿಗ್ರಹ ಮಾಡಲು ಮೂರು ತಿಂಗಳು ಬೇಕಾಗುತ್ತದೆ. ಮುನ್ನೂರು ವಿಗ್ರಹಗಳಿಗೆ ಒಂದೇ ಬಾರಿ ಬಣ್ಣ ಹಚ್ಚುತ್ತಾರೆ. ಮೂರ‌್ನಾಲ್ಕು ತಿಂಗಳು ಬೆವರು ಹರಿಸಿ, ಏಕಾಗ್ರತೆಯಿಂದ ಮಣ್ಣಿನ ಮೂರ್ತಿಗಳನ್ನು ಮಾಡಬೇಕು.ಹತ್ತು ವರ್ಷಗಳಿಂದ ಗಣೇಶನ ಮೂರ್ತಿಗಳನ್ನು ಮಾಡುತ್ತಿರುವ ಅಸೀಂ ಪಾಲ್‌ಗೆ ಈ ವೃತ್ತಿಯೇ ಜೀವನಾಧಾರ. `ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಶಾಲೆಯ ಮೆಟ್ಟಿಲನ್ನೂ ಏರಲಿಲ್ಲ. ಬದಲಾಗಿ ಗಣೇಶನ ವಿಗ್ರಹಗಳನ್ನು ಮಾಡಲು ಕಲಿತೆ. ಚಿಕ್ಕ ವಯಸ್ಸಿನಲ್ಲೇ ಮಣ್ಣಿನಿಂದ ದೇವರ ವಿಗ್ರಹಗಳನ್ನು ಮಾಡುತ್ತಿದ್ದೆ. ಅದೇ ಅಭ್ಯಾಸ ಮುಂದುವರೆಯಿತು, ಈಗ ಜೀವನಾಂಶಕ್ಕೂ ಅದೇ ಕಲೆ ದಾರಿ ಮಾಡಿಕೊಟ್ಟಿದೆ~ ಎಂದು ಬದುಕಿನ ಪುಟಗಳನ್ನು ಬಿಚ್ಚಿಡುತ್ತಾರೆ ಅಸೀಂ.ಚೌತಿಯಲ್ಲಿ ಗಣೇಶನ ವಿಗ್ರಹಗಳನ್ನು ಮಾಡುವ ಈ ಕಲಾವಿದರು ದಸರಾ ಸಂದರ್ಭದಲ್ಲಿ ದುರ್ಗೆ, ಜಗದಂಬಾ, ಸುಬ್ರಹ್ಮಣ್ಯ ಹಾಗೂ ಗೌರಿ ವಿಗ್ರಹಗಳನ್ನು ಮಾಡುತ್ತಾರೆ. ನವರಾತ್ರಿ ಸಂದರ್ಭದಲ್ಲಿ ದುರ್ಗೆಯ ವಿಗ್ರಹಗಳಿಗೆ ಕೋಲ್ಕತ್ತಾದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಹಾಗಾಗಿ ವರ್ಷದ ಬಹುತೇಕ ತಿಂಗಳುಗಳು ಕೆಲಸವಿರುವುದರಿಂದ ಜೀವನಾಂಶಕ್ಕೇನೂ ಕೊರತೆಯಿಲ್ಲ ಎನ್ನುವ ಅಸೀಂ ಗಣೇಶನ ಕೈಗಳಿಗೆ ಮಣ್ಣು ಮೆತ್ತುತ್ತಾ ತಾವೆಷ್ಟು ವರ್ಕೋಹಾಲಿಕ್ ಎಂಬುದನ್ನು ಪುಷ್ಟೀಕರಿಸುತ್ತಾರೆ.  ಈ ಕಲಾವಿದರಿಗೆಲ್ಲ ಸಂಬಳ ಕೊಡುವುದು ಸತ್ಯಜಿತ್ ಪಾಲ್. ನುರಿತ ಕಲಾವಿದರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿವರೆಗೆ ಸಂಬಳ ನೀಡುತ್ತಾರೆ. ಕಲಿಕೆಗಾಗಿ ಬರುವ ಯುವಕರಿಗೆ ಅವರ ಕೆಲಸಕ್ಕೆ ತಕ್ಕಂತೆ ಸಂಬಳ ಕೊಡುತ್ತಾರೆ.

 

ಆದರೆ ಕಲಿಯುವ ಉದ್ದೇಶದಿಂದ ಬರುವ ಯುವಕರು ಸಂಬಳದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಹೆಚ್ಚು.ಐದು ಅಡಿಯಿಂದ ಹದಿನೈದು ಅಡಿ ಎತ್ತರದವರೆಗಿನ ಗಣೇಶ ವಿಗ್ರಹಗಳನ್ನು ಇವರು ಮಾಡುತ್ತಾರೆ. ಈ ಕಲಾವಿದರು ಗಣೇಶ ಚತುರ್ಥಿ ಮುಗಿದ ಮೇಲೆ ದಸರಾ ಹಬ್ಬದವರೆಗೂ ನಗರದಲ್ಲಿರುತ್ತಾರೆ. ನಗರದಲ್ಲಿರುವ ಬಿಹಾರ, ಪಶ್ಚಿಮ ಬಂಗಾಳದವರು ದುರ್ಗೆಯ ವಿಗ್ರಹಗಳನ್ನು ಕೊಂಡುಕೊಳ್ಳುತ್ತಾರೆ. ಆ ಬೇಡಿಕೆ ಪೂರೈಸುವುದು ಇವರ ಠಿಕಾಣಿಯ ಉದ್ದೇಶ.ಗಣೇಶನ ವಿಗ್ರಹ ಕೂರಿಸಿ ಮೋಜು ಮಸ್ತಿಯಿಂದ ಮೆರವಣಿಗೆ ಮಾಡಿ ನೀರಿಗೆ ವಿಸರ್ಜಿಸುವ ಅನೇಕರಿಗೆ ಈ ಕಲಾವಿದರು ಬದುಕಿನುದ್ದಕ್ಕೂ ನಡೆಸುವ ಪ್ರವಾಸ, ಪಡುವ ಶ್ರಮದ ಅರಿವು ಇರುವುದಿಲ್ಲ.ಬದುಕು ಇರುವುದೇ ಹೀಗೆ ಎಂಬ ನಿರಾಳಭಾವದಲ್ಲಿ ಅಸೀಂ ಪಾಲ್ ಇನ್ನೊಂದು ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡಲು ಮುಂದಾದರು!          

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.