ಮಂಗಳವಾರ, ಮೇ 17, 2022
25 °C

ಗದಗ-ಹರಿಹರ ರೈಲ್ವೆ ಯೋಜನೆ ಮಂಜೂರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗದಗ-ಹರಿಹರ ರೈಲ್ವೆ ಯೋಜನೆಗೆ ಮಂಜೂರಾತಿ ಕೊಡಬೇಕು ಹಾಗೂ  ಮೇಲ್ದರ್ಜೆಗೆ ಏರಿರುವ ಮುಂಡರಗಿ ರೈಲ್ವೆನಿಲ್ದಾಣ ನಿರ್ಮಾಣ ಕಾರ್ಯ ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿ ಮುಂಡರಗಿ ರೈಲ್ವೆ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಿದರು.ಮುಂಡರಗಿ ಹಾಗೂ ಹೂವಿನ ಹಡಗಲಿ ಮಾರ್ಗವಾಗಿ ಗದಗ- ಹರಿಹರ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಿತಿ ಕಾರ್ಯಕರ್ತರು ರೈಲ್ವೆ ಸಚಿವರಾದ ಮಮತಾ ಬ್ಯಾನರ್ಜಿ, ಕೆ.ಎಚ್. ಮುನಿಯಪ್ಪ  ಅವರಿಗೆ ಮನವಿ ಸಲ್ಲಿಸಿದರು.ಮುಂಡರಗಿ ತಾಲೂಕು ಕೇಂದ್ರ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಮ್ಯಾಂಗನೀಸ್, ಕಬ್ಬಿಣ, ಚಿನ್ನದ ಅದಿರು ಒಳಗೊಂಡಂತೆ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ದೇವಸ್ಥಾನ ಮತ್ತು ಪ್ರವಾಸಿ ತಾಣಗಳಿಂದ ಕೂಡಿದ್ದು, ರೈಲ್ವೆ ಮಾರ್ಗ ಅನಿವಾರ್ಯ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಗದಗ- ಹರಿಹರ ಮಾರ್ಗವನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ಹೊಸ ಮಾರ್ಗಗಳ ಪಟ್ಟಿಯಲ್ಲಿ ಇದು ಸೇರ್ಪಡೆ ಆಗದಿರುವುದರಿಂದ ಜನರಿಗೆ ಅಸಮಾಧಾನವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ರೈಲ್ವೆಗೆ ಲಾಭವಾಗಿರುವ ಹಾಗೂ ಜನರಿಗೆ ಅನುಕೂಲವಾಗಿರುವ ಗದಗ- ಹರಿಹರ ಯೋಜನೆಯನ್ನು ತಕ್ಷಣ ಪ್ರಕಟ ಮಾಡಬೇಕು ಎಂದು ಸಮಿತಿ ಕಾರ್ಯಕರ್ತರು ಆಗ್ರಹಿಸಿದರು. ಬಸವರಾಜ್ ನವಲಗುಂದ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಎಂ.ಪಿ. ನಾಡಗೌಡ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.