ಬುಧವಾರ, ಮೇ 18, 2022
28 °C

ಗಾಯದ ಸಮಸ್ಯೆಯಿಂದ ಮುಕ್ತವಾಗಿರಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ಟ್ರೇಲಿಯಾ ತಂಡದ ಹೆಚ್ಚಿನ ಆಟಗಾರರು ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ಬೆವರು ಸುರಿಸಿದರು. ಆದರೆ ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದ ಶೇನ್ ವ್ಯಾಟ್ಸನ್ ಮಾತ್ರ ಲಘು ವ್ಯಾಯಾಮ ಹಾಗೂ ಕ್ಯಾಚಿಂಗ್ ಅಭ್ಯಾಸ ಮಾಡಿ ತಣ್ಣಗೆ ನಿಂತರು.ಹೀಗೆ ಮಾಡಿದ್ದು ಏಕೆ? ಎನ್ನುವುದಕ್ಕೆ ಅವರೇ ಉತ್ತರವನ್ನೂ ನೀಡಿದರು. ‘ಗಾಯದ ಸಮಸ್ಯೆಯಿಂದ ಮುಕ್ತವಾಗಿರಬೇಕು. ಅತಿಯಾಗಿ ಅಭ್ಯಾಸ ಮಾಡುವ ಮೂಲಕ ದೇಹದ ಮೇಲೆ ಒತ್ತಡ ಹೆಚ್ಚುವಂತೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಅನೇಕ ಬಾರಿ ಗಾಯದ ಸಮಸ್ಯೆ ಎದುರಿಸಿರುವ ಆಲ್‌ರೌಂಡರ್ ವ್ಯಾಟ್ಸನ್ ಈಗ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ತಮ್ಮ ತಂಡವು ವಾಸ್ತವ್ಯ ಹೂಡಿರುವ ಹೋಟೆಲ್ ಆವರಣದಲ್ಲಿ ತಮ್ಮ ಗೆಳತಿಯ ಜೊತೆಗೆ ಸುತ್ತಾಡುವಲ್ಲಿಯೇ ಅವರು ಹೆಚ್ಚಿನ ಕಾಲ ಕಳೆದರು.‘ಗಾಯದ ಕಾರಣ ಹಿಂದೆ ಹಲವು ಬಾರಿ ಕಹಿ ಅನುಭವ ಪಡೆದಿದ್ದೇನೆ. ಆದ್ದರಿಂದ ಅತಿಯಾಗಿ ವ್ಯಾಯಾಮ ಹಾಗೂ ಅಭ್ಯಾಸ ಮಾಡುವುದಿಲ್ಲ. ಪಂದ್ಯದಲ್ಲಿ ಆಡುವುದಕ್ಕೆ ಅಗತ್ಯ ಇರುವಷ್ಟು ದೇಹಕ್ಕೆ ಶ್ರಮ ನೀಡುತ್ತೇನೆ’ ಎಂದ ಅವರು ‘ಆಟಕ್ಕೆ ಇಳಿಯುವಾಗ ದೇಹ ಉಲ್ಲಸಿತವಾಗಿರಬೇಕು. ಬಿಗುವಿನಿಂದ ಮುಕ್ತವೆನಿಸಬೇಕು. ಅಷ್ಟು ಮಾತ್ರ ವ್ಯಾಯಾಮ’ ಎಂದು ಹೇಳಿದರು.ಮ್ಯಾಥ್ಯು ಹೇಡನ್ ನಿವೃತ್ತಿಯ ನಂತರ ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬೆಳೆಯುತ್ತಿರುವ ವ್ಯಾಟ್ಸನ್ ‘ಆರಂಭಿಕ ಆಟಗಾರನಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಸಂತಸ ಎನಿಸುತ್ತದೆ. ಅದಕ್ಕೆ ಒಗ್ಗಿಕೊಂಡಿದ್ದೇನೆ’ ಎಂದು ತಿಳಿಸಿದರು.ವಿಶ್ವಕಪ್ ‘ಎ’ ಗುಂಪಿನ ಮೊದಲ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ ಎದುರು ಕ್ರಮವಾಗಿ 79 ಹಾಗೂ 62 ರನ್‌ಗಳನ್ನು ಗಳಿಸಿ ಗಮನ ಸೆಳೆದ ಶೇನ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ‘ನಮ್ಮ ತಂಡದ ಪರಿಣತ ಬೌಲರ್‌ಗಳು ಪ್ರಭಾವಿ ಎನಿಸಿದ್ದಾರೆ. ಆದ್ದರಿಂದ ನನ್ನಂಥ ಸಾಂದರ್ಭಿಕ ಬೌಲರ್ ಮೇಲಿನ ಒತ್ತಡವೂ ಕಡಿಮೆ. ಶಾನ್ ಟೈಟ್, ಬ್ರೆಟ್ ಲೀ ಹಾಗೂ ಮಿಷೆಲ್ ಜಾನ್ಸನ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.