ಶನಿವಾರ, ಮೇ 8, 2021
26 °C

ಗುಟ್ಕಾ ನಿಷೇಧ: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸರ್ಕಾರ ಗುಟ್ಕಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅದರ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುಟ್ಕಾ ನಿಷೇಧ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.`ಜಿಲ್ಲೆಯಲ್ಲಿ ಎಲ್ಲಿಯೂ ಗುಟ್ಕಾ ಮಾರಾಟವಾಗದಂತೆ ನಿಗಾವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು, ಶಾಲಾ ಆವರಣದಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಗುಟ್ಕಾ, ಪಾನಮಸಾಲಾಗಳ ಮಾರಾಟದ ಕುರಿತು ಪರಿಶೀಲಿಸಬೇಕು. ಗುಟ್ಕಾ ಮಾರಾಟ ತಡೆಯಲು ತಕ್ಷಣದಿಂದ ಕಾರ್ಯಾಚರಣೆ ಆರಂಭಿಸಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿ ಪ್ರಕರಣಗಳನ್ನು ದಾಖಲಿಸಬೇಕು' ಎಂದರು.`ಎ್ಲ್ಲಲ ಪಟ್ಟಣಗಳಲ್ಲಿ ಹಾಗೂ ಗ್ರಾಮಗಳಲ್ಲಿ ಗುಟ್ಕಾ ನಿಷೇಧದ ಕುರಿತು ಜನಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳಿದ್ದಾರೆ. ಅವರು ಸಂಗ್ರಹಕಾರರು ಹಾಗೂ ವಿತರಕರಲ್ಲಿ ಇರುವ ಗುಟ್ಕಾ ಮತ್ತು ಪಾನಮಸಾಲಾಗಳನ್ನು (ತಂಬಾಕು ಅಥವಾ ನಿಕೋಟಿನ್ ಘಟಕಾಂಶಗಳನ್ನು ಒಳಗೊಂಡ) ಮುಟ್ಟುಗೋಲು ಮಾಡಿಕೊಂಡು ಪ್ರತಿದಿನ ವರದಿ ಸಲ್ಲಿಸಬೇಕು' ಎಂದು ಜಿಲ್ಲಾಧಿಕಾರಿಗಳು ಹೇಳಿದರು.`ತಾಲ್ಲೂಕಿನಲ್ಲಿರುವ ಗುಟ್ಕಾ ಪಾನಮಸಾಲಾಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಎಚ್ಚರಿಕೆಯನ್ನು ನೀಡಿ, ಮಾರಾಟ ನಿಷೇಧಿಸಬೇಕು' ಎಂದು  ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.ಗುಟ್ಕಾ ಪಾನಮಸಾಲಾಗಳ ಚಟಕ್ಕೆ ಬಿದ್ದವರು ವ್ಯಸನಮುಕ್ತರಾಗಲು ನೆರವು ನೀಡಬೇಕು. ಇದಕ್ಕಾಗಿ ಅವಶ್ಯಕವಿದ್ದಲ್ಲಿ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಮಾಡಬೇಕು. ಅಂತಹ ವ್ಯಕ್ತಿಗಳಿಗೆ ಕೌನ್ಸಿಲಿಂಗ್ ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿಯಲ್ಲಿ ಗುಟ್ಕಾ ಮತ್ತು ಪಾನಮಸಾಲಾ ನಿಷೇಧಗೊಂಡಿರುವ ಬಗ್ಗೆ ವಿವರಿಸಿದರು.ಡಾ. ಶರದ ನಾಯಕ, ಗುಟ್ಕಾ ಹಾಗೂ ಪಾನಮಸಾಲಾದ ಬಗ್ಗೆ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ನಾಲಿಗೆ ಮತ್ತು ಬಾಯಿಯಲ್ಲಿ ಬರುವ ಕ್ಯಾನ್ಸರ್ ರೋಗದ ಬಗ್ಗೆ ಚಿತ್ರ ಮಾಹಿತಿಗಳೊಂದಿಗೆ ಮೂಲಕ ವಿವರಣೆ ನೀಡಿದರು.ಕಾರವಾರ ನಗರದಲ್ಲಿ ಈಗಾಗಲೇ ಗುಟ್ಕಾ ಮಾರಾಟ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಐಎಎಸ್ ಮಾರ್ಕ್ ಇಲ್ಲದ ಅನಧಿಕೃತ ನೀರು ತಯಾರಿಕಾ ಹಾಗೂ ಮಾರಾಟ ಘಟಕಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್ ಕುಮಾರ್, ಆರೋಗ್ಯ ಸುರಕ್ಷತಾ ಅಧಿಕಾರಿ ಎಂ.ಆರ್.ನಾಯಕ್, ಅರುಣಾ ಕಾಶಿ ಭಟ್ ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.