ಮಂಗಳವಾರ, ಜನವರಿ 28, 2020
19 °C

ಗಣಿಗಾರಿಕೆ: ರಾಜ್ಯದ ವಾದಕ್ಕೆ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಉಕ್ಕು ಉದ್ಯಮಗಳ ಬೇಡಿಕೆ ಪೂರೈಸಲು ಅದಿರು ಉತ್ಪಾದನೆಯನ್ನು 5 ಕೋಟಿ ಟನ್‌ಗೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಂಗಳ­ವಾರ ಮನವಿ ಮಾಡಿತು. ಇದರಿಂದ ರಾಜ್ಯದ ವಾದಕ್ಕೆ ಬಲ ಬಂದಂತಾಗಿದೆ.ಕರ್ನಾಟಕ ಸೋಮವಾರ ಅದಿರು ಉತ್ಪಾದನೆಯನ್ನು ಈಗಿರುವ ವಾರ್ಷಿಕ 3ಕೋಟಿಯಿಂದ 4ಕೋಟಿ ಟನ್‌ಗೆ ಹೆಚ್ಚಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಕೋರಿಕೆ ಸಲ್ಲಿಸಿತ್ತು. ಇದಾದ ಒಂದು ದಿನದಲ್ಲಿ ಕೇಂದ್ರ ಸರ್ಕಾರವು ಕರ್ನಾ­ಟಕದ ಬೇಡಿಕೆಗಿಂತ ಇನ್ನೂ ಒಂದು ಕೋಟಿ ಟನ್‌ ಅದಿರು ಉತ್ಪಾದನೆ ಹೆಚ್ಚಿಸುವಂತೆ ಮನವಿ ಮಾಡಿದೆ.ಕೇಂದ್ರ ಉಕ್ಕು ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ 3 ಕೋಟಿ ಟನ್‌ ಅದಿರು ಉಕ್ಕು ಉದ್ಯಮ­ಗಳ ಬೇಡಿಕೆ ಪೂರೈಸಲು ಸಾಕಾಗು­ವುದಿಲ್ಲ ಎಂದು ಅಭಿಪ್ರಾಯ­ಪಟ್ಟಿದೆ. ಉಕ್ಕು ಉತ್ಪಾದನೆಯಲ್ಲಿ ಭಾರತ ನಾಲ್ಕನೇ ದೊಡ್ಡ ರಾಷ್ಟ್ರ. ಜಾಗತಿಕವಾಗಿ ಎರಡನೇ ಸ್ಥಾನಕ್ಕೇರಲು ಬಯಸಿದೆ. ಕರ್ನಾಟಕ ಸೇರಿದಂತೆ ಪ್ರಾದೇಶಿಕವಾಗಿ ಅದಿರು ಕೊರತೆ ಆಗಿರುವುದರಿಂದ ಉದ್ಯಮಗಳು ಸಂಕಷ್ಟಕ್ಕೆ ಸಿಕ್ಕಿವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.ಅದಿರು ಕೊರತೆಯಿಂದಾಗಿ 32 ಬೀಡು ಕಬ್ಬಿಣದ ಉದ್ಯಮಗಳು ಉತ್ಪಾ­ದನೆ ನಿಲ್ಲಿಸಿವೆ. ಸಿದ್ಧ ಕಬ್ಬಿಣ ಉತ್ಪಾದನೆ  ಕಳೆದ ವರ್ಷ ಶೇ. 2.5 ರಷ್ಟು ಹೆಚ್ಚಿದೆ. ಆದರೆ, ಬಳಕೆ ಪ್ರಮಾಣ ಶೇ. 3.25ರಷ್ಟು ಏರಿಕೆಯಾಗಿದೆ. ದೇಶದ ಉಕ್ಕು ಉದ್ಯಮಗಳ ಸಾಮರ್ಥ್ಯ ಶೇ. 81ರಷ್ಟು ಕಡಿಮೆ ಆಗಿದೆ. ಹಿಂದೆಂದೂ ಈ ಪ್ರಮಾಣದಲ್ಲಿ ಉತ್ಪಾದನೆ ಕಡಿಮೆ ಆದ ಉದಾಹರಣೆ ಇಲ್ಲ. ಅದಿರು ಕೊರತೆಯಿಂದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ಕೊಡುಗೆ ಇದರಲ್ಲಿ ಸೇರಿಕೊಂಡಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.ಕರ್ನಾಟಕ ಸೋಮವಾರ ಅದಿರು ಉತ್ಪಾದನೆಯನ್ನು 3 ಕೋಟಿಯಿಂದ 4ಕೋಟಿ ಟನ್‌ಗೆ ಹೆಚ್ಚಿಸುವಂತೆ ಮನವಿ ಮಾಡಿದೆ. ಹೆಚ್ಚುವರಿ 1ಕೋಟಿ ಟನ್‌ ಅದಿರು ಉತ್ಪಾದನೆಗೆ ಬಳ್ಳಾರಿ, ಚಿತ್ರ­ದುರ್ಗ ಹಾಗೂ ತುಮಕೂರು ಜಿಲ್ಲೆ­ಗಳಲ್ಲಿ ಹೊಸದಾಗಿ ಗುತ್ತಿಗೆ ಕೊಡಲು ಅನುಮತಿ ನೀಡುವಂತೆ ಕೇಳಿದೆ.ಕೇಂದ್ರ ಸರ್ಕಾರ ಮಂಗಳವಾರದ ತನ್ನ ಮಧ್ಯಂತರ ಅರ್ಜಿಯಲ್ಲಿ, ಎ ಹಾಗೂ ಬಿ ವರ್ಗದ ಗಣಿಗಳನ್ನು ಕಾಲ ಮಿತಿ­ಯೊಳಗೆ ಪುನರಾರಂಭಿಸುವಂತೆ ಕರ್ನಾಟಕ ಸರ್ಕಾರ, ಕೇಂದ್ರ ಉನ್ನತಾ­ಧಿಕಾರ ಸಮಿತಿ, ಉಸ್ತುವಾರಿ ಸಮಿತಿಗೆ ಸೂಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.ಗಣಿಗಳ ಈಗಿನ ವರ್ಗೀಕರಣದ ಪ್ರಕಾರ 46 ಗಣಿ ಕಂಪೆನಿಗಳು ಎ ಗುಂಪಿ­ನಲ್ಲಿ 62 ಕಂಪೆನಿ ಬಿ ಗುಂಪಿನಲ್ಲಿವೆ. ಇದರಲ್ಲಿ ಮೊದಲ ಗುಂಪಿನಲ್ಲಿ 14 ಮತ್ತು ಎರಡನೇ ಗುಂಪಿನಲ್ಲಿ ಮೂರು ಗಣಿಗಳು ಮಾತ್ರ ಕಾರ್ಯಾರಂಭ ಮಾಡಿವೆ. ಉಳಿದ 91 ಗಣಿಗಳಲ್ಲಿ 85ಗುತ್ತಿಗೆಗಳನ್ನು ನವೀಕರಿಸಲಾಗಿದೆ. ಸಿ ಗುಂಪಿನಲ್ಲಿ 51 ಗುತ್ತಿಗೆಗಳನ್ನು ರದ್ದು ಮಾಡಲಾಗಿದೆ  ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)