ಶನಿವಾರ, ಜೂನ್ 19, 2021
24 °C

ಗಲಭೆ ಕುರಿತು ದತ್ತ ವರದಿ: ಪೊಲೀಸರಿಂದ ಗುಪ್ತಚರ ವರದಿ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 2ರಂದು ನಗರ  ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ನಡೆಸುವ ಸಾಧ್ಯತೆ ಕುರಿತ ಗುಪ್ತಚರ ವರದಿಯನ್ನು ನಿರ್ಲಕ್ಷಿಸಿದ ಸ್ಥಳೀಯ ಡಿಸಿಪಿ ಡಾ.ಜಿ.ರಮೇಶ್ ಮತ್ತು ಬಂದೋಬಸ್ತ್‌ಗೆ ನಿಯೋಜಿಸಿದ್ದ ಇತರೆ ಪೊಲೀಸ್ ಅಧಿಕಾರಿಗಳು, ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದರು ಎಂದು ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಕೋರ್ಟ್‌ಗೆ ಕರೆತಂದ ಸಂದರ್ಭದಲ್ಲಿ ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮಿತಿಮೀರಿ ವರ್ತಿಸಿದ್ದಾರೆ ಎಂಬ ಆರೋಪಗಳ ಕುರಿತು ಆಂತರಿಕ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ದತ್ತ ಅವರಿಗೆ ಸರ್ಕಾರ ಆದೇಶಿಸಿತ್ತು. ದತ್ತ ಸೋಮವಾರ ವರದಿ ಸಲ್ಲಿಸಿದರು.ಘಟನೆ ನಡೆದ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೈಮೀರಿದ ಹಂತದಲ್ಲಿತ್ತು. ಇಂತಹ ಸಂದರ್ಭದಲ್ಲಿ ಲಾಠಿ ಪ್ರಹಾರಕ್ಕೆ ಆದೇಶ ನೀಡಿದ ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ಸಮರ್ಪಕ ನಿಯಂತ್ರಣ ಸಾಧಿಸಲು ವಿಫಲರಾಗಿದ್ದರು. ಇದು ಕೆಲ ಪೊಲೀಸರು ಅತಿರೇಕದಿಂದ ವರ್ತಿಸಲು ಕಾರಣವಾಯಿತು.ನಗರ ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಸ್ಥಳದಲ್ಲಿದ್ದರೂ, ಅವರ ಉಪಸ್ಥಿತಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ದತ್ತ ಅವರು ವರದಿಯಲ್ಲಿ ತಿಳಿಸಿದ್ದಾರೆ.ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ದ್ವೇಷ ಹೊಗೆಯಾಡುತ್ತಿರುವ ಸಂಗತಿ ತಿಳಿದ ಬಳಿಕ ಸ್ಥಳೀಯ ಡಿಸಿಪಿ, ಎಸಿಪಿ ವಕೀಲರ ಸಂಘದ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆ ನಡೆಸಿ, ಜನಾರ್ದನ ರೆಡ್ಡಿ ಅವರನ್ನು ಹಾಜರುಪಡಿಸುವ ಸಂದರ್ಭದಲ್ಲಿ ವರದಿಗಾರಿಕೆಗೆ ಸೂಕ್ತ ಅವಕಾಶ ಕಲ್ಪಿಸಬೇಕಿತ್ತು. ಇಂತಹ ಕ್ರಮ ಕೈಗೊಂಡಿರಲಿಲ್ಲ. ಭದ್ರತಾ ಕಾರ್ಯಕ್ಕೆ ಸರಿಯಾದ ವ್ಯವಸ್ಥೆಯನ್ನೂ ಮಾಡಿರಲಿಲ್ಲ.ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಸಂಘರ್ಷ ಉಂಟಾದ ತಕ್ಷಣ ಅದನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ. ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹಳಿತಪ್ಪಿತು. ಭದ್ರತಾ ಕಾರ್ಯದಲ್ಲಿದ್ದ ಎಸಿಪಿಗಳಾದ ಗಚ್ಚಿನಕಟ್ಟಿ (ದೇವನಹಳ್ಳಿ), ವಿ.ಶೇಖರ್ (ವಿಜಯನಗರ) ಮತ್ತು ವೀರಭದ್ರೇಗೌಡ (ಬನಶಂಕರಿ) ಇಂತಹ ಲೋಪಕ್ಕೆ ಹೊಣೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.`ಜನಾರ್ದನ ರೆಡ್ಡಿ ಅವರನ್ನು ಕರೆತರುವ ಮುನ್ನವೇ ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯನ್ನು ವಿರೋಧಿಸಿ ವಕೀಲರು ಆರಂಭಿಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಸ್ಥಳದಲ್ಲಿದ್ದ ಹಲಸೂರು ಗೇಟ್ ಎಸಿಪಿ ಜಿತೇಂದ್ರನಾಥ್ ಅವರು ಪರಿಸ್ಥಿತಿಯು ಗಂಭೀರ ಸ್ವರೂಪ ಪಡೆಯುತ್ತಿರುವ ವಿಷಯವನ್ನು ಕೇಂದ್ರ ವಿಭಾಗದ ಡಿಸಿಪಿ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದರು.ನ್ಯಾಯಾಲಯದ ವಿಚಾರಣೆ ಮುಗಿದು ಜನಾರ್ದನ ರೆಡ್ಡಿ ಅವರನ್ನು ಹೊರತಂದ ಬಳಿಕ ಬೆಂಗಾವಲು ಒದಗಿಸಲು ಅವರ ಹಿಂದೆಯೇ ಬೌರಿಂಗ್ ಆಸ್ಪತ್ರೆಯ ಕಡೆ ತೆರಳಿದ್ದರು~ ಎಂದು ಸಿಐಡಿ ಡಿಜಿಪಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.`ಡಿಸಿಪಿ ರಮೇಶ್ ಅವರು ಪೂರ್ಣ ಭದ್ರತಾ ಕಾರ್ಯದ ನೇತೃತ್ವ ವಹಿಸಿದ್ದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದ ವೇಳೆ ತಾವೇ ಮುಂಚೂಣಿಯಲ್ಲಿ ನಿಂತು ಪರಿಸ್ಥಿತಿ ನಿಯಂತ್ರಿಸಬೇಕಿತ್ತು. ಆದರೆ, ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದರು.ಇದೇ ರೀತಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭದ್ರತಾ ಕಾರ್ಯದ ಉಸ್ತುವಾರಿಯನ್ನು ಪಶ್ಚಿಮ ವಿಭಾಗದ ಡಿಸಿಪಿ ಸಿದ್ದರಾಮಪ್ಪ ಅವರಿಗೆ ವಹಿಸಲಾಗಿತ್ತು. ನ್ಯಾಯಾಲಯದಿಂದ ನಿರ್ಗಮಿಸುತ್ತಿದ್ದ ವಕೀಲರಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡುವಲ್ಲಿ ಅವರು ಕೂಡ ವಿಫಲರಾಗಿದ್ದರು~ ಎಂಬ ಅಂಶ ವರದಿಯಲ್ಲಿದೆ.ಲಾಠಿ ಪ್ರಹಾರದ ವೇಳೆ ಅತಿರೇಕದಿಂದ ವರ್ತಿಸಿರುವ ಪೊಲೀಸರು, ವಾಹನಗಳಿಗೆ ಹಾನಿ ಮಾಡಿರುವವರು ಮತ್ತು ನಿಸ್ತಂತು ವ್ಯವಸ್ಥೆಯಲ್ಲಿ (ವೈರ್‌ಲೆಸ್) ಕೀಳುಮಟ್ಟದ ಭಾಷೆಯನ್ನು ಬಳಸಿರುವವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪೊಲೀಸರನ್ನು ಗುರುತಿಸಿ, ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.