ಸೋಮವಾರ, ಏಪ್ರಿಲ್ 12, 2021
24 °C

ಗಾನಸುಧೆ ಜತೆಗೆ ಸಾಹಿತ್ಯ ಸಿಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾಸನದ ಸಂಗೀತ, ಸಾಹಿತ್ಯ ಆಸಕ್ತರಿಗೆ ಮನರಂಜನೆಯ ಬೋನಸ್ ಲಭಿಸಿದೆ. ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಹಾಗೂ ಸೋಮವಾರಗಳಂದು ಹಮ್ಮಿಕೊಂಡಿದ್ದ ಎರಡು ಅಪರೂಪದ ಕಾರ್ಯಕ್ರಮಗಳು ಜನರ ಮನತಣಿಸಿದವು.ಭಾನುವಾರ ಸಂಜೆ ಬೆಳ್ಳಿ ಮಂಡಲ ಜಿಲ್ಲಾ ಸಮಿತಿ, ಕ.ಸಾ.ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಮ್ಮಿಕೊಂಡಿದ್ದ `ಕನ್ನಡ ನಮನ~ ಕಾರ್ಯಕ್ರಮದಲ್ಲಿ ಕನ್ನಡ ಗಾನ ಸುಧೆಯೇ ಹರಿಯಿತು.ಖ್ಯಾತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ `ಬಾರಿಸು ಕನ್ನಡ ಡಿಂಡಿಮ~ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ನಂತರ ಕಿಕ್ಕೇರಿ ಕೃಷ್ಣಮೂರ್ತಿ, ಮಲ್ಲಿಗೆ ಸುಧೀರ್, ಎಂ.ಎಸ್. ಸುಧೀರ್, ರಶ್ಮಿ ಮಂಜುನಾಥ್, ಆರ್. ಮಹೇಶ್, ವಿ.ಎಸ್. ಶ್ರುತಿ, ರಮ್ಯಾ ಪ್ರಸನ್ನರಾವ್ ಮುಂತಾದವರು ನಾಡಿನ ಹೆಸರಾಂತ ಕವಿಗಳ ಕವನಗಳನ್ನು ಹಾಡಿದರು.ಚಿತ್ರ ಸಂಗೀತದ ಅಬ್ಬರವಿಲ್ಲದೆ, ಚುಮುಚುಮು ಚಳಿಯಲ್ಲೇ ಕ.ಸಾ.ಪ ಆವರಣದಲ್ಲಿ ಕನ್ನಡದ ಕಂಪು ಪಸರಿಸಿತ್ತು. ಭವನದ ಹೊರಗಿನ ತೆರೆದ ರಂಗ ಮಂಟಪದಲ್ಲಿ ರಾತ್ರಿ ಒಂಬತ್ತರವರೆಗೂ ಕಾರ್ಯ ಕ್ರಮ ನಡೆಯಿತು. ಸೇರಿದ್ದ ಜನರು ಇಡೀ ಕಾರ್ಯ ಕ್ರಮ ಆಸ್ವಾದಿಸಿದರು. ವೃತ್ತಿಪರ ಗಾಯಕರು ಮಾತ್ರವಲ್ಲ, ಹಾಸನದ ಜನರಿಗೂ ಹಿರಿಯ ಗಾಯಕರೊಂದಿಗೆ ಹಾಡಲು ಅವಕಾಶ ಲಭಿಸಿತು.`ಕಾಡು ಕುದುರೆ~ ಗೀತೆಯನ್ನು ಹಾಡುವಂತೆ ಶಿವಮೊಗ್ಗ ಸುಬ್ಬಣ್ಣ ಅವರನ್ನು ಪ್ರೇಕ್ಷಕರು ಒತ್ತಾಯಿಸಿದಾಗ `ನಿಮ್ಮಲ್ಲಿ ಕೆಲವರು ಬಂದು ಧ್ವನಿಗೂಡಿಸಿದರೆ ಹಾಡುತ್ತೇನೆ~ ಎಂದರು. ಅಷ್ಟರಲ್ಲೇ ಹಲ ವರು ವೇದಿಕೆಗೆ ಧಾವಿಸಿದರು. 70ವರ್ಷ ದಾಟಿದ ಸುಬ್ಬಣ್ಣ ಹಿಂದಿನ ಉತ್ಸಾಹದಲ್ಲೇ ಹಾಡಿದರು.ಕೊನೆಗೆ ವೇದಿಕೆಗೆ ಬಂದ ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೂ ಸ್ಥಳೀಯ ಗಾಯಕರು ಕೋರಸ್ ನೀಡಿದರು. ಇವೆಲ್ಲದರ ಜತೆಗೆ ನಡುನಡುವೆ ಹಾಸನದ ನೆಲೆ ಸಾಂಸ್ಕೃತಿಕ ಸಂಸ್ಥೆಯವರು ನಡೆಸಿಕೊಟ್ಟ ನೃತ್ಯ ಪ್ರದರ್ಶನವೂ ಜನಮನ್ನಣೆಗೆ ಪಾತ್ರವಾಯಿತು.ಮರುದಿನ (ಸೋಮವಾರ) ಸಂಜೆ ಕ.ಸಾಪ ಕೇಂದ್ರ ಹಾಗೂ ಜಿಲ್ಲಾ ಘಟಕಗಳ ಆಶ್ರಯದಲ್ಲಿ ನಡೆದ ಪ್ರಾಚೀನ ಕವಿ-ಕಾವ್ಯ ಚಿಂತನ ಮಾಲೆಯ ಮೊದಲ ಕಾರ್ಯಕ್ರಮವೂ ಸಾಹಿತ್ಯಾಸಕ್ತರಿಗೆ ಹಬ್ಬದೂಟದಂತಾಗಿತ್ತು.

ರಾಘವಾಂಕನ ಹರಿಶ್ಚಂದ್ರ ಕಾವ್ಯದ ಪರಿಚಯ-ವ್ಯಾಖ್ಯಾನ-ವಾಚನ ಕಾರ್ಯಕ್ರಮದಲ್ಲಿ ಸಾಹಿತಿ ಕಬ್ಬಿನಾಲೆ ವಸನ್ತ ಭಾರದ್ವಾಜ ಅವರು ಕಾವ್ಯದ ಹಲವು ಹೊಸ ಹೊಳಹುಗಳನ್ನು ತೆರೆದಿಟ್ಟರು.ಹರಿಶ್ಚಂದ್ರ ಕಾವ್ಯದ ಬಗ್ಗೆ ಉಪನ್ಯಾಸ ನೀಡಿದ ಅವರು, `ಹರಿಶ್ಚಂದ್ರನ ಪಾತ್ರ ರಾಘವಾಂಕನಿಗಿಂತ ಹಿಂದಿನ ಪುರಾಣಗಳಲ್ಲಿ ಲಭ್ಯವಾಗುತ್ತಿದ್ದರೂ, ರಾಘವಾಂಕ ಚಿತ್ರಿಸಿದ ರೀತಿಯ ಹರಿಶ್ಚಂದ್ರ ಎಲ್ಲೂ ಇಲ್ಲ. ಆ ದೃಷ್ಟಿಯಿಂದ ನೋಡಿದರೆ ಭಾರತೀಯ ಸಾಹಿತ್ಯಕ್ಕೆ ಅಂಥ ಶ್ರೇಷ್ಠ ಪಾತ್ರವನ್ನು ಪರಿಚಯಿಸಿದ ಹೆಮ್ಮೆ ಕನ್ನಡ ಸಾಹಿತ್ಯಕ್ಕೆ ಮತ್ತು ರಾಘವಾಂಕನಿಗೆ ಸಲ್ಲುತ್ತದೆ~ ಎಂದರು.`ರಾಘವಾಂಕ ಕನ್ನಡ ಸಾಹಿತ್ಯದಲ್ಲಿ ಹಲವು ದೃಷ್ಟಿಯಿಂದ ಭಿನ್ನ ಕವಿಯಾಗಿ ಗೋಚರಿಸುತ್ತಾನೆ. ರೂಢಿ ಗತ ಕಾವ್ಯ ಪರಂಪರೆಯನ್ನು ಧಿಕ್ಕರಿಸಿ ಆತ ಒಂದು ಮೌಲ್ಯಕ್ಕಾಗಿ ಕಾವ್ಯ ರಚಿಸಿದ. ಇದರಿಂದ ಹೊಸ ಕಾವ್ಯ ಪಂಥದ ಹರಿಕಾರನಾದ. ಕಾವ್ಯ ಗುಣದ ಹಿನ್ನೆಲೆಯಲ್ಲೂ ರಾಘವಾಂಕ ವಿಶಿಷ್ಟನೆನಿಸುತ್ತಾನೆ. ಹಳೆಗನ್ನಡವನ್ನು ನಮ್ಮ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕ.ಸಾ.ಪ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ. ಇದರ ಜತೆಗೆ ಹೊಸ ತಲೆಮಾರಿನ ಬರಹಗಾರರು ಹಳೆಗನ್ನಡ ಕಾವ್ಯ ಪರಂಪರೆಯ ಸೌಂದರ್ಯಾತಿಶಯಗಳ ಅನ್ವೇಶಣೆಗೂ ಮುಂದಾಗಬೇಕು~ ಎಂದರು.ಕಾರ್ಯಕ್ರವನ್ನು ಉದ್ಘಾಟಿಸಿದ ಸಾಹಿತಿ, ಕರ್ನಾಟಕ ಪೊಲೀಸ್  ಅಕಾಡೆಮಿಯ ಉಪನಿರ್ದೇಶಕಿ ಧರಣೀದೇವಿ ಮಾಲಗತ್ತಿ, `ಬರಿಯ ಹಳೆಗನ್ನಡ ಕಾವ್ಯ ಎಂಬ ಮಾತ್ರಕ್ಕೆ ಅವನ್ನು ಉಳಿಸುವುದಲ್ಲ, ಕಾವ್ಯದಿಂದ ಸಿಗುವ ಮನೋಲ್ಲಾಸ ಹಾಗೂ ಮನೋ ವಿಕಾಸಕ್ಕಾಗಿ ಅವುಗಳನ್ನು ಉಳಿಸಬೇಕು~ ಎಂದರು. ಹರಿಶ್ಚಂದ್ರ ಕಾವ್ಯದ ಅನೇಕ ಸೂಕ್ಷ್ಮತೆಗಳನ್ನೂ ಅವರು ತೆರೆದಿಟ್ಟರು.ಇದಾದ ಬಳಿಕ ಗಮಕ ಕಲಾವಿದ ಗಣೇಶ ಉಡುಪ ಅವರು ಹರಿಶ್ಚಂದ್ರ ಕಾವ್ಯದ ಆಯ್ದ ಭಾಗವನ್ನು ಹಾಡಿದರೆ ಉಪನ್ಯಾಸಕ ಮಲ್ಲೇಶಗೌಡ ಅದರ ವ್ಯಾಖ್ಯಾನ ನೀಡಿದರು. ಒಂದೆಡೆ ಗಾಯನ ವ್ಯಾಖ್ಯಾನ ನಡೆಯುತ್ತಿದ್ದರೆ ಇನ್ನೊಂದೆಡೆ ಚಿತ್ರ ಕಲಾವಿದ ಕೆ.ಎನ್. ಶಂಕರಪ್ಪ ಕಾವ್ಯದ ಸನ್ನಿವೇಶವನ್ನು ಚಿತ್ರಗಳಲ್ಲಿ ಕಟ್ಟಿಕೊಡುತ್ತಿದ್ದರು.

ಇದಾದ ಬಳಿಕ ಕಲಾವಿದ ಎಂ.ಡಿ. ಕೌಶಿಕ್ ಮಂಕುತಿಮ್ಮನ ಕಗ್ಗದಿಂದ `ಕಗ್ಗ ಮ್ಯಾಜಿಕ್~ ನಡೆಸಿಕೊಟ್ಟರು. ಒಟ್ಟಾರೆ ಇಡೀ ಕಾರ್ಯಕ್ರಮ ಜ್ಞಾನದ ಜತೆಗೆ ಮನರಂಜನೆಯನ್ನೂ ನೀಡಿತು. ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.