ಗುರುವಾರ , ಮೇ 26, 2022
31 °C

ಗಿರಿಜನ ಮಹಿಳೆಯರಿಗೆ ಭೂ ಒಡೆತನ: ಕನಸಲ್ಲ

ರೂಪಾ ಕೆ.ಎಂ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಿರಿಜನ ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ಮೂರು ವರ್ಷಗಳ ಹಿಂದೆ ರೂಪಿಸಿದ್ದ `ಭೂ ಒಡೆತನ~ ವಿನೂತನ ಯೋಜನೆಯು ಈಗ ಫಲ ಕಾಣುತ್ತಿದೆ.ಒಪ್ಪತ್ತಿನ ಗಂಜಿಗಾಗಿ ಶ್ರಮವಹಿಸಿ ದುಡಿಯುವ ಮಹಿಳೆಯರು ಭೂಮಿಯ ಒಡೆಯರಾಗಲು ಸಾಧ್ಯವೇ? ಇಂತಹ ಕನಸನ್ನು ಸಾಕಾರಗೊಳಿಸಲು ಈ ಯೋಜನೆಯು ಸಾಥ್ ನೀಡಲಿದೆ. ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಯೋಜನೆಯು ಒಂಟಿ ಮಹಿಳೆಯರು, ನಿರ್ಗತಿಕ ಮತ್ತು ನಿರಾಶ್ರಿತ ಬುಡಕಟ್ಟು ಜನಾಂಗದ ಬಡ ಮಹಿಳೆಯರಿಗೆ ಊರುಗೋಲಾಗಿ ಆಸರೆ ನೀಡುತ್ತಿ.ಏನಿದು `ಭೂ ಒಡೆತನ~?:

ಪ್ರತಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಪಂಗಡದ ನಿಸ್ಸಹಾಯಕ ಹೆಣ್ಣು ಮಕ್ಕಳಿಗೆ ತಾವು ವಾಸವಿರುವ ಜಾಗದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಒಣ (2 ಎಕರೆ) ಅಥವಾ ಕೃಷಿ ಭೂಮಿ (1 ಎಕರೆ) ಯನ್ನು ನಿಗಮವು ನೇರವಾಗಿ ಖರೀದಿಸಿ ನೀಡಲಿದೆ. ನಿಗಮದ ಅಧಿಕಾರಿಗಳು ಮತ್ತು ಕ್ಷೇತ್ರಪಾಲಕರು ವಿವಿಧ ಜಿಲ್ಲೆಗಳಲ್ಲಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಾರೆ.ನಂತರ ಅವರ ಪೂರ್ವಾಪರಗಳನ್ನು ತಿಳಿದುಕೊಂಡು ಜಿಲ್ಲಾಧಿಕಾರಿ ಶಿಫಾರಸ್ಸು ನೀಡುತ್ತಾರೆ. ನಂತರ ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಈ ಯೋಜನೆಗಾಗಿ ನಿಗಮವು ಪ್ರಸಕ್ತ ವರ್ಷದಲ್ಲಿ 3 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ಬಾರಿ 200 ಮಂದಿ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಯಡಿ ಭೂಮಿ ಖರೀದಿ ಮಾಡುವ ಪ್ರಸ್ತಾವ ಇದೆ. ಪ್ರತಿ ಫಲಾನುಭವಿಗೂ ಎರಡೂವರೆ ಲಕ್ಷ ರೂಪಾಯಿ ಮಿತಿಯಲ್ಲಿ ಭೂ ಖರೀದಿ ಮಾಡಿ ನೀಡಲಾಗುತ್ತದೆ.ಯೋಜನೆಯು ಆರಂಭಗೊಂಡು ಮೂರು ವರ್ಷ ಕಳೆದಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 800 ಮಂದಿ ಈ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 40 ಮಂದಿ ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ.ಚಾಲ್ತಿಯಲ್ಲಿರುವ ಜಿಲ್ಲೆಗಳು

ರಾಜ್ಯದ ವಿವಿಧ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಗದಗ, ಹಾವೇರಿ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ನಿಗಮದ ಬಜೆಟ್ ಅನುಗುಣವಾಗಿ ಭೂಮಿ ದೊರೆಯುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಫಲಾನುಭವಿಗಳನ್ನು ಕಾಣಬಹುದು. ಪರಿಶಿಷ್ಟ ಪಂಗಡಗಳ ಪೈಕಿ ಒಟ್ಟು 50 ಪಂಗಡಗಳು ಈ ಯೋಜನೆಯಡಿಯಲ್ಲಿ ಬರುತ್ತವೆ.ಭೂರಹಿತ ಪರಿಶಿಷ್ಟ ಪಂಗಡದ ಕಾರ್ಮಿಕ ಮಹಿಳೆ ಫಲಾಪೇಕ್ಷಿಯಾಗಿರಬೇಕು. ಭೂಮಿ ನೀಡುವವರ ಮತ್ತು ಪಡೆಯುವವರ ಎಲ್ಲಾ ದಾಖಲೆಗಳು ಪರಿಶೀಲನೆಗೆ ಒಳಪಡುತ್ತವೆ. ಆ ನಂತರವೇ ನಿಗಮವು ರೂ. 1. 25 ಲಕ್ಷವನ್ನು ಭೂ ಖರೀದಿಗೆ ಸಹಾಯಧನವಾಗಿ ನೀಡುತ್ತದೆ. ಉಳಿದ  ರೂ.1. 25 ಲಕ್ಷವನ್ನು ಸಾಲದ ರೂಪದಲ್ಲಿ ಫಲಾನುಭವಿಗಳು ಭರಿಸಬೇಕು. ಈ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಾಲ ಪಾವತಿಯ ನಂತರ ಪೂರ್ಣ ಪ್ರಮಾಣದಲ್ಲಿ ಭೂಮಿ ಹಕ್ಕನ್ನು ಫಲಾನುಭವಿಗಳು ಪಡೆಯುತ್ತಾರೆ.ತೊಡಕುಗಳೇನು?

ಅರ್ಜಿದಾರರು ವಾಸದಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯ ಒಳಗೆ ಭೂಮಿ ಖರೀದಿ ಮಾಡಬೇಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರದವರಿಂದ  ಭೂಮಿ ಖರೀದಿ ಮಾಡಬೇಕು ಎಂಬ ನಿಯಮವಿರುವುದರಿಂದ ಫಲಾನುಭವಿಗಳಿಗೆ ನೀಡಲು ಸಾಕಷ್ಟು ಭೂಮಿಯ ಕೊರತೆಯಿದೆ.ಇದಲ್ಲದೇ ಬೆಂಗಳೂರು ಗ್ರಾಮಾಂತರ ಮತ್ತು ನಗರ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದ್ದು, ಎರಡೂವರೆ ಲಕ್ಷಕ್ಕೆ ಭೂಮಿ ದೊರೆಯದೇ ಇರುವುದರ ಬಗ್ಗೆ  ನಿಗಮವು ಇನ್ನೂ ಉತ್ತರ ಕಂಡುಕೊಂಡಿಲ್ಲ.ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಸರ್ಫರೋಜ್ ಖಾನ್, `ನಗರಕ್ಕಿಂತ ಗ್ರಾಮೀಣ ಭಾಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಿರುವುದರಿಂದ, ನಗರ ಪ್ರದೇಶದ  ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ  ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ~ ಎಂದು ಹೇಳಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಕರ್ನಾಟಕ ರಾಜ್ಯ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ, 4ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಸಂಪಂಗಿರಾಮನಗರ, ಬೆಂಗಳೂರು -560027. ದೂರವಾಣಿ ಸಂಖ್ಯೆ- (080) 2211 0675.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.