ಗುರುವಾರ , ಮೇ 13, 2021
22 °C

ಗಣಪನ ಹಬ್ಬಕ್ಕೆ ಅರಳಿದ ಗೌರಿ ಹೂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಗೌರಿ ಗಣೇಶನ ಹಬ್ಬಕ್ಕೂ ಗೌರಿ ಹೂವಿಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ ಈ ಹೂವು ಅರಳುವುದೇ ಗೌರಿಗಣೇಶ ಹಬ್ಬದ ಸಮಯದಲ್ಲಿ. ತಾಲ್ಲೂಕಿನ ಕುತ್ತಾಂಡಹಳ್ಳಿ ಗೇಟಿನ ಬಳಿ ಬೇಲಿಗೆ ಹಬ್ಬಿಕೊಂಡು ಅರಿಶಿನ ಕುಂಕುಮ ಬಣ್ಣವಿರುವ ಗೌರಿ ಹೂಗಳು ಗೊಂಚಲು ಗೊಂಚಲಾಗಿ ನಾಡ ಬಾವುಟವನ್ನು ಸಂಕೇತಿಸುವಂತೆ ಅರಳಿವೆ.`ಗ್ಲೋರಿಯೋಸಾ ಸೂಪರ್ಬಾ~ ಎಂದು ಕರೆಯಲ್ಪಡುವ ಈ ಹೂವನ್ನು ವಿಷಕನ್ಯೆಯೆಂದೂ ಸಹ ಕರೆಯಲಾಗುತ್ತದೆ. ತೆಲುಗಿನಲ್ಲಿ `ಪೊತ್ತಿದುಂಪ~ ಎಂದು ಕರೆದರೆ, ಸಂಸ್ಕೃತದಲ್ಲಿ ಅಗ್ನಿಮುಖಿ, ಲಾಂಗಲಿ, ನಾಬಿ ಎನ್ನುತ್ತಾರೆ. ಗರ್ಭಕೋಶದ ತೊಂದರೆಗಳಿಗೆ ಮತ್ತು ಇತರ ಕಾಯಿಲೆಗಳಿಗೆ ಇದನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸುತ್ತಾರೆ.ಲಾಂಟಾನಾ, ಕತ್ತಾಳೆ, ಕಳ್ಳಿ, ಕುರುಟಿ, ಮಿಂಡಿ, ಕಾಡುಹಣ್ಣುಗಳಂತೆ ಪೊದೆಗಿಡಗಳ ನಡುವೆ ಅತ್ಯಂತ ಸುರಕ್ಷಿತವಾಗಿ ಈ ಸಸ್ಯ ಬೆಳೆಯುತ್ತದೆ. ಇದರ ಎಲೆಗಳ ತುದಿಯು ಸುರುಳಿಯಂತಿದ್ದು ಆಶ್ರಯಿಸಿದ ಗಿಡವನ್ನು ಸುತ್ತಿಕೊಳ್ಳುವುದರ ಮೂಲಕ ಆಧಾರ ಪಡೆಯುತ್ತದೆ. ಮುಂಗಾರಿನಲ್ಲಿ ಮೊಳಕೆ ಹೊಡೆದು ಸೆಪ್ಟೆಂಬರಿನಲ್ಲಿ ಹೂಗಳು ಕಾಣಿಸಿಕೊಳ್ಳುತ್ತವೆ. ಮೊಗ್ಗು ತಿಳಿ ಹಸಿರು ಬಣ್ಣವಿದ್ದರೆ ಅರಳುವಾಗ ಹಳದಿ ಬಣ್ಣವನ್ನು ಹೊಂದುತ್ತಾ ನಂತರ ಪ್ರೌಢಾವಸ್ಥೆಯಲ್ಲಿ ಕಡು ಕೆಂಪು ಬಣ್ಣ ಬಂದು ಅರಿಶಿನ ಕುಂಕುಮ ಬಣ್ಣದ ನಮ್ಮ ನಾಡ ಬಾವುಟವನ್ನು ನೆನಪಿಸುತ್ತದೆ.`ಆಂಧ್ರದ ಗಡಿ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರಗಳಲ್ಲಿ ದೊರಕುವ ಈ ಸಸ್ಯಗಳು ಹೆಚ್ಚಿನ ಇಳುವರಿ ಕೊಡುತ್ತವೆ ಎಂದು ತಮಿಳುನಾಡಿನಿಂದ ಕೆಲವರು ಬಂದು ಗೌರಿಗೆಡ್ಡೆಗಳನ್ನು ಸಾಗಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡುತ್ತಿರುವುದು ವರದಿಯಾಗಿದೆ.ಅತ್ಯಂತ ಮೃದುವಾದ ಕಾಂಡವನ್ನು ಹೊಂದಿರುವ ಈ ಸಸ್ಯವನ್ನು ಎಲೆ, ಕಾಂಡ ಮತ್ತು ಗಡ್ಡೆ ಸೇರಿಸಿ ಸ್ಥಳಾಂತರಿಸುವುದು ಅಸಾಧ್ಯ. ಇದರ ಗಡ್ಡೆ ತೆಗೆಯುವುದೆಂದರೆ ಪರಿಸರದಲ್ಲಿ ಒಂದು ಗಿಡವನ್ನು ನಾಶಮಾಡಿದಂತೆ. ಹಾಗೆಯೇ ಪರಿಸರ ಮಾಲಿನ್ಯವಿದ್ದರೆ ಈ ಗಿಡ ಬದುಕುವುದಿಲ್ಲ. ಸ್ವಕೀಯ ಪರಾಗಸ್ಪರ್ಶದ ನಿರ್ಗಂಧಿ ಪುಷ್ಪವಾದರೂ ಪರಿಸರದೊಡನೆ ಸಂಕೀರ್ಣ ಸಂಬಂಧ ಹೊಂದಿರುವ, ಅನೇಕ ಔಷಧಿ ಗುಣಗಳನ್ನು ಪಡೆದಿರುವ ಹಾಗೂ ಶುಭ್ರ ಪರಿಸರದ ಮಾಪಕವಾದ ಗೌರಿಹೂಗಳು ನಳನಳಿಸುತ್ತಿದ್ದರೆ ನಾವಿರುವ ಪರಿಸರ ಮಾಲಿನ್ಯರಹಿತ ವಾಗಿದೆ ಎಂದು ಅರ್ಥ~ ಎಂದು ಶಿಕ್ಷಕ ಸ.ರಘುನಾಥ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.