ಬುಧವಾರ, ಜನವರಿ 29, 2020
24 °C

ಗದ್ದಲವಿಲ್ಲದ ವಾರ್ಷಿಕ ಸಾಮಾನ್ಯ ಸಭೆ; ದಾಖಲೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಸಿಎ ಚುನಾವಣೆಗೆ ದಾಖಲೆಯ ಮತದಾನ ನಡೆದಿದೆ. ಕೆಎಸ್‌ಸಿಎಗೆ ನೂತನ ಆಡಳಿತದಾರರನ್ನು ಆಯ್ಕೆ ಮಾಡಲು 1344 ಸದಸ್ಯರು ಮತದಾನ ಮಾಡಿದರು.ಸಂಸ್ಥೆಯ ಚುನಾವಣಾ ಇತಿಹಾಸದಲ್ಲೇ ಇದು ಅತ್ಯಧಿಕ ಮತದಾನ. 2010ರಲ್ಲಿ ನಡೆದ ಚುನಾವಣೆ ವೇಳೆ 1080 ಸದಸ್ಯರು ಮತದಾನ ಮಾಡಿದ್ದರು. ಈ ಬಾರಿ ಅದಕ್ಕೆ 264 ಸದಸ್ಯರು ಸೇರ್ಪಡೆಯಾಗಿದ್ದಾರೆ. 23 ಸ್ಥಾನಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿಕೊನೆಗೊಂಡಿತು.ಮತದಾನ ಆರಂಭವಾಗಿದ್ದು ಮಧ್ಯಾಹ್ನ 1 ಗಂಟೆಗೆ. ಆದರೆ ಬೆಳಿಗ್ಗೆಯಿಂದಲೇ ಉಭಯ ಬಣದ ಬೆಂಬಲಿಗರು ಪ್ರಮುಖ ದ್ವಾರದ ಬಳಿ ನಿಂತು ಕರಪತ್ರ ಹಂಚುವ ಮೂಲಕ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಕಂಡುಬಂತು.ಆರಂಭದಲ್ಲಿ ಬಿರುಸಿನ ಮತದಾನ ನಡೆಯಿತು. ನಾಲ್ಕು ಗಂಟೆ ವೇಳೆ ಮತದಾನ ಮಾಡಿದ ಸದಸ್ಯರ ಸಂಖ್ಯೆ ಸಾವಿರ ದಾಟಿತ್ತು.

ಅನಿಲ್‌ ಕುಂಬ್ಳೆ ಹಾಗೂ ಜಾವಗಲ್‌ ಶ್ರೀನಾಥ್‌ ಮತ್ತೊಂದು ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದಾಗ ಈ ಬಾರಿಯ ಚುನಾವಣೆ ಏಕಮುಖಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಕುಂಬ್ಳೆ ಬಣದವರು  ಉದ್ಯಮಿ ಸದಾನಂದ ಮಯ್ಯ ಅವರನ್ನು ಕಣಕ್ಕಿಳಿಸಿದ್ದ ಕಾರಣ ಚುನಾವಣೆಯ ಕಾವು ಹೆಚ್ಚಿತ್ತು.  ಸ್ವತಃ  ಕುಂಬ್ಳೆ ಹಾಗೂ ಶ್ರೀನಾಥ್‌ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಆದರೆ ಅಂತಿಮವಾಗಿ ಕುಂಬ್ಳೆ ಬೆಂಬಲಿತ ಮಯ್ಯ ಬಣ ನಿರಾಸೆ ಅನುಭವಿಸಬೇಕಾಯಿತು.2007ರಲ್ಲಿ ಪರಸ್ಪರ ಎದುರಾಳಿಯಾಗಿ ಸ್ಪರ್ಧಿಸಿದ್ದ ಬ್ರಿಜೇಶ್‌ ಪಟೇಲ್‌ ಹಾಗೂ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಈ ಬಾರಿ ಒಟ್ಟಾಗಿ ಕಣಕ್ಕಿಳಿದಿದ್ದು ಫಲ ನೀಡಿತು. ಬ್ರಿಜೇಶ್‌ ಹಾಗೂ ಒಡೆಯರ್‌ ಹೊಂದಿರುವ ಮತಬ್ಯಾಂಕ್‌ ನೆರವಿಗೆ ಬಂತು. ಬೆಂಗಳೂರಿನ ಬಸವನಗುಡಿ, ಜಯನಗರ ಹಾಗೂ ಮಲ್ಲೇಶ್ವರ ಪ್ರದೇಶದ ಮತಗಳು ಒಡೆಯರ್‌ ಬಣದ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿವೆ ಎನ್ನಲಾಗಿದೆ.‘ನಾವು ಆರು ತಿಂಗಳಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದೆವು. ಪ್ರಮುಖವಾಗಿ ಬ್ರಿಜೇಶ್‌ ಅವರು ಪ್ರತಿ ಸದಸ್ಯರನ್ನು ಭೇಟಿಯಾಗಿ ಅವರ ಸಮಸ್ಯೆ ಕೇಳಿದ್ದರು. ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇದು ತಂಡದ ಗೆಲುವು’ ಎಂದು ಒಡೆಯರ್‌ ಬಣದಿಂದ ವ್ಯವಸ್ಥಾಪಕ ಸಮಿತಿಗೆ ಆಯ್ಕೆಯಾಗಿರುವ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ದೊಡ್ಡ ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಗದ್ದಲವಿಲ್ಲದ ಸಭೆ: ಬೆಳಿಗ್ಗೆ 11 ಗಂಟೆಗೆ ಆರಂಭವಾದ 77ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರೀಕ್ಷಿಸಿದಷ್ಟು ಗದ್ದಲವಿರಲಿಲ್ಲ. ಆರಂಭದಲ್ಲಿ ಆಜೀವ ಸದಸ್ಯರ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು. ‘ಆರಂಭದಲ್ಲಿ ಬ್ರಿಜೇಶ್‌ ಬಣದ ಕೆಲವರು ಕುಂಬ್ಳೆ ಹಾಗೂ ಶ್ರೀನಾಥ್‌ ವಿರುದ್ಧ ಏರಿದ ಧ್ವನಿಯಲ್ಲಿ ಮಾತನಾಡಿದರು. ಮೂರು ವರ್ಷಗಳಲ್ಲಿ ಸದಸ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಪಂದ್ಯಗಳ ಟಿಕೆಟ್‌ ಕೂಡ ಸರಿಯಾಗಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಉಭಯ ಬಣಗಳ ನಡುವೆ ಸ್ವಲ್ಪ ಹೊತ್ತು ವಾಗ್ವಾದ ನಡೆಯಿತು’ ಎಂದು ಸಭೆಯಲ್ಲಿದ್ದ ಸದಸ್ಯರೊಬ್ಬರು ಈ ಪತ್ರಿಕೆಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)