ಭಾನುವಾರ, ಜನವರಿ 26, 2020
23 °C
ಯುವತಿ ಮೇಲೆ ಅಕ್ರಮ ನಿಗಾ ಪ್ರಕರಣ

ಗುಜರಾತ್‌ ಕೋರಿಕೆ ತಿರಸ್ಕರಿಸಿದ್ದ ರಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ ನೆಲೆಸಿರುವ ಯುವತಿಯೊಬ್ಬರ ಚಲನವಲನದ ಮೇಲೆ ನಿಗಾ ವಹಿಸಲು ಸಹಕರಿಸಬೇಕು ಎಂಬ ಗುಜರಾತ್‌ ಸರ್ಕಾರದ ಕೋರಿಕೆ­ಯನ್ನು ಕರ್ನಾಟಕ ಗೃಹ ಇಲಾಖೆಯ ಕಾರ್ಯದರ್ಶಿ ತಿರಸ್ಕರಿಸಿದ್ದರು ಎಂಬ ವಿಚಾರವನ್ನು  ತನಿಖಾ ಪೋರ್ಟಲ್‌ ‘ಗುಲೈಲ್‌’ ಬಹಿರಂಗಪಡಿಸಿದೆ.

ಗುಜರಾತ್‌ ಪೊಲೀಸರು ಅಕ್ರಮ­ ನಿಗಾ ವಹಿಸಿದ್ದರೆನ್ನಲಾದ  ಯುವತಿ ಬೆಂಗಳೂರಿಗೆ ತೆರಳಿದ್ದಾಗ ಆಕೆಯ ಚಲನವಲನದ ಮೇಲೆ ನಿಗಾ ವಹಿಸಲು ಗುಜರಾತ್‌ ಸರ್ಕಾರ ಕೋರಿತ್ತು.ಗುಜರಾತ್‌ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಕರ್ನಾ­ಟಕದ ಗೃಹ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮಹಿಳೆಯ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲು ಕೋರಿದ್ದರು. ಆದರೆ ಈ ಕೋರಿಕೆಯನ್ನು ತಳ್ಳಿಹಾಕ­ಲಾಗಿತ್ತು ಎನ್ನಲಾಗಿದೆ. 2009ರಲ್ಲಿ ಕರ್ನಾಟಕದಲ್ಲಿ ಯಡಿ­ಯೂರಪ್ಪ ನೇತೃತ್ವದ ಸರ್ಕಾರವಿ­ದ್ದಾಗ ಗುಜರಾತ್‌ನ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಎ. ಕೆ. ಶರ್ಮಾ ಮತ್ತು ಜಿ. ಎಸ್‌. ಸಿಂಘಾಲ್ ಅವರ ದೂರ­ವಾಣಿ ಸಂಭಾಷಣೆಯ ಧ್ವನಿ ಮುದ್ರಿಕೆ ಇದು ಎಂದು ಹೇಳಲಾಗಿದೆ.ಅಧೀನ ಕಾರ್ಯದರ್ಶಿಗೆ ಇಂತಹ ಕೋರಿಕೆ ಪತ್ರ ಬರೆಯುವ ಅಧಿಕಾರವಿರು­ವುದಿಲ್ಲ ಎಂಬ ಕಾರಣಕ್ಕೆ ಕೋರಿಕೆಯನ್ನು ತಳ್ಳಿಹಾಕಲಾಗಿತ್ತು ಎಂಬ ವಿಚಾರ ಧ್ವನಿಮುದ್ರಿಕೆಯಿಂದ ಗೊತ್ತಾಗಿದೆ ಎಂದು  ‘ಗುಲೈಲ್‌’ ಹೇಳಿಕೊಂಡಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಅಮಿತ್‌ ಷಾ ಅವರು ಗೃಹ ಸಚಿವರಾಗಿದ್ದಾಗ ಬೆಂಗ­ಳೂರಿನ ಯುವತಿಯೊಬ್ಬರು ಗುಜರಾತ್‌ಗೆ ತೆರಳಿದ್ದಾಗ ಅವರ ಮೇಲೆ ಅಕ್ರಮ ನಿಗಾ ವಹಿಸಲು ಆದೇಶಿಸಿದ್ದರು ಎನ್ನಲಾದ ಧ್ವನಿಮುದ್ರಿಕೆಯನ್ನು ಬಹಿ­ರಂಗ­ಗೊಳಿಸಿದ್ದ ತನಿಖಾ ಪೋರ್ಟಲ್‌ ‘ಗುಲೈಲ್‌’ ಈಗ 39 ಧ್ವನಿ ಮುದ್ರಿಕೆ­ಯನ್ನು ಬಹಿರಂಗಪಡಿಸಿದೆ.ಮುಂಬೈಯಲ್ಲಿ ಭಾರಿ ಮಳೆ ಆಗು­ತ್ತಿರುವುದರಿಂದ ಬೆಂಗಳೂರಿನ ಮಹಿಳೆಯ ದೂರವಾಣಿ ಕರೆಯನ್ನು ಕದ್ದಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ಇಬ್ಬರು ಹಿರಿಯ ಪೊಲೀಸ್‌ ಅಧಿ­ಕಾರಿ­ಗಳು ಚರ್ಚಿಸಿದ್ದರು ಎನ್ನಲಾಗಿದೆ. ಈ 39 ಧ್ವನಿಮುದ್ರಿಕೆಗಳನ್ನು ಸಿಬಿಐಗೆ ನೀಡಲಿಲ್ಲ ಎಂದು ಗುಲೈಲ್‌ನ ಆಶಿಶ್‌ ಖೆತಾನ್‌ ಹೇಳಿದ್ದಾರೆ.ಯುವತಿಯ ಪ್ರೇಮ ವ್ಯವಹಾರದ ಬಗ್ಗೆ ಬೇಹುಗಾರಿಕೆ ನಡೆಸಲಾಗಿತ್ತು ಎಂಬುದು ಧ್ವನಿಮುದ್ರಿಕೆಯಿಂದ ಸ್ಪಷ್ಟ­ವಾಗಿದೆ ಎಂದು ಖೆತಾನ್‌ ಹೇಳಿದ್ದಾರೆ.

ಯುವತಿಯು ಅಹಮದಾಬಾದ್‌­ನಿಂದ ಬೆಂಗಳೂರಿಗೆ ಬರುವಾಗಲೆಲ್ಲ ಪೊಲೀಸರು ಹಿಂಬಾಲಿಸಿದ್ದರು ಮತ್ತು ಉಳಿದುಕೊಂಡ ಹೋಟೆಲ್‌ನಲ್ಲೂ ನಿಗಾ ಇಟ್ಟಿದ್ದರು ಎಂದು ತಿಳಿಸಿದ್ದಾರೆ.ಪೊಲೀಸ್‌ ಅಧಿಕಾರಿಗಳು ನಡೆಸಿರುವ ಸಂಭಾಷಣೆಯ ಧ್ವನಿಮುದ್ರಿಕೆಯಿಂದ ಗುಜರಾತ್‌ ಬಿಜೆಪಿ ಸರ್ಕಾರ ಅಕ್ರಮ­ವಾಗಿ ಗೂಢಚರ್ಯೆ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಖೆತಾನ್‌ ಹೇಳಿದ್ದಾರೆ.

ತನಿಖೆಗೆ ಆಯೋಗ?

ನವದೆಹಲಿ (ಪಿಟಿಐ):
ನರೇಂದ್ರ ಮೋದಿ ಅವರ ಆಪ್ತ, ಗುಜರಾತ್‌್ ಮಾಜಿ ಗೃಹ ಸಚಿವ ಅಮಿತ್‌ ಷಾ ಅವರ ನಿರ್ದೇಶನದಂತೆ ಯುವತಿಯ ಮೇಲೆ ಅಕ್ರಮ ನಿಗಾ ಇಟ್ಟ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಆಯೋಗ ರಚಿಸುವ ಸಾಧ್ಯತೆ ಇದೆ. ವಿಚಾರಣಾ ಆಯೋಗ ರಚಿಸುವ ಬಗ್ಗೆ ಗೃಹ ಖಾತೆಯು ಟಿಪ್ಪಣಿ ಸಿದ್ಧಪಡಿಸಿದ್ದು, ಶೀಘ್ರದಲ್ಲಿಯೇ ಸಚಿವ ಸಂಪುಟದ ಮುಂದೆ ಈ ಟಿಪ್ಪಣಿ ಇಡಲಾಗುತ್ತದೆ. ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸುವ ಬಗ್ಗೆ ಚಿಂತನೆ ನಡೆದಿದೆ.

ಪ್ರತಿಕ್ರಿಯಿಸಿ (+)