ಮಂಗಳವಾರ, ಮಾರ್ಚ್ 2, 2021
24 °C

ಗಾಯಗೊಂಡ ಹುಲಿಯ ಎದುರು ಡೆಕ್ಕನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯಗೊಂಡ ಹುಲಿಯ ಎದುರು ಡೆಕ್ಕನ್

ವಿಶಾಖಪಟ್ಟಣ (ಪಿಟಿಐ): ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಗಾಯಗೊಂಡ ಹುಲಿಯಂತಾಗಿದೆ. ಐಪಿಎಲ್ ಐದನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ತವರಿನಲ್ಲೇ ಮುಂಬೈ ಇಂಡಿಯನ್ಸ್ ಎದುರು ಸೋತ ಚೆನ್ನೈ ಆಟಗಾರರು ಇದೀಗ ಇಲ್ಲಿ ತಮ್ಮ ಎರಡನೇ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಗೆಲ್ಲಲೇ ಬೇಕೆಂದು ಟೊಂಕ ಕಟ್ಟಿನಿಂತಿದ್ದಾರೆ.ಐಪಿಎಲ್‌ನ ನಾಲ್ಕು ವರ್ಷಗಳ ಹಾದಿಯಲ್ಲಿ ಚೆನ್ನೈ ತಂಡ ತೀರಾ ಕೆಳಗೆ ಕುಸಿಯದಂತಹ ಸಾಮರ್ಥ್ಯವನ್ನು ಕಾಪಾಡಿಕೊಂಡೇ ಬಂದಿದೆ, ನಿಜ. ಆದರೆ ಈ ಸಲ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆಯ ಹೆಗ್ಗುರಿಯೊಂದಿಗೆ ಕಣಕ್ಕಿಳಿದಿದ್ದ ಇವರಿಗೆ ಮೊದಲ ಆಘಾತ ಮಾತ್ರ ಅನಿರೀಕ್ಷಿತ. ಈ ಆಘಾತದಿಂದ ಚೇತರಿಸಿಕೊಂಡಿರುವ ಚೆನ್ನೈ ಆಟಗಾರರು ಶನಿವಾರ ಡೆಕ್ಕನ್ ಚಾರ್ಜರ್ಸ್ ಎದುರು ಸೋತರೆ ಅದೊಂದು ಅಚ್ಚರಿ ಅಷ್ಟೇ.ಇತರ ತಂಡಗಳಿಗೆ ಹೋಲಿಸಿದರೆ ಡೆಕ್ಕನ್ ತಂಡ ದುರ್ಬಲ ನಿಜ. ಆದರೆ ಮುಂಬೈ ಎದುರು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲಿಯೂ ದಯನೀಯವಾಗಿ ಕಂಡು ಬಂದ ಮಹೇಂದ್ರ ಸಿಂಗ್ ದೋನಿ `ಪಡೆ~ ಅತಿ ಆತ್ಮವಿಶ್ವಾಸವನ್ನಂತೂ ಇಟ್ಟುಕೊಳ್ಳುವಂತಿಲ್ಲ.ಈ ಸಲದ ಹರಾಜಿನಲ್ಲಿ ಬಹಳ `ತುಟ್ಟಿ~ ಆಟಗಾರ ಎನಿಸಿದ ರವೀಂದ್ರ ಜಡೇಜಾ ತಮ್ಮ ಆಲ್‌ರೌಂಡ್ ಶಕ್ತಿಯ ಮೂಲಕ ಡೆಕ್ಕನ್ ತಂಡಕ್ಕೆ ಸಿಂಹಸ್ವಪ್ನರಾಗಬಹುದು.ಆಸ್ಟ್ರೇಲಿಯಾದ ಡಗ್ ಬೊಲಿಂಜರ್ ಮತ್ತು ಆರ್.ಅಶ್ವಿನ್ ಅವರಂತಹ ಪರಿಣಾಮಕಾರಿ ಬೌಲರ್‌ಗಳನ್ನು ಡೆಕ್ಕನ್ ಬ್ಯಾಟ್ಸ್‌ಮನ್‌ಗಳು ಅದೇಗೆ ಎದುರಿಸುತ್ತಾರೆನ್ನುವುದು ಕುತೂಹಲಕಾರಿಯಾಗಿದೆ.ಈಚೆಗಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ ಎಂಬ `ಅಪವಾದ~ದಿಂದ ಮುಕ್ತವಾಗಲು ಶನಿವಾರ ಚೆನ್ನೈ ತಂಡದ ನಾಯಕ ದೋನಿ ಮತ್ತು ಸುರೇಶ್ ರೈನಾ ಗಮನಾರ್ಹ ಸಾಮರ್ಥ್ಯ ತೋರಲಿರುವುದಂತು ನಿಜ.

ಶ್ರೀಲಂಕಾದಲ್ಲಿ `ಕರ್ತವ್ಯದ ಕರೆ~ಗೆ ಓಗೊಟ್ಟಿರುವ ಡೆಕ್ಕನ್ ತಂಡದ ನಾಯಕ ಕುಮಾರ ಸಂಗಕ್ಕಾರ ಶನಿವಾರ ಸೂಪರ್ ಕಿಂಗ್ಸ್ ಎದುರು ತಮ್ಮ `ಸೇನೆ~ಯನ್ನು ಮುನ್ನಡೆಸಲು ಇರುವುದಿಲ್ಲ.ಕಳೆದ ವರ್ಷ ನಾಕೌಟ್ ಹಂತ ತಲುಪಲೂ ವಿಫಲವಾಗಿದ್ದ ಡೆಕ್ಕನ್ ತಂಡ, ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಸಲ ಉತ್ತಮ ಸಾಮರ್ಥ್ಯ ತೋರಬೇಕೆಂಬ ಕನಸು ಹೊಂದಿದ್ದ ಡೆಕ್ಕನ್ ತಂಡಕ್ಕೆ ಗಾಯಾಳು ಸಮಸ್ಯೆಯೂ ಕಾಡುತ್ತಿದೆ. ಭಾರತ ತಂಡದಲ್ಲಿ ಗಮನಾರ್ಹ ಸಾಧನೆ ತೋರಿದ್ದ ಇಶಾಂತ್ ಶರ್ಮ ಈ ತಂಡದಲ್ಲಿದ್ದಾರಾದರೂ, ಗಾಯಾಳುವಾಗಿರುವುದರಿಂದ ಈ ಪಂದ್ಯಕ್ಕೆ ಅವರ ಸೇವೆ ಲಭ್ಯವಿಲ್ಲ.ವೆಸ್ಟ್‌ಇಂಡೀಸ್‌ನಲ್ಲಿ ಈಚೆಗೆ ಬಯಾನ್ ಲಾರಾನಿಗೆ ಹೋಲಿಸಲಾಗುತ್ತಿದ್ದ ಆಟಗಾರನೆಂದರೆ ಬ್ರಾವೊ. ಈತ ಡೆಕ್ಕನ್ ತಂಡದಲ್ಲಿ `ಊಟಕ್ಕಿಲ್ಲದ ಉಪ್ಪಿನಕಾಯಿ~. ಈ ಬ್ಯಾಟ್ಸ್‌ಮನ್‌ನಿಂದ ಡೆಕ್ಕನ್ ತಂಡ ಬಹಳ ನಿರೀಕ್ಷಿಸಿತ್ತು. ಆದರೆ ಆಸ್ಟ್ರೇಲಿಯ ವಿರುದ್ಧ ಆಡಲಿರುವ ವೆಸ್ಟ್‌ಇಂಡೀಸ್ ತಂಡದಲ್ಲಿ ಆಡಲಿಕ್ಕೆ ಅಲ್ಲಿಗೆ ತೆರಳಿದ್ದಾರೆ. ಹೀಗಾಗಿ ಡೆಕ್ಕನ್ ತಂಡದ ಬ್ಯಾಟಿಂಗ್ `ಹೊರೆ~ ಆಸ್ಟ್ರೇಲಿಯಾದ ಕೆಮರಾನ್ ವೈಟ್, ದಕ್ಷಿಣ ಆಫ್ರಿಕಾದ ಜೀನ್ ಪಾಲ್ ಡುಮಿನಿ, ನಮ್ಮ ಶಿಖರ್ ಧವನ್, ಪಾರ್ಥಿವ್ ಪಟೇಲ್ ಮೇಲೆಯೇ ಬಿದ್ದಿದೆ.ಬೌಲಿಂಗ್‌ಗೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್, ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಚೆನ್ನೈ ಆಟಗಾರರನ್ನು ಸಾಕಷ್ಟು ಕಾಡಲಿರುವುದಂತು ನಿಜ. ಅಮಿತ್ ಕಳೆದ ಋತುವಿನಲ್ಲಿ ಡೆಕ್ಕನ್ ತಂಡದ ಪರ 19 ವಿಕೆಟ್‌ಗಳನ್ನು ಉರುಳಿಸಿದ್ದನ್ನು ಮರೆಯುವಂತಿಲ್ಲ.ತಂಡಗಳುಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ದೋನಿ  (ನಾಯಕ), ಶ್ರೀಕಾಂತ್ ಅನಿರುದ್ಧ, ಅರ್. ಅಶ್ವಿನ್, ಸುಬ್ರಹ್ಮಣ್ಯಮ್ ಬದರಿನಾಥ್, ಜಾರ್ಜ್ ಬೇಲಿ, ಡಗ್ ಬೊಲಿಂಜರ್, ಡ್ವೇನ್ ಬ್ರಾವೊ, ಫಾಫ್ ದು ಪ್ಲೆಸಿಸ್, ಬೆನ್ ಹಿಲ್ಫೆನ್ಹಾಸ್, ಮೈಕಲ್ ಹಸ್ಸಿ, ರವೀಂದ್ರ ಜಡೇಜಾ, ಶಾದಾಬ್ ಜಕಾತಿ, ಜೋಗಿಂದರ್ ಶರ್ಮ, ಆರ್.ಸೂರಜ್, ನುವಾನ್ ಕುಲಶೇಖರ, ಯೊ ಮಹೇಶ್, ಆಲ್ಬಿ ಮಾರ್ಕೆಲ್, ಸುರೇಶ್ ರೈನಾ, ವೃದ್ಧಿಮಾನ್ ಸಹಾ, ಸ್ಕಾಟ್ ಸ್ಟೈರಿಸ್, ಸುದೀಪ್ ತ್ಯಾಗಿ ಹಾಗೂ ಮುರಳಿ ವಿಜಯ್.ಡೆಕ್ಕನ್ ಚಾರ್ಜರ್ಸ್:
ಕೆಎಮರಾನ್ ವೈಟ್, ಶಿಕಾರ್ ಧವನ್, ಜೀನ್ ಪಾಲ್ ಡುಮಿನಿ, ಮನ್‌ಪ್ರೀತ್ ಗೋಣಿ, ಡೇನಿಯಲ್ ಹ್ಯಾರಿಸ್, ಪಾರ್ಥಿವ್ ಪಟೇಲ್, ಡೇಲ್ ಸ್ಟೇನ್, ರಸ್ಟಿ ಥೆರಾನ್, ಇಶಾಂಕ್ ಜಗ್ಗಿ, ಅಭಿಷೇಕ್ ಜುನ್‌ಜುನ್‌ವಾಲಾ, ಕ್ರಿಸ್ ಲಿನ್, ಅಮಿತ್ ಮಿಶ್ರಾ, ತನ್ಮಯ್ ಮಿಶ್ರಾ, ಆನಂದ ರಾಜನ್, ಅಂಕಿತ್ ಶರ್ಮಾ, ಆಕಾಶ್ ಭಂಡಾರಿ, ಭರತ್ ಚಿಪ್ಲಿ, ಡೇನಿಯಲ್  ಕ್ರಿಸ್ಟಿಯನ್, ಕೇದಾರ್ ದೇವಧರ್, ವೀರಪ್ರತಾಪ್ ಸಿಂಗ್, ಸೈಯದ್ ಖಾದ್ರಿ, ಡಿ. ರವಿತೇಜ, ಅಕ್ಷತ್ ರೆಡ್ಡಿ, ವಿಪ್ಲವ್ ಸಮಂತರಾಯ್, ಸ್ನೇಹ ಕಿಶೋರ್, ಸನ್ನಿ ಸೋಹಲ್, ತನ್ಮಯ್ ಶ್ರೀವಾಸ್ತವ, ಅರ್ಜುನ್ ಯಾದವ್.ಪಂದ್ಯ ಆರಂಭ: ರಾತ್ರಿ ಎಂಟು ಗಂಟೆಗೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.