ಮಂಗಳವಾರ, ಏಪ್ರಿಲ್ 20, 2021
25 °C

ಗುಂಡಿಯೊಳಗೆ ಮುಚ್ಚುವ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗುವನ್ನು ಕಳೆದುಕೊಂಡು ಪರಿತಪ್ಪಿಸುತ್ತಿದ್ದ ತಾಯಿಗೆ `ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ~ ಎಂದು ಬುದ್ಧ ಹೇಳಿ ಆಕೆಗೆ ಜೀವನದ ಸಾರವನ್ನು ಬೋಧಿಸಿ, ದುಃಖವನ್ನು ಕಡಿಮೆ ಮಾಡುತ್ತಾನೆ. ಸಾವು ಎಲ್ಲಿ ಹೇಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸತ್ತವರಿಗಾಗಿ ಪರಿತಪಿಸುವ ನಾವು ಬದುಕಿರುವವರ ದೈನಂದಿನ ಜೀವನದ ಬಗ್ಗೆ ಯೋಚಿಸುವುದೇ ಇಲ್ಲ. ರಾಜ ಸತ್ಯಹರಿಶ್ಚಂದ್ರನನ್ನು ಮಾದರಿಯಾಗಿ ಇಟ್ಟುಕೊಂಡು, ಮಾಡುವ ಕೆಲಸದಲ್ಲಿ ಕೀಳರಿಮೆ ತಳೆಯದೇ `ಕಾಯಕವೇ ಕೈಲಾಸ~ ಎಂಬ ನಾಣ್ಣುಡಿಯಂತೆ ಸತ್ತವರಿಗೆ ಮುಕ್ತಿ ನೀಡುತ್ತಿರುವವರು ಗುಂಡಿ ತೆಗೆಯುವವರು. ಜಾತಿ ಭೇದವಿಲ್ಲದೇ ಈ ಕಾಯಕದಲ್ಲಿ ನಿರತರಾಗಿರುವವರ ಬದುಕು ಮಾತ್ರ ದುಸ್ತರ.ಕೆಲವು ಸಲ ವಂಶಪಾರಂಪರ್ಯವಾಗಿ, ಕೆಲವೊಮ್ಮೆ ಬದುಕಿನ ಒತ್ತಡಕ್ಕೆ ಸಿಲುಕಿ ಕೆಲಸ ಮಾಡುತ್ತಿರುವವರ ಬದುಕನ್ನು ತಿಳಿಯುವ ವ್ಯವಧಾನ ಮಾತ್ರ ಯಾರಿಗೂ ಇಲ್ಲದಂತಾಗಿದೆ. ಸತ್ತವರ ಬಗ್ಗೆ ಅಳುವ ಮಂದಿಗೆ ಬದುಕಿರುವ ಗುಂಡಿ ತೋಡುವವರ ಜೀವನದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ತಮ್ಮ ಕನಸುಗಳನ್ನು ಗುಂಡಿಯೊಳಗೆ ಸಮಾಧಿ ಮಾಡಿಕೊಂಡು ಅವರು ಬದುಕು ಸಾಗಿಸುತ್ತಿದ್ದಾರೆ.ಗಾಂಧಿ ನಗರದಲ್ಲಿ ಇರುವ ಸಾರ್ವಜನಿಕ ರುದ್ರಭೂಮಿಗೆ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು, ಬಸ್ ತಂಗುದಾಣಗಳನ್ನು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಿದರು. ಆದರೆ, ಅಲ್ಲಿ ಕೆಲಸ ಮಾಡುವವರ ಬದುಕನ್ನು ಹಸನು ಮಾಡಿಲ್ಲ. ಇನ್ನು ಸ್ಮಶಾನ ಕಾಯಲು ಕಾವಲುಗಾರರು ಇಲ್ಲ. ಕಿಡಿಗೇಡಿಗಳು ಕಾಂಪೋಂಡ್ ಹಾಳು ಮಾಡಿರುವ ಘಟನೆಗಳು ನಡೆದಿವೆ.

ಕಾವಲುಗಾರರನ್ನು ನೇಮಿಸಿ ಎಂದು ಪಾಲಿಕೆಗೆ ಅರ್ಜಿ ಬರೆದರೂ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ ಅಲ್ಲಿನ ವರದಿಗಾರ (ಸತ್ತವರ ವಿವರಗಳನ್ನು ತೆಗೆದುಕೊಂಡು ಪಾಲಿಕೆಗೆ ಮಾಹಿತಿ ನೀಡುವವರು) ಮಂಜುನಾಥ್.ಪ್ರತಿದಿನ ಗುಂಡಿ ತೆಗೆಯುವ ಕೆಲಸ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರು ಸರ್ಕಾರದಿಂದ ನೇಮಕವಾದವರಲ್ಲ. ವಂಶಪಾರಂಪರ್ಯದಿಂದ ತಂದೆ ನಡೆಸಿಕೊಂಡು ಹೋಗುತ್ತಿದ್ದ ವೃತ್ತಿಯನ್ನೇ ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಪಾಲಿಕೆ ಗುಂಡಿ ತೋಡುವವರಿಗೆ ರೂ.800 ಕೊಡಬೇಕು ಎಂದು ಬೋರ್ಡ್ ಮೇಲೆ ಬರೆದಿದ್ದರೂ ಯಾರೂ ಅಷ್ಟು ಹಣ ಕೊಡುವುದಿಲ್ಲ. ಗುಂಡಿ ತೋಡುವುದಕ್ಕೆ ಅಷ್ಟೊಂದು ದುಡ್ಡು ಕೊಡಬೇಕೆ? ಎಂದು ಪ್ರಶ್ನಿಸಿ, ಜಗಳವಾದ ಪರಿಸ್ಥಿತಿಯೂ ಉಂಟು. ಗುಂಡಿ ತೋಳುವುದಲ್ಲದೇ, ಅಲ್ಲಿ ಅವರು ಬಿಟ್ಟು ಹೋಗಿರುವ ಬಟ್ಟೆ, ಹೂ, ಹಣ್ಣುಗಳನ್ನು ಕೂಡಾ ನಾವೇ ಗುಂಡಿ ತೋಡಿ ಮುಚ್ಚಬೇಕಾಗುತ್ತದೆ. ನಾವು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಕೆಲಸ ಮಾಡುತ್ತೇವೆ. ಆರೋಗ್ಯ ಕೈ ಕೊಟ್ಟರೆ ನಮ್ಮ ಸಂಸಾರವನ್ನು ನೋಡಿಕೊಳ್ಳುವವರು ಯಾರು? ಎಂದು ಅಲ್ಲಿನ ಗುಂಡಿ ತೋಡುವ ಹನುಮಂತು ಪ್ರಶ್ನಿಸುತ್ತಾರೆ.ಸರ್ಕಾರದಿಂದ ನಮಗೆ ಯಾವುದೇ ಸಂಬಳ ಬರುವುದಿಲ್ಲ. ಪ್ರತಿದಿನ ಕೆಲಸವಿರುತ್ತದೆ ಎಂದು ಹೇಳಲು ಬರುವುದಿಲ್ಲ. ಕೆಲಸ ಇರದ ದಿನ ಉಪವಾಸವೇ ಗತಿ.ಆದ್ದರಿಂದ ಗುಂಡಿ ತೋಡುವವರನ್ನು ಸರ್ಕಾರದಿಂದ ನೇಮಿಸಿ, ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುವಂತೆ ಮಾಡಬೇಕು. ಹಾಗೂ ಕಾವಲುಗಾರರನ್ನು ನೇಮಿಸಬೇಕು ಎಂದು ಮಂಜುನಾಥ್ ಒತ್ತಾಯಿಸುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.