ಶುಕ್ರವಾರ, ಜೂನ್ 18, 2021
27 °C

ಗಣಿಗಾರಿಕೆ ಅನುಮತಿ: ವಾಪಸ್‌ಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ 11 ಸಾವಿರ ಚದರ ಕಿ.ಮೀ. ಅರಣ್ಯದಲ್ಲಿ ಗಣಿಗಾರಿಕೆ ಅನುಮತಿ ನೀಡಿರುವ ಸರ್ಕಾರದ ತೀರ್ಮಾನರದ್ದುಪಡಿಸುವಂತೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾ ಡುತ್ತಿರುವ `ಸಮಾಜ ಪರಿವರ್ತನಾ ಸಮುದಾಯ~ (ಎಸ್‌ಪಿಎಸ್) ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.ಧಾರವಾಡ ಮೂಲದ ಎಸ್‌ಪಿಎಸ್ ಪರ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, 1999- 2004ರ ನಡುವೆ ಸಚಿವ ಸಂಪುಟ ಕೈ ಗೊಂಡಿರುವ ನಿರ್ಧಾರ ಕುರಿತು ಸುಪ್ರೀಂ ಕೋರ್ಟ್ ಗಮನ ಸೆಳೆಯಲಾಗಿದೆ. ಮುಂದಾಲೋಚನೆ ಇಲ್ಲದೆ ಕೈಗೊಂಡಿರುವ ಸರ್ಕಾರದ ತೀರ್ಮಾನ ಏಕಪಕ್ಷೀಯವಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ರದ್ದು ಮಾಡಿ `ರಕ್ಷಿತ ಅರಣ್ಯ~ ಎಂದು ಘೋಷಣೆ ಮಾಡಬೇಕು ಎಂದು ಕೇಳಲಾಗಿದೆ. ಸಿಇಸಿ ಗಣಿ ಗುತ್ತಿಗೆಗಳನ್ನು ಎ,ಬಿ ಮತ್ತು ಸಿ ಎಂದು ಮಾಡಿರುವ ವರ್ಗೀಕರಣ ರದ್ದು ಮಾಡಬೇಕು. ಗಣಿ ಗುತ್ತಿಗೆಗೆ ವೈಜ್ಞಾನಿಕ ವಿಧಾನ ರೂಪಿಸಬೇಕು. ಗಣಿಗಾರಿಕೆಯಿಂದ ಪರಿಸರಕ್ಕೆ ಹೆಚ್ಚು ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮವಾಗಿರುವ ಅರಣ್ಯ ಪ್ರದೇಶವನ್ನು ಗುರುತಿಸುವಂತೆ ಸಿಇಸಿಗೆ ಸೂಚಿಸಬೇಕು.ಇಂಥ ಸೂಕ್ಷ್ಮ ತಾಣಗಳಲ್ಲಿ ಗಣಿಗಾರಿಕೆಗೆ ಅವಕಾಶ ಇರಬಾರದು. ಅರಣ್ಯ ಪ್ರದೇಶದಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳ ಗುತ್ತಿಗೆ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.ಹರಾಜು ಮೂಲಕ ಮಾತ್ರವೇ ಗಣಿಗಾರಿಕೆಗೆ ಅವಕಾಶ ಕೊಡಬೇಕು. ಮಾರುಕಟ್ಟೆ ದರದ ಕನಿಷ್ಠ ಶೇ.40ರಷ್ಟನ್ನು ಗೌರವ ಧನವಾಗಿ ನಿಗದಿ ಮಾಡಬೇಕು. ಕಬ್ಬಿಣ ಅದಿರು ಗಣಿಗಾರಿಕೆಯಲ್ಲಿ ಶೇ.80ರಷ್ಟ ಲಾಭವಿದ್ದ 20ರಷ್ಟು ಮಾತ್ರ ಖರ್ಚಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ಆದರೆ, ಅದಿರಿಗೆ ಶೇ.10ರಷ್ಟು ಗೌರವ ಧನ ನಿಗದಿ ಮಾಡಿರುವುದು ಅವೈಜ್ಞಾನಿಕ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ 150 ಲಕ್ಷ ಟನ್ ಅದಿರು ಮಾತ್ರ ತೆಗೆಯಲು ಅನುಮತಿ ನೀಡಬೇಕು. ನೀತಿ- ನಿಯಮ ಉಲ್ಲಂಘನೆಗೆ ಅವಕಾಶ ಇಲ್ಲದಂತೆ ಎಲ್ಲ ಗಣಿ ಗುತ್ತಿಗೆಗಳ ಮೇಲೆ ನಿಗಾ ವಹಿಸಲು ಉಸ್ತುವಾರಿ ಸಮಿತಿ ರಚಿಸಬೇಕು. ಗುತ್ತಿಗೆ ಪ್ರದೇಶದ ಆಚೆಗೂ ಗಣಿಗಾರಿಕೆ ನಡೆಸಿರುವ ಪ್ರಕರಣ ಪತ್ತೆಗೆ `ಲೇಸರ್ ಮ್ಯಾಪಿಂಗ್~ನಂಥ ಆಧುನಿಕ ಉಪಕರಣ ಬಳಸಬೇಕು. ಆಂಧ್ರದಲ್ಲಿ `ಒಬಳಾಪುರಂ ಮೈನಿಂಗ್ ಕಂಪೆನಿ~ (ಒಎಂಸಿ) ತನಿಖೆಯಲ್ಲಿ ಸಿಬಿಐ ಈ ಉಪಕರಣ ಬಳಸಿದೆ ಎಂದು ವಿವರಿಸಲಾಗಿದೆ.ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಕಂಪೆನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು. ಮತ್ತೆ ಗಣಿ ಗುತ್ತಿಗೆ ಪಡೆಯಲು ಅವಕಾಶ ಕೊಡಬಾರದು. ಅಸೋಸಿಯೇಟ್ ಕಂಪೆನಿಗಳ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅಕ್ರಮ ಗಣಿಗಾರಿಕೆ ಹಿಂದೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳ ಅಕ್ರಮ ನಂಟಿದ್ದು ಸಿಬಿಐ ತನಿಖೆ ನಡೆಸಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಈ ಮಧ್ಯಂತರ ಅರ್ಜಿಯಲ್ಲಿ ಹೇಳಲಾಗಿದೆ. ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಪರಿಸರ ನಾಶಮಾಡಿ ಕಂಪೆನಿಗಳು ಲಾಭ ದೋಚಿದ್ದು ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸಿನಂತೆ ಐದು ಪಟ್ಟು ಅಧಿಕ ದಂಡ ವಸೂಲು ಮಾಡಬೇಕು. ಪರಿಸರ ಪುನರುಜ್ಜೀವನ ಮತ್ತು ಪುನರ್‌ವಸತಿ ಯೋಜನೆ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೇಳಲಾಗಿದೆ. ಸಿಇಸಿ ತನ್ನ ಅಂತಿಮ ವರದಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಕುರಿತು ಏನನ್ನೂ ಹೇಳಿಲ್ಲ ಎಂದು ತಿಳಿಸಲಾಗಿದೆ.

 

ಅಕ್ರಮ ಗಣಿಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಮುಂದಿನ ಶುಕ್ರವಾರ ಎಸ್‌ಪಿಎಸ್ ಅರ್ಜಿ ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ. ಅಂದೇ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಅಕ್ರಮ ವ್ಯವಹಾರಗಳ ಸಿಬಿಐ ತನಿಖೆ ಅಗತ್ಯವಿದೆಯೇ ಎಂದು ಸಿಇಸಿ ವರದಿ ಸಲ್ಲಿಸಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.