ಶುಕ್ರವಾರ, ಮೇ 20, 2022
19 °C

ಗರ್ಭಗುಡಿ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ

ಮಲ್ಲೇಶ್ ನಾಯಕನಹಟ್ಟಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ಭಗುಡಿ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ

ದಾವಣಗೆರೆ: ಜಿಲ್ಲೆಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಈ ಹಿಂದೆ ಸರ್ಕಾರ ಉದ್ದೇಶಿಸಿದ್ದ `ಗರ್ಭಗುಡಿ ಕಿರು ಜಲಾಶಯ ನಿರ್ಮಾಣ ಯೋಜನೆ~ ನಿರ್ಮಾಣ ಕಾಮಗಾರಿಗೆ  ಸರ್ಕಾರ  ್ಙ 47.1 ಕೋಟಿ ಪರಿಷ್ಕೃತ ಅನುದಾನ ಮಂಜೂರು ಮಾಡಿದ್ದು, ದಶಕದಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ಸಿಗಲಿದೆ.1998ರಲ್ಲಿ ಜೆ.ಎಚ್. ಪಟೇಲ್ ಸರ್ಕಾರ ಈ ಯೋಜನೆಗಾಗಿ ್ಙ 930 ಲಕ್ಷ ಅನುದಾನ ಮಂಜೂರು ಮಾಡಿತ್ತು. 1999ರಲ್ಲಿ ತಾಂತ್ರಿಕ ಅನುಮೋದನೆ ದೊರೆತ ನಂತರ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಯೋಜನೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ತದನಂತರ ಕಾಮಗಾರಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸಂಪೂರ್ಣ ಮರಳು ಸಿಕ್ಕಿ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಯೋಜನೆ ಸ್ಥಗಿತಗೊಂಡಿತ್ತು.ಆದರೆ, ಮರಳು ತೆಗೆದು ಭೂಮಿಯ ರಂಧ್ರ ಕೊರೆದು ಕಾಂಕ್ರೀಟ್ ಸ್ತಂಭಗಳನ್ನು ನಿರ್ಮಿಸುವ ಮೂಲಕ ಜಲಾಶಯ ನಿರ್ಮಾಣ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ. ಈಚೆಗೆ ಸಣ್ಣ ನೀರಾವರಿ ಇಲಾಖೆ ಯೋಜನೆ ಆರಂಭಕ್ಕೆ  ಪರಿಷ್ಕೃತ ಅನುದಾನಕ್ಕಾಗಿ ಸರ್ಕಾರಕ್ಕೆ  ಪ್ರಸ್ತಾವ ಕಳುಹಿಸಿತ್ತು. ಇದೀಗ ಸರ್ಕಾರ  ಪರಿಷ್ಕೃತ ಅನುದಾನ ಮಂಜೂರು ಮಾಡಿದ್ದು, ್ಙ 45.25 ಕೋಟಿಗೆ ಟೆಂಡರ್ ಹರಾಜು ಪ್ರಕ್ರಿಯೆ ಮುಗಿದಿದೆ. ಮಳೆಗಾಲ ಮುಗಿದ ನಂತರ  ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ~ ಎಂದು ಜಿಲ್ಲಾ ಸಣ್ಣ ನೀರಾವರಿ ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರಾನಂದಮೂರ್ತಿ `ಪ್ರಜಾವಾಣಿ~ ಗೆ ಮಾಹಿತಿ ನೀಡಿದರು.ಯೋಜನೆಯ ಉದ್ದೇಶವೇನು?


ನೀರಾವರಿ, ಕುಡಿಯುವ ನೀರು, ಸಂಪರ್ಕ ಸೇತುವೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ವಿವಿಧೋದ್ದೇಶಗಳನ್ನು ಯೋಜನೆ ಒಳಗೊಂಡಿದೆ. ಕಿರು ಜಲಾಶಯ ನಿರ್ಮಾಣದಿಂದ ನದಿಪಾತ್ರದಲ್ಲಿ 19 ಕಿ.ಮೀ. ಉದ್ದಕ್ಕೂ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಗೊಳ್ಳಲಿದೆ. ಇದರಿಂದಾಗಿ ಹರಪನಹಳ್ಳಿ ತಾಲ್ಲೂಕಿನ ಕಡತಿ, ನಂದ್ಯಾಲ,  ನಿಟ್ಟೂರು, ತಾವರಗೊಂದಿ, ಹಲವಾಗಲು ಹಾಗೂ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹಿರೇಬಿದರಿ, ಉದರಗಟ್ಟಿ, ಬೇಲೂರು ಗ್ರಾಮಗಳ ಒಟ್ಟು 3,100 ಎಕರೆ  ರೈತರ ಅರೆಖುಷ್ಕಿ ಭೂಮಿಗೆ ನೀರೊದಗಿಸಬಹುದು.

 

ಇದರ ಹಿನ್ನೀರನ್ನು ಬಳಸಿಕೊಂಡು  ಹರಪನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಆಯ್ದ ನೂರಾರು ಗ್ರಾಮಗಳಿಗೆ ಕುಡಿಯುವ  ನೀರು  ಪೂರೈಕೆ ಯೋಜನೆ ಉದ್ದೇಶಿಸಲಾಗಿದೆ. ಜತೆಗೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ `ಏತ ನೀರಾವರಿ ಯೋಜನೆ~ ಮೂಲಕ ಹರಪನಹಳ್ಳಿ- ಹಡಗಲಿ ತಾಲ್ಲೂಕಿನ ನೂರಾರು ಕೆರೆಗಳಿಗೆ ನೀರು ತುಂಬಿಸಲು ಯೋಜಿಸಲಾಗಿದೆ.

 

ಅನುಕೂಲ ಕಲ್ಪಿಸುವ ಸೇತುವೆ


ಇಲ್ಲಿ ಸೇತುವೆಯನ್ನು ಮುಳುಗಡೆ ಸೇತುವೆಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದಾಗಿ ಹರಪನಹಳ್ಳಿ- ರಾಣೇಬೆನ್ನೂರು ತಾಲ್ಲೂಕುಗಳ ನಡುವೆ 25 ಕಿ.ಮೀ. ಅಂತರ ಕಡಿಮೆಯಾಗಲಿದೆ. ಹಾಗಾಗಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು -ಹರಪನಹಳ್ಳಿ, ರಾಣೇಬೆನ್ನೂರುಗಳ ನಡುವಿನ  ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.`ಬಚಾವತ್ ಆಯೋಗ ವರದಿ ಪ್ರಕಾರ ಈ ಯೋಜನೆ ಕಾಮಗಾರಿ 2000ನೇ ಸಾಲಿನಲ್ಲಿ ಪೂರ್ಣಗೊಳ್ಳಬೇಕಿತ್ತು. ಈಗಲಾದರೂ ಗರ್ಭಗುಡಿ ಕಿರು ಜಲಾಶಯ  ಯೋಜನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದು ರೈತಾಪಿ ಜನರು ಸಂತಸಪಡುವಂತಾಗಿದೆ. ಇದೇ ರೀತಿಯಲ್ಲಿ ಹರಿಹರ-ಕೊಟ್ಟೂರು ರೈಲು ಸಂಚಾರ, ಹತ್ತಾರು ಏತನೀರಾವರಿ ಯೋಜನೆಗಳು ಇನ್ನೂ ಕಾರ್ಯಗತಗೊಂಡರೆ ಮಧ್ಯ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗಲಿದೆ~ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.