ಶುಕ್ರವಾರ, ಮೇ 20, 2022
27 °C

ಗರ್ಭಕೋಶ ಗಡ್ಡೆಗೆ ನವೀನ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ಭಕೋಶ ಗಡ್ಡೆಗೆ ನವೀನ ಚಿಕಿತ್ಸೆ

ಗರ್ಭಕೋಶದ ಸಮಸ್ಯೆ ಮತ್ತು ಅದರ ಗಡ್ಡೆ ಮುಂದೆ ಕ್ಯಾನ್ಸರ್‌ಗೆ ತಿರುಗುವುದನ್ನು ತಡೆಯಲು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇಂಥ ಬಹುತೇಕ ಸಂದರ್ಭಗಳಲ್ಲಿ ಗರ್ಭಕೋಶವನ್ನೇ ತೆಗೆಯಬೇಕಿತ್ತು. ಇದರಿಂದಾಗಿ ಆಕೆಗೆ ಮುಂದೆ ಮಕ್ಕಳಾಗದೆ ಅನೇಕ ಸಲ ಬಂಜೆ ಎನಿಸಿಕೊಂಡು ಜೀವಮಾನ ಕೊರಗಬೇಕಿತ್ತು.ಆದರೆ ಕ್ಲುಮ್ಯಾಕ್ಸ್ ಡಯಗ್ನಾಸ್ಟಿಕ್ ಗರ್ಭಕೋಶದಲ್ಲಿ ಬೆಳೆಯುವ ಗಡ್ಡೆಗೆ ನೇರ ಚಿಕಿತ್ಸೆ ನೀಡುವ ವಿಧಾನ ಕಂಡು ಕೊಂಡಿದೆ. ಇದರಲ್ಲಿ ಮಹಿಳೆಯ ಗರ್ಭಕೋಶ ತೆಗೆಯುವ ಅಗತ್ಯವಿಲ್ಲ. ಹೀಗಾಗಿ ಮಹಿಳೆಯೊಬ್ಬಳು ತಾಯಿಯಾಗುವ ಸೌಭಾಗ್ಯದಿಂದ ವಂಚಿತಳಾಗುವುದಿಲ್ಲ.ಇಲ್ಲಿ ಎಂಆರ್‌ಐ ಸಂಚಾಲಿತ ಹೈ ಇಂಟೆನ್ಸಿಟಿ ಫೋಕ್ಸ್ಡ್ ಅಲ್ಟ್ರಾ ಸೌಂಡ್ (ಎಚ್‌ಐಎಫ್‌ಯು) ವಿಧಾನ ಬಳಸಲಾಗುತ್ತದೆ. ಕ್ಯಾನ್ಸರ್‌ಗೆ ದಾರಿ ಮಾಡಿಕೊಡುವ ಗರ್ಭಾಶಯದ ಗಡ್ಡೆಯನ್ನು ಅಲ್ಟ್ರಾಸೋನಿಕ್ ವಿಧಾನದಿಂದ ಸುಡಲಾಗುತ್ತದೆ. ಇದರಿಂದ ಇತರೆ ಅಂಗಾಂಶಗಳಿಗೆ ಹಾನಿಯಾಗುವುದಿಲ್ಲ. ಅಲ್ಲದೇ ಮ್ಯೋಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂಆರ್‌ಐ) ನಿಖರವಾಗಿರುವುದರಿಂದ ಕ್ಯಾನ್ಸರ್‌ಕಾರಕ ಅಂಶಗಳನ್ನು ಇತರ ಅಂಗಾಂಶಗಳಿಗೆ ಹಾನಿಯಾಗದಂತೆ ತಡೆಗಟ್ಟಲು ಸಹಾಯಕವಾಗಿದೆ.ಚಿಕಿತ್ಸೆ ಸಂದರ್ಭದಲ್ಲಿ ಯಾವುದೇ ಅರಿವಳಿಕೆ, ವಿಕಿರಣದ ಅಪಾಯ ಇಲ್ಲ. ಹೆಚ್ಚು ನಿಖರವಾದ ಚಿತ್ರ ಮಾರ್ಗದರ್ಶನ ಚಿಕಿತ್ಸೆ ಇದಾಗಿದೆ. ಗರ್ಭಕೋಶ ಸಂರಕ್ಷಣೆ, ಕ್ಷಿಪ್ರವಾಗಿ ಚೇತರಿಕೆ ಮತ್ತು ಕಡಿಮೆ ಒತ್ತಡ ಇದರ ಪ್ರಮುಖ ಅಂಶಗಳು.

 

ಇಡೀ ಪ್ರಕ್ರಿಯೆಗಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಅಗತ್ಯವಿಲ್ಲ. ಏಕೆಂದರೆ ಇದು ಕೆಲವೇ ಗಂಟೆಗಳಲ್ಲಿ ಮುಗಿದು ಬಿಡುವುದರಿಂದ ರೋಗಿಯು ಕ್ಲಿನಿಕ್ ಅಥವಾ ಆಸ್ಪತ್ರೆಯಿಂದ ಅದೇ ದಿನ ಮನೆಗೆ ಹಿಂತಿರುಗ ಬಹುದು. ಒಂದೆರಡು ದಿನಗಳಲ್ಲಿಯೇ ಸಾಮಾನ್ಯ ಜೀವನಕ್ಕೆ ಹಿಂತಿರುಗಬಹುದು.

 

ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚದಲ್ಲಿಯೇ ಅಲ್ಟ್ರಾಸೋನಿಕ್ ಚಿಕಿತ್ಸೆ ಪಡೆಯಬಹುದು ಎನ್ನುತ್ತಾರೆ ಕ್ಲುಮಾಕ್ಸ್‌ನ ಡಾ. ಶ್ರೀನಿವಾಸನ್ ರಾಧೇಶ್. ಫಿಲಿಪ್ಸ್ ಅಭಿವೃದ್ಧಿಪಡಿಸಿದ ಎಂಆರ್‌ಐ ಗೈಡೈಡ್ ಎಚ್‌ಐಎಫ್‌ಯು ಸಾಧನವನ್ನು ಪ್ರಾಯೋಗಿಕವಾಗಿ ಕ್ಯಾನ್ಸೇತರ ಗೆಡ್ಡೆಗಳಾದ ಗರ್ಭಾಶಯದ ಗೆಡ್ಡೆ, ಮೂಳೆಯ ಶಿಥಿಲತೆ ಮುಂತಾದ ಸಮಸ್ಯೆಗಳಲ್ಲಿ ಚಿಕಿತ್ಸೆಗೆ ಬಳಸಲು ಅನುಮತಿ ದೊರೆತಿದೆ.ಗರ್ಭಾಶಯದ ಗಡ್ಡೆ (ಫೈಬ್ರಾಡ್ಡ್) ಮಹಿಳೆಯರಲ್ಲಿ ಸಹಜ. ಋತುಸ್ರಾವದ ವೇಳೆ ಅತಿಯಾದ ಮುಟ್ಟಿನ ಸ್ರಾವ, ದೀರ್ಘಕಾಲದ ಮುಟ್ಟಿನ ಅವಧಿ (ಮುಟ್ಟಿನ ರಕ್ತಸ್ರಾವ ಏಳು ದಿನಗಳು ಅಥವಾ ಹೆಚ್ಚು), ನೋವು, ಅನಿಯಮಿತ ಮೂತ್ರ ವಿಸರ್ಜನೆ, ಕಾಲು ನೋವು, ಮಲಬದ್ಧತೆ ಮುಂತಾದವು ತೀವ್ರವಿದ್ದರೆ ಗರ್ಭಾಶಯದ ಗಡ್ಡೆಯ ಸಮಸ್ಯೆ ಇರಬಹುದು.ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅನೇಕ ಮಹಿಳೆಯರಲ್ಲಿ ಇದು ಕೆಲವೊಮ್ಮೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದಕಾರಣ ಅನೇಕ ಮಹಿಳೆಯರಿಗೆ ಇದರ ಅರಿವಿರುವುದಿಲ್ಲ. ವೈದ್ಯಕೀಯ ಆರೋಗ್ಯ ತಪಾಸಣೆಯ ವೇಳೆ ಇದು ಪತ್ತೆಯಾಗುತ್ತದೆ. ಅಥವಾ ಹೆರಿಗೆ ಪೂರ್ವದ ಅಲ್ಟ್ರಾಸೌಂಡ್ ಸಮಯದಲ್ಲಿ ಆಕಸ್ಮಿಕವಾಗಿ ಪತ್ತೆಯಾಗುವ ಸಾಧ್ಯತೆ ಇದೆ.`ಎಂಆರ್‌ಐ ಗೈಡೆಡ್ ಎಚ್‌ಐಎಫ್‌ಯು ಹೆಚ್ಚು ನಿಖರ, ಸುರಕ್ಷಿತ ಹಾಗೂ ವಿಕಿರಣ-ಮುಕ್ತವಾಗಿದೆ. ಆಕ್ರಮಣಕಾರಿ ಅಲ್ಲದ ಈ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು~ ಎನ್ನುತ್ತಾರೆ ಡಾ. ಶ್ರೀನಿವಾಸನ್.ಈ ನೂತನ ಚಿಕಿತ್ಸಾ ವಿಧಾನ ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಅಮೆರಿಕದಲ್ಲಿ ಬಳಕೆಗೆ ಬಂದಿದೆ. ಗ್ನೊಸ್ಟಿಕ್ ಪ್ರೈ. ಲಿಮಿಟೆಡ್ ( ಮೆಡಾಲ್ ಅಧೀನದ ಕಂಪನಿ)  ಫಿಲಿಪ್ಸ್‌ನ ಎಂಆರ್‌ಐ ನಿರ್ದೇಶಿತ ಹೈ ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್ (ಎಚ್‌ಐಎಫ್‌ಯು) ಸೌಲಭ್ಯ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಲಾಗಿದೆ.ಸದಾಶಿವ ನಗರದ ಕ್ಲುಮ್ಯಾಕ್ಸ್ ಡಯಗ್ನಾಸ್ಟಿಕ್ ಸೆಂಟರ್‌ನಲ್ಲಿ ಈ ಚಿಕಿತ್ಸಾ ವಿಧಾನದ ಸೌಲಭ್ಯ ಪಡೆಯಬಹುದು ಎನ್ನುತ್ತಾರೆ ಕ್ಲುಮ್ಯಾಕ್ಸ್ ಡಯಗ್ನಾಸ್ಟಿಕ್ ರಿಸರ್ಚ್ ಅಂಡ್ ಕ್ಲಿನಿಕಲ್ ಸೈನ್ಸ್‌ನ ಸಿಇಒ ಡಾ. ಶ್ಯಾಮ್ ಸೊಕ್ಕಾ, ಫಿಲಿಪ್ಸ್ ಹೆಲ್ತ್‌ಕೇರ್ ಇಂಡಿಯಾದ ಇಮೇಜ್ ಗೈಡೆಡ್ ಥೆರಪಿಯ ಹಿರಿಯ ನಿರ್ದೇಶಕ ರವೀಂದ್ರನ್ ಗಾಂಧಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.